ಹಿಂದುತ್ವ, ಕಾಮನ್ ಸಿವಿಲ್ ಕೋಡ್, 370ನೇ ವಿಧಿ, ರಾಷ್ಟ್ರೀಯತೆಯಂತಹ ಹಲವು ಅಜೆಂಡಾಗಳನ್ನು ಇಟ್ಟುಕೊಂಡಿದ್ದರೂ ಭಾರತೀಯ ಜನತಾ ಪಕ್ಷ ಭದ್ರ ನೆಲೆ ಕಂಡುಕೊಳ್ಳಲು ನಂಬಿಕೊಂಡಿದ್ದು ರಾಮಜನ್ಮಭೂಮಿ ವಿಷಯವನ್ನು. ಈಗ ಬಿಜೆಪಿ ಅಧಿಕಾರಕ್ಕೆ ಬಂದಾಗಿದೆ ಮತ್ತು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಶಿಲಾನ್ಯಾಸ ಮಾಡಿಯೂ ಆಗಿದೆ. ಹಾಗಾದರೆ ಈಗಲೂ ಹಿಂದಿ ಭಾಷೆ ಮಾತನಾಡುವ ರಾಜ್ಯಗಳಿಗೆ ಸೀಮಿತವಾಗಿರುವ, ಅಭಿವೃದ್ಧಿ ವಿಷಯದಲ್ಲಿ ತೀವ್ರ ಹಿನ್ನೆಡೆ ಸಾಧಿಸಿರುವ ಬಿಜೆಪಿಗೆ ಮುಂದಿನ ಚುನಾವಣಾ ಬ್ರಹ್ಮಾಸ್ತ್ರ ಯಾವುದು?

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಆರ್ ಎಸ್ ಎಸ್ ಪರೋಕ್ಷವಾಗಿ ರಾಜಕೀಯ ಅಧಿಕಾರ ಪಡೆಯಲು 1980ರಲ್ಲಿ ಭಾರತೀಯ ಜನತಾ ಪಕ್ಷವನ್ನು ಹುಟ್ಟುಹಾಕಿದಾಗ ಬಹಳ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಸಂಸತ್ ಸ್ಥಾನ ಗಳಿಸಿತ್ತು. ಆಗಲೇ ಬಿಜೆಪಿ ತಾನು ಮೇಲೆ ಬರಲು ಶ್ರೀರಾಮನ ಜನ್ಮಭೂಮಿ ವಿಷಯವೇ ಸೂಕ್ತ ಎಂದು ನಿರ್ಧರಿಸಿದ್ದು ಹಾಗೂ ಅದಕ್ಕೆ ತಕ್ಕಂತೆ 1986ರಲ್ಲಿ ಸೌಮ್ಯವಾದಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಆ ಜಾಗಕ್ಕೆ ಉಗ್ರಸ್ವರೂಪಿ ಲಾಲಕೃಷ್ಣ ಅಡ್ವಾಣಿ ಅವರನ್ನು ಕೂರಿಸಿದ್ದು. ಬಿಜೆಪಿಯ ಈ ಪ್ರಯೋಗ ಫಲಿಸಿ 1989ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 85 ಸಂಸತ್ ಸ್ಥಾನಗಳನ್ನು ಗೆದ್ದುಕೊಂಡಿತು. ಇದರಿಂದ ಉತ್ತೇಜನಗೊಂಡ ಬಿಜೆಪಿ ರಾಮಜನ್ಮಭೂಮಿ ಎಂಬ ವಿವಾದದ ಇನ್ನಷ್ಟು ಬೆಂಕಿಗೆ ಬೆಣ್ಣೆ ತುಪ್ಪ ಸುರಿಯುತ್ತಾ ಸಾಗಿತು. ಅಡ್ವಾಣಿ 1990ರಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ಕೈಗೊಂಡರು. ಪರಿಣಾಮವಾಗಿ 1991ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 120 ಸಂಸತ್ ಸ್ಥಾನ ಗಳಿಸಿತು.
Also Read: ಬಿಜೆಪಿ ಮತ್ತು ರಾಮಮಂದಿರಗಳಿಗಾಗಿ ದುಡಿದೂ ದುರಂತ ನಾಯಕನಾದ ಅಡ್ವಾಣಿ
ಆಗ ಬಿಜೆಪಿ ನಾಯಕರ ‘ರಾಮನ ಭಕ್ತಿ’ ಇನ್ನೂ ಹೆಚ್ಚಾಯಿತು. ಮತ್ತೆ ಅಡ್ವಾಣಿಗೆ 1996ರ ಲೋಕಸಭಾ ಚುನಾವಣೆಯ ಹೊಣೆ ನೀಡಲಾಯಿತು. ‘ರಾಮನ ಮೇಲಿನ ಭಕ್ತಿ’ ಹೆಚ್ಚಾದಂತೆ ಬಿಜೆಪಿಯ ಸಂಖೆಯೂ ಹೆಚ್ಚಾದವು. 1996ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 161 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತು. ಬಿಜೆಪಿಯ ಈ ವರಸೆ ಮತ್ತು ಮುಂದುವರೆಯಿತು. 1998ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿ 182 ಸ್ಥಾನಗಳಲ್ಲಿ ಗೆಲುವು ದಾಖಲಿಸಿತು. ಎನ್ ಡಿಎ ಮೈತ್ರಿಕೂಟ ರಚಿಸಿಕೊಂಡು 2004ರವರೆಗೂ ದೇಶದ ಚುಕ್ಕಾಣಿ ಹಿಡಿಯಿತು. ಅಧಿಕಾರಕ್ಕೆ ಬರುವವರೆಗೆ ಇದ್ದ ‘ರಾಮನ ಮೇಲಿನ ಭಕ್ತಿ-ನಿಷ್ಟೆಗಳು’ ಅಧಿಕಾರ ಬಂದ ಮೇಲೆ ಕಾಣಲಿಲ್ಲ. ಹಾಗಾಗಿ 2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 138 ಸೀಟು ಗಳಿಸಿತು. 10 ವರ್ಷ ವನವಾಸ ಅನುಭವಿಸಿ, ವನವಾಸದ ವೇಳೆ ಮತ್ತೆ ‘ರಾಮನ ಮೇಲಿನ ಭಕ್ತಿ’ಯನ್ನು ಉದ್ದೀಪನಗೊಳಿಸಿದ ಪರಿಣಾಮ 2014ರಲ್ಲಿ 282 ಸೀಟುಗಳಿಸಿ ಅಧಿಕಾರಕ್ಕೆ ಬಂತು. ಹೀಗೆ 2 ಸೀಟಿದ್ದ ಬಿಜೆಪಿಯನ್ನು ಶ್ರೀರಾಮ 282 ಸೀಟುವರೆಗೂ ಕೈಹಿಡಿದು ಕರೆತಂದ. ಆದರೀಗ ಅದೇ ಶ್ರೀರಾಮನನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ‘ಕೈಹಿಡಿದು ಅಯೋಧ್ಯೆಗೆ ಕರೆದೊಯ್ಯುತ್ತಿರುವಂತಹ’ ಫೋಟೋ ಸೃಷಿಸಿ ಬಿಜೆಪಿಯಲ್ಲಿ ‘ರಾಮ ನಿಷ್ಟೆ’ಯ ಬದಲಿಗೆ ‘ಮೋದಿ ನಿಷ್ಟೆ’ ಸೃಷ್ಟಿಯಾಗಿದೆ. ಇದು ವಿವಾದವೂ ಆಗಿದೆ.
Also Read: ಭಾಗ- 1: ಬಾಬ್ರಿ ಮಸೀದಿ- ರಾಮ ಜನ್ಮಭೂಮಿ ರಾಜಕೀಯ ವಿವಾದದಲ್ಲಿ ಎದ್ದವರು- ಬಿದ್ದವರು.
