ಕರೋನಾ ಸೋಂಕಿನಿಂದ ಅತಿ ಹೆಚ್ಚು ಸಾವುಗಳು ಸಂಭವಿಸಿರುವುದು ಜಗತ್ತಿನ ಅತಿ ಶ್ರೀಮಂತ ಮತ್ತು ಪ್ರಭಾವಿ ದೇಶ ಅಮೆರಿಕದಲ್ಲಿ. ಈವರೆಗೆ ಆ ದೇಶದಲ್ಲಿ ಸತ್ತವರ ಸಂಖ್ಯೆಯೇ ಒಂದು ಲಕ್ಷ ಸಮೀಪಿಸಿದೆ(90 ಸಾವಿರ ಮೃತರು!). ಸೋಂಕಿತರ ಸಂಖ್ಯೆ 14.5 ಲಕ್ಷ! ಎರಡು ತಿಂಗಳ ಹಿಂದೆ(ಮಾ.14) ಕೇವಲ 58 ಮಂದಿ ಸಾವು ಕಂಡಿದ್ದರೆ, ಈಗ ಕೇವಲ 60 ದಿನದಲ್ಲಿ ಆ ಪ್ರಮಾಣ ಸಾವಿರಾರು ಪಟ್ಟು ಸ್ಫೋಟಕ ಪ್ರಮಾಣದಲ್ಲಿ ಬೆಳೆದಿದೆ.
ತಾಂತ್ರಿಕತೆ, ವೈದ್ಯಕೀಯ ಸೌಲಭ್ಯ, ಹಣಕಾಸು, ಆಡಳಿತ, ಸಂಪರ್ಕ ಸೇರಿದಂತೆ ಎಲ್ಲಾ ವಿಷಯದಲ್ಲಿ ವಿಶ್ವದ ಇತರೆ ದೇಶಗಳಿಗಿಂತ ಗಾವುದ ಗಾವುದ ಮುಂದಿರುವ ಮತ್ತು ಶಿಕ್ಷಣ ಮತ್ತು ಆರೋಗ್ಯದ ಅರಿವಿನ ವಿಷಯದಲ್ಲಿ ಕೂಡ ಸಾಧನೆ ಮಾಡಿರುವ ಅಮೆರಿಕದಂತಹ ದೇಶದಲ್ಲಿ ಸೋಂಕು ಈ ಪ್ರಮಾಣದಲ್ಲಿ ಇನ್ಯಾವ ದೇಶದಲ್ಲಿ ಕಂಡಿರದಷ್ಟು ಶೀಘ್ರಗತಿಯಲ್ಲಿ ಏರಿಕೆ ಕಾಣಲು ಕಾರಣವೇನು? ಎಂಬ ಪ್ರಶ್ನೆ ಮೂಡುವುದು ಸಹಜ.

ಆ ನಿಟ್ಟಿನಲ್ಲಿ ಅಮೆರಿಕ ಮಾಧ್ಯಮಗಳು ವಾಸ್ತವವೇನು? ಯಾಕೆ ಇಷ್ಟೊಂದು ವ್ಯಾಪಕ ಪ್ರಮಾಣದಲ್ಲಿ ಮತ್ತು ಅತಿ ಕಡಿಮೆ ಅವಧಿಯಲ್ಲಿ ರೋಗ ಇಡೀ ದೇಶವನ್ನೇ ವ್ಯಾಪಿಸಿದೆ ಎಂದು ಕಂಡುಕೊಳ್ಳುವ ಪ್ರಯತ್ನ ಮಾಡಿವೆ. ಅಂತಹ ಒಂದು ಪ್ರಯತ್ನ ದಿ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾಗಿರುವ ‘One Third of All US Coronavirus Deaths Are Nursing Home Residents or Workers’ ಎಂಬ ವರದಿ. ಅದರ ಪ್ರಕಾರ ಈವರೆಗೆ ಅಮೆರಿಕದಲ್ಲಿ ಆಗಿರುವ ಕರೋನಾ ವೈರಾಣು ಸೋಂಕು ಸಾವುಗಳ ಪೈಕಿ ಮೂರನೇ ಒಂದು ಭಾಗದಷ್ಟು ಸಾವುಗಳು ಅಲ್ಲಿನ ಹಿರಿಯ ನಾಗರಿಕರ ಆರೈಕೆ ಮತ್ತು ಶುಶ್ರೂಷೆಯ ವೃದ್ಧಾಶ್ರಮ ಅಥವಾ ನರ್ಸಿಂಗ್ ಹೋಂಗಳಲ್ಲೇ ಆಗಿವೆ. ಅದರಲ್ಲೂ ಅನಾಥ ವೃದ್ಧರು ಮತ್ತು ಅವರ ಆರೈಕೆ ಮಾಡುವ ಸಿಬ್ಬಂದಿಯೇ ಹೆಚ್ಚಾಗಿ ಈ ಸೋಂಕಿಗೆ ಬಲಿಯಾಗಿದ್ದಾರೆ ಎಂದು ವರದಿ ಅಂಕಿಅಂಶ ಸಹಿತ ಮಾಹಿತಿ ನೀಡಿದೆ.
