ಸರ್ಕಾರಿ ಗೋಮಾಳದ ಜಮೀನನ್ನು ಭೂಮಾಫಿಯಾದವರೊಂದಿಗೆ ಸೇರಿ ಖಾಸಗೀಯವರ ಪಾಲಾಗಲು ಕಾರಣರಾಗಿರುವ ಬೆಂಗಳೂರು ಉತ್ತರ ಉಪವಿಭಾಗದ ಹಿಂದಿನ ಉಪವಿಭಾಗಾಧಿಕಾರಿ ಕೆ ರಂಗನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಶಿಫಾರಸ್ಸು ಮಾಡಲಾಗಿದೆ. ಸರಿಯಾದ ತನಿಖೆ ಇಲ್ಲದೇ ಮೂಲ ಮಂಜೂರಾತಿ ದಾಖಲೆಗಳ ನೈಜ್ಯತೆಯನ್ನು ಪರಿಶೀಲಿಸದೇ, ಸರ್ಕಾರಿ ಜಮೀನನ್ನು ಖಾಸಗೀಯವರಿಗೆ ಪರಭಾರೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜುಲೈ 24 ರಂದು ಕನ್ನಡದ ಖಾಸಗೀ ಸುದ್ದಿ ವಾಹಿನಿಯೊಂದರಲ್ಲಿ ಈ ಪ್ರಕರಣವನ್ನು ಬಯಲಿಗೆ ಎಳೆಯಲಾಗಿತ್ತು. ಪ್ರಕರಣದ ಸತ್ಯಸತ್ಯತೆಯನ್ನು ಅರಿಯಲು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿರುವ ಮಂಜುನಾಥ್ ಪ್ರಸಾದ್ ಅವರು ತನಿಖೆಯನ್ನು ಕೈಗೊಂಡಿದ್ದು, ಈಗ ತನಿಖೆಯ ಸಂಪೂರ್ಣ ವರದಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಂಗನಾಥ್ ಅವರು ಬೆಂಗಳೂರು ಉತ್ತರ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಒಟ್ಟು 116 ಪ್ರಕರಣಗಳಲ್ಲಿ ಆದೇಶ ಹೊರಡಿಸಿರುವುದು ತನಿಖೆಯಿಂದ ಕಂಡುಬಂದಿದೆ. ಆ ಪೈಕಿ 16 ಪ್ರಕರಣಗಳು ಸರ್ಕಾರಿ ಗೋಮಾಳ ಜಮೀನಿ ಸಂಬಂಧಿಸಿದ್ದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣಗಳ ಸರಿಯಾದ ವಿಚಾರಣೆ ನಡೆಸದೇ, ಮೂಲ ದಾಖಲೆಗಳನ್ನು ಪರಿಶೀಲಿಸದೇ ಹಾಗೂ ತಹಶೀಲ್ದಾರರಿಂದ ವರದಿಯನ್ನು ಪಡೆಯದೇ ಪ್ರಕರಣವನ್ನು ಆದೇಶಕ್ಕಾಗಿ ಕಾಯ್ದಿರಿಸಿ ಕೇವಲ ಒಂದು ಅಥವಾ ಎರಡು ದಿನಗಳಲ್ಲಿ ಆದೇಶ ಹೊರಡಿಸಿದ್ದಾರೆ.
ಈ ಆದೇಶಗಳು ಸರ್ಕಾರಿ ಜಮೀನಿನ ಮೂಲ ಮಂಜೂರಾತಿ ದಾಖಲೆಗಳ ನೈಜ್ಯತೆಯನ್ನು ಪರಿಶೀಲಿಸದೇ ಹೊರಡಿಸಿದ್ದರಿಂದ ಇವುಗಳ ವಿರುದ್ದ ಮೇಲ್ಮನವಿ ಸಲ್ಲಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ಸಂಬಂಧಪಟ್ಟ ತಾಲೂಕಿನ ತಹಶಿಲ್ದಾರರು ಜಿಲ್ಲಾಧಿಕಾರಿಯವರ ಬಳಿ ಮೇಲ್ಮನವಿ ಸಲ್ಲಿಸಲು ಸೂಚಿಸಲಾಗಿದೆ.
