ಕರೋನಾ ಸೋಂಕು ವಿಶ್ವದಾದ್ಯಂತ ಹೆಚ್ಚುತ್ತಲೇ ಸಾಗಿದೆ. ಕರೋನಾ ಸಾಂಕ್ರಾಮಿಕ ರೋಗವೆಂದು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ. ಯಾವುದೇ ಸೋಂಕಿತ ಕೆಮ್ಮದಾಗ, ಸೀನಿದಾಗ ಆತನ ಎಂಜಲು ಮತ್ತೊಬ್ಬನನ್ನು ಸೋಂಕಿದಾಗ ಕರೋನಾ ವೈರಸ್ ಹರಡುತ್ತದೆ. ಅಥವಾ ಸೋಂಕಿತನ ಕೈ ಕುಲುಕಿದಾಗ, ಆತನನ್ನು ಆಲಂಗಿಸಿದಾಗ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಆದರೆ ಇದೀಗ ಹೊಸ ಸಂಕಷ್ಟವೊಂದು ಎದುರಾಗಿದೆ. ಅದೇನೆಂದರೆ ಗಾಳಿಯಲ್ಲೂ ಕರೋನಾ ವೈರಾಣು ಸಂಚಾರ ಮಾಡುತ್ತ ಹರಡುತ್ತದೆ ಎನ್ನಲಾಗುತ್ತಿದೆ.
32 ದೇಶಗಳ 239 ವಿಜ್ಞಾನಿಗಳು ಗಾಳಿಯಲ್ಲಿ ಸೋಂಕು ಹರಡುತ್ತದೆ ಎನ್ನುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಗೆ ಪತ್ರ ಬರೆದಿದ್ದರು. ಕರೋನಾ ವೈರಾಣು ಗಾಳಿಯಿಂದ ಹರಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಕರೋನಾ ವೈರಾಣು ಗಾಳಿಯಲ್ಲಿ ಹರಡುವ ಬಗ್ಗೆ ಸಾಕ್ಷ್ಯವನ್ನೂ ಕಲೆ ಹಾಕಿ ಕಳುಹಿಸಲಾಗಿತ್ತು. ಇದೀಗ ವಿಜ್ಞಾನಿಗಳ ವಾದವನ್ನು ವಿಶ್ವ ಆರೋಗ್ಯ ಸಂಸ್ಥೆ ಭಾಗಶಃ ಒಪ್ಪಿಕೊಂಡಿದೆ. ಜನಸಂದಣಿ ಪ್ರದೇಶದಲ್ಲಿ ಗಾಳಿಯಲ್ಲಿ ಸೋಂಕು ಹರಡುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದಿದೆ.
ಪ್ರೊ. ಬೆನೆಡೆಟ್ಟಾ ಅಲೆಗ್ರಾಂಝಿ ವಿಜ್ಞಾನಿಗಳ ಪತ್ರದ ಕುರಿತು ಪ್ರತಿಕ್ರಿಯೆ ಕೊಟ್ಟಿದ್ದು, ಜನಸಂದಣಿ ಪ್ರದೇಶದಲ್ಲಿ ಕರೋನಾ ಸೋಂಕು ಹರಡಬಹುದು. ಗಾಳಿಯಾಡಲು ಜಾಗವಿಲ್ಲದ ಕಡೆಯಲ್ಲೂ ವೈರಾಣು ಹರಡಬಹುದು. ಗಾಳಿಯಲ್ಲೂ ಕರೋನಾ ಹರಡುತ್ತದೆ ಎಂದು ವಿಜ್ಞಾನಿಗಳು ಕೆಲವೊಂದು ಸಾಕ್ಷ್ಯವನ್ನು ಕೊಟ್ಟಿದ್ದಾರೆ. ಈ ಬಗ್ಗೆ ಕಳೆದ ಕೆಲ ತಿಂಗಳಿನಿಂದ ಚರ್ಚೆ ನಡೆಯುತ್ತಿತ್ತು. ಲಭ್ಯ ಸಾಕ್ಷ್ಯಗಳ ಕುರಿತೂ ಚರ್ಚೆ ನಡೆಯುತ್ತಿತ್ತು. ಇದೀಗ ಜಗತ್ತಿನ ಹಲವೆಡೆಯಿಂದ ಸಾಕ್ಷ್ಯ ಸಂಗ್ರಹ ಮಾಡಲಾಗಿದೆ. ಗಾಳಿಯಲ್ಲಿ ಕರೋನಾ ಸೋಂಕು ಹರಡುತ್ತಿದೆ. ಈ ವಿಚಾರವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದಿದ್ದಾರೆ.
