ಸಿದ್ದರಾಮಯ್ಯನವರು ಮತ್ತೆ ರಾಜ್ಯದ ಬಿಜೆಪಿ ಸರ್ಕಾರ ಹಾಗೂ ಸಿಎಂ ಯಡಿಯೂರಪ್ಪ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ಅವರು ಅನೈತಿಕ ರಾಜಕೀಯದ ರೂವರಿ ಯಡಿಯೂರಪ್ಪ ಎಂದು ಹರಿಹಾಯ್ದಿದ್ದಾರೆ.
“ಈಗಿನ ಬಿಜೆಪಿ ಸರ್ಕಾರ ಜನರ ಆಶಿರ್ವಾದದಿಂದ ಅಧಿಕಾರಕ್ಕೆ ಬಂದಿರುವುದಲ್ಲ. ಶೆಕಡವಾರು ಮತಗಳನ್ನು ನೋಡಿದರೆ ಜನರು ಕಾಂಗ್ರೆಸ್‌ಗೆ ಹೆಚ್ಚಿನ ಮತ ನೀಡಿದ್ದಾರೆ. ಅನೈತಿಕವಾಗಿ ಈಗಿನ ಸರ್ಕಾರ ರಚನೆಯಾಗಿದೆ. ಈ ಹಿಂದೆ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ರಾಜಿನಾಮೆಯೂ ನೀಡಿದ್ದರು,” ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸರ್ಕಾರ ಒಂದು ವರ್ಷಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಹಾಗೂ ಸರ್ಕಾರ ಹೇಳಿಕೊಂಡ ಸಾಧನೆಗಳ ಕುರಿತಾಗಿ ಮಾತನಾಡಿದ ಸಿದ್ದರಾಮಯ್ಯ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಯಾವುದನ್ನು ಈಡೇರಿಸಿದ್ದೀರಾ? ನಿಮ್ಮ ಸಾಧನೆ ಏನು? ಎಂದು ಪ್ರಶ್ನಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಪ್ರವಾಹ ಸಂತ್ರಸ್ಥರಿಗೆ ಸಕಾಲದಲ್ಲಿ ಸ್ಪಂದಿಸಲು ರಾಜ್ಯ ಸರ್ಕಾರದಿಂದ ಸಾಧ್ಯವಾಗಲಿಲ್ಲ. ರೈತರ ಸಾಲ ಮನ್ನಾ ಮಾಡಲಾಗಿಲ್ಲ. ಪ್ರಧಾನಿ ಮೋದಿ ಬಳಿ ಹೋಗಿ ರಾಜ್ಯಕ್ಕೆ ಹೆಚ್ಚಿನ ಅನುದಾನ ತರಿಸುವುದು ರಾಜಾಹುಲಿಗೆ ಸಾಧ್ಯವಾಗಿಲ್ಲ. ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದ್ದೆ ನಿಮ್ಮ ಸಾಧನೆ,” ಎಂದು ಖಾರವಾಗಿ ಹೇಳಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿರುವ ಅವರು ಸೂತಕದ ಮನೆಯಲ್ಲಿ ಬಿಜೆಪಿ ಸಂಭ್ರಮಾಚರಣೆ ಮಾಡುತ್ತಿದೆ. ವ್ಯಯವಾದ ಕೋಟಿ ಕೋಟಿ ರೂಪಾಯಿಗಳಿಗೆ ಲೆಕ್ಕ ಕೊಡಲಾಗುತ್ತಿಲ್ಲ. ಇವನ್ನೆಲ್ಲಾ ಪ್ರಶ್ನಿಸಿದರೆ ವಿರೋಧ ಪಕ್ಷಗಳು ಸಹಕಾರ ನೀಡುತ್ತಿಲ್ಲ ಎಂದು ನಮ್ಮ ಮೇಲೆಯೇ ಗೂಬೆ ಕೂರಿಸುತ್ತಾರೆ. ಈ ಸಂದರ್ಭದಲ್ಲಿ ದುಡ್ಡು ಹೊಡೆಯಬೇಕಿತ್ತಾ? ಕೋಟಿ, ಕೋಟಿ ಎಲ್ಲಿಗೆ ಹೋಗುತ್ತಾ ಇದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.