ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಉತ್ತರಪ್ರದೇಶದ ಹಥ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಷಯದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಅಲ್ಲಿನ ಪೊಲೀಸ್ ವ್ಯವಸ್ಥೆಯ ವಿರುದ್ಧ ಬಿಜೆಪಿ ಹೊರತುಪಡಿಸಿ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ದೇಶದ ಮೂಲೆಮೂಲೆಯಲ್ಲೂ ವಿವಿಧ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿವೆ.
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ತೃಣಮೂಲ ಕಾಂಗ್ರೆಸ್ಸಿನ ಡೆರೇಕ್ ಒಬ್ರಿಯನ್, ಸೀತಾರಾಂ ಯೆಚೂರಿ, ಬೃಂದಾ ಕಾರಟ್ ಸೇರಿದಂತೆ ಎಡಪಕ್ಷಗಳ ಮುಖಂಡರು ಕಳೆದ ಒಂದು ವಾರದಲ್ಲಿ ಸಂತ್ರಸ್ತ ಯುವತಿಯ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ನೆರವಿನ ಹಸ್ತ ಚಾಚಿದ್ದಾರೆ. ರಾಹುಲ್- ಪ್ರಿಯಾಂಕಾ ಸೇರಿದಂತೆ ಹಲವು ನಾಯಕರ ಭೇಟಿಯನ್ನು ತಡೆಯಲು ಯೋಗಿ ಸರ್ಕಾರ ಇನಿಲ್ಲದ ಯತ್ನ ನಡೆಸಿದೆ. ರಾಷ್ಟ್ರೀಯ ಪಕ್ಷದ ಪ್ರಮುಖ ನಾಯಕರನ್ನು ಬೀದಿಯಲ್ಲಿ ಬೀಳಿಸಿ, ಎಳೆದಾಡಿದೆ. ಲಾಠಿ ಪ್ರಹಾರ ನಡೆಸಿದೆ. ಪೊಲೀಸ್ ಭದ್ರಕೋಟೆ ರಚಿಸಿ ಕೇವಲ ಘಟನೆ ನಡೆದ ಹತ್ರಾಸ್ ಜಿಲ್ಲೆಯಷ್ಟೇ ಅಲ್ಲದೆ, ಇಡೀ ಉತ್ತರಪ್ರದೇಶಕ್ಕೇ ಪ್ರತಿಪಕ್ಷಗಳ ನಾಯಕರು ಮತ್ತು ಅವರ ನಿಯೋಗಗಳು ಪ್ರವೇಶಿಸದಂತೆ ತಡೆಯುವ ಶತಪ್ರಯತ್ನ ನಡೆಸಿ ಸೋತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸೆಪ್ಟೆಂಬರ್ 14ರಂದು ನಾಲ್ವರು ಮೇಲ್ಜಾತಿ ಠಾಕೂರ್ ವಿಕೃತರ ಪೈಶಾಚಿಕ ದಾಳಿಗೆ ಒಳಗಾದ 19 ವರ್ಷದ ದಲಿತ ವಾಲ್ಮೀಕಿ ಜನಾಂಗಕ್ಕೆ ಸೇರಿದ ಯುವತಿ 15 ದಿನಗಳ ನರಕಯಾತನೆಯ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸೆ.29ರಂದು ಸಾವು ಕಂಡಿದ್ದಳು. ಅತ್ಯಾಚಾರ ನಡೆಸಿದ ನರರಕ್ಕಸರು ಆಕೆಯ ನಾಲಿಗೆ ಕತ್ತರಿಸಿದ್ದಲ್ಲದೆ, ಬೆನ್ನು ಮೂಳೆಯನ್ನು ಮುರಿದು ಹಾಕಿದ್ದರು. ಘಟನೆಯ ಕುರಿತು ಆಕೆಯ ತಂದೆ ದೂರು ನೀಡಿದ್ದರೂ, ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಈ ನಡುವೆ ಆಕೆಯ ಸಾವಿನ ಬಳಿಕ ಇಡೀ ಪ್ರಕರಣವನ್ನು ಮುಚ್ಚಿಹಾಕುವ ಯತ್ನವಾಗಿ ಉತ್ತರಪ್ರದೇಶ ಪೊಲೀಸರು ಆಕೆಯ ಶವವನ್ನು ಮನೆಯವರಿಗೆ ನೀಡಿರಲಿಲ್ಲ. ಜೊತೆಗೆ ಮನೆಮಂದಿಗೆ ಶವವನ್ನು ನೋಡಲೂ ಅವಕಾಶ ಕೊಡದಂತೆ ಮನೆಯಲ್ಲಿ ಕೂಡಿ ಹಾಕಿ, ಪೊಲೀಸರೇ ಅರ್ಧರಾತ್ರಿಯ ವೇಳೆ, ಯಾರೊಬ್ಬರೂ ಶವ ಸಂಸ್ಕಾರದಲ್ಲಿ ಭಾಗವಹಿಸದಂತೆ ತಡೆದು ಸುಟ್ಟುಹಾಕಿದ್ದರು.
