ರಾಜ್ಯಸಭಾ ಚುನಾವಣೆ ದಿನಾಂಕ ನಿಗದಿ ಆಗಿದೆ. ತೆರವಾಗುತ್ತಿರುವ ನಾಲ್ಕು ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ಖಚಿತ. ಓರ್ವ ಅಭ್ಯರ್ಥಿ ಗೆಲ್ಲಲು ವಿಧಾನಸಭೆಯ 48 ಶಾಸಕರ ಮತಗಳ ಅವಶ್ಯಕತೆ ಇದೆ. ಕಾಂಗ್ರೆಸ್ ಬಳಿ ಇರುವ ಶಾಸಕರ ಬಲಾಬಲದ ಪ್ರಕಾರ ಒಂದು ಸ್ಥಾನವನ್ನು ಅನಾಯಾಸವಾಗಿ ಗೆಲ್ಲಿಸಕೊಳ್ಳಬಹುದು. ಅದೇ ರೀತಿ ಬಿಜೆಪಿ ಬಳಿ ಇರುವ ಶಾಸಕರ ಬಲದಿಂದ ಇಬ್ಬರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಲು ಯಾವುದೇ ಸಮಸ್ಯೆ ಇಲ್ಲ. ಅದರೆ ಉಳಿದೊಂದು ಸ್ಥಾನವನ್ನು ಗೆಲ್ಲುವುದಕ್ಕೆ ಯಾವ ಪಕ್ಷದ ಬಳಿಯೂ ಸಂಪೂರ್ಣ ಬಹುಮತ ಇಲ್ಲ. ಆ ಒಂದು ಸ್ಥಾನಕ್ಕೆ ಯಾವುದೇ ಒಂದು ಪಕ್ಷ ಅಭ್ಯರ್ಥಿಯನ್ನು ನಿಲ್ಲಿಸದರೂ ಬೇರೊಂದು ಪಕ್ಷದ ನೆರವು ಅನಿವಾರ್ಯ. ಯಾವ ಪಕ್ಷ ಯಾರಿಗೆ ಬೆಂಬಲ ನೀಡುತ್ತದೆ ಎನ್ನುವ ಕುತೂಹಲ ಉಂಟಾಗಿತ್ತು. ಆದರೆ ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ.
ಈಗಿರುವ ಪಕ್ಷಗಳ ಬಲಾಬಲದಂತೆ ಕಾಂಗ್ರೆಸ್ ತನಗೆ ಸಿಗುವ ಒಂದು ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿದೆ. ಹೀಗಾಗಿ, ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ಪ್ರವೇಶ ಮಾಡುವುದು ಖಚಿತ. ಇನ್ನೂ ಬಿಜೆಪಿ ನಾಯಕರು ಇಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮೂವರು ಅಭ್ಯರ್ಥಿಗಳು ಹೆಸರನ್ನು ಅಂತಿಮವಾಗಿ ಆಯ್ಕೆ ಮಾಡಿ ಹೈಕಮಾಂಡ್ ನಾಯಕರಿಗೆ ಕಳುಹಿಸಿದ್ದಾರೆ. ಬಿಜೆಪಿ ಪಕ್ಷಕ್ಕಿರುವ ಶಾಸಕರ ಬಲದಲ್ಲಿ ಇಬ್ಬರು ಅಭ್ಯರ್ಥಿಗಳು ಯಾವುದೇ ಸಮಸ್ಯೆ ಇಲ್ಲದೆ ಗೆಲ್ಲಿಸಬಹುದು. ಆದರೆ, ಇದೀಗ ಮೂವರ ಹೆಸರನ್ನು ಹೈಕಮಾಂಡ್ ಅಂಗಳಕ್ಕೆ ಶಿಫಾರಸು ಮಾಡಿದ್ದಾರೆ. ಪ್ರಭಾಕರ್ ಕೋರೆ, ರಮೇಶ್ ಕತ್ತಿ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಹೆಸರನ್ನು ಕಳುಹಿಸಿ ಕೊಡಲಾಗಿದೆ ಎನ್ನಲಾಗಿದೆ. ಆದರೆ ಗೆಲ್ಲುವುದಕ್ಕೆ ಆಗುವುದು 2 ಸ್ಥಾನಗಳನ್ನು ಎನ್ನುವುದನ್ನು ಗೊತ್ತಿರುವ ಕಾರಣ, ಈ ಮೂರು ಹೆಸರುಗಳಲ್ಲಿ ಇಬ್ಬರನ್ನು ಅಂತಿಮ ಮಾಡುವಂತೆ ಕೋರಿಕೊಳ್ಳಲಾಗಿದೆ.
ಬಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಶಾಸಕ ಅರವಿಂದ್ ಲಿಂಬಾವಳಿ, ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷದ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ಎರಡು ಸ್ಥಾನ ಬಿಜೆಪಿಗೆ ಸಿಗಲಿದೆ. ಕೇಂದ್ರ ಚುನಾವಣಾ ಸಮಿತಿಗೆ ಇಬ್ಬರೇ ಅಭ್ಯರ್ಥಿ ಹಾಕಲು ಶಿಫಾರಸ್ಸು ಮಾಡಿದ್ದೇವೆ. ಜೊತೆಗೆ ಆಕಾಂಕ್ಷಿಗಳ ಹೆಸರನ್ನು ಕಳುಹಿಸಲಾಗಿದೆ ಎಂದಿದ್ದಾರೆ. ಬಿಜೆಪಿಯಲ್ಲಿ ಹೆಚ್ಚುವರಿಯಾಗಿ ಉಳಿಯುವ ಮತಗಳನ್ನು ಏನು ಮಾಡಬೇಕು ಎಂಬುದರ ಬಗ್ಗೆ ಕೋರ್‌ಕಮಿಟಿಯಲ್ಲಿ ಚರ್ಚೆ ನಡೆದಿಲ್ಲ ಎಂದಿರುವ ಅರವಿಂದ್ ಲಿಂಬಾವಳಿ, ಜೆಡಿಎಸ್ ಅಭ್ಯರ್ಥಿ ದೇವೇಗೌಡನ್ನು ಬೆಂಬಲಿಸುವ ಬಗ್ಗೆಯೂ ಯಾವುದೇ ನಿರ್ಧಾರ ಮಾಡಿಲ್ಲ ಎಂದಿದ್ದಾರೆ. ನಮ್ಮ ಪಕ್ಷದಿಂದ ಇಬ್ಬರು ಅಭ್ಯರ್ಥಿಗಳು ಮಾತ್ರ ಸ್ಪರ್ಧೆ ಮಾಡ್ತಾರೆ. ಯಾವುದೇ ಕಾರಣಕ್ಕೂ ಮೂರನೇ ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದಿದ್ದಾರೆ.

ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಯಡಿಯೂರಪ್ಪ, ಸಚಿವರಾದ ಜಗದೀಶ್ ಶೆಟ್ಟರ್, ಸಿಟಿ ರವಿ, ಕೆ.ಎಸ್ ಈಶ್ವರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಆರ್ ಅಶೋಕ್, ಶಾಸಕರಾದ ಸಿ.ಎಂ ಉದಾಸಿ, ಅರವಿಂದ್ ಲಿಂಬಾವಳಿ ಸೇರಿದಂತೆ ಹಲವಾರು ನಾಯಕರು ಭಾಗಿಯಾಗಿದ್ದರು. ಇನ್ನು ಕೇಂದ್ರ ಸಚಿವರಾದ ಡಿ.ವಿ ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಪುರಂದರೇಶ್ವರಿ ದೇವಿ ಹಾಗೂ ಮುರಳೀಧರ್ ರಾವ್ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು. ಎಲ್ಲರ ಅಭಿಪ್ರಾಯದಂತೆ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ನಾಯಕರಿಗೆ ರವಾನೆ ಮಾಡಲಾಗಿದೆ. ಮೂರನೇ ಅಭ್ಯರ್ಥಿ ಆಯ್ಕೆಗೆ ಬೇಕಾದ ಮತಗಳು ಇಲ್ಲದೇ ಇರುವ ಕಾರಣಕ್ಕೆ ಇಬ್ಬರೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮನವಿ ಮಾಡಲಾಗಿದೆ. ಆದರೆ ಹೈಕಮಾಂಡ್ ನಾಯಕರು ರಾಜ್ಯದಿಂದ ಶಿಫಾರಸು ಆಗಿರುವ ಹೆಸರುಗಳನ್ನೇ ಅಂತಿಮವಾಗಿ ಆಯ್ಕೆ ಮಾಡ್ತಾರಾ..? ಅಥವಾ ಅಚ್ಚರಿಯ ಹೆಸರನ್ನು ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡ್ತಾರಾ ಎನ್ನುವ ಕುತೂಹಲಕ್ಕೆ ನಾಳೆ ಸಂಜೆ ಅಥವಾ ಸೋಮವಾರ ಬೆಳಗ್ಗೆ ತೆರೆ ಬೀಳಲಿದೆ.
