ಉತ್ತರ ಪ್ರದೇಶ ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಕಾನೂನು ಬಾಹಿರ ಮತಾಂತರ ತಡೆ ಕಾಯ್ದೆಯು ಅಲ್ಲಿನ ಅಂತರ್ ಧರ್ಮೀಯ ದಂಪತಿಗೆ ಶಾಪವಾಗಿ ಪರಿಣಮಿಸಿದೆ. ಇಬ್ಬರೂ ಪರಸ್ಪರ ಒಪ್ಪಿಯೇ ಮದುವೆ ಆಗಿದ್ದರೂ ಯುವತಿಯ ಕುಟುಂಬದವರ ದೂರಿನ ಮೇರೆಗೆ ಪತಿ ರಷೀದ್ ನನ್ನು ಜೈಲಿಗೆ ಅಟ್ಟಲಾಗಿದ್ದು, ನವ ವಿವಾಹಿತೆ ಪಿಂಕಿಗೆ ಗರ್ಭಪಾತ ಆಗಿದೆ.
ಮೊರಾದಾಬಾದ್ ನಿವಾಸಿಗಳಾದ ಈ ಇಬ್ಬರೂ ಕಳೆದ ಜುಲೈ 24 ರಂದು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಅಲ್ಲದೆ ಮದುವೆಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಲೂ ಅರ್ಜಿ ಸಲ್ಲಿಸಿದ್ದರು. ಆದರೆ ಕಳೆದ ಡಿಸೆಂಬರ್ 5 ರಂದು ಪಿಂಕಿ ಮನೆಯವರು ನೀಡಿದ ಬಲಾತ್ಕಾರದ ಮದುವೆ ಆರೋಪದಡಿಯಲ್ಲಿ ಯುವಕ ರಷೀದ್ ನನ್ನು ಬಂಧಿಸಿದ ಪೋಲೀಸರು ಅದೇ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳಿಸಿದ್ದಾರೆ. ಆಗ ಮೂರು ತಿಂಗಳ ಗರ್ಭಿಣಿಯಾಗಿದ್ದ ಪಿಂಕಿಯನ್ನು ಎಂಟು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು, ನಂತರ ಡಿಸೆಂಬರ್ 6 ರಂದು ಮುಂಜಾನೆ 2 ಗಂಟೆಗೆ ಮೊರಾದಾಬಾದ್‌ನಲ್ಲಿರುವ ನಾರಿ ನಿಕೇತನ್ ಗೆ ಕಳುಹಿಸಲಾಗಿತ್ತು. ಅಲ್ಲಿ ಐದು ದಿನಗಳ ಕಾಲ ಪಿಂಕಿಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಇದರ ಪರಿಣಾಮ ಆಕೆಗೆ ಗರ್ಭಪಾತ ಆಗಿದ್ದು ಆಕೆಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ದಿನಗಳ ಚಿಕಿತ್ಸೆ ನೀಡಲಾಯಿತು.
