ಕರೋನಾ ಸೋಂಕಿನ ಭಯದಿಂದ ಶಾಲೆಗಳ ಆರಂಭ ಇನ್ನೂ ಆಗಿಲ್ಲ. ಇನ್ನು ಕೂಡ ಒಂದೆರಡು ತಿಂಗಳು ಶಾಲೆ ಆರಂಭ ಮಾಡುವುದು ಕಷ್ಟಸಾಧ್ಯ. ಈ ವರ್ಷ ಕೆಲವೇ ಕೆಲವು ದಿನಗಳು ಮಾತ್ರ ಶೈಕ್ಷಣಿಕ ವರ್ಷ ನಡೆಯುವುದರಿಂದ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು ಫೀಸ್ ಕಡಿಮೆ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿದೆ. ಈ ಆಗ್ರಹದ ನಡುವೆ ಕರ್ನಾಟಕ ಸರ್ಕಾರ ಮೆಲ್ಲಗೆ ಫೀಸ್ ಹೆಚ್ಚಳ ಮಾಡಿ ಆದೇಶ ಮಾಡಿದೆ.
ಶಾಲಾ ಕಾಲೇಜು ಆರಂಭ ಮಾಡುವ ಬಗ್ಗೆ ಚರ್ಚೆಗಳು ಶುರುವಾದ ಬಳಿಕ ಮೈಸೂರಿನಲ್ಲಿ ಮಾತನಾಡಿದ ಹಿರಿಯ ಸಾಹಿತಿ ಸಿ ಪಿ ಕೃಷ್ಣಕುಮಾರ್, ಖಾಸಗಿ ಶಾಲಾ ಶುಲ್ಕವನ್ನು ಕಡಿಮೆ ಮಾಡಬೇಕು. ಕರೋನಾ ಸಂಕಷ್ಟದ ಸಮಯದಲ್ಲಿ ಪ್ರಾಧ್ಯಾಪಕರು ಸಹ ತ್ಯಾಗ ಮಾಡಬೇಕು. ಲಾಕ್‌ಡೌನ್‌ನಿಂದ ಒಳ್ಳೆಯದು ಆಗಿದೆ ಕೆಟ್ಟದ್ದು ಆಗಿದೆ. ಶಾಲೆಗಳ ವಿಚಾರದಲ್ಲಿ ಗೊಂದಲವೂ ಆಗಿದೆ. ಖಾಸಗಿ ಶಾಲೆಗಳು ಶುಲ್ಕ ಕಡಿಮೆ ಮಾಡಬೇಕು. ಇದನ್ನು ರಾಜ್ಯ ಸರ್ಕಾರ ಆದೇಶದ ರೂಪದಲ್ಲಿ ತರಬೇಕು. ಇದರಿಂದ ಕರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಮಕ್ಕಳ ವಿದ್ಯಾಭ್ಯಾಸ ಮಾಡಿಸಲು ಅನುಕೂಲ ಆಗುತತದೆ ಎಂದಿದ್ದಾರೆ. ಸಿ ಪಿ ಕೃಷ್ಣಕುಮಾರ್ ಅವರ ಮಾತಿಗೆ ಮಾಜಿ ಶಿಕ್ಷಣ ಸಚಿವ ಹೆಚ್ ವಿಶ್ವನಾಥ್ ಕೂಡ ದನಿಗೂಡಿಸಿದ್ದರು.
ಅಂತೆಯೇ ರಾಜ್ಯದ ಇತರೆ ಕಡೆಗಳಿಂದಲೂ ಶಿಕ್ಷಣ ತಜ್ಞರು, ಸಾಹಿತಿಗಳು ಖಾಸಗಿ ಶಾಲೆಗಳು ಈಗಾಗಲೇ ಆರಂಭ ಮಾಡಿರಬೇಕಿತ್ತು. ಆದರೆ ಕರೋನಾದಿಂದ ಶಾಲೆಗಳ ಆರಂಭ ಆಗಿಲ್ಲ. ಇನ್ನೂ ಕೂಡ ಒಂದೆರಡು ತಿಂಗಳು ಶಾಲೆ ಆರಂಭ ಮಾಡುವುದು ಕಷ್ಟ. ಈ ವರ್ಷ ಕೆಲವೇ ಕೆಲವು ದಿನಗಳು ಮಾತ್ರ ಶೈಕ್ಷಣಿಕ ವರ್ಷ ನಡೆಯುವುದರಿಂದ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳು ಒಂದು ನಿರ್ಧಾರಕ್ಕೆ ಬಂದು ಫೀಸ್ ಕಡಿಮೆ ಮಾಡುವ ನಿರ್ಧಾರ ಮಾಡಬೇಕು ಎಂದು ಆಗ್ರಹ ಮಾಡಿದ್ದರು. ಆದರೆ, ಕರ್ನಾಟಕ ಸರ್ಕಾರ ಮೆಲ್ಲಗೆ ಫೀಸ್ ಹೆಚ್ಚಳ ಮಾಡಿ ಆದೇಶ ಮಾಡಿದೆ.
ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ಶೇಕಡ 20 ಹಾಗೂ ಶೇಕಡ 30ರಷ್ಟು ಫೀಸ್ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ವೈದ್ಯಕೀಯ ಪಿಜಿ ಹಾಗೂ ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕರೋನಾ ಸಮಯದಲ್ಲೂ ವೈದ್ಯಕೀಯ ಶಿಕ್ಷಣ ಇಲಾಖೆ ಬರೆ ಎಳೆದಿದೆ. 2020 – 21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯ ಆಗುವಂತೆ ಫೀಸ್ ಹೆಚ್ಚಳ ಮಾಡಿದ್ದು, ದಂತ ಕಾಲೇಜುಗಳು ಶೇಕಡ 30 ರಷ್ಟು ಹೆಚ್ಚುವರಿ ಫೀಸ್ ಸಂಗ್ರಹ ಮಾಡಬಹುದಾಗಿದೆ. ಸರ್ಕಾರಿ ಸೀಟ್ ಪಡೆದು ಖಾಸಗಿ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಫೀಸ್ ಶೇಕಡ 20 ರಷ್ಟು ಹೆಚ್ಚಳವಾಗಲಿದೆ. ಖಾಸಗಿ ಕಾಲೇಜು ಕೋಟಾದಲ್ಲಿ ವೈದ್ಯಕೀಯ ಪಿಜಿ ಡೆಂಟಲ್ ವಿಭಾಗಕ್ಕೆ ಸೇರುವ ವಿದ್ಯಾರ್ಥಿಗಳು ಶೇಕಡ 30 ರಷ್ಟು ಹೆಚ್ಚುವರಿ ಫೀಸ್ ಕಟ್ಟಬೇಕಿದೆ.
ಫೀಸ್ ಹೆಚ್ಚಳ ಮಾಡದಿದ್ದರೆ ಕಾಲೇಜುಗಳ ನಿರ್ವಹಣೆ, ಉಪನ್ಯಾಸಕರಿಗೆ ವೇತನ ಕೊಡುವುದು ಕಷ್ಟವಾಗಲಿದೆ ಎಂದು ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳು ಮನವಿ ಮಾಡಿಕೊಂಡಿದ್ದವು. ಕಾಲೇಜು ಆಡಳಿತ ಮಂಡಳಿ ಪ್ರಸ್ತಾವನೆ ಮೇರೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಶೇಕಡ 30 ರಿಂದ 40 ರಷ್ಟು ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆ ಬಳಿಕ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಗಿರೀಶ್ ಫೀಸ್ ಹೆಚ್ಚಳದ ಬಗ್ಗೆ ಮೇ 01 2020ರಂದು ಆದೇಶ ಹೊರಡಿಸಿದ್ದಾರೆ. ಕರೋನಾ ಲಾಕ್‌ಡೌನ್ ಹಾಗೂ ಸೋಂಕಿನ ಭೀತಿಯಲ್ಲಿದ್ದ ಜನರಿಗೂ ಈ ವಿಚಾರ ಮುಟ್ಟಿಲ್ಲ. ಇನ್ನೂ ಮಾಧ್ಯಮಗಳಲ್ಲೂ ಈ ಬಗ್ಗೆ ಸುದ್ದಿ ಚರ್ಚೆಗೆ ಬಾರಲಿಲ್ಲ. ಕರೋನಾ ಸಂಕಷ್ಟದಲ್ಲಿ ಇರುವ ಈ ಸಮಯದಲ್ಲಿ ಫೀಸ್ ಕಡಿಮೆ ಮಾಡಬೇಕು ಎನ್ನುವ ಕೂಗು ಎದ್ದಿದೆ. ಈ ನಡುವೆ ಕರ್ನಾಟಕ ರಾಜ್ಯ ಸರ್ಕಾರ ಫೀಸ್ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಆದರೆ ಭಾರತ ಸರ್ಕಾರದ ಪುಟ್ಟ ರಾಜ್ಯವೊಂದು ಇಡೀ ದೇಶಕ್ಕೇ ಮಾದರಿಯಾಗುವ ಆದೇಶ ಮಾಡಿದೆ.