4ನೇ ಸ್ಥಾನಕ್ಕೆ ಯಾರೂ ಇಲ್ಲ..! ಗೌಡರೇ ದಿಕ್ಕು..?
ಕಾಂಗ್ರೆಸ್ ಒಂದು ಸ್ಥಾನಕ್ಕೆ ಸ್ಪರ್ಧೆ ಮಾಡಿದ್ರೆ, ಬಿಜೆಪಿ ಎರಡು ಸ್ಥಾನಗಳಿಗೆ ಸ್ಪರ್ಧೆ ಮಾಡುವ ನಿರ್ಧಾರ ಮಾಡಿದೆ. ಅಂದರೆ ನಾಲ್ಕು ಸ್ಥಾನಗಳ ಪೈಕಿ ಮೂರು ಸ್ಥಾನ ಭರ್ತಿಯಾಗುವುದು ಖಚಿತ. ಉಳಿದ ಒಂದು ಸ್ಥಾನಕ್ಕೆ ಯಾರೂ ಸ್ಪರ್ಧೆ ಮಾಡುವ ಬಗ್ಗೆ ಇಲ್ಲೀವರೆಗೂ ಘೋಷಣೆ ಆಗಿಲ್ಲ. ಆದರೆ, 34 ಶಾಸಕರ ಬಲ ಹೊಂದಿರುವ ಜೆಡಿಎಸ್‌ನಿಂದ ನಾಲ್ಕನೇ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಲು ಸಿದ್ಧತೆಗಳು ನಡೆದಿವೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಅವಿರೋಧವಾಗಿ ಆಯ್ಕೆಯಾಗುವುದಾದರೆ ರಾಜ್ಯಸಭೆಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದು, ಪಕ್ಷಗಳ ಜೊತೆಗೆ ಪೈಪೋಟಿ ನಡೆಸಿ ಹಿಂಬಾಗಿಲ ಮೂಲಕ ನಾನು ರಾಜ್ಯಸಭೆಗೆ ಸಂಸದನಾಗಲಾರೆ. ನಾನು ಸಂಸತ್‌ನಲ್ಲಿ ಇರಬೇಕು, ನನ್ನ ಅನುಭವ ದೇಶಕ್ಕೆ ಬೇಕು ಎನ್ನುವುದಾದರೆ ಅವಿರೋಧ ಆಯ್ಕೆ ಮಾಡಲಿ ಎಂದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಈ ನಿರ್ಧಾರಕ್ಕೆ ಕಾರಣ ಎನ್ನಲಾಗ್ತಿದೆ.
ಗೌಡರು ರಾಜ್ಯಸಭೆಗೆ ಆಯ್ಕೆಯಾಗೋದು ಖಚಿತ?
ಕಾಂಗ್ರೆಸ್ ಒಂದು ಹಾಗೂ ಬಿಜೆಪಿ ಎರಡು ಸ್ಥಾನಗಳಿಗೆ ಮಾತ್ರ ಸ್ಪರ್ಧೆ ಮಾಡುತ್ತಿರುವ ಕಾರಣ ಇನ್ನೊಂದು ಸ್ಥಾನಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ನಾಮಪತ್ರ ಸಲ್ಲಿಕೆ ಮಾಡಿದರೂ ಚುನಾವಣೆ ನಡೆಯುವ ಅವಶ್ಯಕತೆ ಇರುವುದಿಲ್ಲ. ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿಯೇ ಆಯ್ಕೆಯಾಗಲಿದ್ದು. ನೇರವಾಗಿ ಚುನಾವಣಾ ಅಧಿಕಾರಿಗಳು ಜೂನ್ 19ರಂದು ಅಧಿಕೃತವಾಗಿ ಘೋ಼ಷಣೆ ಮಾಡಲಿದ್ದಾರೆ. ಈ ಬಗ್ಗೆ ವಿಧಾನಸಭೆ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಚುನಾವಣಾ ಅಧಿಕಾರಿ ಆಗಿರುವ ವಿಶಾಲಾಕ್ಷಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದು, ಇದೇ ತಿಂಗಳ 9 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಕರೋನಾ ಸೋಂಕು ಹೆಚ್ಚಾಗುತ್ತಿರುವುದರಿಂದ ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಜೊತೆಗೆ ನಾಲ್ಕು ಜನರು ಮಾತ್ರ ಆಗಮಿಸಬೇಕು. ಮಾಧ್ಯಮಗಳಿಗೂ ಪ್ರವೇಶ ಇರುವುದಿಲ್ಲ. ವಾರ್ತಾ ಇಲಾಖೆಯಿಂದ ವಿಡಿಯೊ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ.
