ಬೆಂಗಳೂರಿನ ಕೆಜಿ ಹಳ್ಳಿ, ಡಿಜೆ ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದ ಘರ್ಷಣೆ ಬಗ್ಗೆ ರಾಜ್ಯ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ಮಾಡಿದೆ. ಮಂಗಳವಾರ ರಾತ್ರಿ ನಡೆದಿದ್ದ ದೊಂಬಿ ಗಲಾಟೆ ಬಗ್ಗೆ ಈಗಾಗಲೇ ನೂರಾರು ಜನರನ್ನು ಅರೆಸ್ಟ್ ಮಾಡಲಾಗಿದೆ. ಎರಡೂ ಠಾಣೆಗಳಲ್ಲಿ ಐದಕ್ಕೂ ಹೆಚ್ಚು ಎಫ್ಐಆರ್ ದಾಖಲು ಮಾಡಿಕೊಂಡು, ಹಲವಾರು ಟೀಂಗಳು ಆರೋಪಿಗಳ ಜಾಡು ಹಿಡಿದು ಹೊರಟಿದ್ದವು. ಇದೀಗ ಗೃಹ ಸಚಿವರು ಹೇಳಿದ್ದಂತೆ. ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ಮಾಡಲಾಗಿದೆ. ಬೆಂಗಳೂರು ಜಿಲ್ಲಾಧಿಕಾರಿ ಜಿ.ಎನ್ ಶಿವಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ಮೂರು ತಿಂಗಳೊಳಗೆ ವಿಚಾರಣೆ ಪೂರ್ಣ ಮಾಡಿ ವರದಿ ನೀಡಬೇಕು ಎಂದು ಗಡುವು ನೀಡಿದಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಫೇಸ್ಬುಕ್ ಪೋಸ್ಟ್ ಗಲಭೆ ಸಂಬಂಧ ತನಿಖೆಗೆ 7 ವಿಶೇಷ ತಂಡಗಳ ರಚನೆ ಮಾಡಲಾಗಿದೆ. ಸಂಪೂರ್ಣ ಘಟನೆ ತನಿಖೆಗಾಗಿ 7 ವಿಶೇಷ ತಂಡಗಳು ರಚನೆಯಾಗಿದೆ. ಸಿಸಿಬಿ ಸೇರಿದಂತೆ ನಗರದ ಹಲವು ಪೊಲೀಸರ ತಂಡಗಳನ್ನು ರಚಿಸಲಾಗಿದೆ. ತನಿಖೆ ಮೇಲುಸ್ತುವಾರಿ ಜವಾಬ್ದಾರಿಯನ್ನು ಸಂದೀಪ್ ಪಾಟೀಲ್ಗೆ ಕೊಡಲಾಗಿದೆ. ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತರಾಗಿರುವ ಸಂದೀಪ್ ಪಾಟೀಲ್, ಎಲ್ಲರಿಗೂ ಮರ್ಗದರ್ಶನ ಮಾಡುತ್ತಾರೆ. ತನಿಖಾ ತಂಡದಲ್ಲಿ ಸಿಸಿಬಿಯ ಇಬ್ಬರು ಡಿಸಿಪಿಗಳಾದ ಕುಲದೀಪ್ ಕುಮಾರ್ ಜೈನ್ ಹಾಗೂ ರವಿಕುಮಾರ್ ನಿಯೋಜನೆ ಮಾಡಲಾಗಿದೆ.
7 ತಂಡಕ್ಕೂ ಪ್ರತ್ಯೇಕ ಜವಾಬ್ದಾರಿ ನಿಯೋಜನೆ ಮಾಡಲಾಗಿದೆ. ಈಗಾಗಲೇ ಗಲಭೆ ಹಾಗೂ ಗೋಲಿಬಾರ್ ಪ್ರಕರಣ ಸಂಬಂಧ ತನಿಖೆಯನ್ನು ಸಿಸಿಬಿ ಆರಂಭಿಸಿದೆ. ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ 146 ಮಂದಿಯನ್ನು ಬಂಧನ ಮಾಡಿದ್ದಾರೆ. ಇದೀಗ ವಿಚಾರಣೆ ವೇಳೆ ಆರೋಪಿಗಳ ಮಾಹಿತಿ ಮೇರೆಗೆ ಮತ್ತಷ್ಟು ಜನರ ಬಂಧನ ಆಗುವ ಸಾಧ್ಯತೆಯೂ ಇದೆ. ಇನ್ನೂ ಪೊಲೀಸರು ದಾಖಲು ಮಾಡಿರುವ ಎಫ್ಐಆರ್ ಮೇಲೆ ತನಿಖೆ ಶುರುವಾಗಲಿದ್ದು, ಬಂಧನ ಸಂಖ್ಯೆ ಸಾವಿರ ಮುಟ್ಟಿದರು ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ನವೀನ್ ಆಡ್ತಿರೋ ಕಳ್ಳಾಟ ಖಾಕಿಗೆ ಗೊತ್ತಿಲ್ವಾ..?
ಪುಲಿಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಅಕ್ಕನ ಮಗ ನವೀನ್ ಬಿಜೆಪಿ ಪಕ್ಷದಿಂದ ನೆಲೆಕಂಡುಕೊಳ್ಳುವ ಉಮೇದಿನಲ್ಲಿ ಇದ್ದನು ಎನ್ನಲಾಗಿದೆ. ಮುಸ್ಲಿಂ ಸಮುದಾಯದ ಪ್ರವಾದಿ ಬಗ್ಗೆ ಫೇಸ್ಬುಕ್ನಲ್ಲಿ ವಿವಾದಿತ ಪೋಸ್ಟ್ ಹಾಕಿದ ಬಳಿಕ ಆತನನ್ನು ಅರೆಸ್ಟ್ ಮಾಡಲಾಗಿದೆ. ಬಂಧನ ಮಾಡಿ 48 ಗಂಟೆಗಳು ಕಳೆದರೂ ಫೇಸ್ಬುಕ್ನಲ್ಲಿ ಫೋಸ್ಟ್ ಹಾಕಲಾಗುತ್ತಿದೆ. ಮುಸ್ಲಿಂ ಮುಖಂಡರು ದೂರು ನೀಡಲು ಬರುತ್ತಿದ್ದ ಹಾಗೆ ನನ್ನ ಫೇಸ್ಬುಕ್ ಅಕೌಂಟ್ ಹ್ಯಾಕ್ ಆಗಿದೆ ಎಂದು ಪೋಸ್ಟ್ ಮಾಡಿದ್ದ. ಆ ಬಳಿಕ ಪೊಲೀಸರ ವಿಚಾರಣೆ ವೇಳೆ ಮೊಬೈಲ್ ಕೇಳಿದಾಗ ನನ್ನ ಮೊಬೈಲ್ ಕಳವಾಗಿದೆ ಎಂದಿದ್ದಾನೆ. ಅಂದರೆ ಕಳವು ಮಾಡಿದ ಕಳ್ಳನೇ ಹ್ಯಾಕ್ ಆಗಿರುವ ಬಗ್ಗೆ ಪೋಸ್ಟ್ ಮಾಡಿದನೇ? ಎಂಬ ಪ್ರಶ್ನೆ ಎದುರಾಗಿದೆ.
ಫೇಸ್ಬುಕ್ ಪೋಸ್ಟ್ ಬಗ್ಗೆ ದೂರು ಕೊಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಹ್ಯಾಕ್ ಆಗಿದೆ ಎಂದು ಪೋಸ್ಟ್ ಹಾಕಿ ಬಚಾವ್ ಆಗುವ ಪ್ರಯತ್ನ ಮಾಡಿರಬಹುದು. ಆ ಬಳಿಕ ಅರೆಸ್ಟ್ ಆದ ಬಳಿಕ ಹೇಗಿದ್ದರು ಮೊಬೈಲ್ ಪಡೆದು ತನಿಖೆ ಮಾಡಿದರೆ ನಾನೇ ಪೋಸ್ಟ್ ಹಾಕಿದ್ದು ಎಂದು ಗೊತ್ತಾಗಿ ಬಿಡುತ್ತದೆ ಎನ್ನುವ ಕಾರಣಕ್ಕೆ ಮೊಬೈಲ್ನ ಸ್ನೇಹಿತರ ಬಳಿ ಕೊಟ್ಟು ನಾಟಕ ಆಡುತ್ತಿರುವ ಸಾಧ್ಯತೆಯೇ ಹೆಚ್ಚು. ಪರಿಸ್ಥಿತಿ ಹೀಗಿರುವಾಗ ಪೊಲೀಸರು 48 ಗಂಟೆಗಳು ಕಳೆದರೂ ಮೊಬೈಲ್ ಟ್ರೇಸ್ ಮಾಡದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನವೀನ್ ಬಗ್ಗೆ ಪೊಲೀಸರು ಸಾಫ್ಟ್ ಕಾರ್ನರ್ ತೋರಿಸುತ್ತಿದ್ದಾರೆಯೇ ಎನ್ನುವ ಶಂಕೆಯೂ ಮೂಡುವಂತಾಗಿದೆ. ಇಲ್ಲದಿದ್ದರೆ ಈತನ ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡಬೇಕಿತ್ತು.
