ಸುಪ್ರೀಂ ಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ರಿಗೆ ಸಂವಿಧಾನ ಬದ್ದವಾಗಿ ರಾಜ್ಯಸಭಾ ಸದಸ್ಯರಾಗುವ ಯಾವ ಅರ್ಹತೆಯಿಲ್ಲವೆಂದು ಸುಪ್ರೀಂ ಕೋರ್ಟಿನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ವಿ ಗೋಪಾಲ ಗೌಡರು ಹೇಳಿದ್ದಾರೆ.
ಗೊಗಾಯ್ರನ್ನು ಕೇಂದ್ರ ಸರ್ಕಾರ ರಾಜ್ಯಸಭೆಯ ಸದಸ್ಯರಾಗಿ ನಾಮ ನಿರ್ದೇಶನಗೊಳಿಸಿರುವ ಪ್ರಕ್ರಿಯೆಯ ಕುರಿತು “ಪ್ರತಿಧ್ವನಿ”ಯೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ನಿವೃತ್ತ ಸುಪ್ರೀಂ ನ್ಯಾಯಾಧೀಶ, ಗೊಗಾಯ್ ನಡೆಯನ್ನು ಖಂಡಿಸಿದ್ದಾರೆ.
ಗೊಗಾಯ್ ನಾಮ ನಿರ್ದೇಶನಗೊಂಡಾಗ ಕಾರ್ಯಾಂಗಕ್ಕೂ ನ್ಯಾಯಾಂಗಕ್ಕೂ ಸೇತವೆಯಾಗಿ ಇರುತ್ತೇನೆ ಅಂದಿದ್ದಾರೆ, ಇದು ಅಸಂಬಧ್ಧ, ನ್ಯಾಯಾಂಗಕ್ಕೆ ಅದರದೇ ಆದ ಸ್ವಾತಂತ್ರ್ಯ ಇರಬೇಕು. ಕಾರ್ಯಾಂಗದೊಂದಿಗೆ ಅನ್ಯೋನ್ಯವಾಗಿರುವುದೆಂದರೆ ಅರ್ಥವೇನು ? ಮೊದಲನೆಯದಾಗಿ ಅಕ್ಟೋಬರಲ್ಲಿ ನಿವೃತ್ತರಾದ ಅವರಿಗೆ ಮಾರ್ಚಲ್ಲಿ ನಾಮ ನಿರ್ದೇಶನಗೊಳ್ಳುವ ಅರ್ಹತೆಯೇ ಇಲ್ಲವೆಂದು ನಿವೃತ್ತ ನ್ಯಾಯಾಧೀಶರು ಹೇಳಿದ್ದಾರೆ.
Also Read: ಜವಾಬ್ದಾರಿಯುತ ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಕೇಂದ್ರ ಮಾಡಲಿಲ್ಲ: ನಿವೃತ್ತ ನ್ಯಾಯಾಧೀಶ ಗೋಪಾಲ ಗೌಡ
ಸಂವಿಧಾನದ 56ನೇ ಪರಿಚ್ಛೇದದ ಪ್ರಕಾರ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಕ್ಕೆ ಅದರದೇ ಆದ ಇತಿಮಿತಿಗಳಿವೆ. ಅದರ ಒಳಗೆ ಕಾರ್ಯಾಚರಿಸಬೇಕು. ಕಾರ್ಯಾಂಗ ನ್ಯಾಯಾಂಗದ ಮೇಲೆ ಪ್ರಭಾವ ಬೀರುವುದು ಸಂವಿಧಾನ ವಿರೋಧಿ. ಕಾರ್ಯಾಂಗ ಹಾಗೂ ಶಾಸಕಾಂಗಗಳು ತರುವ ಶಾಸನಗಳನ್ನು ವಿಮರ್ಷಿಸುವ ಅಧಿಕಾರ ಸಂವಿಧಾನ ನ್ಯಾಯಾಂಗಕ್ಕೆ ನೀಡಿರುವಾಗ ಈ ಮೂರು ಅಂಗಗಳ ನಡುವೆ ಅನ್ಯೋನ್ಯತೆಯನ್ನು ತರುತ್ತೇನೆ ಎಂಬ ಗೊಗಾಯ್ ಹೇಳಿಕೆ ಅಸಂಬಧ್ದ ಎಂದು ಗೋಪಾಲಗೌಡರು ಹೇಳಿದ್ದಾರೆ.

ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಭಾರತದಲ್ಲಿ ಇರುವುದರಿಂದ ಶಾಸನ ಬಧ್ಧವಾದ ಆಳ್ವಿಕೆ ಈ ದೇಶದಲ್ಲಿ ಇದೆ. ನಾಗರಿಕ ಸಮಾಜದ ವ್ಯವಸ್ಥೆಯಿದೆ. ನೀವು ಇವುಗಳ ನಡುವೆ ಅನ್ಯೋನ್ಯತೆಯನ್ನು ತರುತ್ತೀನಿ ಎಂದು ಹೇಳುವುದು ನ್ಯಾಯಾಂಗದ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಹುದು. ನಿಮ್ಮ ಹೇಳಿಕೆಯಿಂದಲೇ ನಿಮ್ಮನ್ನು ನಾಮ ನಿರ್ದೇಶನಗೊಳಿಸಿದ ಉದ್ದೇಶ ಸಾಮಾನ್ಯ ಜನರಿಗೂ ಅರ್ಥವಾಗುತ್ತದೆ. ಜನರು ಮಾತನಾಡದಂತೆ ತಡೆಯಲು ಸಾಧ್ಯವಿಲ್ಲ, ಅವರು ಮಾತನಾಡಿಯೇ ತೀರುತ್ತಾರೆ ಎಂದು ಹೇಳಿದ್ದಾರೆ.
ನಾಮ ನಿರ್ದೇಶನ ಸಂವಿಧಾನಬದ್ಧವಾಗಿದೆ, ಶಾಸನಬದ್ಧವಾಗಿದೆ ಎಂಬ ನಿಮ್ಮ ಸಮರ್ಥನೆ ಅಸಂಬದ್ಧವಾದುದು, ಇದಕ್ಕೆ ಯಾವ ರೀತಿ ನಿಮಗೆ ಸಮಜಾಯಿಷಿ ನೀಡಲು ಸಾಧ್ಯವಾಗುತ್ತದೆ? ಈ ವಿಷಯದ ಬಗ್ಗೆ ಮಾತನಾಡುವಾಗ ಪ್ರಜ್ಞಾಪೂರ್ವಾಕವಾಗಿ ಮಾತನಾಡಿ, ನಿಮ್ಮ ಕಾನ್ಷಿಯಸ್ನ್ನು ಕೇಳಿ ಮಾತನಾಡಿ ಎಂದು ಗೋಪಾಲ ಗೌಡರು ಗೊಗಾಯ್ ಹಾಗೂ ಕೇಂದ್ರಕ್ಕೆ ಚಾಟಿಯೇಟು ನೀಡಿದ್ದಾರೆ.
ಪೌರತ್ವ ಕಾಯ್ದೆ ಹಾಗೂ ಅದರ ಸುತ್ತಲು ನಡೆದ ವಿದ್ಯಮಾನಗಳ ಕುರಿತು ಮಾತನಾಡಿದ ಗೋಪಾಲ ಗೌಡರು ಪೌರತ್ವ ಕಾಯಿದೆ 2019ರಲ್ಲಿ ತರುವ ಅಗತ್ಯವೇ ಇರಲಿಲ್ಲ. ಇದು ಕೇಂದ್ರದ ರಾಜಕೀಯ ನಡೆಯಾಗಿದೆ ಎಂದು ಟೀಕಿಸಿದ್ದಾರೆ.

