ಕಳೆದ ಎರಡು ವಾರಗಳಿಂದ ರಾಷ್ಟ್ರೀಯ ಮಾಧ್ಯಮಗಳ ಮುಖ್ಯ ಚರ್ಚಾವಸ್ತು ಕೇರಳದ ಚಿನ್ನ ಹಗರಣ. ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನೇತೃತ್ವದ ಸರ್ಕಾರಕ್ಕೆ ಸೋಲಾರ್ ಹಗರಣ ಮುಳುವಾದಂತೆಯೇ, ಸದ್ಯದ ಚಿನ್ನದ ಹಗರಣ ಪಿಣರಾಯಿ ವಿಜಯನ್ ಸರ್ಕಾರಕ್ಕೆ ಮುಳುವಾಗುವ ಸಾಧ್ಯತೆ ಇದೆ.
ಹಗರಣದ ಮುಖ್ಯ ಪಾತ್ರಧಾರಿ ಸ್ವಪ್ನಾ ಸುರೇಶ್ ಕೇರಳ ಮುಖ್ಯಮಂತ್ರಿ ಕಛೇರಿವರೆಗೂ ಸಂಪರ್ಕ ಹೊಂದಿದ್ದರೆಂಬ ಅಂಶ ಬೆಳಕಿಗೆ ಬರುತ್ತಿದ್ದಂತೆ, ಕೇರಳ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿದೆ. ಹಗರಣದಲ್ಲಿ ಸರ್ಕಾರ ನೇರ ಭಾಗಿಯಾಗಿದೆ ಎಂದು ವಿಪಕ್ಷಗಳು ಆರೋಪಿಸುತ್ತಿದೆ.
ಏನಿದು ಚಿನ್ನದ ಹಗರಣ?
ಜುಲೈ 5 ರಂದು, ಅಂತರಾಷ್ಟ್ರೀಯ ರಾಜತಾಂತ್ರಿಕ ಮಾರ್ಗ ಮೂಲಕ ಅಕ್ರಮವಾಗಿ ಚಿನ್ನ ಸಾಗಾಣಿಕೆ ನಡೆಯುತ್ತಿದೆ ಎಂಬ ಮಾಹಿತಿ ತಿರುವನಂತಪುರಂ ವಿಮಾನ ನಿಲ್ದಾಣ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿತ್ತು. ಅದರಂತೆ ಕೇಂದ್ರ ಸರ್ಕಾರದ ವಿಶೇಷ ಅನುಮತಿ ಪಡೆದು ಯುಎಇಯಿಂದ ರಾಜತಾಂತ್ರಿಕ ಮಾರ್ಗ ಮೂಲಕ ಬಂದಿದ್ದ ಬ್ಯಾಗೇಜನ್ನು ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳಿಗೆ ಸಿಕ್ಕ ಮಾಹಿತಿಯಂತೆ ಆ ಬ್ಯಾಗೇಜಲ್ಲಿ ಅಕ್ರಮವಾಗಿ ಸಾಗಾಣಿಕೆಯಾಗುತ್ತಿದ್ದ, ಸುಮಾರು 30 ಕೆಜಿಯಷ್ಟು ತೂಗುವ, 13.5 ಕೋಟಿ ಬೆಲೆಬಾಳುವ ಚಿನ್ನ ಪತ್ತೆಯಾಗಿತ್ತು. ಬ್ಯಾಗೇಜಿನೊಂದಿಗೆ ಕಾನ್ಸುಲೇಟ್ ಮಾಜಿ PRO ಪಿ ಎಸ್ ಸರಿತ್ ಎಂಬಾತನನ್ನು ಸ್ಥಳದಲ್ಲೇ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಬಳಿಕ ನಡೆದ ವಿಚಾರಣೆಯಲ್ಲಿ, ಚಿನ್ನ ಸಾಗಾಣಿಕೆ ನಡೆಸಿದ್ದು ಈತ ಎಂದು ಹೌದಾದರೂ, ಕಳ್ಳ ಸಾಗಾಣಿಕೆಯ ಹಿಂದೆ ಬೃಹತ್ ಜಾಲವೇ ಇರುವುದು ಪತ್ತೆಯಾಗಿತ್ತು. ಹಗರಣದ ಮುಖ್ಯ ಪಾತ್ರಧಾರಿ ಎನ್ನಲಾಗುವ ಸ್ವಪ್ನಾ ಸುರೇಶ್ ಹೆಸರು ತಳುಕು ಹಾಕಿಕೊಂಡಂತೆ ಜಾಲದ ವ್ಯಾಪ್ತಿ, ಮುಖ್ಯಮಂತ್ರಿ ಕಛೇರಿವರೆಗೂ ಹಬ್ಬಿರುವುದು ಬೆಳಕಿಗೆ ಬಂದಿದೆ. ಇದು ಪ್ರಕರಣಕ್ಕೆ ಮುಖ್ಯ ತಿರುವು ನೀಡಿದೆ.
