ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ(BBMP) ಮೇಯರ್ (ಈಗ ಮಾಜಿ) ಗೌತಮ್ ಕುಮಾರ್ ಜೈನ್ ಅವಧಿ ಗುರುವಾರ (10/09/2020) ರಂದು ಮುಕ್ತಾಯವಾಗಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಬಿಬಿಎಂಪಿ ಆಡಳಿತ ಅಧಿಕಾರಿಯಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಹೆಚ್ಚುವರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಮೇಯರ್ ಗೌತಮ್ ಕುಮಾರ್ ಜೈನ್ ಅಧಿಕಾರದ ಅಂತಿಮ ವಿವಾದ ಮಾಡಿಕೊಂಡು ನಿರ್ಗಮಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕೊಡ ಮಾಡುವ ಕೆಂಪೇಗೌಡ ಪ್ರಶಸ್ತಿ ವಿತರಣೆ ಆಗಿದೆ. ಆದರೆ ವಿತರಣೆ ಆದ ಬಳಿಕ ವಿವಾದ ಕೆಸರು ಮೇಯರ್ ಆಗಿದ್ದ ಗೌತಮ್ ಕುಮಾರ್ ಜೈನ್ ಅವರ ಮುಖಕ್ಕೆ ರಾಚಿದೆ. ಅದೂ ಕೂಡ ಸಂಘ ಪರಿವಾರದ ಕಡೆಯಿಂದ ಎನ್ನುವುದು ವಿಶೇಷ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಧಿಕಾರ ಹಿಡಿದಾಗಲೂ ಗೌತಮ್ ಕುಮಾರ್ ವಿವಾದ..!
ಸರಿಯಾಗಿ ಒಂದು ವರ್ಷದ ಹಿಂದೆ ರಾಜ್ಯದಲ್ಲಿ ಆಪರೇಷನ್ ಕಮಲ ಮಾಡಿ ಅಧಿಕಾರ ಹಿಡಿದ ಭಾರತೀಯ ಜನತಾ ಪಾರ್ಟಿ, ಬಿಬಿಎಂಪಿಯಲ್ಲೂ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟಕ್ಕೆ ಎಳ್ಳುನೀರು ಬಿಟ್ಟು ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು. ಪದ್ಮನಾಭ ರೆಡ್ಡಿ ಸೇರಿದಂತೆ ಬಿಜೆಪಿಯಲ್ಲಿ ಮೇಯರ್ ಆಗಲು ಸಾಕಷ್ಟು ಘಟಾನುಘಟಿ ನಾಯಕರು ಪೈಪೋಟಿ ನಡೆಸಿದ್ದರು. ಆರ್. ಅಶೋಕ್, ಎಸ್. ಆರ್. ವಿಶ್ವನಾಥ್ ಸೇರಿದಂತೆ ರಾಜ್ಯ ಮಟ್ಟದ ಹಿರಿಯ ರಾಜಕಾರಣಿಗಳ ಹಿಂದೆ ಬಿದ್ದಿದ್ದ ಆಕಾಂಕ್ಷಿಗಳಿಗೆ ಬಿಜೆಪಿ ಮಾತೃ ಸಂಸ್ಥೆ ಆಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶಾಕ್ ಕೊಟ್ಟಿತ್ತು. ಗೌತಮ್ ಕುಮಾರ್ ಜೈನ್ ಯಾರೆಂಬುದೇ ಗೊತ್ತಿಲ್ಲದೆ ಇರುವಾಗ ಇವರನ್ನು ಮೇಯರ್ ಎಂದು ಘೋಷಣೆ ಮಾಡಬೇಕಾದ ಅನಿವಾರ್ಯತೆ ರಾಜ್ಯ ಬಿಜೆಪಿ ನಾಯಕರದ್ದು ಆಗಿತ್ತು. ಕನ್ನಡಿಗನಲ್ಲದ, ಮಾರವಾಡಿ ಸಮುದಾಯಕ್ಕೆ ಸೇರಿದ ಗೌತಮ್ ಕುಮಾರ್ ಜೈನ್ ಆಡಳಿತದಲ್ಲಿ ಬೆಂಗಳೂರಿನ ಕನ್ನಡಿಗರು ಬದುಕಬೇಕು. ಬೆಂಗಳೂರಿನ ಮೇಯರ್ ಆಗಲು ಕನಿಷ್ಠ ಒಬ್ಬ ಸಮರ್ಥ ನಾಯಕ ಬಿಜೆಪಿಯಲ್ಲಿ ಇಲ್ಲವೇ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಚರ್ಚೆಗಳು ನಡೆದವು. ಆ ಬಳಿಕ ಸ್ವತಃ ಗೌತಮ್ ಕುಮಾರ್ ಜೈನ್ ಸಮಜಾಯಿಷಿ ನೀಡಿ, ನಾನೂ ಕೂಡ ಕರ್ನಾಟಕದಲ್ಲೇ ಹುಟ್ಟಿ ಬೆಳೆದಿದ್ದೇನೆ. ನನ್ನನ್ನೂ ಕನ್ನಡಿಗನನ್ನಾಗಿ ನೋಡಿ. ಕನ್ನಡಕ್ಕಾಗಿಯೇ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿದ್ದರು. ಇದೀಗ ಮತ್ತೆ ಅದೇ ರೀತಿಯ ಎಡವಟ್ಟು ಸಂಭವಿಸಿದೆ.