ಬಳಿಕ ಡಿಸೆಂಬರ್ 15 ರಂದು ಆಕೆ ತನ್ನ ಕುಟುಂಬದೊಂದಿಗೆ ಸೇರಿಸಲಾಯಿತು. ಆದರೆ ಪತಿ ರಷೀದ್ ಯಾವುದೇ ಕಾನೂನು ನೆರವಿಲ್ಲದೆ ಇನ್ನೂ ಜೈಲಿನಲ್ಲಿದ್ದಾನೆ. ಮೊರಾದಾಬಾದ್ ಜಿಲ್ಲೆಯ ಅಧಿಕಾರಿಗಳು ಪಿಂಕಿಗೆ ಗರ್ಭಪಾತವಾಗಿರುವದನ್ನು ನಿರಾಕರಿಸಿದ್ದರೂ, ಆಕೆಯ ಅಲ್ಟ್ರಾಸೌಂಡ್ ವರದಿಯು, ಅವಳ ಗರ್ಭಾಶಯವು ದೊಡ್ಡದಾಗಿದೆ ಮತ್ತು ಗರ್ಭಾಶಯದಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ಹೇಳಿದ್ದು ಇದು ಗರ್ಭಪಾತವನ್ನು ಖಚಿತಪಡಿಸಿದೆ. ವೈದ್ಯಕೀಯ ತಜ್ಞರೊಬ್ಬರ ಪ್ರಕಾರ ಅವಳು ಗರ್ಭಿಣಿಯಾಗಿದ್ದಳು ಮತ್ತು ಗರ್ಭಪಾತ ಸಂಭವಿಸಿದೆ ಎಂದು ವರದಿ ತೋರಿಸುತ್ತದೆ. ಅವಳು ಇನ್ನೂ ತನ್ನ ದೇಹದಲ್ಲಿ ಭ್ರೂಣದ ಒಂದು ಭಾಗವನ್ನು ಹೊಂದಿದ್ದಾಳೆ, ಅದನ್ನು ಕಾರ್ಯವಿಧಾನದಿಂದ ಸ್ವಚ್ಛಗೊಳಿಸಬೇಕಾಗುತ್ತದೆ ಎಂದು ವೈದ್ಯಕೀಯ ತಜ್ಞರು ತಿಳಿಸಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪಿಂಕಿ ಮತ್ತು ರಶೀದ್ ಅವರು 2019 ರಲ್ಲಿ ಡೆಹ್ರಾಡೂನ್ನಲ್ಲಿ ಮೊದಲ ಬಾರಿ ಭೇಟಿಯಾದರು. ಪಿಂಕಿ ಹಣಕಾಸು ಕಂಪನಿಯೊಂದರಲ್ಲಿ ಸಾಲದ ಏಜೆಂಟ್ ಆಗಿ ಕೆಲಸ ಮಾಡುತಿದ್ದು ಮತ್ತು ರಶೀದ್ ಸ್ಥಳೀಯ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದರು. ಈ ವರ್ಷದ ಜುಲೈನಲ್ಲಿ ಡೆಹ್ರಾಡೂನ್ನಲ್ಲಿರುವ ಅವರ ಕುಟುಂಬಗಳಿಗೆ ತಿಳಿಸದೆ ಲಾಕ್ಡೌನ್ ನಡುವೆಯೇ ಅವರು ವಿವಾಹವಾದರು. ರಶೀದ್ ಕೆಲಸ ಮಾಡುತಿದ್ದ ಸಲೂನ್ ಮುಚ್ಚಿದರಿಂದ ಅವರು ಸೆಪ್ಟೆಂಬರ್ನಲ್ಲಿ ತಮ್ಮ ಸ್ವಗ್ರಾಮ ಕಾಂತ್ ಗೆ ಮರಳಿದರು . ಆಗ ಅವರ ವಿವಾಹದ ಬಗ್ಗೆ ಎರಡೂ ಕಡೆಯ ಪೋಷಕರಿಗೆ ಮಾಹಿತಿ ನೀಡಿದರು. ಮೊದಲ ಪ್ರತಿರೋಧದ ನಂತರ, ರಶೀದ್ ಮತ್ತು ಪಿಂಕಿ ಅವರ ಪೋಷಕರು ಈ ಮದುವೆಯನ್ನು ಒಪ್ಪಿಕೊಂಡರು. ಡಿಸೆಂಬರ್ 5 ರ ಮಧ್ಯಾಹ್ನ, ಪಿಂಕಿ ತನ್ನ ಮದುವೆಯನ್ನು ನೋಂದಾಯಿಸಲು ರಶೀದ್ ಅವರೊಂದಿಗೆ ತನ್ನ ಮನೆಯಿಂದ ಹೋಗುತಿದ್ದಾಗ , ಅವರನ್ನು ಭಜರಂಗದಳದ ಜನರ ಗುಂಪು ತಡೆದು ನಿಲ್ಲಿಸಿ ದೌರ್ಜನ್ಯ ನಡೆಸಿದೆ.