Also Read: ‘ಬಿಜೆಪಿ ಮೋರ್ಚಾ’ ಎಂಬ ಆರೋಪ ಸಾಬೀತುಪಡಿಸುತ್ತಿವೆಯೇ ತನಿಖಾ ಸಂಸ್ಥೆಗಳು?
ಆ ನಡುವೆ, ಸಾಮಾಜಿಕ ಹೋರಾಟಗಾರರು ಮತ್ತು ಮಾಧ್ಯಮಗಳ ಒತ್ತಡಕ್ಕೆ ಮಣಿದ ಪೊಲೀಸರು ಎಫ್ ಐಆರ್ ದಾಖಲಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಬಂಧಿತರ ಪರ ಮೇಲ್ಜಾತಿ ಠಾಕೂರರು ನಿರಂತರ ಸಭೆಗಳನ್ನು ನಡೆಸಲು, ಪ್ರತಿಭಟನೆ ನಡೆಸಲು ಅವಕಾಶ ನೀಡಿದ್ದರು. ಮತ್ತೊಂದು ಕಡೆ ಸಂತ್ರಸ್ತರ ಕುಟುಂಬದವರ ಮೇಲೆ ಜಿಲ್ಲಾಧಿಕಾರಿ ಸೇರಿ ಇಡೀ ಆಡಳಿತ ವ್ಯವಸ್ಥೆ ಹೆದರಿಸಿ, ಬೆದರಿಸಿ ಒತ್ತಡ ಹೇರಿ ಯಾವುದೇ ರೀತಿಯ ಮಾಧ್ಯಮಗಳಿಗೆ, ರಾಜಕೀಯ ಪಕ್ಷಗಳಿಗೆ ಮಾತನಾಡದಂತೆ ದಿಗ್ಬಂಧನ ಹಾಕಿದ್ದರು. ಜೊತೆಗೆ ಮನೆಮಂದಿಯನ್ನು ಕೂಡಿ ಹಾಕಿ ಪೊಲೀಸ್ ಕಾವಲು ಹಾಕಿದ್ದರು.
ಉತ್ತರಪ್ರದೇಶದ ಪೊಲೀಸರು ಮತ್ತು ಯೋಗಿ ಸರ್ಕಾರ ನಾಲ್ವರು ಸಾಮೂಹಿಕ ಅತ್ಯಾಚಾರಿಗಳ ರಕ್ಷಣೆಗಾಗಿ ಬರೋಬ್ಬರಿ 20 ದಿನಗಳ ಕಾಲ ಇಡೀ ಸರ್ಕಾರಿ ಆಡಳಿತ ಯಂತ್ರವನ್ನೆ ನಿಯೋಜಿಸಿ ದಲಿತ ಕುಟುಂಬ ಮತ್ತು ಅವರ ಪರವಾಗಿ ದನಿ ಎತ್ತುವರರನ್ನು ಸದೆಬಡಿಯಲು ಟೊಂಕ ಕಟ್ಟಿನಿಂತಿತ್ತು. ಹೀನಾಯ ಅಪರಾಧ ವೆಸಗಿದ, ಮೃಗೀಯ ಅಪರಾಧಿಗಳ ಪರ ಇಡೀ ಆಡಳಿತ ನಿಲ್ಲಲು ಇದ್ದ ಕಾರಣ; ಒಂದು ಆ ಆರೋಪಿಗಳು ಸಿಎಂ ಯೋಗಿ ಆದಿತ್ಯನಾಥರ ಕುಲಬಾಂಧವರು ಮತ್ತು ಅವರ ‘ಠಾಕೂರ್ ವಾಡ್(ಠಾಕೂರ್ ರಾಜ್ಯ)’ ಕಟ್ಟುವ ಉದ್ದೇಶಕ್ಕೆ ಈ ಕೃತ್ಯ ಪೂರಕವಾಗಿತ್ತು ಎಂಬುದು. ಮತ್ತೊಂದು ಕಾರಣ; ಒಬ್ಬ ಸನ್ಯಾಸಿ ಎಂಬುದೇ ತಮ್ಮ ಹೆಗ್ಗಳಿಕೆ ಮತ್ತು ರಾಮಭಕ್ತ ಎಂಬುದು ಹೆಚ್ಚುಗಾರಿಕೆ ಎಂಬ ಆಧಾರದ ಮೇಲೆ ರಾಮರಾಜ್ಯ ಕಟ್ಟುವ ಭರವಸೆಯೊಂದಿಗೆ ಚುನಾವಣೆಯಲ್ಲಿ ಭಾರೀ ಬಹುಮತ ಪಡೆದು ಸರ್ಕಾರ ರಚಿಸಿದ ತಮಗೆ ಕೊಟ್ಟಿರುವ ‘ದೇಶದ ಮಾದರಿ ಸಿಎಂ’ ಎಂಬ ಬಿರುದಿಗೆ ಮಸಿ ಬಳಿಯಬಹುದು ಎಂಬುದು.
Also Read: CBI ತನಿಖೆ ನಡುವೆಯೇ ಹತ್ರಾಸ್ ಪ್ರಕರಣದ ದಿಕ್ಕು ತಪ್ಪಿಸಲೆತ್ನಿಸುತ್ತಿರುವ ಆದಿತ್ಯನಾಥ್, ಮತ್ತವರ ಪೊಲೀಸರು
ಆದರೆ, ‘ಬೆಸ್ಟ್ ಸಿಎಂ’ ಪೇಮೆಂಟ್ ಮೀಡಿಯಾಗಳ ಬಿರುದಿಗೆ ಅದೇ ಯೋಗಿಯ ಕುಖ್ಯಾತಿಯ ಅಂತಹ ‘ಠಾಕೂರ್ ರಾಜ್’ ಎಂಬುದು ಈಗಾಗಲೇ ಮಸಿ ಬಳಿದಿದೆ. ದೇಶ-ವಿದೇಶದಲ್ಲಿ ಕೂಡ ಯೋಗಿಯ ಆಡಳಿತದ ಅಸಲೀಮುಖ ಎಲ್ಲಾ ವರ್ಚಸ್ಸು ವೃದ್ಧಿ ಸರ್ಕಸ್ಸುಗಳ ಹೊರತಾಗಿಯೂ ಬಯಲಾಗಿದೆ. ಕೇವಲ ಉತ್ತರಪ್ರದೇಶವಷ್ಟೇ ಅಲ್ಲದೆ, ಆ ಠಾಕೂರ್ ರಾಜ್ ಗಡಿ ದಾಟಿ ದೆಹಲಿಯ ಬಿಜೆಪಿ ಸರ್ಕಾರ ಮತ್ತು ಸ್ವತಃ ಪ್ರಧಾನಿ ಮೋದಿಯವರ ಬಹು ಅಲಂಕೃತ ವರ್ಚಸ್ಸಿಗೂ ಮಸಿ ಬಳಿದಿದೆ. ಹಾಗಾಗಿ ಮೋದಿ ಕೂಡ ಈಗ ಯೋಗಿಯಂತೆಯೇ ಕಳಚಿದ ವರ್ಚಸ್ಸು ಮತ್ತೆ ಕಟ್ಟಲು, ಬಣ್ಣ ಬಳಿಯಲು ಹೊಸ ಪಿಆರ್ ಏಜೆನ್ಸಿಗಳ ಮೊರೆಹೋಗಬೇಕಾದ ಸ್ಥಿತಿ ಎದುರಾಗಿದೆ.
