ʼಟೈಮ್ಸ್ ನೌʼ ನಡೆಸಿದ ಸರ್ವೇಯಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಿದೆ. ಹಿಂದಿಗಿಂತಲೂ ಕೋವಿಡ್ 19 ನಿರ್ವಹಣೆಯಲ್ಲಿ ಮೋದಿ ಯಶಸ್ವಿಯಾಗಿದ್ದಾರೆ ಅನ್ನೋದು ಸರ್ವೇಯ ಫಲಿತಾಂಶದ ಒಟ್ಟು ವೃತ್ತಾಂತ. ಆದರೆ ಸರ್ವೇ ನಡೆಸಿದ ಸಂಸ್ಥೆಗೆ ಈ ಕೆಲವು ದೃಶ್ಯಗಳನ್ನು ತೋರಿಸಲೇ ಬೇಕು. ಕರೋನಾ ವೈರಸ್ ನಿಂದ ಜಾರಿಗೆ ಬಂದ ಲಾಕ್ ಡೌನ್ ದೇಶದ ಅಸಲಿ ಸ್ಥಿತಿಯನ್ನ ಜಗತ್ತಿನ ಮುಂದೆ ತೆರೆದಿಟ್ಟಿದೆ. ಕಿಲೋಮೀಟರ್ ಗಟ್ಟಲೆ ದೂರ ಕಾಲ್ನಡಿಗೆಯಲ್ಲೇ ಸಾಗುವುದನ್ನು ನಿಮಗೆ ಊಹಿಸಲಾದೀತೇ..? ಸಾಧ್ಯವಾದರೆ ಊಹಿಸಿಕೊಳ್ಳಿ. ಆದರೆ ಇದು ಊಹೆಯಲ್ಲ. ವಾಸ್ತವ. ಗೂಡು ಸೇರುವ ತವಕ. ಸಾವಿಗೆದರಿ ತವರು ಸೇರುತ್ತೀವೋ ಇಲ್ಲವೋ ಎಂಬ ನಡುಕ. ಅದೊಂದು ಯಾತನಾಮಯ ಜೀವನ. ಅದೆಂಥಾ ಕಲ್ಲು ಹೃದಯವೂ ಕರಗುವಂತಾ ದೃಶ್ಯಗಳವು.
ಸರ್ವೇ ಹೇಳುವ ಪ್ರಕಾರ ಏಪ್ರಿಲ್ (2019) ಅಂದ್ರೆ ಸಾರ್ವತ್ರಿಕ ಚುನಾವಣೆಯ ಹೊತ್ತಲಿ ಪ್ರಧಾನಿ ಮೋದಿಗೆ ಶೇ.71ರಷ್ಟು ಜನಪ್ರಿಯತೆ ಇತ್ತು. ಆದರೆ ಕರೋನಾ ವೈರಸ್ನಿಂದಾದ ಅವಾಂತರವನ್ನು ನಿಭಾಯಿಸುವಲ್ಲಿ ಮೋದಿ ತೋರಿದ ಚಾಕಚಕ್ಯತೆ ಮೋದಿಯ ಜನಪ್ರಿಯತೆಯನ್ನು ಹೆಚ್ಚಿಸಿದೆ. ಹೀಗಾಗಿ ಮೋದಿ ಪಾಪ್ಯುಲಾರಟಿ ಶೇ. 79ಕ್ಕೆ ಏರಿದೆ ಎಂಬುದು ಸರ್ವೇಯ ಒಟ್ಟು ಸಾರಾಂಶ. ಆದರೆ ಪ್ರಭುತ್ವದ ಕಣ್ಣಿಗೆ ಕರುಡಿನಂತೆ ಬಿದ್ದ ಈ ದೃಶ್ಯಗಳು ಮೋದಿಯ ಈ ಜನಪ್ರಿಯತೆಯನ್ನು ಅಣಕಿಸುತ್ತಿದೆ ನೋಡಿ.

ಒಂದು ಕಡೆ ನೆತ್ತಿ ಸೀಳುವ ಬಿಸಿಲು. ಕಾದ ಕಾವಲಿಯಂತಿರುವ ರಸ್ತೆ. ಕನಿಷ್ಠ ಪಕ್ಷ ಕಾಲಿಗೆ ಹೊದಿಕೆಯಾದರೂ ಇರಬೇಕಿತ್ತು.? ಆದರೆ ಕೆಲವರ ಬಳಿ ಅದೂ ಇಲ್ಲ. ಇಷ್ಟೂ ಅಲ್ಲದೆ ಹೆಗಲಿಗೆ ಗಂಟೂಮೂಟೆ. ಬೆನ್ನಿಗಂಟಿದ ಹೊಟ್ಟೆ. ಸೋತ ಕೈ ಕಾಲುಗಳು. ನಡೆಯಲಾದೀತೇ..? ಆದರೂ ಮೋದಿಯ ಜನಪ್ರಿಯತೆ ಹೆಚ್ಚಿದೆ. ಒಂದಿಬ್ಬರಲ್ಲ, ಮೂನ್ನೂರು ನಾಲ್ಕುನೂರು ಕಿ.ಮೀ ದೂರ ನಡೆದು ಊರು ಸೇರಿದವರ ಸಂಖ್ಯೆ ಸಾವಿರಾರಿದೆ. ಅರ್ಧ ದಾರಿಯಲ್ಲಿ ಪ್ರಾಣ ಬಿಟ್ಟವರೂ ಇದ್ದಾರೆ.
