ಇದುವರೆಗೂ ಅತಂತ್ರ ಸ್ಥಿತಿಯಲ್ಲಿದ್ದ ಎಚ್ ವಿಶ್ವನಾಥ್ ಅವರಿಗೆ ಕೊನೆಗೂ ವಿಧಾನ ಸಭಾ ಪರಿಷತ್ ಸದಸ್ಯರಾಗುವ ಭಾಗ್ಯ ದೊರೆತಿದೆ. ಬುಧವಾರದಂದು ರಾಜ್ಯದ ರಾಜ್ಯಪಾಲ ವಜುಭಾಯ್ ವಾಲ ವಿಶ್ವನಾಥ್ ಸೇರಿದಂತೆ ಒಟ್ಟು ಐವರನ್ನು ಎಮ್ಎಲ್ಸಿ ಸ್ಥಾನಕ್ಕೆ ನಾಮನಿರ್ದೇಶನಗೊಳಿಸಿದ್ದಾರೆ.
ಮಾಜಿ ಶಿಕ್ಷಣ ಸಚಿವ ಎಚ್ ವಿಶ್ವನಾಥ್, ಕಾಂಗ್ರೆಸ್ನಿಂದ ಜೆಡಿಎಸ್ಗೆ ಪಕ್ಷಾಂತರವಾಗಿದ್ದರು. ಅಲ್ಲಿ ರಾಜ್ಯಾಧ್ಯಕ್ಷ, ಶಾಸಕ ಪದವಿ ಅನುಭವಿಸಿ ಅಲ್ಲಿಂದ ಬಿಜೆಪಿ ಪಕ್ಷಕ್ಕೆ ಸೇರಿಕೊಂಡಿದ್ದರು. 2019ರಲ್ಲಿ ಹುಣಸೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದ ವಿಶ್ವನಾಥ್, ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲನ್ನಪ್ಪಿದ್ದರು. ಬಿಜೆಪಿ ಸೇರಿ ಚುನಾವಣೆಯಲ್ಲಿ ಸೋತ ಬಳಿಕ ಯಾವುದೇ ಅಧಿಕಾರ ಪದವಿ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದರು.
ಕರ್ನಾಟಕ ರಾಜ್ಯಪಾಲ ವಜುಭಾಯ್ ವಾಲ, ತನ್ನ ವಿಶೇಷ ಹಕ್ಕನ್ನು ಚಲಾಯಿಸಿ ವಿಶ್ವನಾಥ್, ಸಿ.ಪಿ ಯೋಗೇಶ್ವರ್ ಸೇರಿದಂತೆ ಇನ್ನೂ ಮೂವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆಗೊಳಿಸಿದ್ದಾರೆ. ಈ ಕುರಿತು ಗೆಝೆಟ್ ನೋಟಿಫಿಕೇಶನ್ ನೀಡಿರುವ ರಾಜ್ಯಪಾಲರು, ಸಿಪಿ ಯೋಗೀಶ್ವರ್, ಎಚ್ ವಿಶ್ವನಾಥ್, ಶ್ರೀಮತಿ ಭಾರತಿ ಶೆಟ್ಟಿ, ತಲ್ವಾರ್ ಸಾಬಣ್ಣ, ಶಾಂತರಾಮ ಬುಡ್ನ ಸಿದ್ದಿಯವರನ್ನು ಎಮ್ಎಲ್ಸಿಯನ್ನಾಗಿ ನಾಮನಿರ್ದೇಶನಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.