Also Read: ಉತ್ತರಪ್ರದೇಶದಲ್ಲಿ ಯೋಗಿ ಕಟ್ಟುತ್ತಿರುವ ‘ರಾಮರಾಜ್ಯ’ದ ಕರಾಳ ಇತಿಹಾಸ
ಆದರೆ, ಇಂತಹ ಹೊತ್ತಲ್ಲೂ, ಇಡೀ ದೇಶವ್ಯಾಪಿ ದಲಿತರ ಮೇಲಿನ ದೌರ್ಜನ್ಯದ, ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿಯ ದೊಡ್ಡ ನಿದರ್ಶನವಾಗಿ ಈ ಹಥ್ರಾಸ್ ಘಟನೆಯನ್ನು ಚರ್ಚಿಸುತ್ತಿರುವ ಹೊತ್ತಲ್ಲೂ ದಲಿತರ ನಾಯಕಿ ಎಂದು ತಮ್ಮನ್ನು ತಾವು ಬಿಂಬಿಸಿಕೊಳ್ಳುವ, ಸ್ವತಃ ಉತ್ತರಪ್ರದೇಶದ ಮೊದಲ ದಲಿತ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ ಮತ್ತು ದಲಿತ ನಾಯಕಿ ಎಂಬ ಕಾರಣಕ್ಕಾಗಿಯೇ ದೇಶವ್ಯಾಪಿ ತಮ್ಮದೇ ಆದ ವರ್ಚಸ್ಸು ಹೊಂದಿರುವ ಬಿಎಸ್ಪಿ ಅಧಿನಾಯಕಿ ಮಾಯಾವತಿ ಅವರು ಮಾತ್ರ ಯಾಕೆ ಈ ಪ್ರಕರಣದ ವಿಷಯದಲ್ಲಿ ಬೀದಿಗಿಳಿಯಲಿಲ್ಲ? ಯಾಕೆ ಅವರ ಹೋರಾಟ ಕೇವಲ ಟ್ವಿಟರ್ ಮತ್ತು ಪತ್ರಿಕಾಗೋಷ್ಠಿಗೆ ಮಾತ್ರ ಸೀಮಿತವಾಯಿತು? ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.
Also Read: ಹಥ್ರಾಸ್: ಪತ್ರಕರ್ತ ಸೇರಿ ನಾಲ್ವರ ಮೇಲೆ UAPA, ದೇಶದ್ರೋಹ ಪ್ರಕರಣ ದಾಖಲು
ಸೆ.28ರಂದು ಸಂತ್ರಸ್ತೆಯ ಸಾವಿಗೆ ಮುಂಚೆಯೇ ಪಕ್ಷದ ನಿಯೋಗ ಆಕೆಯ ಮನೆಗೆ ಭೇಟಿ ನೀಡಿತ್ತು. ಪಕ್ಷ ಸಂತ್ರಸ್ತೆಯ ಕುಟುಂಬದ ಜೊತೆಗಿದೆ ಎಂದು ಹೇಳಿರುವ ಮಾಯಾವತಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಮತ್ತು ಪ್ರತಿಪಕ್ಷಗಳ ನಿಯೋಗಗಳ ಭೇಟಿ ನೀಡದಂತೆ ತಡೆಯುವ ಯೋಗಿ ಸರ್ಕಾರದ ಕ್ರಮವನ್ನು ಖಂಡಿಸುತ್ತೇವೆ ಎಂದು ಆಗ್ರಹಿಸಿದ್ದರು. ಆ ಪತ್ರಿಕಾಗೋಷ್ಠಿ ಮತ್ತು ಕೆಲವು ಟ್ವೀಟ್ ಹೊರತುಪಡಿಸಿ ಸ್ವತಃ ಮಾಯಾವತಿಯವರು ಈ ಪ್ರಕರಣದ ವಿಷಯದಲ್ಲಿ ಬೀದಿಗಿಳಿದು ಹೋರಾಟ ನಡೆಸಿದ್ದಾಗಲೀ, ಅವರ ಪಕ್ಷ ಪ್ರತಿಭಟನೆ ನಡೆಸಿದ್ದಾಗಲೀ ವರದಿಯಾಗಿಲ್ಲ.