Also Read: ಲವ್ ಜಿಹಾದ್: ಮಹಿಳೆಯ ಆಯ್ಕೆಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಷಡ್ಯಂತ್ರ
“ಅವರು ನನ್ನ ಹೆಸರನ್ನು ಕೇಳಿದರು ಮತ್ತು ನಂತರ ನನ್ನನ್ನು ನಿಂದಿಸಲು ಪ್ರಾರಂಭಿಸಿದರು. ಅವರು ನಮ್ಮ ಮದುವೆ ಲವ್ ಜಿಹಾದ್ ಎಂದು ಕರೆದು ಪೊಲೀಸ್ ಠಾಣೆಗೆ ಎಳೆದೊಯ್ದರು.ನಾನು ನನ್ನ ಸ್ವಂತ ಇಚ್ಚೆಯಂತೆ ಮದುವೆಯಾಗಿದ್ದೇನೆ ಮತ್ತು ನಾನು ಗರ್ಭಿಣಿಯಾಗಿದ್ದೇನೆ ಎಂದು ನಾನು ಹೇಳಿದರೂ ಅವರು ಕೇಳಲಿಲ್ಲ. ಅವರು ನನ್ನನ್ನು ಮತ್ತು ನನ್ನ ಗಂಡನನ್ನು ನಿಂದಿಸುತ್ತಲೇ ಇದ್ದರು ಮತ್ತು ನಮ್ಮನ್ನು ಪೊಲೀಸರಿಗೆ ಒಪ್ಪಿಸುವ ಪ್ರಯತ್ನವನ್ನು ನಾನು ವಿರೋಧಿಸಿದಾಗ ನನ್ನನ್ನು ತಳ್ಳಿ ಹೊಡೆದರು” ಎಂದು ಪಿಂಕಿ ಹೇಳುತ್ತಾರೆ.
ಪೋಲೀಸ್ ಠಾಣೆಯಲ್ಲಿ ನಡೆದ ವಿಚಾರಣೆಯಲ್ಲಿ ಪಿಂಕಿ ಅವರು ಸ್ವಇಚ್ಚೆಯಿಂದ ವಿವಾಹ ಆಗಿರುವುದು ತಿಳಿದು ಬಂದಿದೆ. ಅಲ್ಲದೆ ಬಲತ್ಕಾರದ ಮತಾಂತರ ಕಾನೂನು ಜಾರಿಗೆ ಬರುವ ಮೊದಲೇ ವಿವಾಹ ಆಗಿದ್ದರೂ ಅವರು ದಂಪತಿಯನ್ನು ಬಿಟ್ಟುಬಿಡಲು ಯೋಜಿಸಿದರು. ಆದರೆ ಭಜರಂಗದಳದ ಸದಸ್ಯರು ಎಫ್ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದರು. ಭಜರಂಗದಳದ ಸದಸ್ಯರು ತಮ್ಮ ತಾಯಿಯನ್ನು ಬಿಜ್ನೋರ್ನಿಂದ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಅಧಿಕೃತವಾಗಿ ಬಲತ್ಕಾರದ ಮತಾಂತರ ಎಂದು ದೂರು ದಾಖಲಿಸಿದರು ಎಂದು ಪಿಂಕಿ ಆರೋಪಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ರಶೀದ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
Also Read: ಕಾಲ್ಪನಿಕ ಲವ್ ಜಿಹಾದ್ ಮೂಲಕ ಯಶಸ್ವಿ ಅಪಪ್ರಚಾರ ನಡೆಸುತ್ತಿರುವ ಸಂಘ ಪರಿವಾರ
ಈ ಕುರಿತು ಮಾತನಾಡಿದ ಮೊರಾದಾಬಾದ್ ಎಸ್ ಪಿ ಪ್ರಭಾಕರ್ ಚೌಧರಿ ʼಪೊಲೀಸರು ಒತ್ತಡದಿಂದ ಪ್ರಕರಣ ದಾಖಲಿಸಿದ್ದಾರೆʼ ಎಂಬ ಆರೋಪ ನಿರಾಕರಿಸಿದರು. ಯುವತಿಯ ತಾಯಿ ಸಿಆರ್ಪಿಸಿ 164 ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆಯನ್ನು ದಾಖಲಿಸಿದ್ದಾರೆ, ಅದರಲ್ಲಿ ಅವರು ಬಲವಂತದ ಮತಾಂತರದ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅದನ್ನೇ ನಾವು ತನಿಖೆ ಮಾಡುತ್ತೇವೆ, ಎಂದು ಅವರು ಹೇಳಿದರು.
