ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಈಗಾಗಲೇ ಸಾಕಷ್ಟು ಕಂಗಾಲಾಗಿದ್ದಾರೆ. ಎಲ್ಲಾ ರೀತಿಯ ಸರಕುಗಳ ಬೆಲೆಯೂ ಹೆಚ್ಚಾಗಿದ್ದು ಕರೋನಾ ಕಷ್ಟಕಾಲದಲ್ಲಿ ಜನರು ಅಗತ್ಯ ಸಾಮಾಗ್ರಿಗಳಿಗೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.
ಇಂತಹ ಸಂದರ್ಭದಲ್ಲಿ ಅತ್ಯಂತ ಬಾಲೀಶ ಹೇಳಿಕೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ. ಇವರ ಈ ಮಾತುಗಳಿಗೆ ಬಹಳಷ್ಟು ಆಕ್ರೋಶ ವ್ಯಕ್ತವಾಗಿದೆ.
“ಲಾಕ್‌ಡೌನ್‌ನಲ್ಲಿ ಸುಮಾರು 70% ಇಂಧನ ಮಾರಾಟ ಕಡಿಮೆಯಾಗಿತ್ತು. ಲಾಕ್‌ಡೌನ್ ಸಡಿಲಿಸಿದ ನಂತರ ಮತ್ತೆ ಸಾಮಾನ್ಯ ಸ್ಥಿತಿಯತ್ತ ಇಂಧನ ಮಾರಾಟ ಸಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರಿಗೆ ಬೆಲೆ ಏರಿಕೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಒಂದು ಕುಟುಂಬದಲ್ಲಿ ಏನಾದರೂ ಆರ್ಥಿಕ ತೊಂದರೆ ಇದ್ದಲ್ಲಿ, ಯಜಮಾನ ಬಹಳ ಸೂಕ್ಷ್ಮತೆಯಿಂದ ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಾನೆ. ಇಂಧನ ಬೆಲೆ ಏರಿಕೆಯನ್ನು ಕೂಡಾ ಅದೇ ದೃಷ್ಟಿಯಿಂದ ನೋಡಬೇಕು,” ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ತೆರಿಗೆಗಳಿಂದ ಅಧಿಕವಾಗಿ ಸಂಗ್ರಹವಾದ ಹಣವನ್ನು ಆರೋಗ್ಯ, ಉದ್ಯೋಗ ಮತ್ತು ಜನರ ಆರ್ಥಿಕ ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿದೆ, ಎಂದು ವಿವರಣೆ ನೀಡಿದ್ದಾರೆ. ಆದರೆ, ಇಲ್ಲ ಅರ್ಥವಾಗದ ವಿಷಯವೇನೆಂದರೆ, ದೇಶದಲ್ಲಿ ಲಕ್ಷಾಂತರ ಯುವಕರು ಉದ್ಯೋಗ ಕಳೆದುಕೊಂಡಿರುವಾಗ, ಕೂಲಿ ಕಾರ್ಮಿಕರು ಕೆಲಸವಿಲ್ಲದೇ ದಿನ ದೂಡುವ ಸಂದರ್ಭದಲ್ಲಿ ಜನರ ಬಳಿ ಹಣವನ್ನು ಕಿತ್ತುಕೊಂಡು ಸರ್ಕಾರವು ಜನರನ್ನು ಹೇಗೆ ಆರ್ಥಿಕವಾಗಿ ಸದೃಢಗೊಳಿಸುತ್ತಾರೆ ಎಂಬುದನ್ನು ವಿವರಿಸಿಲ್ಲ.
ಇಂಧನ ಬೆಲೆ ಏರಿಕೆ ವಿರುದ್ದ ನಿನ್ನೆ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಎಲ್ಲಾ ರಾಜ್ಯಗಳಲ್ಲಿಯೂ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಇದರ ಫಲವಾಗಿ ಇಂದು ರಾಷ್ಟ್ರ ರಾಜಧಾನಿಯಲ್ಲಿ ಇಂಧನ ಬೆಲೆ ಏರಿಕೆ ಆಗಿಲ್ಲ. ಕಳೆದ ಸುಮಾರು ಎರಡು ವಾರಗಳಿಂದ ಸತತವಾಗಿ ಏರಿಕೆಯಾಗುತ್ತಿದ್ದ ಇಂಧನ ಬೆಲೆ ಇಂದು ಏರಿಕೆಯಾಗದೇ ಇರುವುದು ಕಾಂಗ್ರೆಸ್ ಪ್ರತಿಭಟನೆಗೆ ಸಿಕ್ಕ ಪ್ರತಿಫಲವೇ ಎಂಬ ಅಂಶವೂ ಗಮನಿಸಬೇಕಾಗಿದೆ.