ಒಟ್ಟಿನಲ್ಲಿ ಸರ್ಕಾರಿ ಭೂಮಿಗೆ ಕನ್ನ ಹಾಕಿ ಭೂ ಮಾಫಿಯಾದೊಂದಿಗೆ ಕೈ ಜೋಡಿಸಿದ್ದ ಅಧಿಕಾರಿಗೆ ಈಗ ತಕ್ಕ ಶಾಸ್ತಿಯಾಗಿದೆ. ಖಾಸಗೀಯವರ ಪಾಲಾಗಿರುವ ಸರ್ಕಾರಿ ಜಮೀನನ್ನು ಶೀಘ್ರದಲ್ಲಿ ವಾಪಾಸ್ ಪಡೆಯುವ ಕೆಲಸವಾಗಬೇಕಿದೆ.
ಪ್ರಕರಣಗಳ ವಿವರ ಈ ಕೆಳಗಿನಂತಿದೆ:
ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಕನ್ನಲ್ಲಿ ಗ್ರಾಮದ ಸ.ನಂ. 93 ರಲ್ಲಿ 2-00 ಎ/ಗುಂ ಜಮೀನಿನ ಕೆ.ಎಲ್.ಆರ್ ಆಕ್ಟ್ 1964 ರ ಕಲಂ 16(2)ರಡಿ ಮೇಲ್ಮನವಿ ದಿನಾಂಕ: 07/07/2017 ರಂದು ಸಲ್ಲಿಸಿದ್ದರು. ದಿನಾಂಕ: 07/07/2017 ರಂದು ಮೇಲ್ಮನವಿ ಸ್ವೀಕರಿಸಿ, ತಹಶೀಲ್ದಾರ್ ರವರಿಗೆ ವರದಿಯ ನೀಡಲು ಸೂಚಿಸಿರುತ್ತಾರೆ. ದಿನಾಂಕ: 04/04/2018, 20/06/2018, 26/06/2018, 18/07/2018, 26/09/2018, 14/11/2018, 22/01/2019, 06/02/2019, 10/07/2019 ಹಾಗೂ ದಿನಾಂಕ 31/07/2019 ರಂದು ಪ್ರಕರಣವನ್ನು ಆದೇಶಕ್ಕೆ ಕಾಯ್ದಿರಿಸಲಾಯಿತು. ನಂತರ ದಿನಾಂಕ: 02/06/2020 ಕ್ಕೆ ಪ್ರಕರಣವನ್ನು ಮರು ವಿಚಾರಣೆಗೆ ನಿಗಧಿಪಡಿಸಿ ದಿನಾಂಕ: 03/06/2020 ರಂದು ಪ್ರಕರಣವನ್ನು ಕರೆಸಲಾಯಿತು. ಆದೇಶಕ್ಕೆ ಕಾಯ್ದಿರಿಸಿದ ನಂತರ ದಿನಾಂಕ: 23/06/2020 ರಂದು ಪ್ರಕರಣವನ್ನು ಆದೇಶಿಸಲಾಗಿರುತ್ತದೆ. ಸದರಿ ಆದೇಶದಲ್ಲಿ ಮ್ಯುಟೇಷನ್ ಮಾಡುವ ಮುಂಚೆ ನೈಜತೆ ಪರಿಶೀಲಿಸಿಕೊಂಡು ಖಾತೆ ಕ್ರಮವಹಿಸಲು ಸೂಚಿಸಲಾಗಿರುತ್ತದೆ. ತಹಶೀಲ್ದಾರ್ ರವರು ಮೂಲ ಮಂಜೂರಿ ದಾಖಲೆಗಳೊಂದಿಗೆ ಮರು ಪರಿಶೀಲಿಸಿ ಮತ್ತೊಂದು ಆದೇಶವನ್ನು ಹೊರಡಿಸಲು ಸೂಚಿಸಬಹುದಾಗಿತ್ತು. ಆದರೆ ಈ ಪ್ರಕರಣದಲ್ಲಿ ನೇರವಾಗಿ ಖಾಸಗಿಯವರ ಹಸರಿಗೆ ಖಾತೆ ಬದಲಾವಣೆ ಮಾಡಲು ಆದೇಶ ಹೊರಡಿಸಲಾಗಿದೆ.
2. ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಲಕ್ಷ್ಮೀಪುರ ಗ್ರಾಮದ ಸ.ನಂ. 11 ರಲ್ಲಿ 0-10 ಎ/ಗುಂ ಜಮೀನಿಗೆ ಸಂಬಂಧಪಟ್ಟಿದ್ದು, ಕ್ರಯಪತ್ರ ಸಂಖ್ಯೆ: 5427/1997-98, ದಿನಾಂಕ: 11/08/1997 ರ ಮೇರೆಗೆ ಖಾತೆ ಬದಲಾವಣೆ ಮಾಡಿಕೊಡುವ ಬಗ್ಗೆ ಸಲ್ಲಿಸಿರುವ ಮೇಲ್ಮನವಿಯಾಗಿರುತ್ತದೆ. ಈ ಪ್ರಕರಣವನ್ನು ಹಿಂದಿನ ಉಪವಿಭಾಗಾಧಿಕಾರಿಗಳು ದಿನಾಂಕ: 15/05/2020 ರಂದು ಮರು ವಿಚಾರಣೆಗೆ ತೆಗೆದುಕೊಂಡು ಅದೇ ದಿನ ಆದೇಶಕ್ಕೆ ಕಾಯ್ದಿರಿಸಲಾಗಿರುತ್ತದೆ. ನಂತರ ದಿನಾಂಕ 20/05/2020 ರಂದು ಆದೇಶ ಹೊರಡಿಸಲಾಗಿರುತ್ತದೆ. ಸದರಿ ಜಮೀನು ಮೂಲತಃ ಗೋಮಾಳದ ಜಮೀನಾಗಿದ್ದು, ಸದರಿ ಜಮೀನು ಮಾರಾಟಗಾರರಿಗೆ ಮಂಜೂರಾಗಿರುವ ಮೂಲ ಮಂಜೂರಿ ದಾಖಲೆಗಳ ನೈಜತೆಯನ್ನು ಪರಿಶೀಲನೆ ಮಾಡದೇ ವಾದಿಯಾದ ಸ್ಯಾಮ್ ಜಾರ್ಜ್ ರವರ ಪರವಾಗಿ ಹೊರಡಿಸಿದ ಆದೇಶವಾಗಿದ್ದು, ಸ್ಯಾಮ್ ಜಾರ್ಜ್ ಅವರಿಗೆ ಪೂರಕವಾಗಿ ಆದೇಶ ನೀಡಿದ್ದು ಮೇಲ್ನೋಟಕ್ಕೆ ಸಾಬೀತಾಗಿದೆ.

3. ಬೆಂಗಳೂರು ಉತ್ತರ ತಾಲ್ಲೂಕು, ದಾಸನಪುರ ಹೋಬಳಿ, ಗೌಡಹಳ್ಳಿ ಗ್ರಾಮದ ಸ.ನಂ. 48, ಹೊಸ ಸ.ನಂ. 8/ಪಿ1 ರಲ್ಲಿ 3-00 ಎ/ಗುಂ ಜಮೀನಿನ ಖಾತೆಗೆ ಸಂಬಂಧಿಸಿದಂತ ಎಂ.ಆರ್: ಹೆಚ್48/2018-19 ರನ್ನು ಪ್ರಶ್ನಿತ ಜಮೀನಿನ ದಾಖಲೆಗಳು ಸೃಷ್ಟಿತ ದಾಖಲೆಗಳೆಂದು ಕಂಡುಬರುತ್ತದೆ. ಸದರಿ ಎಂ.ಆರ್: ಹೆಚ್48/2018-19 ಬಗ್ಗೆ ಅರ್ಜಿದಾರರು ದಿನಾಂಕ: 18/09/2020 ರಂದು ಕೆ.ಎಲ್.ಆರ್ ಆಕ್ಟ್ 1964 ರ ಕಲಂ 16(2)ರಡಿ ಮೇಲ್ಮನವಿ ಸಲ್ಲಿದ್ದರು.. ಈ ಬಗ್ಗೆ ದಿನಾಂಕ: 23/09/2019, 09/10/2019 ರಂದು ವಿಚಾರಣೆ ನಡೆದಿದ್ದು, ಆದೇಶಕ್ಕೆ ಕಾಯ್ದಿರಿಸಲಾಗಿತ್ತು. ನಂತರ ಪ್ರಕರಣವನ್ನು Recall ಮಾಡಿ ದಿನಾಂಕ: 29/05/2020 ರಂದು ಆದೇಶಕ್ಕೆ ಕಾಯ್ದಿರಿಸಿದ್ದು, ದಿನಾಂಕ: 10/06/2020 ರಂದು ಆದೇಶ ಹೊರಡಿಸಲಾಗಿದೆ. ಸದರಿ ಪ್ರಕರಣದಲ್ಲಿ ತಹಶೀಲ್ದಾರ್ ರವರಿಂದ ಮಂಜೂರಾತಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯದೆ ಅರ್ಜಿದಾರರು ಸಲ್ಲಿಸಿರುವ ಜೆರಾಕ್ಸ್ ಪ್ರತಿಯ ಮೇಲೆ ಆದೇಶ ಹೊರಡಿಸಲಾಗಿರುವುದು ಸಂಶಯಾಸ್ಪದವಾಗಿತ್ತು.
4. ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಕೊಡಿಗೇಹಳ್ಳಿ ಗ್ರಾಮದ ಸ.ನಂ. 148 ಮತ್ತು 151 ರ ಜಮೀನಿಗೆ ಸಂಬಂಧಿಸಿದಂತೆ ದಿನಾಂಕ: 08/06/2020 ರಂದು ಪ್ರಕರಣವನ್ನು ದಾಖಲಿಸಿದ್ದು, ಮೊದಲನೇ ವಿಚಾರಣೆ ದಿನಾಂಕ: 10/06/2020 ರಂದು ಕರೆಸಿ ಆದೇಶಕ್ಕೆ ಕಾಯ್ದಿರಿಸಲಾಗಿರುತ್ತದೆ. ದಿನಾಂಕ: 18/06/2020 ರಂದು ಪ್ರಕರಣದ ಆದೇಶವನ್ನು ಹೊರಡಿಸಲಾಗಿತ್ತು. ಸದರಿ ಪ್ರಕರಣದ ಕಡತ ಪರಿಶೀಲನೆಯಂತೆ ದಿನಾಂಕ: 18/06/2020 ರ ಆದೇಶದಲ್ಲಿ ವಾದಿಯಾದ ಶ್ರೀ ಬಿ.ಎಸ್.ವೆಂಕಟೇಶ್ ರವರ ಹೆಸರಿಗೆ ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಕೊಡಿಗೇಹಳ್ಳಿ ಗ್ರಾಮದ ಸ.ನಂ. 148 ರಲ್ಲಿ 4-00 ಎ/ಗುಂ ಮತ್ತು 151 ರಲ್ಲಿ 4-00 ಎ/ಗುಂ ವಿಸ್ತೀರ್ಣದ ಜಮೀನು ಖಾತ ಮಾಡಲು ಆದೇಶಿಸಿರುತ್ತಾರೆ. ಕಡತದಲ್ಲಿ ಸದರಿ ಜಮೀನಿಗೆ ಸಂಬಂಧಿಸಿದಂತೆ ಮಂಜೂರಿಯಾಗಿರುವ ಬಗ್ಗೆ ಯಾವುದೇ ಧೃಢೀಕೃತ ದಾಖಲೆಗಳು ಇರುವುದಿಲ್ಲ. ಸಾಗುವಳಿ ಚೀಟಿ ಜೆರಾಕ್ಸ್ ಪ್ರತಿ, ಮ್ಯುಟೇಷನ್ ಮತ್ತು ಕೆಲವು ಕೈಬರಹದ ಪಹಣಿಗಳು ದೃಢೀಕರಿಸಿರುವ ಜೆರಾಕ್ಸ್ ನಕಲುಗಳು ಎಲ್ಲವು ಸೃಷ್ಠಿತ ದಾಖಲೆಗಳೆಂದು ಮಲ್ನೋಟಕ್ಕೆ ಕಂಡುಬಂದಿರುತ್ತದೆ. ಪುಸ್ತಕದ ಕೊನೆಯ ಹಾಳೆಯಲ್ಲಿ ಮ್ಯುಟೇಷನ್ ಬರೆದಿರುವುದು ಕಂಡುಬಂದಿರುತ್ತದೆ. ಉಳಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವ ದಾಖಲೆಗಳು ಹಾಜರುಪಡಿಸಿದ್ದು, ಸದರಿ ದಾಖಲೆಗಳು ಸಹ ಸೃಷ್ಟಿತ ದಾಖಲೆಗಳೆಂದು ಕಂಡು ಬಂದಿರುತ್ತದೆ. ಈ ಹಿನ್ನಲೆಯಲ್ಲಿ ಸದರಿ ಆದೇಶವು ಸೃಷ್ಠಿತ ದಾಖಲೆಗಳ ಆಧಾರದ ಮೇಲೆ ಮಾಡಿರುವ ವಿಚಾರಣೆಯು ಭೂ ಕಳ್ಳರಿಗೆ ನೆರವಾಗುವ ಮತ್ತು ಲಾಭವಾಗುವ ಉದ್ದೇಶದಿಂದ ಆದೇಶ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