1951 ನೇ ಇಸವಿಯಲ್ಲೇ ಭಾರತದ ಶಾಸನ ಸಭೆ ಯಾರಿಗೆ, ಹೇಗೆ, ಯಾವಾಗ ಪೌರತ್ವ ನೀಡಬೇಕೆಂದು ಶಾಸನತಂದಿದೆ. ಅಲ್ಲದೆ ಸುಪ್ರೀಂ 1994ರಲ್ಲಿ ಬೊಮ್ಮಾಯಿ ಪ್ರಕರಣದಲ್ಲಿ ಜಾತಿ, ಧರ್ಮ ಆಧಾರಿತ ಬೇಧ ತರುವಂತಹ ಯಾವುದೇ ಕಾನೂನುಗಳನ್ನು ಕೇಂದ್ರ ಅಥವಾ ರಾಜ್ಯ ತರಬಾರದೆಂದು ಸ್ಪಷ್ಟವಾಗಿ ಹೇಳಿದೆ. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂದು ಧರ್ಮದವರನ್ನು ಹೊರಗಿಟ್ಟು ಕಾನೂನು ತಂದಿದೆ. ಇದು ತಪ್ಪು ಎಂದು ಹೇಳಿದ್ದಾರೆ.
ಪೌರತ್ವ ಕಾಯ್ದೆ ತಂದ ಮೇಲೆ ದೇಶದಲ್ಲಿ ಸುಮಾರು 66 ಕ್ಕೂ ಹೆಚ್ಚಿನ ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ. ದೆಹಲಿ, ಲಖ್ನೋ, ಬೆಂಗಳೂರು ಮುಂತಾದ ನಗರಗಳಲ್ಲಿ ಅಸಂಖ್ಯಾತ ಮಹಿಳೆಯರು ಸರ್ಕಾರದ ನೂತನ ಕಾಯ್ದೆಯ ವಿರುಧ್ದ ಕ್ಯಾಂಪ್ ಹಾಕಿ ಸತತ ಪ್ರತಿಭಟನೆ ಮಾಡಿದ್ದಾರೆ. ಆದರೆ ಭಾರತದ ಪ್ರಧಾನಿ ಈ ಕುರಿತು ಮರುವಿಮರ್ಷಿಸುವ, ಪ್ರತಿಭಟನೆ ಯಾಕೆ ನಡೆಯುತ್ತಿದೆ ಎಂಬುವುದಕ್ಕೇ ತಲೆ ಕೆಡಿಸುವ ಗೋಜಿಗೆ ಹೋಗಲಿಲ್ಲವೆಂದು ಸುಪ್ರೀಂ ನಿವೃತ್ತ ನ್ಯಾಯಾಧೀಶ ವಿ ಗೋಪಾಲಗೌಡರು ನೋವು ತೋಡಿಕೊಂಡಿದ್ದಾರೆ.
ಸಿಎಎ, ಎನ್ಆರ್ಸಿ ವಿರುಧ್ಧದ ಪ್ರತಿಭಟನೆಯಲ್ಲಿ ಭಾಗಿಯಾದ ಗರ್ಭಿಣಿ ಸೇರಿದಂತೆ ಹಲವು ಪ್ರತಿಭಟನಾಕಾರರಿಗೆ ಜಾಮೀನು ನೀಡದೆ, ದೆಹಲಿ ಗಲಭೆಗೆ ಬಂದೂಕು ಸರಬರಾಜು ಮಾಡಿದ ಆರೋಪಿಗೆ ಜಾಮೀನು ನೀಡಿರುವ ಕುರಿತು ಮಾತನಾಡಿದ ಗೋಪಾಲ ಗೌಡರು ಕೆಳ ನ್ಯಾಯಾಲಯದಲ್ಲಿ ಜಾಮೀನು ಸಿಗದಿದ್ದರೆ ಮೇಲನ ಕೋರ್ಟುಗಳಿಗೆ ಮೇಲ್ಮನವಿ ಸಲ್ಲಿಸಬಹುದು, ಅಲ್ಲೂ ಜಾಮೀನು ಮಂಜೂರು ಮಾಡದಿದ್ದರೆ ಜನರಿಗೆ ನ್ಯಾಯಾಂಗದ ಮೇಲಿನ ಭರವಸೆ ಕಳೆದುಕೊಳ್ಳುವ ಅಪಾಯವಿದೆ ಎಂದು ಹೇಳಿದ್ದಾರೆ.