ಕಾನ್ಶಿರಾಂ ಉತ್ತರಾಧಿಕಾರಿಯಾಗಿ ದೇಶದ ದಲಿತ ರಾಜಕಾರಣದ ಅನಭಿಶಿಕ್ತ ರಾಣಿ ಎಂಬಂತೆ ದಶಕಗಳ ಕಾಲ ದಲಿತ ರಾಜಕಾರಣದ ಕೇಂದ್ರ ಬಿಂದುವಾಗಿದ್ದ ಮತ್ತು ಬಹುಜನ ಸಮಾಜ ಎಂಬ ದಲಿತ ಅಸ್ಮಿತೆಯನ್ನೇ ಪಕ್ಷದ ಹೆಗ್ಗುರುತಾಗಿ ಇಟ್ಟುಕೊಂಡು ರಾಜಕಾರಣ ಮಾಡುವ ನಾಯಕಿಯೊಬ್ಬರು, ಸ್ವತಃ ತಮ್ಮದೇ ರಾಜ್ಯದಲ್ಲಿ, ತಮ್ಮದೇ ದಲಿತ ಸಮುದಾಯದ ಯುವತಿಯ ಮೇಲೆ ನಡೆದ ಹೇಯ ಸಾಮೂಹಿಕ ಅತ್ಯಾಚಾರ ಮತ್ತು ಆರೋಪಿ ಮೇಲ್ಜಾತಿ ಠಾಕೂರರ ಪರ ನಿಂತ ಒಬ್ಬ ಠಾಕೂರ್ ಸಮುದಾಯದ ನಾಯಕನ ಸರ್ಕಾರದ ವಿರುದ್ಧ ಗಟ್ಟಿ ದನಿ ಮೊಳಗಿಸಲಿಲ್ಲ ಏಕೆ? ಹಾಗೆ ನೋಡಿದರೆ, ಮಾಯಾವತಿಯೇ ಹಥ್ರಾಸ್ ಪ್ರಕರಣದಲ್ಲಿ ಸಂತ್ರಸ್ತೆಯ ಪರ ಪ್ರಬಲ ದನಿಯಾಗಬೇಕಿತ್ತು. ರಾಷ್ಟ್ರವ್ಯಾಪಿ ಆಕ್ರೋಶದ ದನಿಯಾಗಬೇಕಿತ್ತು.
Also Read: ಹಥ್ರಾಸ್ ಪ್ರಕರಣ; ಸಂತ್ರಸ್ತೆ ಮೇಲೆಯೇ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರು
ಆದರೆ, ಆಗಿದ್ದು ಮಾಯಾವತಿಯವರ ನಾಜೂಕು ರಾಜಕೀಯ ವರಸೆಯ ಜಾಣ ನಡೆಯ ಬರೀ ಹೇಳಿಕೆಗಳ ಪ್ರದರ್ಶನ ಮಾತ್ರ. ನತದೃಷ್ಟ ಯುವತಿಯ ಪರ ಬೀದಿಗಿಳಿದು ಯೋಗಿ ಸರ್ಕಾರವನ್ನು ನಡುಗಿಸಬಲ್ಲ ಅವಕಾಶವಿತ್ತು. ಆ ಮೂಲಕ ತನ್ನ ಬಿಎಸ್ ಪಿ ಪಕ್ಷದಿಂದಲೇ ಕ್ರಮೇಣ ದೂರ ಸರಿಯುತ್ತಿರುವ ಉತ್ತರಪ್ರದೇಶದ ರಾಜಕಾರಣದ ದೊಡ್ಡ ಶಕ್ತಿಯಾದ ದಲಿತ ಸಮುದಾಯದ ವಿಶ್ವಾಸವನ್ನು ಪುನರ್ ಗಳಿಸುವ ಅವಕಾಶ ಇತ್ತು. ರಾಜಕೀಯವಾಗಿ ಮತ ಬ್ಯಾಂಕ್ ಕ್ರೋಡೀಕರಣದ ಅವಕಾಶವೂ ಇತ್ತು. ಇದೆಲ್ಲಾ ರಾಜಕಾರಣ ಹೊರತುಪಡಿಸಿಯೂ ತಾನಿನ್ನೂ ದಲಿತರ ಪ್ರಶ್ನಾತೀತ ನಾಯಕಿ ಎಂಬುದನ್ನಾದರೂ ಸಾಧಿಸುವ ಹೊಣೆಗಾರಿಕೆಯೂ ಇತ್ತು. ನಿಜಕ್ಕೂ ಪ್ರಬಲ ಸರ್ಕಾರದ ಅಟ್ಟಹಾಸದ ಎದುರು, ಪೊಲೀಸರ ಬೂಟುಕಾಲಿನ ಕೆಳಗೆ ನಲುಗಿ ಹೋಗಿದ್ದ ಅಕ್ಷರಶಃ ದಯನೀಯ ಪರಿಸ್ಥಿತಿಯಲ್ಲಿದ್ದ ದಲಿತ ಕುಟುಂಬಕ್ಕೆ ಒಂದು ಭರವಸೆಯಾದರೂ ಆಗಬಹುದಿತ್ತು. ಆತ್ಮಸ್ಥೈರ್ಯ, ಬದುಕಿನ ಭರವಸೆ ತುಂಬುವ ಅಗತ್ಯವಿತ್ತು. ಸ್ವತಃ ಸಂತ್ರಸ್ತೆಯ ತಂದೆತಾಯಿಯನ್ನು ಭೇಟಿಯಾಗಿ ಸಂಕಷ್ಟದ ಹೊತ್ತಲ್ಲಿ ಮಗಳಿಗೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸಲು ನಾನಿನದ್ದೇನೆ ನಿಮ್ಮ ನಾಯಕಿ ಎಂದು ಹೇಳುವ ಜರೂರು ಇತ್ತು.