ಬಿಜೆಪಿಯಲ್ಲಿ ಬಂಡಾಯ ಶಮನಕ್ಕೆ ಯತ್ನ..!
ಬಿಜೆಪಿಯಲ್ಲಿ ಬಂಡಾಯ ಹೆಚ್ಚಾಗುವ ಸಂಭವ ಹೆಚ್ಚಾಗಿದೆ. ಈಗಾಗಲೇ ಹಾಲಿ ರಾಜ್ಯಸಭಾ ಸದ್ಯಸ್ಯರಾಗಿದ್ದ ಪ್ರಭಾಕರ್ ಕೋರೆ ಅವರ ಪರವಾಗಿ ಈಗಾಗಲೇ ಡಿಸಿಎಂ ಲಕ್ಷ್ಣ ಸವದಿ ಬ್ಯಾಟಿಂಗ್ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದರು ಲಕ್ಷ್ಮಣ ಸವದಿ ಅವರನ್ನ ಉಪಮುಖ್ಯಮಂತ್ರಿಯಾಗಿ ಆಗಿ ಆಯ್ಕೆ ಮಾಡಿದ್ದೇ ಬಿಜೆಪಿ ಹೈಕಮಾಂಡ್ ಎನ್ನಲಾಗಿದೆ. ಇದೀಗ ಪ್ರಭಾಕರ್ ಕೋರೆ ಮರು ಆಯ್ಕೆ ಬಗ್ಗೆ ಬ್ಯಾಟಿಂಗ್ ಮಾಡಿರುವುದು ಹೈಕಮಾಂಡ್ ಸಂದೇಶವೇ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇನ್ನು, ಬಿಜೆಪಿಯಲ್ಲಿ ಬಂಡಾಯ ಸಾರಿರುವ ಹಿರಿಯ ಶಾಸಕ ಉಮೇಶ್ ಕತ್ತಿ ತಮ್ಮನ ಪರ ಲಾಬಿ ಮಾಡಿದ್ದು, ಬಿ ಎಸ್ ಯಡಿಯೂರಪ್ಪ ಒತ್ತಡಕ್ಕೆ ಮಣಿದು ಆಯ್ಕೆ ಮಾಡಿದ್ದಾರೆ. ಆದರೆ ಹೈಕಮಾಂಡ್ ಇದೇ ಒತ್ತಡಕ್ಕೆ ಮಣಿದು ಆಯ್ಕೆ ಮಾಡುತ್ತಾ..? ಅಥವಾ ಬೇರೊಂದು ಹೆಸರಿಗೆ ಮಣೆ ಹಾಕುತ್ತಾ..? ಎನ್ನುವ ಕುತೂಹಲ ಮೂಡಿಸಿದೆ. ಇನ್ನೂ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಕೂಡ ಆಕಾಂಕ್ಷಿತರ ಪಟ್ಟಿಯಲ್ಲಿದ್ದು, ದೆಹಲಿ ಮಟ್ಟದಲ್ಲಿ ಮತ್ತೊಂದು ಹಂತದ ಲಾಬಿ ನಡೆದು ಹೆಸರಗಳಲ್ಲಿ ಅದಲು ಬದಲಾದರೂ ಅಚ್ಚರಿಯೇನಿಲ್ಲ ಎನ್ನಲಾಗ್ತಿದೆ. ಆದರೆ ಅಂತಿಮವಾಗಿ ಬಿಜೆಪಿ ಇಬ್ಬರನ್ನು ಮಾತ್ರ ನಿಲ್ಲಿಸಲಿದ್ದು, ಕಾಂಗ್ರೆಸ್ ಕೂಡ ಒಬ್ಬರನ್ನೇ ಆಯ್ಕೆ ಮಾಡುತ್ತಿರುವುದು ದೇವೇಗೌಡರ ಆಯ್ಕೆ ಕೂಡ ಸುಗಮವಾಗಿದೆ. ಚುನಾವಣೆ ಇಲ್ಲದೆ ಅವಿರೋಧ ಆಯ್ಕೆ ಖಚಿತವಾದಂತಾಗಿದೆ.