ಕರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಹೇರಿದೆ. ಸದ್ಯ ಕೊಂಚ ಸಡಿಲಿಕೆಯನ್ನೂ ನೀಡಲಾಗಿದೆ. ಆದರೆ ಈ ಅವಧಿಯಲ್ಲಿ ದೇಶವಾಸಿಗಳು ಆದಾಯವಿಲ್ಲದೆ ಹೈರಾಣಾಗಿ ಹೋಗಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಉಚಿತವಾಗಿ ದೇಶವಾಸಿಗಳಿಗೆ ಹಣ ನೀಡುತ್ತಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೋದಿ ಸರ್ಕಾರ 5000 ರೂ. ಗಳನ್ನ ದೇಶದ ಪ್ರತಿಯೋರ್ವ ನಾಗರೀಕನಿಗೆ ನೀಡಲಿದೆ ಎಂಬ ಸುದ್ದಿ ವೈರಲ್ ಆಗಿದೆ. ಅಷ್ಟಕ್ಕೂ ಏನಿದರ ಅಸಲಿಯತ್ತು.?
ಟ್ವಿಟರ್, ಫೇಸ್‌ಬುಕ್ ಹಾಗೂ ವ್ಯಾಟ್ಸಪ್‌ಗಳಲ್ಲಿ ಹೀಗೊಂದು ಸುದ್ದಿ ಓಡಾಡುತ್ತಿದೆ. “ಮೋದಿ ಸರ್ಕಾರ ದೇಶದ ಪ್ರತಿ ಪ್ರಜೆಗೂ 5000 ರೂಪಾಯಿಯನ್ನು ಲಾಕ್ ಡೌನ್ ಪರಿಹಾರವಾಗಿ ನೀಡುತ್ತಿದೆ. ಕೆಳಗಿನ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಹಣವನ್ನು ನೀವು ಪಡೆದುಕೊಳ್ಳಬಹುದು. ವಿಶೇಷ ಸೂಚನೆ : ಒಬ್ಬರು ಒಮ್ಮೆ ಮಾತ್ರ ಹಣ ಪಡೆದುಕೊಳ್ಳಬಹುದು” ಎಂದು ಈ ಸಂದೇಶದಲ್ಲಿ ಬರೆಯಲಾಗಿದೆ.

ಆದರೆ ಈ ಸಂದೇಶದ ಸತ್ಯಾಸತ್ಯ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ಏಕೆಂದರೆ ಮೊದಲನೆಯದಾಗಿ ಇಲ್ಲಿ ಉಲ್ಲೇಖಿಸಿರುವ ವೆಬ್‌ಸೈಟ್ ಯಾವುದೇ ಸರ್ಕಾರಿ ಅಧೀನಕ್ಕೆ ಒಳಪಡುವಂಥದ್ದಲ್ಲ. ವೆಬ್‌ಸೈಟ್ ತೆರೆದಾಗ 1936 ಲಾಕ್‌ಡೌನ್ ಪ್ಯಾಕೇಜ್ ಮಾತ್ರ ಬಾಕಿ ಉಳಿದಿವೆ ಎಂದು ತೋರಿಸುತ್ತದೆ. ಆದರೆ ಈ ಸಂಖ್ಯೆ ಎಷ್ಟೇ ಸಮಯವಾದರೂ ಬದಲಾಗುವುದಿಲ್ಲ. ವೆಬ್‌ಸೈಟಿನಲ್ಲಿ ಎಲ್ಲಾ ರೀತಿಯ ಸಮೀಕ್ಷೆ ನಡೆಸಿದ ಬಳಿಕ ಇದನ್ನು ಕನಿಷ್ಠ 7 ವಾಟ್ಸಪ್ ಗ್ರೂಪಿನಲ್ಲಿ ಶೇರ್ ಮಾಡುವುದು ಕಡ್ಡಾಯ ಎಂಬ ಸೂಚನೆ ಬರುತ್ತದೆ. ಅಲ್ಲಿಗೆ ಇದು ಸರ್ಕಾರ ಅಧಿಕೃತ ವೆಬ್ ಸೈಟ್ ಅಲ್ಲ ಎಂಬುದು ಸ್ಪಷ್ಟವಾಗಿದೆ. ಒಂದು ವೇಳೆ ಸರ್ಕಾರದಿಂದ ಇಂಥಾ ಒಂದು ಸೌಲಭ್ಯ ಸಿಗುತ್ತದೆ ಎಂದಾದರೂ ಕೂಡ ಈ ರೀತಿಯಾಗಿ ಅದನ್ನ ಜನರಿಗೆ ತಲುಪಿಸಲು ಕೇಂದ್ರ ಸರ್ಕಾರ ಮುಂದಾಗುತ್ತದೆಯೇ.? ಖಂಡಿತ ಇಲ್ಲ. ಅಲ್ಲದೆ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇಂಥದ್ದೇ ಸಂದೇಶ ಕೀನ್ಯಾ ದೇಶದಲ್ಲೂ ವೈರಲ್ ಆಗಿತ್ತು ಎಂದು ತಿಳಿದುಬಂದಿದೆ.