ಆದರೆ, ಮಾಯಾವತಿ ಎಲ್ಲಿ ಮಾಯವಾಗಿದ್ದಾರೆ? ಅವರ ಸದ್ದಿಲ್ಲವಲ್ಲಾ? ಎಂದು ದೇಶದ ಜನತೆ ಸಾಮಾಜಿಕ ಜಾಲತಾಣದಲ್ಲಿ ಕೇಳುವ ಮಟ್ಟಿಗೆ ಅವರು ತೆರೆಮರೆಗೆ ಸರಿದುಬಿಟ್ಟರು ಯಾಕೆ?
Also Read: ಹಥ್ರಾಸ್ ಪ್ರಕರಣ: ಸಂತ್ರಸ್ಥೆಯ ಪೋಷಕರನ್ನು ಭೇಟಿಯಾಗಲು ವಕೀಲೆ ಸೀಮಾ ಕುಶ್ವಾಹರಿಗಿಲ್ಲ ಅವಕಾಶ
ಈ ಪ್ರಶ್ನೆಗೆ ಉತ್ತರ ಸರಳ. ಮಾಯಾವತಿಯವರ ಈ ಜಾಣಮೌನ ಮತ್ತು ಹಾವು ಸಾಯಬಾರದು, ಕೋಲೂ ಮುರಿಯಬಾರದು ಎಂಬ ವರಸೆಗೆ ಕಾರಣ ಎರಡು; ಒಂದು, ಮಾಯಾವತಿ ಅವರ ಸದ್ಯದ ರಾಜಕೀಯ ಲೆಕ್ಕಾಚಾರ. ಮತ್ತೊಂದು ಅವರ ಹಿಂದಿನ ರಾಜಕಾರಣದ ಲಜೇಜು. ಸದ್ಯ ಯೋಗಿ ಆದಿತ್ಯನಾಥರ ‘ಠಾಕೂರ್ ವಾಡ’ ರಾಜಕಾರಣದ ಭಾಗವಾಗಿ ಠಾಕೂರರ ಅಟ್ಟಹಾಸಕ್ಕೆ ನಲುಗಿರುವ ರಾಜ್ಯದ ಒಟ್ಟು ಮತದಾರರ ಪೈಕಿ ಶೇ.10ರಷ್ಟಿರುವ ಬ್ರಾಹ್ಮಣರ ಓಲೈಕೆ ಮಾಯಾವತಿಯರ ಸದ್ಯದ ಆದ್ಯತೆ. ಈಗಾಗಲೇ ತಮ್ಮ ಕೈತಪ್ಪಿ ಹೋಗುತ್ತಿರುವ ದಲಿತ ಮತಗಳ ಬದಲಿಗೆ, ಆ ನಷ್ಟ ಭರ್ತಿಗೆ ಠಾಕೂರರೂ ಸೇರಿ ಮೇಲ್ಜಾತಿ ಮತಗಳ ಓಲೈಕೆ ಕೂಡ ಅವರಿಗೆ ಅನಿವಾರ್ಯವಾಗಿದೆ. ಹಾಗಾಗಿ ದಲಿತ ಯುವತಿಯ ಮೇಲಿನ ಮೇಲ್ಜಾತಿಯ ಪೈಶಾಚಿತ ಕೃತ್ಯ ಕೂಡ ಅವರೊಳಗೆ ಈಗಾಗಲೇ ಮಾಜಿಯಾಗಿರುವ ದಲಿತ ನಾಯಕಿಯನ್ನು ಬಡಿದೆಚ್ಚರಿಸಲಾಗಲಿಲ್ಲ! ಇದು ಮಾಯಾವತಿಯವರ ಭವಿಷ್ಯದ ರಾಜಕಾರಣ ಪ್ರಯಾಣದ ಮುನ್ನೆಚ್ಚರಿಕೆಯ ಜಾಣ ನಡೆ.
