ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆ ಮಟ್ಟದ ಕರೋನಾ ಪ್ರಕರಣ ದಾಖಲಾಗಿದ್ದು, ಒಂದೇ ದಿನದಲ್ಲಿ 7,964 ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿ ಕೇವಲ ಒಂದೇ ದಿನದೊಳಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೋವಿಡ್-19 ಪ್ರಕರಣ ದಾಖಲಾಗಿದ್ದು ಇದೇ ಮೊದಲು.
ಮೇ 22ರಿಂದ ಪ್ರತಿದಿನ ಸತತ 6 ಸಾವಿರಕ್ಕಿಂತಲೂ ಹೆಚ್ಚು ಪ್ರಕರಣ ದಾಖಲಾಗುತ್ತಿದೆ. ಭಾರತದಲ್ಲಿ ಇದುವರೆಗೂ 1 ಲಕ್ಷದ 76 ಸಾವಿರದ 370 ಮಂದಿ ಕರೋನಾ ಸೋಂಕಿಗೆ ತುತ್ತಾಗಿದ್ದಾರೆ. ದೇಶದಲ್ಲಿ ಕರೋನಾ ಸೋಂಕಿನಿಂದಾಗಿ 5,024 ಮಂದಿ ಅಸುನೀಗಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 84 ಸಾವಿರ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
![](https://pratidhvani.in/wp-content/uploads/2021/02/pratidhvani_2020_04_e241e77c_4e48_4c8a_8518_5c7e48e673cc_Stay_Home_2-251.jpg)
ಭಾರತದಾದ್ಯಂತ ದಾಖಲಾದ ಕರೋನಾ ಪ್ರಕರಣಗಳಲ್ಲಿ 70 ಶೇಕಡಾ ಪ್ರಕರಣಗಳು ದೆಹಲಿ, ಮುಂಬೈ, ಚೆನ್ನೈ, ಕಲ್ಕತ್ತಾ ಸೇರಿದಂತೆ ಕೇವಲ 13 ನಗರಗಳಲ್ಲಿಯೇ ದಾಖಲಾಗಿದೆ. ಅಹಮದಾಬಾದ್, ಥಾಣೆ, ಪುಣೆ, ಹೈದರಾಬಾದ್, ಇಂದೋರ್, ಜೈಪುರ, ಜೋಧಪುರ್, ಚೆಂಗಲ್ಪಟ್ಟು ಮತ್ತು ತಿರುವಲ್ಲೂರು ಅಗ್ರ 13 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಇತರೆ ಪಟ್ಟಣಗಳು.
ಕರ್ನಾಟಕ ಆರೋಗ್ಯ ಇಲಾಖೆ ಮೇ 30ರಂದು ಬಿಡುಗಡೆಗೊಳಿಸಿದ ಅಂಕಿಅಂಶದ ಪ್ರಕಾರ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 141 ಪ್ರಕರಣಗಳು ದಾಕಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 2922 ತಲುಪಿದೆ. ಅದರಲ್ಲಿ 997 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಲಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಕರೋನಾ ಸೋಂಕಿಗೆ ಇಂದು ಮತ್ತೊಂದು ಬಲಿಯಾಗಿದ್ದು, ಒಟ್ಟು ಮರಣಗೊಂಡವರ ಸಂಖ್ಯೆ 49 ತಲುಪಿದೆ.
ಇಂದು ಪತ್ತೆಯಾಗಿರುವ ಪ್ರಕರಣಗಳಲ್ಲಿ 99 ಮಂದಿ ಅಂತರಾಜ್ಯ ಪ್ರಯಾಣಿಕರು ಎಂದು ಕರ್ನಾಟಕ ಆರೋಗ್ಯ ಇಲಾಖೆ ತಿಳಿಸಿದೆ.