ವಲಸೆ ಕಾರ್ಮಿಕರನ್ನು ಊರು ಸೇರಿಸಲು ಸರ್ಕಾರ ಮುಂದೆ ಬಂದಿಲ್ಲ. ಕಾಳಜಿ ರಹಿತ ಸರ್ಕಾರ ಇದು ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಜನರಿಂದ ಆಯ್ಕೆಯಾಗಿ ಜನರಿಗಾಗಿ ಎಂಬ ಮಾತು ಪೊಳ್ಳಾಗಿದೆ. ಕರೋನಾ, ಸರ್ಕಾರದ ನಿಜ ತಾಕತ್ತನ್ನು ಮತ್ತು ನಿಜ ಅಜೆಂಡಾವನ್ನು ಜನರ ಮುಂದೆ ಬಟಾಬಯಲು ಮಾಡಿದೆ. ಇದೊಂದು ಬಿದಿರು ಸರ್ಕಾರ ಎಂಬುವುದರಲ್ಲಿ ಅನುಮಾನವೇ ಇಲ್ಲ.
ಗತಿಯಿಲ್ಲದೆ ಮುದ್ದು ಕಂದಮ್ಮಗಳು ಇಟ್ಟ ಹೆಜ್ಜೆ ಈ ನೆಲದ ಪ್ರಭುತ್ವವನ್ನು ಪ್ರಶ್ನಿಸುವಂತಿದೆ. ಹಸಿವಿನಿಂದ ನೆಲ ತಾಕಿದ ಕಣ್ಣೀರು ಈ ನೆಲದ ವ್ಯವಸ್ಥೆಯನ್ನು ಅಣುಕಿಸುವಂತಿದೆ. ಯಾವ ರಾಜಕೀಯದ ಹಂಗೂ ಇಲ್ಲದ, ಯಾವುದರ ನಿರೀಕ್ಷೆಯೂ ಇಲ್ಲದ ಈ ಮಕ್ಕಳು ದೇಶದ ಸ್ಥಂಭಗಳು. ಮೊಳಕೆಯಲ್ಲೇ ಹೊರಲಾರದ ಭಾರ ಆ ಮಕ್ಕಳ ಮೇಲೆ ಬಿದ್ದಿದೆ. ಇವೆಲ್ಲದಕ್ಕೂ ಯಾರು ಹೊಣೆ..? ಕಂಫರ್ಟ್ ಝೋನ್ ಗಳಲ್ಲಿ ಕೂತು ತಕರಾರು ಎತ್ತುವ ಅಥವಾ ಒಂದು ಕ್ಷಣ ಮರುಗಿ ಸ್ಯಾಡ್ ಇಮೋಜಿ ಹಾಕಿ ಸ್ಕ್ರಾಲ್ ಡೌನ್ ಮಾಡಿ ಮತ್ತೊಂದು ಪೋಸ್ಟಿಗೆ ನಗುವ ಇಮೋಜಿ ಹಾಕಿ ದಿನ ದೂಡುವ ನಮ್ಮ ಆತ್ಮಸಾಕ್ಷಿ ಇದಕ್ಕೆ ಉತ್ತರಿಸಬೇಕು. ಅದರೆ ಒಂದು, ಈ ಎಲ್ಲಾ ದೃಶ್ಯಗಳು ವೈರಲ್ ಆಗಿದೆ. ಆದರೆ ಮೋದಿಯಷ್ಟು ಜನಪ್ರಿಯತೆ ಇವರಿಗೆ ಸಿಕ್ಕಿಲ್ಲ.