Also Read: ತಡರಾತ್ರಿಯ ಅಂತ್ಯಸಂಸ್ಕಾರವನ್ನು ಸಮರ್ಥಿಸಿಕೊಂಡ ಆದಿತ್ಯನಾಥ್ ಸರ್ಕಾರ!
ಇನ್ನು ಈಗಾಗಲೇ ದಶಕಗಳ ಕಾಲದ ರಾಜಕಾರಣದಲ್ಲಿ ಸಿಎಂ ಆಗಿ ಅಧಿಕಾರದ ಚುಕ್ಕಾಣಿ ಹಿಡಿದಾಗ ನಡೆಸಿದ ಕೃತ್ಯಗಳ ಲಗೇಜು ಕೂಡ ಅವರ ಕಾಲು ಕಟ್ಟಿಹಾಕಿದೆ. ಅದು ತಾಜ್ ಕಾರಿಡಾರ್ ಹಗರಣವಿರಬಹುದು, ಆದಾಯ ಮೀರಿದ ಅಕ್ರಮ ಆಸ್ತಿ ಪ್ರಕರಣವಿರಬಹುದು, ಉತ್ತರಪ್ರದೇಶ ವಿವಿಧ ಇಲಾಖಾ ನೇಮಕಾತಿಗೆ ಸಂಬಂಧಿಸಿದ ಯುಪಿಪಿಎಸ್ ಸಿ ನೇಮಕಾತಿ ಹಗರಣವಿರಬಹುದು, ಸಕ್ಕರೆ ಕಾರ್ಖಾನೆಗಳ ಮಾರಾಟ ಪ್ರಕರಣವಿರಬಹುದು, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಕ್ರಮವಿರಬಹುದು,.. ಹೀಗೆ ಸಾಲು ಸಾಲು ಪ್ರಕರಣಗಳಲ್ಲಿ ಈಗಾಗಲೇ ಸಿಬಿಐ ತನಿಖೆಗಳು ನಡೆದಿವೆ. ಕೆಲವು ಪ್ರಕರಣಗಳಲ್ಲಿ ಕ್ಲೀನ್ ಚಿಟ್ ಸಿಕ್ಕಿದ್ದರೂ ಮತ್ತೆ ಕೆಲವು ಇನ್ನೂ ವಿಚಾರಣೆಯ ಹಂತದಲ್ಲಿವೆ. ಜೊತೆಗೆ ಇನ್ನಷ್ಟು ಹಗರಣಗಳು ಬಿಜೆಪಿಯ ಬತ್ತಳಿಕೆಯಲ್ಲಿವೆ. ಈ ಭರ್ಜರಿ ಹಗರಣಗಳ ಲಗೇಜು ಮಾಯಾವತಿಯರ ಕಾಲಿಗೆ ಕಬ್ಬಿಣದ ಗುಂಡಿನಂತೆ ಸುತ್ತಿಕೊಂಡಿದೆ. ಹಾಗಾಗಿ ಅವರ ದಲಿತರಪರ ಕಾಳಜಿ ಕೊರಳವರೆಗೆ ಬಂದರೂ, ಉಸಿರುಗಟ್ಟುತ್ತಿದೆ.