ಇನ್ನೂ 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ ಮತಗಳನ್ನು ಗಳಿಸಿದ್ದ ಅಖಂಡ ಶ್ರೀನಿವಾಸ ಮೂರ್ತಿ ಕೋಟೆಯನ್ನು ಧ್ವಂಸ ಮಾಡಲಾಗಿದ್ದು, ಇದೀಗ ಪರಿಶಿಷ್ಟ ಜಾತಿ, ಮುಸಲ್ಮಾನ್ ಹಾಗೂ ಹಿಂದೂಗಳೆಂದು ಬೇರ್ಪಡಿಸಸುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ಅರಿತಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ನನ್ನ ಮನೆ ಮೇಲೆ ದಾಳಿ ಮಾಡಿದ್ದು, ಸ್ಥಳೀಓಯ ಮುಸ್ಲೀಮರೇ ಅಲ್ಲ. ಬೇರೆ ಕಡೆಯಿಂದ ಬಂದು ದಾಳಿ ಮಾಡಿ ಹೋಗಿದ್ದಾರೆ. ದಯಮಾಡಿ ನನಗೆ ರಕ್ಷಣೆ ಕೊಡಿ ಹಾಗೂ ನ್ಯಾಯ ಕೊಡಿಸಿ ಎಂದು ಹಲುಬುತ್ತಿದ್ದಾರೆ.
ಅಖಂಡ ಶ್ರೀನಿವಾಸ ಮೂರ್ತಿಗೆ ರಾಜಕೀಯ ಲೆಕ್ಕಾಚಾರದ ಆಟ ನಡೆಯುತ್ತಿದೆ ಎನ್ನುವ ಮಾಹಿತಿ ಗೊತ್ತಾಗಿದೆ. ದಲಿತರು, ಮುಸಲ್ಮಾನ ಹಾಗೂ ಹಿಂದೂಗಳ ಮತಗಳು ಛಿದ್ರವಾಗುವ ಮುನ್ಸೂಚನೆ ಅರಿತ ಶಾಸಕರು ಗಲಾಟೆ ಬಗ್ಗೆ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ನಾವೆಲ್ಲರೂ ಅಣ್ಣತಮ್ಮಂದಿರಂತೆ ಬದುಕುತ್ತಿದ್ದೇವೆ, ಅವರು ನಮ್ಮ ಮನೆಯಲ್ಲೇ ಊಟ ಮಾಡುತ್ತಾರೆ ಎನ್ನುತ್ತಿದ್ದಾರೆ. ಗಲಾಟೆಯಲ್ಲಿ ಪ್ರಮುಖವಾಗಿ ಏರಿಯಾ ಜನರು ಇಲ್ಲದಿದ್ದರೆ ಹೊರಗಿನಿಂದ ಬಂದವರ ದಾಳಿ ಮಾಡಲು ಸಾಧ್ಯವೇ ಎನ್ನುವ ಬಗ್ಗೆ ಚಿಂತಿಸಬೇಕಿದೆ.
ಒಟ್ಟಾರೆ, ರಾಜಕೀಯದ ಬೀಜ ಬಿತ್ತಲಾಗಿದೆ, ಇಂದಲ್ಲ, ಇನ್ನೂ 10 ವರ್ಷ ಕಳೆದರೂ ಸರಿ ಅಲ್ಲಿ ಪಲಕ್ಷದ ಬಾವುಟ ನೆಡುವುದು ಗುರಿ ಎನ್ನುವಂತೆ ರಾಜಕೀಯ ಮಾಡಲಾಗಿದೆ ಎನ್ನಲಾಗ್ತಿದೆ. ಮತಗಳ ವಿಭಜನೆ ಮಾಡಿದರೆ ಮಾತ್ರ ಅಭ್ಯರ್ಥಿ ಗೆಲುವು ಸಾಧ್ಯ, ಇಲ್ಲದಿದ್ದರೆ ಕಷ್ಟ ಎನ್ನುವುದು ಗೊತ್ತಿದೆ. ಅದೇ ಕಾರಣಕ್ಕೆ ಗಲಭೆ ಕೆಲವೇ ನಿಮಿಷಗಳಲ್ಲಿ ಭಾರೀ ರಂಗು ಪಡೆದುಕೊಂಡಿರಬೇಕು.