ಗುರುವಾರ ಕೆಂಪೇಗೌಡ ಪ್ರಶಸ್ತಿಯಲ್ಲೂ ರಾಜಕೀಯ..!
ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯಿಂದ ಕೊಡುವ ಕೆಂಪೇಗೌಡ ಪ್ರಶಸ್ತಿಯಲ್ಲೂ ರಾಜಕೀಯ ಎನ್ನುವುದನ್ನು ನೋಡಿದ ಬಳಿಕ ಇದೆಲ್ಲಾ ಪ್ರತಿ ವರ್ಷ ನಡೆಯುವ ವಿಚಾರ ಎಂದುಕೊಳ್ಳಬಹುದು. ಪಾಲಿಕೆ ಸದಸ್ಯರು ತನಗೆ ಬೇಕಾದವರಿಗೆ ರಾಜಕೀಯ ಒತ್ತಡದಿಂದ ಪ್ರಶಸ್ತಿಗೆ ಆಯ್ಕೆಯಾಗುವಂತೆ ನೋಡಿಕೊಳ್ಳುತ್ತಾರೆ ಎನ್ನುವುದು ನಿಜ. ಅದೇ ಕಾರಣಕ್ಕಾಗಿ ಪ್ರಶಸ್ತಿ ಎನ್ನುವುದು ಮಹತ್ವ ಕಳೆದಕೊಂಡಿರುವ ಫಲಕಕ್ಕೆ ಸೀಮಿತವಾಗಿದೆ. ಆದರೆ ಪ್ರಶಸ್ತಿಯನ್ನು ಬೆಳಗ್ಗೆ ಕೊಟ್ಟ ಬಳಿಕ ಸಂಜೆ ಪಟ್ಟಿಯನ್ನು ಕೈ ಬಿಡುವುದು ಸರಿಯಾದ ಕ್ರಮವೇ..? ಗುರುವಾರ ಪ್ರಶಸ್ತಿ ಬಂದಿದೆ ಎಂದು ಕರೆ ಮಾಡಿ ಆ ಬಳಿಕ ಸರ್ಕಾರದ ಪಟ್ಟಿ ಬಿಡುಗಡೆ ಮಾಡುವಾಗ ಹೆಸರನ್ನು ಕೈಬಿಟ್ಟಿದ್ದು ಯಾರ ಹೊಣೆಗೇಡಿತನ ಎನ್ನುವುದನ್ನು ಪ್ರಶ್ನೆ ಮಾಡಬೇಕಿದೆ.
32 ಜನರಿಗೆ ಸಿಕ್ಕಿತ್ತು ಕೆಂಪೇಗೌಡ ಅವಾರ್ಡ್..!