5. ಬೆಂಗಳೂರು ಪೂರ್ವ ತಾಲ್ಲೂಕು, ಬಿದರಹಳ್ಳಿ ಹೋಬಳಿ, ಬಿದರಹಳ್ಳಿ ಗ್ರಾಮದ ಸ.ನಂ. 193/ಪಿ5 (237) ಕ್ಕೆ ಸಂಬಂಧಿಸದ್ದಲಾಗಿರುತ್ತದೆ. ದಿನಾಂಕ: 23/06/2020 ರಂದು ಪ್ರಕರಣವನ್ನು ಮರು ವಿಚಾರಣೆಗೆ ಕರೆದು ಆದೇ ದಿನ ಆದೇಶಕ್ಕೆ ಕಾಯ್ದಿರಿಸಲಾಗಿರುತ್ತದೆ. ದಿನಾಂಕ: 24/06/2020 ರಂದು ಸದರಿ ಪ್ರಕರಣದ ಆದೇಶ ಹೂರಡಿಸಲಾಗಿರುತ್ತದೆ. ಸದರಿ ಜಮೀನು ಮೂಲತಃ ಮಂಜೂರಿ ಜಮೀನಾಗಿದ್ದು, ಮಂಜೂರಿ ದಾಖಲೆಗಳನ್ನು ಪರಿಶೀಲಿಸದೇ ಅತೀ ಶೀಘ್ರದಲ್ಲಿ ಅಂದರೆ ಕೇವಲ ಎರಡೇ ದಿನದಲ್ಲಿ ಆದೇಶ ಹೊರಡಿಸಿರುವುದು ಸಂಶಯಾಸ್ಪದವಾಗಿರುತ್ತದೆ. ಈ ಹಿನ್ನಲೆಯಲ್ಲಿ ಸದರಿ ಆದೇಶವು ಭೂ ಕಳ್ಳರಿಗೆ ನೆರವಾಗುವ ಮತ್ತು ಲಾಭವಾಗುವ ಉದ್ದೇಶದಿಂದ ಆದೇಶ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
6. ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್.ಪುರ ಹೋಬಳಿ, ಕ್ಯಾಲಸನಹಳ್ಳಿ ಗ್ರಾಮದ ಸ.ನಂ. 11 ರ ಜಮೀನಿಗೆ ಸಂಬಂಧಿಸಿದಂತೆ ದಿನಾಂಕ: 15/05/2020 ಕ್ಕೆ ಪ್ರಕರಣವನ್ನು ಮರು ವಿಚಾರಣೆಗೆ ಕರೆಸಲಾಗಿದ್ದು, ದಿನಾಂಕ: 22/05/2020ಕ್ಕೆ ಪ್ರಕರಣವನ್ನು ಆದೇಶಕ್ಕೆ ಕಾಯ್ದಿರಿಸಲಾಗಿರುತ್ತದೆ. ದಿನಾಂಕ: 20/05/2020 ರಂದು ಆದೇಶ ಹೊರಡಿಸಲಾಗಿರುತ್ತದೆ. ಈ ಪ್ರಕರಣದ ಕಡತವನ್ನು ಪರಿಶೀಲಿಸಲಾಗಿ, ಇದು ಮಂಜೂರಿ ಜಮೀನಾಗಿದ್ದು, ಮೂಲತಃ ಸರ್ಕಾರಿ ಮುಫತ್ತು ಕಾವಲ್ ಜಮೀನಾಗಿರುತ್ತದೆ. ದಿನಾಂಕ: 19/10/2019 ರಂದು ತಹಶೀಲ್ದಾರ್, ಬೆಂಗಳೂರು ಪೂರ್ವ ತಾಲ್ಲೂಕು ರವರು ಕ್ಯಾಲಸನಹಳ್ಳಿ ಗ್ರಾಮದ ಸ.ನಂ. 11 ರಲ್ಲಿ 4-00 ಎ/ಗುಂ ವಿಸ್ತೀರ್ಣದ ಜಮೀನು ಶ್ರೀಮತಿ ಲಕ್ಷ್ಮಮ್ಮರವರಿಗೆ ಮಂಜೂರಿಯಾಗಿರುವ ಬಗ್ಗೆ ಕಚೇರಿಯಲ್ಲಿ ಮೂಲ ಮಂಜೂರಾತಿ ಕಡತ ಲಭ್ಯವಿರುವುದಿಲ್ಲ.