ಭಾರತ ಮತ್ತು ನೆರೆಯ ಚೀನಾ ಒಟ್ಟು 3500 ಕಿಲೋಮೀಟರ್ ಗಳಷ್ಟು ಉದ್ದದ ಗಡಿಯನ್ನು ಹಂಚಿಕೊಂಡಿವೆ. ಎರಡೂ ದೇಶಗಳ ನಡುವೆ ಗಡಿ ಬಿಕ್ಕಟ್ಟು ಕೆಲವೊಮ್ಮೆ ಉದ್ವಿಗ್ನಗೊಂಡಿದೆ, ನಂತರ ಶಮನಗೊಂಡಿದೆ. ಈ ಹಿಂದೆಯೂ ಇದು ಅನೇಕ ಬಾರಿ ನಡೆದಿದೆ. ಆದರೆ ಈ ಬಾರಿ ಚೀನಾವು ಗಾಲ್ವಾನ್ ನದಿ ಕಣಿವೆಯಲ್ಲಿ ಕ್ಯಾತೆ ತೆಗೆದಿರುವುದು ಅತ್ಯಂತ ಸ್ಪಷ್ಟವಾಗಿಯೇ ಗೋಚರವಾಗುತ್ತಿದೆ ಅಷ್ಟೇ ಅಲ್ಲ ತಾನು ಹೊಸದಾಗಿ ನಿರ್ಮಿಸಿರುವ ಸೈನಿಕ ಕಾವಲು ಪೋಸ್ಟ್ ಗಳ ಪ್ರದೇಶವನ್ನು ತನಗೆ ಸೇರಿದ್ದು ಎಂದೇ ಚೀನಾ ಪ್ರತಿಪಾದಿಸಿಕೊಂಡು ಬರುತ್ತಿದೆ. ಇದರಿಂದ ಎರಡೂ ದೇಶಗಳ ನಡುವಿನ ಸೌಹಾರ್ದ ಸಂಭಂಧಕ್ಕೆ ಧಕ್ಕೆ ಆಗಿರುವುದಷ್ಟೇ ಅಲ್ಲ 20 ಭಾರತೀಯ ಸೈನಿಕರ ಜೀವಹಾನಿಯೂ ಅಗಿದೆ. ಚೀನಾ ಸೇನೆಗೂ ಸಾಕಷ್ಟು ಜೀವ ಹಾನಿ ಸಂಭವಿಸಿದೆ. ಇದನ್ನು ಸ್ವತಃ ಚೀನಾ ಒಪ್ಪಿಕೊಂಡಿದೆ.
ಮೊದಲಿನಿಂದಲೂ ಚೀನಾದೊಂದಿಗೆ ಉತ್ತಮ ಬಾಂಧವ್ಯವನ್ನೇ ಹೊಂದಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗಡಿ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಿದ ಕೂಡಲೇ ಚೀನಾ ತನ್ನ ನರಿ ಬುದ್ದಿ ಪ್ರದರ್ಶಿಸಿದೆ. ತಾನು 1962 ರ ಯುದ್ದದಲ್ಲಿ ಕಬಳಿಸಿದ 624 ಚದರ ಕಿಲೋಮೀಟರ್ ವಿಸ್ತೀರ್ಣದ ಆಕ್ಸಾಯಿ ಚಿನ್ ಪ್ರದೇಶ ವನ್ನು ಪುನಃ ಕಳೆದುಕೊಳ್ಳಬೇಕಾಗುತ್ತದೋ ಎಂಬ ಆತಂಕ ಚೀನಾದ್ದು .
