ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್ 19 ಸೋಂಕು ದಿನೇ ದಿನೇ ತನ್ನ ಕಬಂಧ ಬಾಹುವನ್ನು ಎಲ್ಲೆಡೆ ಚಾಚುತ್ತಿದೆ. ಮತ್ತೊಂದೆಡೆ ಸರ್ಕಾರ ಕಡು ಬಡವರಿಗೆ ಮತ್ತು ಮದ್ಯಮ ವರ್ಗದವರ ಬದುಕು ಹಸನಾಗಲು ತಾನು ನೀಡಿದ್ದ ಭರವಸೆಯನ್ನು ಇನ್ನೂ ಈಡೇರಿಸಿಲ್ಲ. ಮೊನ್ನೆ ಮೊನ್ನೆಯಷ್ಟೆ ಕೇಂದ್ರ ಸರ್ಕಾರ ಕರೋನಾವಿರುದ್ದ ಹೋರಾಡಲು 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ನ್ನೂ ಘೋಷಿಸಿದೆ. ಆದರೆ ಆ ಪ್ಯಾಕೇಜ್ ನಲ್ಲಿ ಈಗಾಗಲೇ ನೀಡಿರುವ ಸೌಲಭ್ಯಗಳು ಅಷ್ಟೇ ಅಲ್ಲ ತೆರಿಗೆ ಪಾವತಿದಾರರಿಗೆ ಪ್ರತೀ ವರ್ಷವೂ ರೀಫಂಡ್ ಮಾಡಬೇಕಾದ 18-20 ಸಾವಿರ ಕೋಟಿ ರೂಪಾಯಿಗಳನ್ನೂ ಸೇರಿಸಿಕೊಂಡಿರುವುದು ನಿಜಕ್ಕೂ ಈ ಪರಿಹಾರದ ಪ್ಯಾಕೇಜ್ ನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ.

ಇದೀಗ ಕೇಂದ್ರದ ಆಡಳಿತಾರೂಢ ಬಿಜೆಪಿಯು ತನ್ನ 6 ನೇ ವರ್ಷದ ಆಡಳಿತದ ಆಚರಣೆಯ ಸವಿ ನೆನಪಿಗಾಗಿ 9 ನಿಮಿಷಗಳ ವೀಡಿಯೋವೊಂದನ್ನು ಬಿಡುಗಡೆ ಮಾಡಿದೆ. ಈ ವೀಡಿಯೋದಲ್ಲಿ ಎಲ್ಲಿಯೂ ದೇಶ ಎದುರಿಸುತ್ತಿರುವ ಆರ್ಥಿಕ ಹಿಂಜರಿತದ ಬಗ್ಗೆ ಅಥವಾ ಕರೋನಾವೈರಸ್ ಸೋಂಕಿನಿಂದಾಗಿ ಆರೋಗ್ಯ ಕ್ಷೇತ್ರದ ಮೇಲೆ ಒತ್ತಡ ಇರುವ ಬಗ್ಗೆ ಉಲ್ಲೇಖವೇ ಇಲ್ಲ, ಬದಲಿಗೆ ಈ ವೀಡೀಯೋದಲ್ಲಿ ನುಣುಪಾಗಿರುವ ರಾಷ್ಟ್ರೀಯ ಹೆದ್ದಾರಿಗಳು, ಅದರ ಮೇಲೆ ಓಡಾಡುತ್ತಿರುವ ಹೊಳೆಯುವ ಕಾರುಗಳನ್ನು ತೋರಿಸಲಾಗಿದೆ. ಕೊರೊನ ಸೋಂಕಿನಿಂದಾಗಿ ರಸ್ತೆಗಳಲ್ಲೇ ನೂರಾರು ಕಿಲೋಮೀಟರ್ ನಡೆಯುತ್ತಿರುವ ವಲಸೆ ಕಾರ್ಮಿಕರು, ರಸ್ತೆಗಳಲ್ಲಿ ನಡೆಯುವಾಗಲೇ ಕುಸಿದು ಮೃತಪಟ್ಟ ನತದೃಷ್ಟರು ಮತ್ತು ರಸ್ತೆಗಳಲ್ಲ್ಲೆ ಪ್ರಸವಿಸಿದ ಮಹಿಳೆಯರ ಬಗ್ಗೆ ಏನೂ ತಿಳಿಸಲಾಗಿಲ್ಲ. ಬದಲಿಗೆ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆ ಕೌಶಲ್ಯಾಭಿವೃದ್ದಿ ಯೋಜನೆಯಲ್ಲಿ 70 ಲಕ್ಷ ಉದ್ಯೋಗ ಸೃಷ್ಟಿಯಾಗಿರುವ ಬಗ್ಗೆ , ಮುದ್ರಾ ಯೋಜನೆಯಲ್ಲಿ 24 ಕೋಟಿ ಫಲಾನುಭವಿಗಳ ಬಗ್ಗೆ ಸಾಧನೆಯೆಂಬಂತೆ ಬಿಂಬಿಸಿ ಹಾಡಿ ಹೊಗಳಲಾಗಿದೆ.
