ಕರೋನಾ ಸೋಂಕು ಕರ್ನಾಟಕದಲ್ಲಿ ಹರಡುವಿಕೆಯ ವೇಗ ತೀವ್ರವಾಗಿ ಹೆಚ್ಚಳವಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕಳೆದ ಒಂದು ವಾರದಿಂದ ದಿನಕ್ಕೆ ಸಾವಿರದಂತೆ ಕರೋನಾ ಸೋಂಕುಗಳು ಪತ್ತೆಯಾಗುತ್ತಿದೆ. ಅಧಿಕೃತವಾಗಿ ಸಮುದಾಯ ಪ್ರಸರಣ ಆರಂಭವಾಗಿದೆಯೆಂದು ಸರ್ಕಾರಗಳು ಒಪ್ಪಿಕೊಳ್ಳದಿದ್ದರೂ, ಸಮುದಾಯ ಪ್ರಸರಣ ಆರಂಭಗೊಂಡಿರುವ ಸೂಚನೆಯನ್ನು ದಿನನಿತ್ಯ ಪತ್ತೆಯಾಗುತ್ತಿರುವ ಅಂಕಿಅಂಶವೇ ಹೇಳುತ್ತಿದೆ.
ಗರ್ಭಿಣಿಯರಲ್ಲೂ ಕರೋನಾ ಸೋಂಕು ಪತ್ತೆಯಾಗುತ್ತಿರುವುದು ವೈದ್ಯಕೀಯ ವಲಯಕ್ಕೆ ಸವಾಲಾಗುತ್ತಿದೆ. ಕರೋನಾ ಪಾಸಿಟಿವ್ ಇರುವ ಗರ್ಭಿಣಿಯರಿಗೆ ವಿಶೇಷ ವ್ಯವಸ್ಥೆ ಬೇಕಾಗಿರುವುದರಿಂದ ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದವರಲ್ಲಿ ಕೋವಿಡ್ ಪಾಸಿಟಿವ್ ಇದ್ದ 60 ಗರ್ಭಿಣಿಯರನ್ನು ವಿಕ್ಟೋರಿಯಾ ಹಾಗೂ ವಾಣಿವಿಲಾಸ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.
ಕರೋನಾ ಪಾಸಿಟಿವ್ ಪ್ರಕರಣಗಳಲ್ಲಿ ಹೆರಿಗೆ ನಡೆಸಲು ತುಂಬಾ ತೊಂದರೆ ಇದೆ. ಹಾಗಾಗಿ ಅವರಿಗೆ ವಿಶೇಷ ಹೆರಿಗೆ ಆಸ್ಪತ್ರೆಗಳನ್ನು ಸರ್ಕಾರ ಮೀಸಲಿರಿಸಿದೆ, ಇದಕ್ಕಾಗಿ ಇನ್ನೂ ಮೂರು ಆಸ್ಪತ್ರೆಗಳನ್ನು ಸರ್ಕಾರದ ವತಿಯಿಂದ ಮೀಸಲು ಮಾಡುತ್ತಿದ್ದೇವೆ. ಇದಕ್ಕಾಗಿ ಬುಧವಾರ ಸಂಜೆ ಬೆಂಗಳೂರಿನ ಎಲ್ಲಾ ಖಾಸಗಿ ಆಸ್ಪತ್ರೆಗಳ ಮಾಲೀಕರ ಜೊತೆಗೆ ಚರ್ಚೆ ನಡೆಸಲಿದ್ದೇವೆ ಎಂದು ಬೆಂಗಳೂರು ಕೋವಿಡ್ ಉಸ್ತುವಾರಿಯೂ ಆಗಿರುವ ಡಾ. ಕೆ ಸುಧಾಕರ್ ಹೇಳಿದ್ದಾರೆ.