ಏಕೆಂದರೆ ಭಾರತ ನಿರ್ಮಿಸುತ್ತಿರುವ ರಸ್ತೆಯು ಆಕ್ಸಯಿ ಚಿನ್ ಪ್ರದೇಶದ ಸಮೀಪಕ್ಕೆ ಸಂಪರ್ಕ ಕಲ್ಪಿಸುತ್ತಿದೆ. ಇದು ಚೀನಾದ ಕಣ್ಣು ಕೆಂಪಗಾಗಿಸಿದ್ದು ವಾಸ್ತವ ಗಡಿ ನಿಯಂತ್ರಣ ರೇಖೆ ದಾಟಿ ಚೀನಾದ ಸೈನಿಕರು ಗಾಲ್ವನ್ ಕಣಿವೆ ಪ್ರದೇಶದಲ್ಲಿ ನೂತನ ಕಾವಲು ಗೋಪುರ ನಿರ್ಮಿಸಿಕೊಂಡಿದ್ದಾರೆ. ಈಗಾಗಲೇ ಅನೇಕ ಬಾರಿ ಎರಡೂ ದೇಶಗಳ ನಡುವೆ ಸೇನಾಧಿಕಾರಿಗಳ, ಲೆಫ್ಟಿನೆಂಟ್ ಜನರಲ್ ಮಟ್ಟದ ಅಧಿಕಾರಿಗಳ ಸಭೆಯೂ ನಡೆದಿದೆ. ಅದರೆ ಉದ್ವಿಗ್ಣತೆ ಮಾತ್ರ ಶಮನಗೊಂಡಿಲ್ಲ. ಇದು ಮುಂದುವರಿದಿರುವಂತೆಯೇ ನರೇಂದ್ರ ಮೋದಿ ಸರ್ಕಾರ ಚೀನಾದೊಂದಿಗೆ ಹೊಂದಿದ್ದ ಅನೇಕ ವ್ಯಾಪಾರಿ ಒಪ್ಪಂದಗಳನ್ನು ಮುರಿದುಕೊಳ್ಳಲು ಪ್ರಾರಂಭಿಸಿದೆ. ಈಗಾಗಲೇ ಚೀನಾ ಕಂಪೆನಿಗಳಿಗೆ ನೀಡಿದ್ದ ರೈಲ್ವೇ ಯೋಜನೆಯನ್ನು ಹಿಂಪಡೆಯಲಾಗಿದೆ. ಇಡೀ ದೇಶಾದ್ಯಂತ ಜನರು ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡುತಿದ್ದಾರೆ. ಈ ನಡುವೆ ಸರ್ಕಾರ ದೇಶದ ಭದ್ರತೆಗೆ ಅಪಾಯ ಒಡ್ಡುವ ಸಂಭಾವ್ಯತೆಯ ಮೇರೆಗೆ ಒಟ್ಟು 59 ಚೀನಾ ದೇಶದ ಆಪ್ ಗಳನ್ನು ನಿಷೇಧಿಸಿದೆ. ಅದರಲ್ಲಿ ಬಹು ಜನಪ್ರಿಯ ಟಿಕ್ ಟಾಕ್ ಕೂಡ ಸೇರಿದೆ.
ಅದರೆ ಇದಿಷ್ಟರಿಂದಲೇ ಚೀನಾ ನಿರ್ಮಿತ ಎಲ್ಲ ಅಪ್ ಗಳೂ ದೇಶದಿಂದ ಹೋದಂತಾಗಿಲ್ಲ , ನಮ್ಮ ದೇಶದಲ್ಲಿ ಈಗ ಅತ್ಯಂತ ಹೆಚ್ಚು ಅಭಿವೃದ್ದಿ ಹೊಂದುತ್ತಿರುವ ಕಣ್ಗಾವಲು ಉಪಕರಣಗಳ ಮಾರುಕಟ್ಟೆಯಲ್ಲಿ ಚೀನಾದ್ದೇ ಪಾರುಪತ್ಯ ಇನ್ನೂ ಮುಂದುವರಿದಿದೆ. ನಮ್ಮ ದೇಶದಲ್ಲಿ ಈಗ ಅತ್ಯಂತ ಹೆಚ್ಚು ಅಭಿವೃದ್ದಿ ಹೊಂದುತ್ತಿರುವ ಕಣ್ಗಾವಲು ಉಪಕರಣಗಳ ಮಾರುಕಟ್ಟೆಯಲ್ಲಿ ಚೀನಾದ್ದೇ ಪಾರುಪತ್ಯ ಇನ್ನೂ ಮುಂದುವರಿದಿದೆ. ಭಾರತದ ಸಿಸಿಟಿವಿ ಮಾರುಕಟ್ಟೆಯಲ್ಲಿ ಚೀನೀ ಕಂಪನಿ ಹಿಕ್ವಿಷನ್ ಪ್ರಾಬಲ್ಯ ಹೊಂದಿದ್ದು, ಇದು ಬಹಳ ಜಾಣತನದಿಂದ ಪ್ರಧಾನ ಮಂತ್ರಿಯ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಭಾಗ ಎಂದು ತನ್ನನ್ನು ತಾನು ಬಿಂಬಿಸಿಕೊಂಡಿದೆ.. ಆ ಮೂಲಕ ಬ್ಯಾನ್ ಆಗುವುದರಿಂದ ತಪ್ಪಿಸಿಕೊಂಡಿದೆ. ಕಳೆದ ವಾರವಷ್ಟೇ, ಅಮೇರಿಕ ರಕ್ಷಣಾ ಇಲಾಖೆಯು ಹಿಕ್ವಿಷನ್ ಮತ್ತು ಇತರ 19 ಸಂಸ್ಥೆಗಳು ಚೀನೀ ಮಿಲಿಟರಿಯ ಒಡೆತನದಲ್ಲಿದೆ ಅಥವಾ ನಿಯಂತ್ರಿಸಲ್ಪಟ್ಟಿದೆ ಎಂದು ಹೆಸರಿಸಿದೆ. ವಾಸ್ತವವಾಗಿ, ಅಮೇರಿಕವು ಈಗಾಗಲೇ ರಾಷ್ಟ್ರೀಯ ರಕ್ಷಣಾ ದೃಢೀಕರಣ ಕಾಯ್ದೆಯನ್ನು ಜಾರಿಗೊಳಿಸಿದೆ ಮತ್ತು ಸರ್ಕಾರಿ ಏಜೆನ್ಸಿಗಳು ಹಿಕ್ವಿಷನ್‌ನಿಂದ ವೀಡಿಯೊ ಕಣ್ಗಾವಲು ಉತ್ಪನ್ನಗಳನ್ನು ಖರೀದಿಸುವುದನ್ನು ನಿಷೇಧಿಸಿತ್ತು. ಆಸ್ಟ್ರೇಲಿಯಾ ಸರ್ಕಾರವು ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದೆ ಮತ್ತು ಇಂಗ್ಲೆಂಡ್ ನಲ್ಲಿಯೂ ಕೂಡ ಈ ಕುರಿತು ಗಂಭೀರ ಚರ್ಚೆಗಳೂ ನಡೆದಿವೆ.
ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಪರಿಕರಗಳನ್ನು ಉತ್ಪಾದಿಸುವ ವಿಶ್ವದ ಅತಿದೊಡ್ಡ ವೀಡಿಯೊ ಕಣ್ಗಾವಲು ಕಂಪನಿಗಳಲ್ಲಿ ಹೈಕ್ವಿಷನ್ ಒಂದು. ಕಣ್ಗಾವಲು ವ್ಯವಸ್ಥೆಗಳ ವಿಶ್ವದ ಪ್ರಮುಖ ಪೂರೈಕೆದಾರನಾಗುವುದು ಚೀನಾದ ಮಹತ್ವಾಕಾಂಕ್ಷೆ ಆಗಿದೆ. ರೈಲ್ವೆ ನಿಲ್ದಾಣಗಳು, ರಸ್ತೆಗಳು ಇತ್ಯಾದಿಗಳನ್ನು ಮೇಲ್ವಿಚಾರಣೆ ಮಾಡಲು ಭದ್ರತಾ ಸಂಸ್ಥೆಗಳಿಗೆ ಅನುವು ಮಾಡಿಕೊಡುವ ಕ್ಯಾಮೆರಾಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಹಿಕ್ವಿಷನ್ ಮಾರಾಟ ಮಾಡುತ್ತದೆ. 2019 ರ ವರದಿಯ ಪ್ರಕಾರ, ಕಂಪನಿಯ ಶೇಕಡಾ 42 ರಷ್ಟು ಪಾಲನ್ನು ಚೀನಾದ ಸರ್ಕಾರಿ ಉದ್ಯಮಗಳು ನಿಯಂತ್ರಿಸುತ್ತವೆ, ಚೀನಾ ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಎಚ್ಐಕೆ ಗ್ರೂಪ್ ಸುಮಾರು 40 ಶೇಕಡಾವನ್ನು ಹೊಂದಿದೆ. 2017 ರಲ್ಲಿ ವಿಶ್ವದ ಸಿಸಿಟಿವಿ ಮಾರುಕಟ್ಟೆಯ ಶೇಕಡಾ 21 ರಷ್ಟು ಹಿಕ್ವಿಷನ್ ನಿಯಂತ್ರಿಸಿದೆ. ಭಾರತದಲ್ಲಿ ಪ್ರಮ ಹೈಕ್ವಿಷನ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಹೈಕ್ವಿಷನ್ ಅಸ್ತಿತ್ವದಲ್ಲಿದೆ. ವರದಿಗಳ ಪ್ರಕಾರ, ಹಿಕ್ವಿಷನ್ ಭಾರತದಲ್ಲಿ ಶೇಕಡಾ 35 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದೆ. ಅದರ 2019 ರ ವಾರ್ಷಿಕ ವರದಿಯು ಭಾರತದಲ್ಲಿ ಸ್ಥಳೀಯ ಕಾರ್ಖಾನೆಯನ್ನು ಸ್ಥಾಪಿಸಿದೆ ಎಂದು ಹೇಳಿದೆ. ಅದರ ಮೊದಲ ಸಾಗರೋತ್ತರ ಉತ್ಪಾದನಾ ನೆಲೆ. ಇದು ಶೇ 58 ರಷ್ಟು ಮೂಲ ಚೀನೀ ಕಂಪನಿಯ ಒಡೆತನದಲ್ಲಿದೆ.