ಗಾಳಿಯಲ್ಲಿ ಕರೋನಾ ಹರಡುವ ಬಗ್ಗೆ ಸಾಕ್ಷ್ಯವಿದೆ. ಈ ಬಗ್ಗೆ ನಾವು ಇನ್ನಷ್ಟು ಸಾಕ್ಷ್ಯ ಸಂಗ್ರಹಿಸಬೇಕಿದೆ. ಮತ್ತೆ ಹೇಗೆಲ್ಲಾ ಸೋಂಕು ಹರಡುತ್ತೆ ಅಂತ ಅರ್ಥೈಸಿಕೊಳ್ಳಬೇಕಿದೆ. ಅದಕ್ಕೆ ತಕ್ಕಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡಾ. ಮಾರಿಯಾ ಪ್ರತಿಕ್ರಿಯೆ ನೀಡಿದ್ದು. ಗಾಳಿ ಮೂಲಕ ಕರೋನಾ ಹರಡುವುದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಹಲವು ವಾರಗಳಿಂದ ಸಂಶೋಧನೆಯೂ ಆಗುತ್ತಿತ್ತು. ಹಲವು ಸಂಶೋಧಕರೊಂದಿಗೆ ಚರ್ಚೆ ನಡೆದಿದೆ. ಹಲವು ಸಂಘಟನೆಗಳು, ತಜ್ಞರ ಜೊತೆ ಚರ್ಚೆಯೂ ಆಗಿದೆ ಗಾಳಿಯಲ್ಲಿ ಕರೋನಾ ಹರಡೋ ಬಗ್ಗೆ ಸಮಾಲೋಚನೆ ಮಾಡುತ್ತಿದ್ದೇವೆ. ಕರೋನಾ ಹೇಗೆಲ್ಲಾ ಹರಡುತ್ತೆ, ಅದರ ಹರಡುವಿಕೆ ತಡೆಯಲು ಸೂಕ್ತ ಕ್ರಮಗಳು ಏನೇನು ಅಗತ್ಯವೆಂದು. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಹೆಚ್ಚಬೇಕು. ಸಾಮಾಜಿಕ ಅಂತರ ಸಾಧ್ಯವಾಗದ ಸ್ಥಳದಲ್ಲಿ ಹೆಚ್ಚು ಮುಂಜಾಗ್ರತೆ ವಹಿಸಬೇಕು ಎಂದಿದ್ದಾರೆ.
ಕರೋನಾ ನಿಯಂತ್ರಣ ಮಾಡಲು ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರಿಗೆ ಹೆಚ್ಚು ಮುಂಜಾಗ್ರತೆ ಅಗತ್ಯ. ಗಾಳಿ ಮೂಲಕ ಕರೋನಾ ಹರಡುವಿಕೆ ಬಗ್ಗೆ ಸಂಶೋಧನೆ ಆಗಬೇಕಿದೆ. ಯಾವ ಯಾವ ಪರಿಸ್ಥಿತಿಯಲ್ಲಿ ಕರೋನಾ ಹರಡುತ್ತೆ ಎನ್ನುವ ಬಗ್ಗೆ ಮತ್ತಷ್ಟು ಸಂಶೋಧನೆ ಅಗತ್ಯವಿದೆ. ಗಾಳಿಯಾಡಲು ಅವಕಾಶವೇ ಇಲ್ಲದ ಜಾಗದಲ್ಲೂ ಹೆಚ್ಚು ಆತಂಕ ಉಂಟು ಮಾಡಲಿದ್ದು, ಮುಂದಿನ ದಿನಗಳಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಗಾಳಿಯಲ್ಲಿ ಹರಡಿದರೆ ತಡೆಯುವುದು ಹೇಗೆ..?