ದೇಶದ ಸುಮಾರು 7700 ಇಂತಹ ವಸತಿ ವ್ಯವಸ್ಥೆಗಳ ಸುಮಾರು 1.53 ಲಕ್ಷ ಜನರಿಗೆ ಸೋಂಕು ತಗುಲಿದ್ದು, ಸುಮಾರು 30 ಸಾವಿರ ಮಂದಿ ಕರೋನಾಕ್ಕೆ ಬಲಿಯಾಗಿದ್ದಾರೆ. ಪ್ರಮುಖವಾಗಿ ಇಕ್ಕಟ್ಟಿನ ಪ್ರದೇಶಗಳಲ್ಲಿ ವಿವಿಧ ದೈಹಿಕ ಖಾಯಿಲೆಗಳು ಮತ್ತು ಸಮಸ್ಯೆಗಳಿಂದ ಬಳಲುತ್ತಿರುವ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟಿಗೇ ಇರುವುದು ಮತ್ತು ಅವರ ಆರೈಕೆ ಮಾಡುವ ಸಿಬ್ಬಂದಿ ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಗೆ ನಿರಂತರ ಓಡಾಡುತ್ತಿರುವುದು ರೋಗ ವ್ಯಾಪಕವಾಗಿ ಹರಡಲು ಮತ್ತು ಅತಿ ಹೆಚ್ಚು ಸಾವುಗಳು ಸಂಭವಿಸಲು ಕಾರಣ ಎನ್ನಲಾಗಿದೆ.
ದೇಶದ ಒಟ್ಟಾರೆ ಸೋಂಕಿಗೆ ಹೋಲಿಸಿದರೆ, ಇಂತಹ ವೃದ್ಧಾಶ್ರಮ ಮತ್ತು ಆರೈಕೆ ತಾಣಗಳಲ್ಲಿ ಸಂಭವಿಸಿರುವ ಸೋಂಕಿನ ಪ್ರಮಾಣ ಕೇವಲ ಶೇ.11ರಷ್ಟು. ಆದರೆ, ಸಾವಿನ ಪ್ರಮಾಣಕ್ಕೆ ಹೋಲಿಸಿದರೆ, ಆಘಾತಕಾರಿ ಏರಿಕೆ ಕಂಡುಬಂದಿದೆ. ದೇಶದ ಒಟ್ಟು ಸೋಂಕಿನ ಪ್ರಮಾಣದಲ್ಲಿ ಕೇವಲ ಶೇ.11ರಷ್ಟು ಸೋಂಕಿತರನ್ನು ಹೊಂದಿರುವ ಈ ದೀರ್ಘಾವಧಿ ಆರೈಕೆ ಕೇಂದ್ರಗಳಲ್ಲಿ ಸೋಂಕಿನಿಂದ ಮೃತಪಟ್ಟವರ ಪ್ರಮಾಣ ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಒಟ್ಟು ಪ್ರಮಾಣದಲ್ಲಿ ಮೂರನೇ ಒಂದು ಭಾಗಕ್ಕಿಂತ ಅಧಿಕ! ಅಂದರೆ ಸುಮಾರು ದೇಶದ ಒಟ್ಟು ಕರೋನಾ ಸಾವಿನ ಪೈಕಿ ಶೇ.35ಕ್ಕಿಂತ ಹೆಚ್ಚು ಸಾವುಗಳು ವೃದ್ಧಾಶ್ರಮ, ವೃದ್ಧರ ಆರೈಕೆ ಕೇಂದ್ರಗಳಲ್ಲಿ ಸಂಭವಿಸಿವೆ.

ವೃದ್ಧರ ಆರೈಕೆ ಕೇಂದ್ರಗಳು(ನರ್ಸಿಂಗ್ ಹೋಂ), ಅಸಿಸ್ಟೆಂಟ್ ಲಿವಿಂಗ್ ಫೆಸಿಲಿಟೀಸ್, ಮೆಮೊರಿ ಕೇರ್ ಫೆಸಿಲಿಟೀಸ್, ರಿಟೈರ್ ಮೆಂಟ್ ಮತ್ತು ಸೀನಿಯರ್ ಕಮ್ಯುನೀಟಿಸ್ ಸೆಂಟರುಗಳು ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ ಇಂತಹ ಸೋಂಕು ಮತ್ತು ಸಾವಿನ ಪ್ರಮಾಣ ಕಂಡುಬಂದಿದೆ ಎಂದು ವರದಿ ಹೇಳಿದೆ.