ಕರೋನಾ ಸಂಕಷ್ಟ ಸಮಯದಲ್ಲೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 32 ಮಂದಿಗೆ, ಗುರುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಸಾಂಕ್ರಾಮಿಕ ಕಾಯಿಲೆ ಕರೋನಾ ವಿರುದ್ಧ ಹೋರಾಟದಲ್ಲಿ ವಾರಿಯರ್ಸ್ ಆಗಿ ಕೆಲಸ ಮಾಡಿದವರಿಗೆ ಪ್ರಶಸ್ತಿ ಕೊಡುವುದಾಗಿ ತಿಳಿಸಿದ್ದ ಬಿಬಿಎಂಪಿ, ಕೊನೇ ಕ್ಷಣದಲ್ಲಿ ಕರೋನಾ ವಾರಿಯರ್ಸ್ ಹೆಸರಲ್ಲಿ ಬಹುತೇಕ ಬೇರೆಯವರಿಗೆ ಪ್ರಶಸ್ತಿ ಹಂಚಿಕೆ ಮಾಡಿದ್ದಾರೆ ಎನ್ನುವುದು ಬಿಚ್ಚಿಟ್ಟ ಸತ್ಯವಾಗಿದೆ. ಕರೋನಾ ನಿಯಂತ್ರಣಕ್ಕೆ ತಳಮಟ್ಟದಲ್ಲಿ ಕಾರ್ಯನಿರ್ವಹಿಸಿದ ಆಶಾಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿಯನ್ನು ಗುರುತಿಸದ ಬಗ್ಗೆಯೂ ಅಸಮಾಧಾನ ವ್ಯಕ್ತವಾಗಿದೆ. ಜೊತೆಗೆ ಪ್ರಶಸ್ತಿ ಕೊಟ್ಟಿರುವ ಕೆಲವೇ ಕೆಲವು ಕೋವಿಡ್-19 ವಾರಿಯರ್ಸ್ ಗಳನ್ನು ಪಟ್ಟಿಯಿಂದ ಕೈಬಿಟ್ಟು ವಿವಾದ ಮಾಡಿಕೊಂಡಿದ್ದಾರೆ ಮೇಯರ್ ಗೌತಮ್ ಕುಮಾರ್ ಜೈನ್.
ಮರ್ಸಿ ಏಂಜಲ್ಸ್ ಸಂಸ್ಥೆ ಹೆಸರು ಪಟ್ಟಿಯಿಂದ ಔಟ್..!
ಬೆಂಗಳೂರಿನಲ್ಲಿ ಕರೋನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದ ಮರ್ಸಿ ಏಂಜಲ್ಸ್ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಸಂಸ್ಥೆಯ ಮುಖ್ಯಸ್ಥ ಡಾ. ಥಹ ಮತೀನ್ ಅವರಿಗೆ ಕರೆ ಮಾಡಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಸ್ವೀಕಾರಕ್ಕೆ ಬರುವಂತೆ ಬಿಬಿಎಂಪಿ ಕಡೆಯಿಂದ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಆದರೆ ಡಾ ಮತೀನ್ ಅವರ ಪರವಾಗಿ ಸಂಸ್ಥೆಯ ಕೆಲವರು ಬಂದು ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಮೇಯರ್ ಸಾಹೇಬರೂ ಕೂಡ ಪ್ರಶಸ್ತಿ ಕೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆದರೆ ಮಧ್ಯಾಹ್ನದ ಬಳಿಕ ಬಿಬಿಎಂಪಿಯಿಂದ ಪ್ರಶಸ್ತಿ ಪುರಸೃತರ ಪಟ್ಟಿಯಲ್ಲಿ ಡಾ. ಥಹ ಮತೀನ್ ಅವರ ನೇತೃತ್ವದ ಮರ್ಸಿ ಏಂಜಲ್ಸ್ ಸಂಸ್ಥೆ ಹೆಸರು ಕೈಬಿಡಲಾಗಿದೆ. ಇದು ಆರ್ ಎಸ್ ಎಸ್ ಸೂಚನೆಯಂತೆ ಹೆಸರು ಕೈಬಿಡಲಾಗಿದೆ ಎನ್ನುತ್ತಾರೆ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ (ಈಗ ಮಾಜಿ). ಆದರೆ ಎನ್ ಜಿ ಒ ಗಳಿಗೆ ಕೆಂಪೇಗೌಡ ಪ್ರಶಸ್ತಿ ಕೊಡಲು ಸಾಧ್ಯವಿಲ್ಲ. ಹಾಗಾಗಿ ಕೈ ಬಿಡಲಾಗಿದೆ ಎಂದಿದ್ದಾರೆ ಗೌತಮ್ ಕುಮಾರ್ ಜೈನ್.
