ನರೇಂದ್ರಮೋದಿ ಸರ್ಕಾರ ಮಧ್ಯರಾತ್ರಿ ದೇಶದ ಜನರಿಗೆ ಶಾಕ್ ನೀಡಿದೆ. ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಭಾರಿ ಸುಂಕ ಹೇರಿದೆ. ಭಾರತದ ಇತಿಹಾಸದಲ್ಲಿ ಈ ಪ್ರಮಾಣದಲ್ಲಿ ಹಿಂದೆಂದೂ ಈ ಬೃಹತ್ ಪ್ರಮಾಣದಲ್ಲಿ ಸುಂಕ ಹೇರಿದ ಉದಾಹರಣೆಗಳಿಲ್ಲ. ಕೇಂದ್ರ ಹಣಕಾಸು ಸಚಿವಾಲಯ ತಡರಾತ್ರಿ ಹೊರಡಿಸಿರುವ ಪ್ರಕಟಣೆ ಪ್ರಕಾರ ಪೆಟ್ರೋಲ್ ಮೇಲೆ 10 ರುಪಾಯಿ ಮತ್ತು ಡಿಸೇಲ್ ಮೇಲೆ 13 ರುಪಾಯಿ ಹೆಚ್ಚುವರಿ ಸುಂಕ ಹೇರಲಾಗಿದೆ.
ಏಕೆಂದರೆ ಬುಧವಾರದಿಂದಲೇ ಜಾರಿಯಾಗಿರುವ ಹೆಚ್ಚುವರಿ ಸುಂಕವು ತಕ್ಷಣಕ್ಕೆ ಪ್ರಯಾಣಿಕರಿಗೆ ಹೊರೆ ಆಗುವುದಿಲ್ಲ. ಗ್ರಾಹಕರು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಪ್ರತಿ ಲೀಟರ್ ಗೆ ಈಗ ಸದ್ಯಕ್ಕೆ ಎಷ್ಟು ಪಾವತಿಸುತ್ತಿದ್ದಾರೋ ಅಷ್ಟೇ ಪಾವತಿಸುತ್ತಾರೆ. ಆದರೆ, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಈಗ ಕಚ್ಚಾ ತೈಲ ದರವು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ 10-20 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಒಂದು ವೇಳೆ ಕಚ್ಚಾ ತೈಲ ದರವು ಏರಿಕೆಯಾದರೆ, ಗ್ರಾಹಕರು ಈಗ ಏರಿಕೆ ಮಾಡಿರುವ ಹೆಚ್ಚುವರಿ ತೆರಿಗೆಯನ್ನು ಮುಂದೆ ಪಾವತಿ ಮಾಡಬೇಕಾಗುತ್ತದೆ. ಕಚ್ಚಾ ತೈಲ ದರವು 60 ಡಾಲರ್ ದಾಟಿದರೆ ಈಗಿನ ತೆರಿಗೆ ಆಧಾರದ ಮೇಲೆ ದೇಶೀಯ ಗ್ರಾಹಕರು ಪೆಟ್ರೋಲ್ ಪೆಟ್ರೋಲ್ ಮೇಲೆ ಹೆಚ್ಚುವರಿ 16 ರುಪಾಯಿ ಮತ್ತು ಡಿಸೇಲ್ ಮೇಲೆ ಹೆಚ್ಚುವರಿ 19 ರುಪಾಯಿ ತೆರಬೇಕಾಗುತ್ತದೆ. ಇದರರ್ಥ ಮುಂದೈತೆ ಮಾರಿಹಬ್ಬ!!
ನಿಮಗೆ ನೆನಪಿರಬಹುದು ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 1 ರಂದು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತಲಾ 3 ರುಪಾಯಿ ಹೆಚ್ಚುವರಿ ಸುಂಕ ಹೇರಿಕೆ ಮಾಡಿ ಇಡೀ ದೇಶದ ಜನತೆಯನ್ನು ಮೂರ್ಖರನ್ನಾಗಿ ಮಾಡಿತ್ತು. ಅದಕ್ಕೂ ಮುನ್ನಾ ಮಾರ್ಚ್ 14ರಂದು 3 ರುಪಾಯಿ ಸುಂಕ ಏರಿಸಿತ್ತು.