ಈ ವಿಡಿಯೋ ವನ್ನು ಮೋದಿ ಸರ್ಕಾರದ ಹೋಲಿಸಲಾಗದ 6 ವರ್ಷಗಳು ಎಂಬ ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಲಾಗಿದ್ದು ಇದನ್ನು ನೋಡಿದ ಯಾರೇ ಆದರೂ ಒಂದು ಕ್ಷಣ ನಮ್ಮ ದೇಶ 6 ವರ್ಷಗಳಲ್ಲಿ ಇಷ್ಟೊಂದು ಪ್ರಗತಿ ಸಾಧಿಸಿದೆಯೇ ಎಂದು ಮೂಗಿನ ಮೇಲೆ ಬೆರಳಿಟ್ಟಿಕೊಳ್ಳುವುದು ಖಚಿತ. ಈ ವೀಡಿಯೋದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಅವರ ಉಪ ಮಂತ್ರಿ ಅನುರಾಗ್ ಠಾಕೂರ್ ಅವರ ಜಂಟಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ 20 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಬಗ್ಗೆ ಉಲ್ಲೇಖವಿದ್ದು ಅದನ್ನು ಹಿಂದಿಯಲ್ಲೂ ಭಾಷಾಂತರ ಮಾಡಲಾಗಿದೆ. ಅಂದರೆ ಇದು ಹಿಂದಿ ಭಾಷಿಕರ ಮೇಲೆ ಪ್ರಭಾವ ಬೀರಲೆಂದೇ ಮಾಡಿರುವ ವೀಡಿಯೋ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಅದರಲ್ಲೂ ಮುಂದಿನ ಚುನಾವಣೆಯ ದೃಷ್ಟಿ ಇದೆ ಎನ್ನಲಾಗಿದೆ.
ಕೋವಿಡ್ 19 ಲಾಕ್ ಡೌನ್ ನಿಂದ ಇಂದು ವಲಸೆ ಕಾರ್ಮಿಕರ ಬದುಕೇ ಅತಂತ್ರವಾಗಿದೆ. ಇವರು ರೈಲಿನಲ್ಲಿ ತಮ್ಮ ತವರಿಗೆ ತೆರಳಲು ಟಿಕೇಟ್ ಹಣ ಪಾವತಿ ಮಾಡಿದ್ದಾರೆ. ಆದರೆ ವೀಡಿಯೋದಲ್ಲಿ ಶೇಕಡಾ 85 ರಷ್ಟು ಟಿಕೆಟ್ ಹಣ ಸರ್ಕಾರ ಭರಿಸಿದೆ ಎನ್ನಲಾಗಿದೆ. ರೈಲ್ವೇ ಸಚಿವ ಪೀಯುಷ್ ಗೋಯಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪಶ್ಚಿಮ ಬಂಗಾಳ, ಚತ್ತೀಸ್ ಘಡ, ರಾಜಾಸ್ಥಾನ ಮತ್ತು ಜಾರ್ಖಂಡ್ ರಾಜ್ಯಗಳು ವಲಸೆ ಕಾರ್ಮಿಕರು ತೆರಳುವ ರೈಲುಗಳಿಗೆ ತಮ್ಮ ರಾಜ್ಯದಲ್ಲಿ ಸಂಚರಿಸಲು ಅನುಮತಿ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಆದರೆ ಈ ರಾಜ್ಯಗಳು ಇದನ್ನು ಅಲ್ಲಗಳೆದಿದ್ದು ಇದಕ್ಕೆ ಪಿಯೂಷ್ ಗೋಯಲ್ ಪ್ರತಿಕ್ರಿಯಿಸಿಲ್ಲ.