ನಿಸ್ವಾರ್ಥ ಸೇವೆಗೆ ಮಾಡಿದ ಅವಮಾನ..!
ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಜನರು ಬಾರದೆ ಬೇಕಾಬಿಟ್ಟಿಯಾಗಿ ಶವವನ್ನು ಗುಂಡಿ ತೆಗೆದು ಬಿಸಾಡುವ ಅದೆಷ್ಟೋ ಘಟನೆಗಳು ಸಂಭವಿಸಿವೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಶವಸಂಸ್ಕಾರವನ್ನು ಮಾಡದೆ ಬಿಸಾಡುತ್ತಿದ್ದ ಸಮಯದಲ್ಲಿ ಮರ್ಸಿ ಏಂಜಲ್ಸ್ ಸಂಸ್ಥೆಯ ಸ್ವಯಂಸೇವಕರು ಗೌರವಯುವಾಗಿ ಅಂತ್ಯಕ್ರಿಯೆ ನಡೆಸಿದ್ದರು. ಈ ಬಗ್ಗೆ ಹೆಚ್ ಬಿ ಎಸ್ ಆಸ್ಪತ್ರೆ ವೈದ್ಯ ಥಹಾ ಮತೀನ್ ಅವರು ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಸಾವಿನ ನಂತರ ಶವಗಳನ್ನು ಮನಸೋ ಇಚ್ಛೆ ಎಸೆಯಬೇಡಿ, ದಯಮಾಡಿ ಗೌರವಯುತವಾಗಿ ಕಳಿಸಿಕೊಡಿ ಎಂದಿದ್ದರು. ಈ ರೀತಿ ಮಾನವೀಯತೆಯಿಂದ ಕೆಲಸ ಮಾಡುವ ಸಂಸ್ಥೆಯನ್ನು ಕರೆದು ಪ್ರಶಸ್ತಿ ಕೊಟ್ಟು ಆ ಬಳಿಕ ಪ್ರಶಸ್ತಿ ಪಟ್ಟಿಯಿಂದ ಕೈ ಬಿಟ್ಟಿರುವುದು ಸರ್ಕಾರ ಕರೋನಾ ವಾರಿಯರ್ಸ್ ಮಾಡಿದ ಅವಮಾನ ಆಗಿದೆ.
ಪ್ರಶಸ್ತಿಗಾಗಿ ಮರ್ಸಿ ಸಂಸ್ಥೆ ಅರ್ಜಿ ಹಾಕಿಕೊಂಡಿರಲಿಲ್ಲ. ಪೈಪೋಟಿ ಮೇಲೆ ಪ್ರಶಸ್ತಿಗಾಗಿ ದುಂಬಾಲು ಬಿದ್ದಿರಲಿಲ್ಲ. ಆದರೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಯಾಕೆ ಆ ಬಳಿಕ ಕೈಬಿಟ್ಟಿದ್ದು ಯಾಕೆ ಎನ್ನುವ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ ಕೊಡಬೇಕಿದೆ. ಅಥವಾ ನೂತನವಾಗಿ ಆಡಳಿತ ಅಧಿಕಾರಿ ಆಗಿ ಅಧಿಕಾರ ವಹಿಸಿಕೊಂಡಿರುವ ಗೌರವ್ ಗುಪ್ತಾ ಅವರು ಉತ್ತರ ಕೊಡಬೇಕಿದೆ. ಇಲ್ಲದಿದ್ದರೆ, ಈ ನಿರ್ಧಾರದಿಂದ ಸಾಮಾಜಿಕ ಕಳಕಳಿ ಇರುವ ವಕೀಲರು ದಾವೆ ಹೂಡಬೇಕಿದೆ. ಈಗ ಮಾಡಿರುವ ಅವಮಾನಕ್ಕೆ ಸರ್ಕಾರ ಬೆಲೆ ತೆರುವಂತೆ ಮಾಡಬೇಕಿದೆ.