ನಾರಿನಿಕೇತನದಲ್ಲಿ ತಾನು ಗರ್ಭಿಣಿ ಎಂದು ಅಧಿಕಾರಿಗಳಿಗೆ ಹೇಳುತ್ತಿದ್ದರೂ ಭಾರವಾದ ವಸ್ತುಗಳನ್ನು ಸ್ವಚಗೊಳಿಸುವುದು ಮತ್ತು ಎತ್ತುವುದು ಸೇರಿದಂತೆ ಶ್ರಮದಾಯಕ ಕೆಲಸವನ್ನು ಮಾಡಿಸಲಾಯಿತು ಎಂದು ಪಿಂಕಿ ದೂರಿದರು. ಅಲ್ಲದೆ ಸಾಕಷ್ಟು ಆಹಾರವನ್ನು ನೀಡಲಿಲ್ಲ. ನಂತರ ನಾನು ರಕ್ತಸ್ರಾವ ಆರಂಭಗೊಂಡಿರುವುದರಿಂದ ನನ್ನನ್ನು ವೈದ್ಯರ ಬಳಿಗೆ ಕರೆದೊಯ್ಯುವಂತೆ ನಾನು ಅಧಿಕಾರಿಗಳನ್ನು ವಿನಂತಿಸಿದೆ. ಆದರೆ, ರಕ್ತಸ್ರಾವ ಹೆಚ್ಚಾದ ಕೊನೆಯ ಕ್ಷಣದವರೆಗೂ ಯಾರೂ ಕಾಳಜಿ ವಹಿಸಲಿಲ್ಲ ಎಂದು ದೂರಿದ್ದಾರೆ. ಡಿಸೆಂಬರ್ 11 ರಂದು ಪಿಂಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಚಿಕಿತ್ಸೆ ನೀಡಲಾಯಿತು. ರಕ್ತಸ್ರಾವ ನಿಂತುಹೋದ ನಂತರ ಡಿಸೆಂಬರ್ 13 ರಂದು ಆಕೆಯನ್ನು ಬಿಡುಗಡೆ ಮಾಡಲಾಯಿತು, ಆದರೆ ಪುನಃ ರಕ್ತಸ್ರಾವ ಆರಂಭಗೊಂಡ ನಂತರ ಆಕೆಯನ್ನು ಡಿಸೆಂಬರ್ 14 ರಂದು ಮೀರತ್ಗೆ ಕರೆದೊಯ್ಯುವಂತೆ ಸೂಚಿಸಲಾಯಿತು. ಇದೀಗ ಗರ್ಭಪಾತ ಆಗಿದ್ದು ಇದಕ್ಕೆ ಸರ್ಕಾರವೇ ಜವಾಬ್ದಾರಿ ಎಂದು ಪಿಂಕಿ ಆರೋಪಿಸಿದ್ದಾರೆ.
ದುರದೃಷ್ಟವಶಾತ್ ರಷೀದ್ ಇನ್ನೂ ನ್ಯಾಯಾಂಗ ಬಂಧನದಲ್ಲೆ ಇದ್ದಾರೆ. ಇತ್ತ ತನ್ನ ಗರ್ಭವನ್ನೂ ಕಳೆದುಕೊಂಡು, ಅತ್ತ ತಾನು ಪ್ರೀತಿಸಿ ವರಿಸಿದ ಪತಿಯಿಂದಲೂ ದೂರವಾಗಿರುವ ಪಿಂಕಿ, ಪ್ರಜೆಗಳ ವೈಯಕ್ತಿಕ ಹಕ್ಕುಗಳ ಮೇಲೆ ಹಸ್ತಕ್ಷೇಪ ನಡೆಸುವ ಪ್ರಭುತ್ವದ ಸಂತ್ರಸ್ತೆಯಾಗಿ ದಿನದೂಡುತ್ತಿದ್ದಾರೆ.












