ಭಾರತ, ಪಾಕಿಸ್ತಾನವನ್ನು ಯುದ್ಧದಲ್ಲಿ ನಾಲ್ಕನೇ ಬಾರಿ ಮಣಿಸಿ ಇಂದಿಗೆ 21 ವರ್ಷ ಕಳೆದಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಪೂರ್ಣ ಪ್ರಮಾಣದ ನಾಲ್ಕು ಯುದ್ಧಗಳು ನಡೆದಿವೆ. 1947,1965,1971 ಹಾಗೂ 1999 ಗಳಲ್ಲಿ ಯುದ್ಧಗಳು ನಡೆದಿವೆ. ಉಭಯ ರಾಷ್ಟ್ರಗಳು ಸ್ವತಂತ್ರಗೊಂಡಂದಿನಿಂದ ಎರಡು ದೇಶಗಳ ನಡುವೆ ನಡೆದಿರುವ ಯುದ್ಧಗಳೆಲ್ಲವೂ ಭಾರತ ಜಯಿಸಿದೆ. ಆದರೂ ಪಾಕಿಸ್ತಾನ ಭಾರತವನ್ನು ಕೆಣಕುವುದನ್ನು ನಿಲ್ಲಿಸಿಲ್ಲ.
ಜುಲೈ 26, 1999 ರಂದು, ಭಾರತೀಯ ಸೇನೆಯು “ಆಪರೇಷನ್ ವಿಜಯ್”ನ ಯಶಸ್ವಿಯನ್ನು ಘೋಷಿಸಿತು, ಕಾರ್ಗಿಲ್ನ ಎತ್ತರದ ಹಿಮಾವೃತ ಪ್ರದೇಶದಲ್ಲಿ ಸುಮಾರು ಮೂರು ತಿಂಗಳ ಕಾಲ ನಡೆದ ಯುದ್ಧಗಳ ನಂತರ ವಿಜಯ ಘೋಷಿಸಿತ್ತು. ಯುದ್ಧದಲ್ಲಿ ದೇಶವು 500 ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿತ್ತು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪಾಕಿಸ್ತಾನದೊಂದಿಗೆ ಕೊನೆ ಬಾರಿ ನಡೆದ ಪೂರ್ಣಪ್ರಮಾಣದ ಯುದ್ಧಕ್ಕೆ 21 ಸಂವತ್ಸರಗಳು ಪೂರ್ತಿಗೊಂಡಿದೆ. ಯುದ್ಧದಲ್ಲಿ ವಿಜಯ ಪತಾಕೆ ಹಾರಿಸಿದ ದಿನವನ್ನು ಕಾರ್ಗಿಲ್ ವಿಜಯದಿವಸವೆಂದು ಸಂಭ್ರಮಿಸಲಾಗುತ್ತದೆ.
ಕಾರ್ಗಿಲ್ ವಿಜಯ್ ದಿವಸ್ ನ ಶುಭಾಶಯ ಕೋರಿದ ಪ್ರಧಾನಮಂತ್ರಿ ಮೋದಿ, ತಮ್ಮ ಮನ್ ಕಿ ಬಾತ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ದಿನವನ್ನು ಬಹಳ ವಿಶೇಷವೆಂದು ಕರೆದ ಮೋದಿ, “ಈ ದಿನ ನಾವು ಪಾಕಿಸ್ತಾನವನ್ನು ಸೋಲಿಸಿದ್ದೇವೆ, ಈ ದಿನವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಭಾರತವು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧವನ್ನು ಬಯಸಿದೆ, ಆದರೆ ಅದು ಸಂಭವಿಸಲಿಲ್ಲ” ಎಂದು ಅವರು ಹೇಳಿದ್ದಾರೆ.