ದೇಶ ಕಾಯಬೇಕಿರೋದು ಕಳ್ಳಕಾಕರನ್ನಲ್ಲ. ಬದಲಿಗೆ ಹೀಗೆ ಸೊಂಟ ಬಗ್ಗಿಸಿ ದೇಶಕ್ಕಾಗಿ ದುಡಿಯುವ ಕಾರ್ಮಿಕರನ್ನ ಅನ್ನೋದು ಸರ್ಕಾರಗಳು ಮರೆತಿದೆ. ಮೂರು ಸಾವಿರ ಕೋಟಿ ರೂ. ಖರ್ಚು ಮಾಡಿ ಪ್ರತಿಮೆಗಳನ್ನು ಕಟ್ಟುವ ಸರ್ಕಾರ ನಮ್ಮದು. ಯೋಜನೆಗಳಿಗಿಂತ ಹೆಚ್ಚಿನ ಕಾಸು ಜಾಹೀರಾತುಗಳಿಗೆ ಚೆಲ್ಲುವ ಸರ್ಕಾರ ನಮ್ಮದು. ಮಾನ್ಯ ಪ್ರಧಾನಿಗಳ ವಿದೇಶ ಯಾತ್ರೆಗೆ ಬಜೆಟ್ ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಸರ್ಕಾರ ನಮ್ಮದು. ಇಂಥಾ ಸರ್ಕಾರಕ್ಕೆ ಮೊನ್ನೆ ಮೊನ್ನೆ ರೈಲು ಹಳಿ ಪಾಲಾದ 16 ಜೀವಗಳ ಚಿಂತೆಯೇ ಇಲ್ಲ. ನಡೆದು ಕಾಲಿನ ಪಾದ ಸವೆಸಿದ ವಲಸೆ ಕಾರ್ಮಿಕರ ಬಗ್ಗೆ ಪರಿವೆಯೇ ಇಲ್ಲ.

ಹಾಗಿದ್ದರೆ ಮೋದಿಯ ಸಾಧನೆ ಏನು..? ಚಪ್ಪಾಳೆ, ತಟ್ಟೆ, ಜಾಗಟೆ ಬಾರಿಸೋಕೆ ಕರೆಕೊಟ್ಟಿದ್ದು. ದೀಪ ಹಚ್ಚಿ ಕರೋನಾಗೆ ಬೆದರಿಕೆ ಹಾಕಿಸಿದ್ದು. ವೈದ್ಯಕೀಯ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಪೂರೈಕೆ ಮಾಡದಿದ್ದರೂ ಅಡ್ಡಿಯಿಲ್ಲ, ಚಾಪರ್ಗಳಲ್ಲಿ ಹೂವು ತುಂಬಿ ವೈದ್ಯರ ಮೇಲೆ ಸುರಿದಿದ್ದು. ಇವೆಲ್ಲವೂ ಒಂದು ಸಾಧನೆಯೇ.? ಜನಪ್ರಿಯತೆಗೆ ಇವಿಷ್ಟು ಸಾಕು ಅಲ್ಲವೇ..? ಆದರೆ ದುಡಿಯವ ವರ್ಗ ಈ ಸರ್ವೇಯಲ್ಲಿ ಪಾಲ್ಗೊಂಡಿದ್ದರೆ..? ಆದರೂ ಕರೋನಾ ಬಂದ ಬಳಿಕ ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಿದೆ ನೋಡಿ.
ಇದು ʼಟೈಮ್ಸ್ ನೌʼ ಎಂಬ ಸುದ್ದಿ ಸಂಸ್ಥೆ ನಡೆಸಿದ ಸರ್ವೇ ಆಚೆಗಿನ ವಾಸ್ತವಿಕ ಚಿತ್ರಣಗಳು. ಕೊಂಚವೂ ಜನರ ಹೆದರಿಕೆ ಇಲ್ಲದ, ಪ್ರಭುತ್ವವನ್ನು ಉಳಿಸುವ ಕನಿಷ್ಠ ಪ್ರಜ್ಞೆಯೂ ಇಲ್ಲದ, ತಾತ್ವಿಕ ಪ್ರಜ್ಞೆಯೂ ಇಲ್ಲದ ಜನರು ದೇಶ ಆಳಿದರೆ ಇದಕ್ಕಿಂತ ಹೆಚ್ಚಿನದ್ದೇನನ್ನೂ ನಿರೀಕ್ಷಿಸಲಾರದು. ಇದಕ್ಕೆ ಪೂರಕವಾಗಿ ಸರ್ವೇ ಹೆಸರಿನಲ್ಲಿ ವ್ಯಕ್ತಿ ಪೂಜೆಗಳಿಯುವ, ಪ್ರಭುತ್ವದ ನಾಲ್ಕನೇ ಅಂಗ, ಪ್ರಭುತ್ವದ ಕಾವಲು ನಾಯಿ ಪತ್ರಿಕೋದ್ಯಮ ನಡೆದುಕೊಳ್ಳುತ್ತಿರುವ ರೀತಿ ಖಂಡನೀಯ. ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕರೋನಾ ವೈರಸ್ ದಿನದಿಂದ ದಿನಕ್ಕೆ ತನ್ನ ವೇಗ ಹೆಚ್ಚಿಸಿಕೊಳ್ಳುತ್ತಿರುವಾಗ ನಮ್ಮ ಪ್ರಧಾನಿಗಳ ಜನಪ್ರಿಯತೆ ಬಗ್ಗೆ ಚರ್ಚಿಸುತ್ತಿರುವುದು ಹೊಣೆಗೇಡಿ ಮಾಧ್ಯಮ ಮಾಡಬಹುದಾದ ಅತ್ಯಂತ ಹೀನ ಕೆಲಸ.