ಇದಾದ ಮೇಲೆ 2024ರ ಲೋಕಸಭಾ ಚುನಾವಣೆ ವೇಳೆಗೆ ರಾಮಮಂದಿರವನ್ನು ನಿರ್ಮಿಸಲೂ ಬಹುದು. ಆದರೂ ಅದು ನಿರೀಕ್ಷಿತ ಬೆಳವಣಿಗೆ ಆಗುವುದರಿಂದ ರಾಜಕೀಯವಾಗಿ ಅಷ್ಟೇನೂ ಲಾಭ ತರಲಾರದು. ಅಯೋಧ್ಯೆಯ ಅಧ್ಯಾಯ ಮುಗಿದಿರುವುದರಿಂದ ಬಿಜೆಪಿಗೆ ಹೊಸ ವಿಷಯವಲ್ಲ, ಹೊಸ ವಿವಾದವೊಂದು ಬೇಕಾಗಿದೆ. ಅದು ಯಾವುದು ಎನ್ನುವುದೇ ಕುತೂಹಲಕಾರಿಯಾದ ಸಂಗತಿ. ಈ ಬಗ್ಗೆ ಈಗಾಗಲೇ ರಾಜ್ಯ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ‘ಅಯೋಧ್ಯೆಯ ರಾಮನ ದೇವಾಲಯದ ಭೂಮಿ ಪೂಜೆ ಬಳಿಕ ಕಾಶಿ ಮತ್ತು ಮಥುರಾವನ್ನು ವಿಮೋಚನೆ ಮಾಡಬೇಕಾಗಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಅಯೋಧ್ಯೆಯ ಬಳಿಕ ಕಾಶಿ ಅಥವಾ ಮಥುರಾ ಬಿಜೆಪಿಯ ಮುಂದಿನ ಗುರಿ ಎಂಬ ಸುಳಿವನ್ನು ನೀಡಿದ್ದಾರೆ.
ಈಶ್ವರಪ್ಪ ಹೇಳಿಕೆಯಲ್ಲಿ ಹುರುಳಿರಬಹುದು. ಏಕೆಂದರೆ ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸುವುದು ಉತ್ತರ ಪ್ರದೇಶದಲ್ಲಿ ಸುಲಭ. ಅಯೋಧ್ಯೆ ವಿಷಯದಲ್ಲಿ ಈಗಾಗಲೇ ಅದು ಸಾಬೀತು ಕೂಡ ಆಗಿದೆ. ಉತ್ತರ ಪ್ರದೇಶ ಮಾತ್ರವಲ್ಲದೆ ಉತ್ತರ ಭಾರತದಲ್ಲೂ ಸಂಚಲನ ಉಂಟುಮಾಡಬಹುದು. ಮಥುರಾ ವಿಷಯಕ್ಕೆ ಕೈ ಹಾಕಿ ಉತ್ತರ ಪ್ರದೇಶದ ನಿರ್ಣಾಯಕ ಮತದಾರರಾದ ಯಾದವರನ್ನು ಮುಸ್ಲಿಮರ ಮೇಲೆ ಎತ್ತಿಕಟ್ಟಬಹುದು. ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ಬಿಹಾರದಲ್ಲೂ ಯಾದವರ ಮನ ಕೆಡಿಸಬಹುದು. ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿನಿಧಿಸುವ ಕ್ಷೇತ್ರ ಕಾಶಿಗೆ ಕೈಹಾಕಿ ಬೇರೊಂದು ರೀತಿಯಲ್ಲಿ ಸಂಚಲನ ಸೃಷ್ಟಿಸಬಹುದು. ಈ ಹಿನ್ನಲೆಯಲ್ಲಿ ಇನ್ನು ಮುಂದೆ ಬಿಜೆಪಿ ನಾಯಕರಿಗೆ ರಾಮನ ಮೇಲಿದ್ದ ಭಕ್ತಿ ಕಾಶಿ ವಿಶ್ವೇಶ್ವರನ ಮೇಲೆ, ಮಥುರಾದ ಕೃಷ್ಣನ ಮೇಲೂ ಉಕ್ಕಿಬರಬಹುದು.
Also Read: ಭಾಗ- 2: ಬಾಬರಿ ಮಸೀದಿ- ರಾಮ ಜನ್ಮಭೂಮಿ ರಾಜಕೀಯ ವಿವಾದದಲ್ಲಿ ಎದ್ದವರು- ಬಿದ್ದವರು