ಯಾರು ಈ ಸ್ವಪ್ನಾ ಸುರೇಶ್? ಹಗರಣದಲ್ಲಿ ಈಕೆಯ ಪಾತ್ರವೇನು ?
ತಿರುವನಂತಪುರಂ ಮೂಲದ ಸ್ವಪ್ನಾ ಸುರೇಶ್, ಆರಂಭದಲ್ಲಿ ಅಬುಧಾಬಿಯಲ್ಲಿ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ತನ್ನ ತಂದೆಗೆ ಸಹಾಯ ಮಾಡಲು ಪ್ರಾರಂಭಿಸಿದಳು. ದುಬೈ ಮೂಲದ ಉದ್ಯಮಿಯೊಂದಿಗಿನ ವಿವಾಹಜೀವನವು ಅಲ್ಪಾವಧಿಯಲ್ಲಿ ಮುಕ್ತಾಯಗೊಂಡಿತು. ಇದು ಆಕೆಯ ವೈಯಕ್ತಿಕ ಜೀವನದಲ್ಲಿ ನಿರ್ಣಾಯಕ ತಿರುವು ಪಡೆದುಕೊಂಡಿತು.
ಬಳಿಕ ಆಕೆ ತವರು ಜಿಲ್ಲೆಗೆ ಮರಳಿ, 10 ವರ್ಷಗಳ ಕಾಲ ಹಲವು ಟ್ರಾವೆಲ್ ಏಜೆನ್ಸಿ ನಡೆಸಿದ್ದಳು. ಇದೇ ಸಂಧರ್ಭದಲ್ಲಿ ಚಿನ್ನ ಕಳ್ಳ ಸಾಗಾಣಿಕೆಗಾರರ ಸಂಪರ್ಕ ಬೆಳೆದಿರಬೇಕೆಂದು ತನಿಖಾಧಿಕಾರಿಗಳು ಅನುಮಾನಿಸಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆಕೆಯ ಶೈಕ್ಷಣಿಕ ದಾಖಲೆಯ ಮೇಲೂ ಹಲವು ಗೊಂದಲಗಳಿದ್ದು, ಆಕೆ ಏರ್ ಇಂಡಿಯಾ SATS ಅಲ್ಲೂ ಸೇವೆ ಸಲ್ಲಿಸಿದ್ದಳು. ಆಕೆ 2013 ರಲ್ಲಿ ಏರ್ ಇಂಡಿಯಾ SATS (Air India SATS) HR ವಿಭಾಗದ ಕಾರ್ಯನಿರ್ವಾಹಕಾಧಿಕಾರಿಯಾಗಿ ಸೇರ್ಪಡೆಗೊಳ್ಳುವಾಗ ನೀಡಿರುವ ಪ್ರಮಾಣ ಪತ್ರ ನಕಲಿಯೆಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬಳಿಕ 2016 ರಲ್ಲಿ UAE ಕಾನ್ಸುಲೇಟ್ (UAE Consulate) ನಲ್ಲಿ ಕರ್ತವ್ಯಕ್ಕೆ ಸೇರಿಕೊಂಡಿದ್ದಳು. ಅಲ್ಲಿ ನೀಡಿರುವ ಪ್ರಮಾಣಪತ್ರಗಳು ನಕಲಿಯೇ ಅಸಲಿಯೇ ಎಂದು ಬಹಿರಂಗಗೊಂಡಿಲ್ಲ.
ತನಿಖೆಯ ವೇಳೆ, ಆಕೆಗೆ ಮುಖ್ಯಮಂತ್ರಿಗಳ ಕಛೇರಿವರೆಗೂ ಸಂಪರ್ಕ ಇರುವುದು ಬೆಳಕಿಗೆ ಬಂದಿದೆ. ಮುಖ್ಯಮಂತ್ರಿಗಳ ಕಚೇರಿಯ ಪ್ರಧಾನ ಕಾರ್ಯದರ್ಶಿ ಮತ್ತು ಐಟಿ ಕಾರ್ಯದರ್ಶಿ ಆಗಿರುವ ಎಂ.ಶಿವಶಂಕರ್ ಶಿಫಾರಸ್ಸಿನ ಮೇರೆಗೆ ಆಕೆಯನ್ನು ಕಾನ್ಸುಲೇಟ್ ಕಾರ್ಯಾಚರಣಾ ವ್ಯವಸ್ಥಾಪಕಳನ್ನಾಗಿ ನೇಮಕಗೊಳಿಸಲಾಗಿತ್ತು ಎಂಬ ಅಂಶ ಜಾಹೀರಾಗಿದೆ. ಈ ಆರೋಪದ ಬೆನ್ನಿಗೆ ಶಿವಶಂಕರನ್ನು ಎರಡೂ ಹುದ್ದೆಗಳಿಂದ ತೆಗೆದುಹಾಕಲಾಗಿದೆ.