ಕಳೆದ ವಾರ ಗೃಹ ಸಚಿವ ಅಮಿತ್ ಷಾ ಅವರು ಬಿಜೆಪಿ ಪಧಾದಿಕಾರಿಗಳಿಗೆ ಸೂಚನೆಯೊಂದನ್ನು ನೀಡಿ ವಲಸೆ ಕಾರ್ಮಿಕರು ಹಾದು ಹೋಗುವಾಗ ರಸ್ತೆ ಬದಿಯಲ್ಲಿ ಟೆಂಟುಗಳನ್ನು ಹಾಕಿಕೊಂಡು ಅವರಿಗೆ ಉಚಿತ ಊಟ, ಸೋಪು, ನೀರು , ಚಪ್ಪಲಿ ವಿತರಿಸಲು ಹೇಳಿದ್ದರು. ಆದರೆ ವಿತರಣೆ ಆಗಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ ಇದೆಲ್ಲವನ್ನೂ ವಿಡಿಯೋದಲ್ಲಿ ಪ್ರಚಾರಿಸಲಾಗಿದೆ.
ಇಂದು ದೇಶದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದೆ , ಕಾರ್ಮಿಕ ಕಾಯ್ದೆಗಳಿಗೂ ತಿದ್ದುಪಡಿ ತರಲಾಗಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯ ನಾಥ್ ಅವರ ಸರ್ಕಾರ ಕಾರ್ಮಿಕರ ಕೆಲಸದ ಅವಧಿಯನ್ನು ಏಕಾಏಕಿ 8 ಘಂಟೆಗಳಿಂದ 12 ಘಂಟೆಗಳಿಗೆ ಏರಿಸಿದೆ.

ರಾಜಕೀಯ ತಜ್ಞರೆಂದು ಹೆಸರು ಪಡೆದಿರುವ ಮೋದಿ ಮತ್ತು ಅಮಿತ್ ಷಾ ಜೋಡಿ ತಾವು ಈ ಹಿಂದೆ ಜಾರಿಗೆ ತಂದ ಅವೈಜ್ಞಾನಿಕ ನೋಟು ನಿಷೇಧ ಆದೇಶ, ಪೂರ್ವ ಸಿದ್ದತೆಯಿಲ್ಲದೆ ಜಾರಿ ಮಾಡಿದ ಜಿಎಸ್ಟಿ ಇದರಿಂದಾಗಿ ದೇಶದ ಆರ್ಥಿಕತೆಗೆ ಆಗಿರುವ ಹೊಡೆತವನ್ನು ಈಗಲೂ ಒಪ್ಪಿಕೊಂಡಿಲ್ಲ, ಬದಲಿಗೆ ದೀರ್ಘಕಾಲಾವಧಿಯಲ್ಲಿ ಇದರಿಂದ ಭಾರೀ ಅನುಕೂಲ ಆಗಲಿದೆ ಎಂದು ಹೇಳಿಕೊಳ್ಳುತಿದೆ. ಈಗ ಬಿಡುಗಡೆ ಮಾಡಲಾದ ವೀಡಿಯೋದಲ್ಲಿ ಪ್ರಧಾನಿ ನರೇಂಧ್ರ ಮೋದಿ ಅವರು ಜನರ ಸೌಭಾಗ್ಯದಿಂದ ಯಾವುದೇ ತಪ್ಪನ್ನೂ ಮಾಡಿಲ್ಲ. ಕರೋನಾವೈರಸ್ ತನ್ನ ಕಬಂಧ ಬಾಹುಗಳನ್ನು ಇನ್ನೂ ದೂರಕ್ಕೆ ಚಾಚುತಿದ್ದು ಇದರಿಂದಾಗಿ ವಲಸೆ ಕಾರ್ಮಿಕರು ಮತ್ತು ಬಡವರು ಮೃತರಾದರೆ ಸರ್ಕಾರ ಕರೋನಾದೆಡೆಗೆ ಕೈ ತೋರಿಸಿ ಸಾವುಗಳಿಗೆ ತಾನು ಕಾರಣವಲ್ಲ ಎಂದು ನುಣುಚಿಕೊಳ್ಳುತ್ತದೆ. ಸೂಕ್ತ ನಿರ್ವಹಣೆ ಇಲ್ಲದೆ ಹೆಚ್ಚು ಸಾವು ಸಂಭವಿಸಿದೆ ಎನ್ನಲು ಯಾರ ಬಳಿಯೂ ಸಾಕ್ಷ್ಯ ಇಲ್ಲ.
ದೇಶವು ಇಂದು ಎದುರಿಸುತ್ತಿರುವ ಬೃಹತ್ ಸಮಸ್ಯೆಗಳಿಗೆ ಮೋದಿ ಮತ್ತು ಷಾ ಪರಿಹಾರ ಕಂಡುಹಿಡಿದಿಲ್ಲ. ಆದರೆ ಈ ವಿಡಿಯೋ ಸಾಮಾನ್ಯ ಜನತೆಯಲ್ಲಿ ಭ್ರಮೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ ಅಷ್ಟೆ.