Also Read: ಹಥ್ರಾಸ್ ಪ್ರಕರಣ ಯೋಗಿ ವಿರುದ್ಧದ ಅಂತರಾಷ್ಟ್ರೀಯ ಸಂಚು – UP ಪೊಲೀಸ್
ಈ ಅರ್ಥದಲ್ಲಿ ಒಂದು ಕಡೆ ಕರ್ನಾಟಕದಲ್ಲಿ ಪ್ರತಿಪಕ್ಷಗಳ ಅಕ್ರಮ ಆಸ್ತಿವಂತ ನಾಯಕರನ್ನು ಚುನಾವಣೆಗಳ ಹೊಸ್ತಿಲಲ್ಲಿ ಎದೆಗುಂದಿಸಲು, ಹಣಿಯಲು ಬಳಕೆಯಾಗುವ ಸಿಬಿಐ ಮತ್ತಿತರ ತನಿಖಾ ಸಂಸ್ಥೆಗಳ ಅಸ್ತ್ರ, ಉತ್ತರಪ್ರದೇಶದಲ್ಲಿ ಒಂದು ಅಮಾನುಷ ಅಟ್ಟಹಾಸದ ವಿರುದ್ಧ ದನಿ ಎತ್ತದಂತೆ ಪ್ರತಿಪಕ್ಷಗಳನ್ನು ಹತ್ತಿಕ್ಕಲೂ ಬೆದರುಬೊಂಬೆಯಾಗಿ ಬಳಕೆಯಾಗುತ್ತಿದೆ. ರಾಜಕಾರಣದಲ್ಲಿ ನೂರಕ್ಕೆ ನೂರು ಪ್ರಾಮಾಣಿಕತೆಯನ್ನು ನಿರೀಕ್ಷಿಸಲಾಗದ ಮಟ್ಟಕ್ಕೆ ಭಾರತದ ರಾಜಕಾರಣ ಬದಲಾಗಿದೆ ನಿಜ. ಆದರೆ, ಭ್ರಷ್ಟಾಚಾರ, ಅಕ್ರಮಗಳನ್ನೇ ಹಾಸಿಹೊದ್ದ ನಾಯಕ- ನಾಯಕಿಯರು ಹೇಗೆ ನಿರ್ಣಾಯಕ ಹೊತ್ತಲ್ಲಿ ಜನರ ದನಿಯಾಗುವ ಕನಿಷ್ಟ ಅವಕಾಶವನ್ನೂ ಕಳೆದುಕೊಳ್ಳುತ್ತಾರೆ. ಅಕ್ರಮಗಳ ಸುಳಿಯಲ್ಲಿಯೇ ಅವರನ್ನು ಬಿಗಿದು ಹೇಗೆ ಆಡಳಿತದ ಅಟ್ಟಹಾಸದೆದುರು ನಿಸ್ಸಾಯಕರನ್ನಾಗಿಸಲಾಗುತ್ತದೆ ಎಂಬುದಕ್ಕೂ ಮಾಯಾವತಿ ಮತ್ತು ಡಿ ಕೆ ಶಿವಕುಮಾರ್ ಪ್ರಕರಣಗಳು ತಾಜಾ ಉದಾಹರಣೆಯಾಗಿ ಕಣ್ಣೆದುರು ನಿಂತಿವೆ.
Also Read: ಸಾತ್ವಿಕನಂತೆ ನಟಿಸುವ ಆದಿತ್ಯನಾಥ್ ಮೇಲೆ 27 ಪ್ರಕರಣಗಳಿದ್ದವು – ಸಿದ್ದರಾಮಯ್ಯ
ರಾಜಕಾರಣದಲ್ಲಿ ಕನಿಷ್ಟ ಪ್ರಾಮಾಣಿಕತೆ, ಶುದ್ಧ ಹಸ್ತ ಯಾಕೆ ಮುಖ್ಯ ಎಂಬುದಕ್ಕೂ ಈ ಇಬ್ಬರು ವ್ಯಕ್ತಿಗಳ ಸ್ಥಿತಿ ಒಂದು ಪಾಠವಾಗಿದೆ! ಜೊತೆಗೆ, ನಾಯಕರ ಭ್ರಷ್ಟತೆ, ನೈತಿಕ ಪತನಕ್ಕೆ ಅಂತಿಮವಾಗಿ ಬೆಲೆ ತೆರಬೇಕಾದವರು ಅವರಷ್ಟೇ ಅಲ್ಲ; ಜನಸಾಮಾನ್ಯರು ಕೂಡ!