ಅಮೆರಿಕದ ಕೆಲವು ರಾಜ್ಯಗಳಲ್ಲಿ ಕರೋನಾ ಸೋಂಕು ಮತ್ತು ಸಾವಿನ ವಿಷಯದಲ್ಲಿ ನಿಖರವಾದ ವಿವರ ಮಾಹಿತಿ ನೀಡುವ ವ್ಯವಸ್ಥೆಯೇ ಇಲ್ಲ. ಕೆಲವು ಕಡೆ ಒಟ್ಟಾರೆ ಸೋಂಕಿತರು ಮತ್ತು ಸಾವಿನ ಅಂಕಿಅಂಶ ಮಾತ್ರ ನೀಡಲಾಗುತ್ತಿದೆ, ಮತ್ತೆ ಕೆಲವು ರಾಜ್ಯಗಳಲ್ಲಿ ಕೇವಲ ಸೋಂಕಿತರ ಮಾಹಿತಿ ಮಾತ್ರ ನೀಡಲಾಗುತ್ತಿದ್ದು, ಸಾವಿನ ಪ್ರಮಾಣವನ್ನು ನಿತ್ಯ ನಿಖರವಾಗಿ ನೀಡಲಾಗುತ್ತಿಲ್ಲ. ಜೊತೆಗೆ ಇಂತಹ ವೃದ್ಧಾಶ್ರಮ ಮತ್ತಿತರ ಹಿರಿಯ ನಾಗರಿಕರ ಆರೈಕೆ ಕೇಂದ್ರಗಳು ಸೇರಿದಂತೆ ಯಾವ ಯಾವ ವಲಯ, ವಿಭಾಗ, ಕೇಂದ್ರಗಳಲ್ಲಿ ಪರಿಸ್ಥಿತಿ ಏನು ಎಂಬ ವಿವರ ಮಾಹಿತಿ ನೀಡುತ್ತಿಲ್ಲ.
ಆದಾಗ್ಯೂ ಲಭ್ಯ ಮಾಹಿತಿಯ ಆಧಾರದಲ್ಲೇ ಅಂತಹ ಕೇಂದ್ರಗಳಲ್ಲಿ ಸಾವಿನ ಪ್ರಮಾಣ ಆಘಾತಕಾರಿ ಪ್ರಮಾಣದಲ್ಲಿ ಏರಿಕೆಯಾಗಿರುವುದು ಕಂಡುಬಂದಿದೆ. ಅಮೆರಿಕದ ಒಟ್ಟು 50 ರಾಜ್ಯಗಳ ಪೈಕಿ ಸುಮಾರು 14 ರಾಜ್ಯಗಳಲ್ಲಿ ಇಂತಹ ಕೇಂದ್ರಗಳಲ್ಲಿ ಸಂಭವಿಸಿರುವ ಸಾವಿನ ಪ್ರಮಾಣ ಆ ರಾಜ್ಯಗಳ ಒಟ್ಟು ಕರೋನಾ ಸಾವಿನ ಶೇ.50ಕ್ಕಿಂತ ಅಧಿಕ ಎಂದೂ ಹೇಳಲಾಗಿದೆ.
ಅಂದರೆ ವಿಶ್ವದ ದೊಡ್ಡಣ್ಣನ ನೆಲದಲ್ಲಿ ವೃದ್ಧರು ಮತ್ತು ಅನಾಥ ಹಿರಿಯ ನಾಗರಿಕರ ಆರೈಕೆ ಮತ್ತು ಕಾಳಜಿಯ ವಿಷಯದಲ್ಲಿ ಅಲ್ಲಿನ ಸರ್ಕಾರಗಳು ಮತ್ತು ವ್ಯವಸ್ಥೆ ಎಷ್ಟರಮಟ್ಟಿಗೆ ಗಂಭೀರವಾಗಿದೆ ಮತ್ತು ಸೋಂಕು ತಡೆಯ ನಿಟ್ಟಿನಲ್ಲಿ ಅಲ್ಲಿನ ಡೊನಾಲ್ಡ್ ಟ್ರಂಪ್ ಸರ್ಕಾರ ಎಷ್ಟು ಗಂಭೀರವಾಗಿದೆ ಎಂಬುದಕ್ಕೆ ಈ ವರದಿ ಬೆಳಕು ಚೆಲ್ಲಿದೆ. ಸದಾ ದೇಶದಲ್ಲಿ ಎಲ್ಲವೂ ಸರಿ ಇದೆ. ಏನೂ ಆಗೇ ಇಲ್ಲ ಎಂಬಂತೆ ಚಿತ್ರಣ ನೀಡುವ, ಕರೋನಾ ಸೋಂಕೇ ಒಂದು ವದಂತಿ ಎಂಬಂತಹ ಹೇಳಿಕೆಗಳನ್ನು ಕೊಟ್ಟಿದ್ದ ಟ್ರಂಪ್ ನಿಷ್ಕಾಳಜಿ ಮತ್ತು ಹುಂಬತನಕ್ಕೆ ಆ ದೇಶದ ನತದೃಷ್ಟ ಹಿರಿಯ ಜೀವಗಳು ಬಲಿಯಾಗಿವೆ ಮತ್ತು ಬಲಿಯಾಗುತ್ತಿವೆ ಎಂಬುದನ್ನೂ ಈ ವರದಿ ಬೆತ್ತಲುಮಾಡಿದೆ!