ಅಸ್ಸಾಂನಲ್ಲಿ ಈ ವರ್ಷ ಶಾಲಾ ಕಾಲೇಜು ಫೀಸ್ ಇಲ್ಲ..!!
ಸುದ್ದಿ ನಂಬಲು ಅಸಾಧ್ಯವಾದರೂ ಸತ್ಯ. ಕರೋನಾ ಸಂಕಷ್ಟದಲ್ಲಿರುವ ಜನರ ನೆರವಿಗೆ ಬಂದಿರುವ ಅಸ್ಸಾಂ ಸರ್ಕಾರ 2020 – 21ನೇ ಸಾಲಿನಲ್ಲಿ ಎಲ್ಲಾ ವಿದ್ಯಾಭ್ಯಾಸಗಳನ್ನು ಉಚಿತ ಮಾಡಬೇಕೆಂದು ಘೋಷಣೆ ಮಾಡಿದೆ. ಕರೋನಾ ವೈರಸ್ ಸಂಕಷ್ಟಕ್ಕೆ ಸಿಲುಕಿ ಪರಿತಪಿಸಿರುವ ಜನರನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಬಾರದು. ಹಾಗಾಗಿ ಪ್ರೌಢಶಾಲಾ ಮಟ್ಟದಿಂದ ಸ್ನಾತಕೋತ್ತರ ಪದವಿ ತನಕ ಎಲ್ಲಾ ರೀತಿಯ ಶಿಕ್ಷಣ ಎಂದರೆ ಮೆಡಿಕಲ್, ಎಂಜಿನಿಯರಿಂಗ್, ಡಿಪ್ಲೊಮಾ ತರಗತಿಗಳನ್ನೂ ಉಚಿತವಾಗಿಯೇ ನಡೆಸಬೇಕು ಎಂದು ಆದೇಶ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಅಸ್ಸಾಂ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ, ಕೋವಿಡ್ – 19 ಜನರನ್ನು ಹಿಂಸೆಗೆ ಗುರಿ ಮಾಡಿದೆ, ಮತ್ತೆ ಶಿಕ್ಷಣ ಹೆಸರಲ್ಲಿ ಹಿಂಸೆಯಾಗಬಾರದು ಎನ್ನುವ ಕಾರಣಕ್ಕೆ ನಮ್ಮ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಅಸ್ಸಾಂ ಸರ್ಕಾರ ಈ ಕ್ರಮಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ಕರ್ನಾಟಕದ ಅರ್ಧದಷ್ಟು ಜನಸಂಖ್ಯೆ ಹೊಂದಿರುವ ಅಸ್ಸಾಂನಲ್ಲಿ ಈ ರೀತಿಯ ದೃಢವಾದ ನಿರ್ಧಾರ ಕೈಗೊಳ್ಳಲಾಗಿದೆ.
ಅಲ್ಲಿಯೂ ಬಿಜೆಪಿ ಸರ್ಕಾರವಿದೆ. ಕರ್ನಾಟಕದಲ್ಲೂ ಅದೇ ಬಿಜೆಪಿ ಸರ್ಕಾರವಿದೆ. ಆದರೆ ಅಸ್ಸಾಂ ಸರ್ಕಾರ ಫೀಸ್ ರದ್ದು ಮಾಡಿ ಆದೇಶ ಮಾಡಿದ್ದರೆ..! ಇಲ್ಲಿ ಕರ್ನಾಟಕ ಸರ್ಕಾರ ಉನ್ನತ ವೈದ್ಯಕೀಯ ಶಿಕ್ಷಣದ ಫೀಸ್ ಹೆಚ್ಚಳ ಮಾಡಿ ಆದೇಶ ಮಾಡಿದೆ. ಇನ್ನೂ ಶಾಲಾ ಕಾಲೇಜುಗಳು ಫೀಸ್ ಹೆಚ್ಚಳ ಮಾಡುವ ಭೀತಿ ಎದುರಾಗಿದೆ. ಅಸ್ಸಾಂ ಸರ್ಕಾರವನ್ನಾದರೂ ನೋಡಿ ಇಲ್ಲಿನ ಬಿಜೆಪಿ ಸರ್ಕಾರ ಬುದ್ಧಿ ಕಲಿಯಬೇಕಿದೆ. ಜನರಿಗೆ ನೆಮ್ಮದಿ ತರಬೇಕಿದೆ.