ಈಗಿನ ಏರಿಕೆಯು ಇಡೀ ದೇಶದ ಜನರನ್ನು ಮಹಾಮೂರ್ಖರನ್ನಾಗಿ ಮಾಡುವ ಪ್ರಯತ್ನವೇ ಹೌದು. ಏಕೆಂದರೆ- ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಗಣನೀಯವಾಗಿ ಕುಸಿದಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವು ಗಣನೀಯವಾಗಿ ಇಳಿಯಬೇಕಿತ್ತು. ಆದರೆ, ನರೇಂದ್ರ ಮೋದಿ ಸರ್ಕಾರವು ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಹಿಸಿಲ್ಲ. ಅಗತ್ಯ ಬಂದಾಗಲೆಲ್ಲ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಎಕ್ಸೈಜ್ ಸುಂಕವನ್ನು ಏರಿಕೆ ಮಾಡುತ್ತಾ ಬಂದು, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಲೇ ಬಂದಿದೆ. ಈಗಲೂ ಮೋದಿ ಸರ್ಕಾರವು ಭಾರಿ ಪ್ರಮಾಣದಲ್ಲಿ ಕತ್ತರಿ ಹಾಕಿದೆ. ಕಳೆದ 50 ದಿನಗಳಲ್ಲಿ ಮೋದಿ ಸರ್ಕಾರವು ಪೆಟ್ರೋಲ್ ಮೇಲೆ 16 ರುಪಾಯಿ ಮತ್ತು ಡಿಸೇಲ್ ಮೇಲೆ 19 ರುಪಾಯಿ ಹೆಚ್ಚುವರಿ ಸುಂಕ ಹೇರಿದೆ. ಅಂದರೆ, ಮೋದಿ ಸರ್ಕಾರ ಸುಂಕ ಹೇರದೇ ಇದ್ದಿದ್ದರೆ, ಪೆಟ್ರೋಲ್ ದರವು ಪ್ರಸ್ತುತ 55-56 ರುಪಾಯಿ ಮತ್ತು ಡಿಸೇಲ್ ದರವು 44-46 ರುಪಾಯಿ ಇರುತ್ತಿತ್ತು. ಆದರೆ, ಪ್ರಸ್ತುತ ಬೆಂಗಳೂರಿನಲ್ಲಿ ಪೆಟ್ರೋಲ್ ದರವು 73.55 ಮತ್ತು ಡಿಸೇಲ್ ದರವು 65.96 ರುಪಾಯಿ ಇದೆ.
ಕರೋನಾ ಸೋಂಕು ತಡೆಗಾಗಿ ದೇಶವ್ಯಾಪಿ ಲಾಕ್ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಬೊಕ್ಕಸಕ್ಕೆ ತೆರಿಗೆ ಮೂಲದ ಆದಾಯ ಬಂದಿಲ್ಲ ಎಂಬ ಕಾರಣಕ್ಕೆ ಈ ತೆರಿಗೆಯನ್ನು ಹೇರಲಾಗಿದೆ ಎಂದು ಮೋದಿ ಸರ್ಕಾರ ತೆರಿಗೆ ಹೇರಿಕೆಯನ್ನು ಸಮರ್ಥಿಸಿಕೊಂಡಿದೆ. ಹಣಕಾಸು ಸಚಿವಾಲಯದ ಪ್ರಕಟಣೆ ಪ್ರಕಾರ, ಪೆಟ್ರೋಲ್ ಮೇಲಿ ವಿಶೇಷ ಎಕ್ಸೈಜ್ ಸುಂಕವನ್ನು 2 ರುಪಾಯಿ ಏರಿಸಿ 12ಕ್ಕೂ, ಡಿಸೇಲ್ ಮೇಲಿನ ವಿಶೇಷ ಎಕ್ಸೈಜ್ ಸುಂಕವನ್ನು 5 ರುಪಾಯಿ ಹೆಚ್ಚಳ ಮಾಡಿ 9 ರುಪಾಯಿ ಹಿಗ್ಗಿಸಲಾಗಿದೆ. ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ರೊಡ್ ಸೆಸ್ (ರಸ್ತೆ ಮತ್ತು ಮೂಲಭೂತ ಸೌಕರ್ಯಗಳ ಮೇಲಿನ ಉಪಕರ) ತಲಾ ಎಂಟು ರುಪಾಯಿ ಹೆಚ್ಚಿಸಲಾಗಿದೆ. ಮಾರ್ಚ್ 14 ರಿಂದೀಚೆಗೆ ಮೂರು ಬಾರಿ ಹೆಚ್ಚಿಸಲಾದ ಒಟ್ಟಾರೆ ಸುಂಕವು (ಬೆಂಗಳೂರಿನ ಮಾರುಕಟ್ಟೆ ದರಕ್ಕೆ ಹೋಲಿಸಿದರೆ) ಪೆಟ್ರೋಲ್ ಮೇಲೆ ಶೇ.21.75 ರಷ್ಟಾದರೆ, ಡಿಸೇಲ್ ಮೇಲೆ ಶೇ.28.80 ರಷ್ಟಾಗಿದೆ.
ದೇಶದ ಇತಿಹಾಸದಲ್ಲಿ ಹಿಂದೆಂದೂ ಈ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಸುಂಕ ಹೇರಿಕೆ ಮಾಡಿರಲಿಲ್ಲ. ಯುಪಿಎ-1 ಮತ್ತು ಯುಪಿಎ-2 ಸರ್ಕಾರದ ಅವಧಿಯಲ್ಲಿ ನುರಿತ ಆಡಳಿತಗಾರ ಮತ್ತು ಆರ್ಥಿಕ ತಜ್ಞರಾಗಿದ್ದ ಪ್ರಧಾನಿ ಮನಮೋಹನ ಸಿಂಗ್ ಅವರು ಎಂದೂ ಈ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆಯಾಗಲು ಅವಕಾಶ ನೀಡಿರಲಿಲ್ಲ. ಆ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್ ಗೆ 110 ಡಾಲರ್ ಇತ್ತು. ಈಗ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಭಾರಿ ಪ್ರಮಾಣದಲ್ಲಿ ಕುಸಿದಿದ್ದು ಪ್ರತಿ ಬ್ಯಾರೆಲ್ ಗೆ 10-20 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗುತ್ತಿದೆ. ಅಂದರೆ ಸರಾಸರಿ ಆರು ಪಟ್ಟು ದರ ಕುಸಿದಿದೆ. ಆದರೆ, ಪೆಟ್ರೋಲ್ ಮತ್ತು ಡಿಸೇಲ್ ದರ ಮಾತ್ರ ಕಡಮೆ ಆಗುವ ಬದಲು ಹೆಚ್ಚಾಗಿದೆ.