ಕಳೆದ ವರ್ಷ ರಾಷ್ಟ್ರ ರಾಜಧಾನಿಯಲ್ಲಿ 1.5 ಲಕ್ಷ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ದೆಹಲಿ ಸರ್ಕಾರದಿಂದ ಟೆಂಡರ್ ಗೆದ್ದುಕೊಂಡಿತು. ಭಾರತ್ ಎಲೆಕ್ಟ್ರಾನಿಕ್ಸ್ (ಬಿಇಎಲ್) ಇದನ್ನು ಮಾರಾಟಗಾರರನ್ನಾಗಿ ಪಟ್ಟಿ ಮಾಡಿದೆ, ಇದು ಭಾರತ ಸರ್ಕಾರಕ್ಕೆ ಹೆಚ್ಚು ಸೂಕ್ಷ್ಮ ಮತ್ತು ವರ್ಗೀಕೃತ ರಕ್ಷಣಾ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಹೆಚ್ಚು ಆತಂಕಕಾರಿ ಸಂಗತಿಯೆಂದರೆ, ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಪ್ರಧಾನ ಮಂತ್ರಿಯ ಸುರಕ್ಷತೆಯ ಜವಾಬ್ದಾರಿಯನ್ನು ಹೊಂದಿರುವ ವಿಶೇಷ ಸಂರಕ್ಷಣಾ ಗುಂಪು (ಎಸ್‌ಪಿಜಿ) ಗೆ ಹಿಕ್ವಿಷನ್ ಪರಿಕರಗಳನ್ನು ಒದಗಿಸಿದೆ.
ಈಗ ಕೇಂದ್ರ ಸರ್ಕಾರ ತನ್ನ ನೀತಿಯನ್ನು ಪುನರ್ವಿಮರ್ಶೆ ಮಾಡಿಕೊಳ್ಳಲೇ ಬೇಕಿದೆ. ಬರೇ ಹಿಕ್ವಿಷನ್ ಅಲ್ಲದೆ ಇನ್ನೂ ನೂರಾರು ಚೀನಾ ಕಂಪೆನಿಗಳು ಹಿಂಬಾಗಿಲ ಮೂಲಕ ಭಾರತ ಪ್ರವೇಶ ಪಡೆದುಕೊಂಡಿವೆ. ಅಷ್ಟೆ ಅಲ್ಲ ವಾರ್ಷಿಕವಾಗಿ ಕೋಟ್ಯಾಂತರ ಡಾಲರ್ ಮೌಲ್ಯದ ಲಾಭವನ್ನೂ ಗಳಿಸುತ್ತಿವೆ. ಮೇಕ್ ಇನ್ ಇಂಡಿಯಾ ಎಂಬ ಕೊಡೆಯಡಿ ಈ ಚೀನಾ ಕಂಪೆನಿಗಳು ದೇಶದೊಳಗೆ ಆಶ್ರಯ ಪಡೆಯುವುದಾದರೆ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಂತೆಯೇ ಹೊರತು ಬೇರೇನೂ ಅಲ್ಲ. ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಭಾರತದಲ್ಲೇ ಉತ್ಪದಿಸುತ್ತಿರುವ ಚೀನಾ ಕಂಪೆನಿಗಳನ್ನು ಇಲ್ಲೆ ಉಳಿಸಿಕೊಳ್ಳಬೇಕೋ ಅಥವಾ ಹೊರಕಳಿಸಬೇಕೋ ಕೇಂದ್ರ ಸರ್ಕಾರ ಕೂಡಲೇ ನಿರ್ಧರಿಸಬೇಕಿದೆ. ಏಕೆಂದರೆ ಎಲೆಕ್ಟ್ರನಿಕ್ ಉಪಕರಣಗಳು ಯಾವತ್ತಿಗೂ ಭದ್ರತೆಗೆ ಸಂಭಾವ್ಯ ಅಪಾಯ ಇದ್ದೇ ಇರುತ್ತದೆ.