ಒಂದೊಮ್ಮೆ ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಕೆಯಾಗಿರುವ ಮಾಹಿತಿ ಇನ್ನೂ ಪರಿಪಕ್ಷವಾಗಿ ಒಪ್ಪಿಗೆಯಾಗಿಲ್ಲ. ವಿಜ್ಞಾನಿಗಳು ನೀಡಿರುವ ಸಾಕ್ಷಿಗಳನ್ನು ಅಲ್ಲಗಳೆಯುವುದಕ್ಕೆ ಸಾಧ್ಯವಿಲ್ಲ ಎಂದಷ್ಟೇ ಅಭಿಪ್ರಾಯಪಟ್ಟಿದೆ. ಗಾಳಿಯಲ್ಲಿ ಹೇಗೆಲ್ಲಾ ಹರಡುತ್ತದೆ..? ಯಾವ ಪರಿಸ್ಥಿತಿಯಲ್ಲಿದ್ದಾಗ ಗಾಳಿಯಲ್ಲಿ ಕರೋನಾ ವೈರಾಣು ಒಬ್ಬ ಮನುಷ್ಯನಿಂದ ಮತ್ತೊಬ್ಬನ ದೇಹವನ್ನು ಪ್ರವೇಶ ಮಾಡುತ್ತದೆ ಎನ್ನುವ ಅಧ್ಯಯನಗಳ ಅಗತ್ಯವಿದೆ. ಮತ್ತಷ್ಟು ಸಂಶೋಧನೆ ಮಾಡಬೇಕಿದೆ ಎಂದಿದೆ.
ಒಂದು ವೇಳೆ ಸಾಮಾನ್ಯವಾಗಿ ಗಾಳಿ ಮೂಲಕ ಹರುತ್ತದೆ ಎನ್ನುವುದಾದರೆ ಇದೀಗ ಸರ್ಕಾರಗಳು ಮಾಡುತ್ತಿರುವ ಕ್ವಾರಂಟೈನ್ ಸೇರಿದಂತೆ ಯಾವುದೇ ಮುಂಜಾಗ್ರತೆ ಕ್ರಮವೂ ಕೆಲಸಕ್ಕೆ ಬಾರದಂತಾಗುತ್ತದೆ. ಆದರೆ ಗಾಳಿಯಲ್ಲಿ ಎಷ್ಟು ಹೊತ್ತು ಜೀವಿಸಬಲ್ಲದು..? ಎಷ್ಟು ದೂರ ಸಾಗಬಲ್ಲದು..? ಗಾಳಿಯಲ್ಲೂ ವೈರಾಣುಗಳು ಹೆಚ್ಚಾಗುತ್ತವೆಯೇ..? ಎನ್ನುವ ಬಗ್ಗೆ ಅಧ್ಯಯನಗಳು ನಡೆದ ಬಳಿಕ ಅಂತಿಮಗೊಳ್ಳಬೇಕಿದೆ. ವಿಜ್ಞಾನಿಗಳು ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಸಿಗಬೇಕಿದೆ.
ಮೂಲದ ತನಿಖೆಗಾಗಿ ಬರುವಂತೆ ಚೀನಾ ಆಹ್ವಾನ..!
ಚೀನಾದಿಂದಲೇ ಕರೋನಾ ಸೋಂಕು ಹರಡಿದೆ. ಆದರೆ ಚೀನಾ ದೇಶವೇ ಬೇಕೆಂದು ಕರೋನಾ ವೈರಾಣುವನ್ನು ವೈರಾಣು ಸಂಶೋಧನಾ ಕೇಂದ್ರದಿಂದ ಹೊರಕ್ಕೆ ಬಿಟ್ಟು ವಿಶ್ವವನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ ಎನ್ನುವ ಆರೋಪ ಕೇಳಿಬರುತ್ತಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇದೇ ವಿಚಾರವಾಗಿ ವಿಶ್ವ ಆರೋಗ್ಯ ಸಂಸ್ಥೆ ಮೇಲೆ ಕೆಂಗಣ್ಣು ಬೀರಿದ್ದರು. ಚೀನಾ ದೇಶವನ್ನು ಒಮ್ಮೆಯೂ ವಿಶ್ವ ಆರೋಗ್ಯ ಸಂಸ್ಥೆ ಪ್ರಶ್ನೆ ಮಾಡಿಲ್ಲ ಎಂದು ದೂರಿದ್ದರು. ಇದೀಗ ವಿಶ್ವಸಂಸ್ಥೆಯ ತಂಡ ಚೀನಾಗೆ ತೆರಳಲು ಮುಂದಾಗಿತ್ತು. ಚೀನಾ ಕೂಡ ಈ ಬಗ್ಗೆ ಅನುಮತಿ ನೀಡಿದ್ದು ಸೋಂಕಿನ ಮೂಲ ಪತ್ತೆಗೆ ಬೀಜಿಂಗ್ಗೆ ಬರಬಹುದು ಎಂದು ಚೀನಾ ವಿದೇಶಾಂಗ ವಕ್ತಾರರು ತಿಳಿಸಿದ್ದಾರೆ.
After consultation, the Chinese government has agreed that WHO will send a team of experts to Beijing to trace the origin of #COVID19. pic.twitter.com/mQII3zgbIT
— Spokesperson发言人办公室 (@MFA_China) July 8, 2020