‘ಕೋವಿಡ್-19’ ಸೋಂಕು ತಡೆಯಲು ಲಾಕ್ ಡೌನ್ ಹೇರುವ ಮುನ್ನಾ ದಿನ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ತಾನು ಬಯಸಿದ ಯಾವುದೇ ಸಮಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಜ್ ಸುಂಕವನ್ನು ಲೀಟರ್ಗೆ 8 ರುಪಾಯಿ ಹೆಚ್ಚಿಸಲು ಅನುವು ಮಾಡಿಕೊಡುವ ನಿಬಂಧನೆಗೆ ಅನುಮೋದನೆ ಪಡೆದಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಶೇಷ ಎಕ್ಸೈಜ್ ಸುಂಕದ ಮಿತಿಯನ್ನು ಕ್ರಮವಾಗಿ ಲೀಟರ್ಗೆ 18 ಮತ್ತು 12 ರುಪಾಯಿಗೆ ಏರಿಸಲು ಹಣಕಾಸು ಕಾಯ್ದೆ ಎಂಟನೇ ಪರಿಚ್ಛೇದಕ್ಕೆ ತಿದ್ದುಪಡಿ ಮಾಡಿತ್ತು. ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ 2020 ರ ಹಣಕಾಸು ತಿದ್ದುಪಡಿ ಮಸೂದೆಯು ಯಾವುದೇ ಚರ್ಚೆಯಿಲ್ಲದೇ ಅಂಗೀಕಾರವಾಗಿತ್ತು. ಹಿಂದಿನ ಮಿತಿ ಪೆಟ್ರೋಲ್ಗೆ ಲೀಟರ್ಗೆ 10 ಮತ್ತು ಡೀಸೆಲ್ಗೆ 4 ರುಪಾಯಿ ಇತ್ತು. ‘ಕೋವಿಡ್-19’ ನಿಂದ ಉದ್ಭವಿಸಿರುವ ಸಂಕಷ್ಟದಿಂದ ಏಕಾಏಕಿ ಬಂದ ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಸುಂಕ ಹೇರುತ್ತಿರುವುದಾಗಿ ಮೋದಿ ಸರ್ಕಾರ ತನ್ನನ್ನು ತಾನು ಸಮರ್ಥಿಸಿಕೊಂಡಿತ್ತು.
ತಿದ್ದುಪಡಿಯು ಕೇಂದ್ರ ಸರ್ಕಾರಕ್ಕೆ ಯಾವಾಗ ಬೇಕಾದರೂ 8 ರುಪಾಯಿ ಏರಿಕೆ ಮಾಡುವ ಅಧಿಕಾರವನ್ನು ನೀಡಿತ್ತು. ಆ ಅಧಿಕಾರವನ್ನು ಬಳಸಿಕೊಂಡು ನರೇಂದ್ರ ಮೋದಿ ಸರ್ಕಾರವು ದೇಶವ್ಯಾಪಿ ಬೇಡಿಕೆಯೇ ಇಲ್ಲದ ಹೊತ್ತಿನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಕ್ರಮವಾಗಿ 1.65 ಮತ್ತು 1.62 ರುಪಾಯಿ ಏರಿಕೆ ಮಾಡಿತ್ತು. ಈಗ ಮತ್ತೆ ತಲಾ 8 ರುಪಾಯಿ ಏರಿಕೆ ಮಾಡುವ ಮೂಲಕ ಪೂರ್ಣಪ್ರಮಾಣದಲ್ಲಿ ತೆರಿಗೆ ಹೇರಿದೆ. ಇನ್ನು ಮುಂದೆ ಮೋದಿ ಸರ್ಕಾರವು ನೇರವಾಗಿ ಕರೋನಾ ಸೆಸ್ ಹೆಸರಿನಲ್ಲೇ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತೆರಿಗೆ ಹೇರಬಹುದು.
ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಪ್ರತಿ 1 ರುಪಾಯಿ ಕರೆ ಹೇರಿದಾಗ ಕೇಂದ್ರ ಸರ್ಕಾರಕ್ಕೆ ವಾರ್ಷಿಕ ಬರುವ ಆದಾಯವು 13,000- 14,000 ಕೋಟಿ ರುಪಾಯಿಗಳು. ಮಾರ್ಚ್ 14 ರಿಂದೀಚೆಗೆ ಕೇಂದ್ರ ಸರ್ಕಾರವು ಪೆಟ್ರೋಲ್ ಮೇಲೆ 16 ರುಪಾಯಿ ಮತ್ತು ಡಿಸೇಲ್ ಮೇಲೆ 19 ರುಪಾಯಿ ಸುಂಕ ಹೇರಿದೆ. ಪ್ರತಿ ರುಪಾಯಿಗೆ ಏರಿಕೆಗೆ 13,000 ಕೋಟಿ ರುಪಾಯಿ ಕೇಂದ್ರಕ್ಕೆ ಆದಾಯ ಬರುತ್ತದೆ ಎಂದಾದರೆ, ಒಟ್ಟಾರೆ 4,55,000 ಕೋಟಿ ರುಪಾಯಿ ಆದಾಯ ಬರುವ ಅಂದಾಜಿದೆ.