ಕೋವಿಡ್19 ಕಾರಣದಿಂದಾಗಿ ಮುಚ್ಚಲ್ಪಟ್ಟಿರುವಂತಹ ಶಾಲಾ ಕಾಲೇಜುಗಳ ಆರಂಭಕ್ಕೆ ಸರ್ಕಾರ ಮುಂದಾಗಿದ್ದು, ಜನವರಿ 1, 2021 ರಿಂದ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಕಾಲೇಜುಗಳನ್ನು ಆರಂಭ ಮಾಡುವುದಾಗಿ ರಾಜ್ಯಸರ್ಕಾರ ತೀರ್ಮಾನ ಕೈಗೊಂಡಿದೆ. ಇತ್ತ 6 ರಿಂದ 9 ನೇ ತರಗತಿಯವರಿಗೆ ವಿದ್ಯಾಗಮ ಕಾರ್ಯಕ್ರಮ ಮುಂದುವರೆಸಲಾಗುವುದು ಎಂದು ಸಿಎಂ ಜೊತೆ ಸಭೆ ನಡೆಸಿ ತೀರ್ಮಾನಿಸಲಾಗಿದೆ ಎಂದು ಶನಿವಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗಾಗುತ್ತಿರುವ ಅನ್ಯಾಯವನ್ನು ವಿರೋಧಿಸಿ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರದ ಈ ಎಡಬಿಡಂಗಿ ಕಾರ್ಯ ಸರಿಯಿಲ್ಲ ಎನ್ನುವುರದ ಮೂಲಕ ಸಿದ್ದರಾಮಯ್ಯ ಖಾಸಗಿ ಶಾಲೆಗಳ ವಿಚಾರ ಪ್ರಸ್ತಾಪಿಸಿದ್ದಾರೆ. ಶಾಲೆ ಪುನರಾರಂಭದ ಬಗ್ಗೆ ಸರಣಿ ಸಭೆಗಳು, ಶಿಕ್ಷಣ ಸಚಿವರ ಮತ್ತು ಪೋಷಕರನ್ನು ಗೊಂದಲಕ್ಕೆ ನೂಕುತ್ತಿವೆ. ಈ ಸಂಬಂಧ ಶಿಕ್ಷಣ ಸಚಿವರು ಖಾಸಗಿ ಶಾಲೆಗಳ ಮುಖ್ಯಸ್ಥರ ಮತ್ತು ಪೋಷಕರ ಸಭೆ ಕರೆದು ಪಾರದರ್ಶಕವಾಗಿ ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸ ಬೇಕು ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತರಗತಿಗಳು ನಡೆಯದೆ ಇದ್ದರೂ ಭೋದನಾ ಶುಲ್ಕದ ಜೊತೆಯಲ್ಲಿ ಪ್ರಯೋಗ ಶಾಲೆ, ಲೈಬ್ರೆರಿ ಮತ್ತಿತರ ಪಠ್ಯೇತರ ಶಲ್ಕ ವಸೂಲಿಗೆ ಹೊರಟಿರುವ ಖಾಸಗಿ ಶಾಲೆಗಳು ಸರ್ಕಾರದ ಪೊಳ್ಳು ಬೆದರಿಕೆಗೆ ಜಗ್ಗುತ್ತಿಲ್ಲ ಎನ್ನುವ ಮೂಲಕ ಸರ್ಕಾರ ಖಾಸಗಿ ಶಾಲೆಯ ಜೊತೆ ಶಾಮಿಲಾಗಿದೆ ಎಂದಿದ್ದಾರೆ. ಖಾಸಗಿ ಶಾಲೆಗಳ ಮೇಲೆ ಸರ್ಕಾರಕ್ಕೆ ನಿಯಂತ್ರಣ ಇಲ್ಲ. ತರಗತಿಗಳಿಲ್ಲದೆ ಇದ್ದರೂ ಪೋಷಕರಿಂದ ಪೂರ್ಣಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದಕ್ಕಾಗಿ ಆನ್ ಲೈನ್ ತರಗತಿಗಳನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ. ಸರ್ಕಾರ ಮಾತ್ರ ಕಣ್ಣುಮುಚ್ಚಿ ಕೂತಿದೆ ಎಂಬ ಅಸಮಾಧಾನವನ್ನು ಹೊರಹಾಕಿದ್ದಾರೆ.
ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿನ ಈಗಿನ ಬಿಕ್ಕಟ್ಟಿಗೆ @CMofKarnataka ಮತ್ತು ಶಿಕ್ಷಣಸಚಿವ @nimmasuresh ಅವರೇ ನೇರ ಹೊಣೆಗಾರರು.
ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ಜಗಳ ತಂದು ಹಾಕಿ ಇವರು ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.#SOS_Education
2/5— Siddaramaiah (@siddaramaiah) December 20, 2020
ರಾಜ್ಯದಲ್ಲಿನ ಶೈಕ್ಷಣಿಕ ಬಿಕ್ಕಟಿಗೆ ಸಿಎಂ ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇರಹೊಣೆಯಾಗಿದ್ದಾರೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದಾರೆ. ಸರ್ಕಾರದ ಕೆಲವೊಂದು ವೈಪಲ್ಯಗಳನ್ನು ಮುಚ್ಚಿಹಾಕಲು ಈ ರೀತಿಯ ಆಟವಾಡುತ್ತಿದ್ದಾರೆಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರದ ಎಡಬಿಡಂಗಿ ನಿಲುವುಗಳಿಂದಾಗಿ ವಿದ್ಯಾರ್ಥಿಗಳು, ಪೋಷಕರು ಮತ್ತು ಕೆಲವೊಂದು ಖಾಸಗಿ ಶಾಲೆಗಳ ಮಾಲೀಕರು ಬೀದಿಗಿಳಿದಿದ್ದಾರೆ. ಇದಕ್ಕೆ ಸಿಎಂ ಮತ್ತು ಶಿಕ್ಷಣ ಸಚಿವರು ಸ್ಪಷ್ಟ ನಿರ್ಧಾರ ಕೈಗೊಂಡು ಈ ಬಿಕ್ಕಟ್ಟನ್ನು ಬಗೆಹರಿಸಿ ವಿದ್ಯಾರ್ಥಿಗಳನ್ನು ರಕ್ಷಿಸ ಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.