ರಾಜತಾಂತ್ರಿಕ ಮಾರ್ಗ ಮೂಲಕ ಕಾನ್ಸುಲೇಟ್ಗಾಗಿ ತಲುಪಿದ ಬ್ಯಾಗೇಜಿನಲ್ಲಿ ಇದ್ದ ಅಕ್ರಮ ಚಿನ್ನವನ್ನು ಕಾನ್ಸುಲೇಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ವಪ್ನಾ ಸುರೇಶ್ ಚಿನ್ನ ಸಾಗಾಣಿಕೆದಾರರಿಗೆ ತಲುಪಿಸುತ್ತಿದ್ದಳು.
ಇದುವರೆಗೂ ಸರಿತ್ ಹಾಗೂ ಸ್ವಪ್ನಾ ಸುರೇಶ್ ಸೇರಿ ನಡೆಸಿರುವ 10 ವ್ಯವಹಾರಗಳ ವಿವರಗಳು ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಅದರಲ್ಲಿ 3 ಅಕ್ರಮ ವ್ಯವಹಾರಗಳು ಲಾಕ್ಡೌನ್ ಸಂಧರ್ಭದಲ್ಲಿ ನಡೆದಿದೆ ಎಂದು ಮಳೆಯಾಲಂ ಸುದ್ದಿ ಚಾನೆಲ್, ಮಯ಼ವಿಲ್ ಮನೋರಮಾ ವರದಿ ಮಾಡಿದೆ.
ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ಚಿನ್ನ ವಶಪಡಿಸಿಕೊಳ್ಳುತ್ತಿದ್ದಂತೆಯೇ ನಾಪತ್ತೆಯಾಗಿದ್ದ ಸ್ವಪ್ನಳನ್ನು ಜುಲೈ 11 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ಪಡೆದುಕೊಂಡಿದೆ. ಪ್ರಕರಣದ ಇನ್ನೋರ್ವ ಆರೋಪಿ, ಹವಾಲಾ ಮೂಲಕ ಹಣ ರವಾನೆ ಮಾಡುತ್ತಿರುವುದಾಗಿ ಆರೋಪವಿರುವ ಸಂದೀಪ್ ನಾಯರ್ನ್ನು ಕೂಡಾ ವಶಕ್ಕೆ ಪಡೆದುಕೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿ ಸಂಸ್ಥೆ NDTV ವರದಿ ಪ್ರಕಾರ ಈ ಜಾಲ, ಇದುವರೆಗೂ 180 ಕಿಲೊಗ್ರಾಮ್ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ತಂದಿದೆ. ಈ ಕುರಿತು ತನಿಖಾಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ತನಿಖೆಗಿಳಿದ NIA; ಜಾಲದ ಮುಖ್ಯ ರುವಾರಿಯ ಬಂಧನ
ಹಗರಣದಲ್ಲಿ ಸ್ವಪ್ನಾ ಸುರೇಶ್ ಪಾತ್ರ ಬೆಳಕಿಗೆ ಬಂದ ಬೆನ್ನಿಗೆ ಮುಖ್ಯಮಂತ್ರಿಗಯೊಂದಿಗೆ ಸ್ವಪ್ನಾ ಸುರೇಶ್ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಯತೊಡಗಿದ್ದವು. ವಿಪಕ್ಷಗಳು ಇದನ್ನು ಮುಂದಿಟ್ಟು ಪಿಣರಾಯಿ ಸರ್ಕಾರವನ್ನು ಟೀಕಿಸಲು ಶುರು ಮಾಡಿಕೊಂಡವು. ಕೇರಳ ವಿಪಕ್ಷ ನಾಯಕ ಈ ಕುರಿತು ಕೇಂದ್ರೀಯ ತನಿಖಾ ಸಂಸ್ಥೆಯಿಂದ ತನಿಖೆಯಾಗಬೇಕೆಂದು ಕೋರಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾಗಿ ಹೇಳಿದ್ದರು. ಅಂತರಾಷ್ಟ್ರೀಯ ರಾಜತಾಂತ್ರಿಕ ಮಾರ್ಗದ ಮೂಲಕ ನಡೆದಿರುವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ NIA ಯನ್ನು ತನಿಖೆಗೆ ನಿಯೋಜಿಸಲಾಗಿತ್ತು.
