ರಾಜರಾಜೇಶ್ವರಿ ಉಪಚುನಾವಣೆ ರದ್ದುಗೊಳಿಸಬೇಕೆಂದು ಕೋರಿ ತುಳಸಿ ಮುನಿರಾಜು ಸುಪ್ರೀಂ ಕೋರ್ಟ್‌ಗೆ ಹಾಕಿದ ಅರ್ಜಿಯನ್ನು ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ವಜಾಗೊಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
2018 ರಲ್ಲಿ ರಾಜರಾಜೇಶ್ವರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತುಳಸಿ ಮುನಿರಾಜು, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ಪರಾಜಯಗೊಂಡಿದ್ದರು. ಮುನಿರತ್ನ ಚುನಾವಣೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ತುಳಸಿ ಮುನಿರಾಜು ನ್ಯಾಯಾಲಯ ಮೊರೆ ಹೋಗಿದ್ದರು.
ನಾಟಕೀಯ ಬೆಳವಣಿಗೆಯಲ್ಲಿ ಮುನಿರತ್ನ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರ್ಪಡೆಗೊಂಡಿದ್ದರು. 2018 ರ ಚುನಾವಣಾ ಅಕ್ರಮ ಆರೋಪ ಇನ್ನೂ ನ್ಯಾಯಾಲಯದ ಮೇಲಿರುವುದರಿಂದ ಮುನಿರತ್ನ ಅವರಿಂದ ತೆರವಾದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿರಲಿಲ್ಲ.

ಚುನಾವಣೆ ಸಂದರ್ಭದಲ್ಲಿ ರಾಜರಾಜೇಶ್ವರಿ ನಗರದಲ್ಲಿ ನಕಲಿ ವೋಟರ್ ಐಡಿಗಳು ಪತ್ತೆಯಾಗಿದ್ದವು. ಚುನಾವಣೆಯಲ್ಲಿ ಮುನಿರತ್ನ ಅಕ್ರಮವೆಸಗಿ ಜಯಗಳಿಸಿದ್ದರು ಎಂದು ಅವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ತುಳಸಿ ಮುನಿರಾಜು ದೂರು ಸಲ್ಲಿಸಿದ್ದರು.
ಇದೀಗ ಸುಪ್ರಿಂ ಕೋರ್ಟ್ ದೂರನ್ನು ವಜಾಗೊಳಿಸಿರುವುದರಿಂದ ನಿಗದಿಪಡಿಸಿದಂತೆ ನವೆಂಬರ್ ಮೂರರಂದು ಉಪಚುನಾವಣೆ ನಡೆಯಲಿದೆ. ರಾಜರಾಜೇಶ್ವರಿ ಕ್ಷೇತ್ರಕ್ಕೆ ತುಳಸಿ ಮುನಿರಾಜು ಹಾಗೂ ಮುನಿರತ್ನ ಇಬ್ಬರೂ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದು, ಈರ್ವರ ಹೆಸರನ್ನೂ ಬಿಜೆಪಿ ಹೈಕಮಾಂಡಿಗೆ ರವಾನಿಸಿದೆ.