ಕೊಚ್ಚಿ ನಿವಾಸಿಯಾಗಿರುವ ಫೈಸಲ್ ಫರೀದ್ಗೆ ರಾಜತಾಂತ್ರಿಕ ಮಾರ್ಗ ಮೂಲಕ ಚಿನ್ನವನ್ನು ಕಳುಹಿಸಿರುವುದು ಗಲ್ಫ್ ರಾಜ್ಯಗಳಲ್ಲಿ ಉದ್ಯಮ ನಡೆಸುತ್ತಿರುವ ಫಾಸಿಲ್ ಎಂಬ ಅಂಶ ಪ್ರಾಥಮಿಕ ತನಿಖೆಯ ವೇಳೆ ಬಹಿರಂಗಗೊಂಡಿತ್ತು.
ಕಳ್ಳ ಸಾಗಾಣಿಕೆ ಮುಖ್ಯ ರುವಾರಿಯಾಗಿರುವ ಫೈಸಲ್ ಫರೀದ್ರನ್ನು ಕಳೆದ ದುಬೈ ಪೋಲಿಸರು ಬಂಧಿಸಿದ್ದರು. ಇದುವರೆಗೂ ಫೈಸಲ್ 230 ಕೆಜಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡಿರುವುದಾಗಿ NIA ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಚಿನ್ನದ ಕಳ್ಳಸಾಗಣೆ ಪ್ರಕರಣದ ಮೂರನೇ ಆರೋಪಿ ಫೈಜಲ್ ಫರೀದ್ ಅವರನ್ನು ದುಬೈನಲ್ಲಿ ಭಾನುವಾರ ಬಂಧಿಸಲಾಗಿದೆ ಎಂದು ಮನೋರಮಾ ಆನ್ಲೈನ್ ವರದಿ ಮಾಡಿದೆ. ದುಬೈ ಪೊಲೀಸರು ಗುರುವಾರ ಫರೀದ್ನನ್ನು ವಶಕ್ಕೆ ತೆಗೆದುಕೊಂಡಿದ್ದು ದುಬೈನ ಅಲ್ ರಶೀದಿಯಾ ಪೊಲೀಸ್ ಠಾಣೆಯಲ್ಲಿ ಆತನನ್ನು ವಿಚಾರಣೆ ನಡೆಸಲಾಗಿತ್ತು. .
ತ್ರಿಶೂರ್ ಕೊಡುಂಗಲ್ಲೂರು ಮೂಲದ ಫೈಜಲ್ ಫರೀದ್ ನನ್ನು ಶೀಘ್ರದಲ್ಲಿಯೇ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ. ಎನ್ಐಎ ಫರೀದ್ ಮೇಲೆ ದಾಖಲೆಗಳ ಖೋಟಾ, ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ಮತ್ತು ಕಳ್ಳಸಾಗಣೆ ಆರೋಪಿಸಿದೆ. ಫೈಸಲ್ ಫರೀದ್ ನ ಪಾಸ್ಪೋರ್ಟ್ ನಿರ್ಬಂಧಿಸುವ ಬಗ್ಗೆ ಭಾರತೀಯ ರಾಯಭಾರ ಕಚೇರಿ ಯುಎಇ ಸರ್ಕಾರಕ್ಕೆ ಮಾಹಿತಿ ನೀಡಿದೆ.
ಫರೀದ್ ತನ್ನ ವಿರುದ್ಧದ ಆರೋಪಗಳಿಗೆ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು, ತಾನು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಹೆಚ್ಚಿನ ಪುರಾವೆಗಳು ಹೊರಬರುತ್ತಿದ್ದಂತೆ ಆತ ಅಜ್ಞಾತವಾಗಿದ್ದನು.
ಫೈಜಲ್ ಫರೀದ್ ವಿರುದ್ಧ ಇಂಟರ್ಪೋಲ್ ಬ್ಲೂ ಕಾರ್ನರ್ ನೋಟಿಸ್ ನೀಡುವ ಪ್ರಕ್ರಿಯೆಯನ್ನು ಭಾರತ ಸರ್ಕಾರ ಪ್ರಾರಂಭಿಸಿತ್ತು. ಪ್ರಕರಣದ ಇನ್ನೋರ್ವ ಆರೋಪಿ ಸಂದೀಪ್ ನಾಯರ್, ಹವಾಲಾದ ಮೂಲಕ ಕಳುಹಿಸಿದ ಹಣದಲ್ಲಿ, ಫರೀದ್ ಯುಎಇಯಲ್ಲಿ ಚಿನ್ನ ಖರೀದಿಸಿ ಭಾರತಕ್ಕೆ ಕಳುಹಿಸುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.






