ಬಿಜೆಪಿಯ ಆಪರೇಷನ್ ಕಮಲಕ್ಕೆ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಬಲಿಯಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಹಿಂಬಾಲಕರಾದ 22 ಮಂದಿ ಶಾಸಕರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಬೆಂಬಿಸಿದ್ದರಿಂದ ಸಹಜವಾಗೇ ಅಲ್ಪಮತಕ್ಕೆ ಕುಸಿದ ಕಾಂಗ್ರೆಸ್ ಸರ್ಕಾರ, ಬಹುಮತ ಪಡೆಯಲು ನಡೆಸಿದ ಯತ್ನಗಳು ಕೈಗೂಡದೇ, ಮುಖ್ಯಮಂತ್ರಿ ಕಮಲ್ ನಾಥ್ ರಾಜೀನಾಮೆ ನೀಡುವುದರೊಂದಿಗೆ ಕಾಂಗ್ರೆಸ್ ಆಡಳಿತ ಅಂತ್ಯಕಂಡಿದೆ. ಬಿಜೆಪಿ ನೂತನ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ.
ಎಂಟು ತಿಂಗಳ ಹಿಂದೆ ಕರ್ನಾಟಕದಲ್ಲಿ ಅನುಸರಿಸಿದ ಆಪರೇಷನ್ ಕಮಲದ ಮಾದರಿಯನ್ನೇ ಇದೀಗ ಮಧ್ಯಪ್ರದೇಶದಲ್ಲಿ ಜಾರಿಗೆ ತರಲಾಗಿದೆ. ಚುನಾವಣೆಯಲ್ಲಿ ನೇರ ಬಹುಮತ ಪಡೆಯಲಾಗದೆ ತಾನು ಅಧಿಕಾರದಿಂದ ವಂಚಿತವಾದ ರಾಜ್ಯಗಳಲ್ಲಿ, ಅಧಿಕಾರರೂಢ ಪಕ್ಷ ಮತ್ತು ಮೈತ್ರಿಕೂಟದ ಶಾಸಕರ ರಾಜೀನಾಮೆ ಮೂಲಕ ವಿಧಾನಸಭಾ ಸ್ಥಾನಬಲ ಕುಗ್ಗಿಸಿ ತನಗೆ ಬಹುಮತ ತಂದುಕೊಳ್ಳುವ ಮೂಲಕ ಅಧಿಕಾರ ಹಿಡಿಯುವ ಈ ತಂತ್ರ, ಸದ್ಯದಲ್ಲೇ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ತಾನ ಮತ್ತು ಎನ್ ಸಿಪಿ-ಶಿವಸೇನೆ ಮೈತ್ರಿಕೂಟ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿಯೂ ಪ್ರಯೋಗವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈಗಾಗಲೇ ಕರ್ನಾಟಕ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ, ಭಾರತದ ರಾಜಕಾರಣದಲ್ಲೇ ಕಳೆದ ಒಂದು ದಶಕದಿಂದೀಚೆಗೆ ಬಿಜೆಪಿ ಪಕ್ಷವೇ ರೂಪಿಸಿ, ಜಾರಿಗೆ ತಂದು ರಾಜಕೀಯ ಯಶಸ್ಸು ಕಂಡಿರುವ ಈ ಆಪರೇಷನ್ ಕಮಲ ಪ್ರಯೋಗ ಜಾರಿಗೆ ಬಂದಿದೆ. ಹಾಗೆ ನೋಡಿದರೆ, ಹನ್ನೆರಡು ವರ್ಷಗಳ ಹಿಂದೆ; 2008ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ತನ್ನ ಸರ್ಕಾರ ರಚನೆಗೆ ಅಸ್ತ್ರವಾಗುವ ಮೂಲಕ ಬಿಜೆಪಿಗೆ ದಕ್ಷಿಣ ಭಾರತದ ರಾಜಕೀಯ ಅವಕಾಶಗಳ ಕದ ತೆಗೆದದ್ದೇ ಈ ಆಪರೇಷನ್ ಕಮಲ. ಹಾಗಾಗಿ ಆಪರೇಷನ್ ಕಮಲ ಕೇವಲ ಬಿಜೆಪಿ ಪಕ್ಷದ ರಾಜಕೀಯ ಬೆಳವಣಿಗೆಯಲ್ಲಿ ಮಾತ್ರವಲ್ಲದೆ, ಒಟ್ಟಾರೆ ಕಳೆದ ಒಂದು ದಶಕದ ದೇಶದ ರಾಜಕೀಯ ಚಹರೆ ಬದಲಾಯಿಸುವಲ್ಲಿ ಕೂಡ ನಿರ್ಣಾಯಕ ಪಾತ್ರ ವಹಿಸಿದೆ.
ತಾನು ಅಧಿಕಾರಕ್ಕೆ ಬರಲಾಗದ ರಾಜ್ಯಗಳಲ್ಲಿ ಅಧಿಕಾರರೂಢ ಪಕ್ಷದ ಶಾಸಕರ ಅತೃಪ್ತಿ- ಅಸಮಾಧಾನವನ್ನೇ ದಾಳವಾಗಿಸಿಕೊಂಡು ಅವರನ್ನು ವಿಶ್ವಾಸಕ್ಕೆ ಪಡೆಯುವುದು, ಬಳಿಕ ಅವರಿಗೆ ಭವಿಷ್ಯದ ಆಯಕಟ್ಟಿನ ಸಚಿವ ಸ್ಥಾನ, ಭಾರೀ ಮೊತ್ತದ ಹಣ ಮತ್ತು ಉಪ ಚುನಾವಣೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುವ ಆಮಿಷವೊಡ್ಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವುದು. ಆ ಮೂಲಕ ವಿಧಾನಸಭೆಯ ಒಟ್ಟು ಸ್ಥಾನಬಲವನ್ನು ಕುಗ್ಗಿಸಿ, ತಮ್ಮ ಪಕ್ಷ ಬಹುಮತಕ್ಕೆ ಬರುವಂತೆ ಅಂಕಿಸಂಖ್ಯೆಯ ಆಟ ಆಡುವುದು, ಅಂತಿಮವಾಗಿ ಆಡಳಿತ ಪಕ್ಷವನ್ನು ಅಧಿಕಾರದಿಂದ ನಿರ್ಗಮಿಸುವಂತೆ ಮಾಡಿ, ತಾನು ಅಧಿಕಾರದ ಗದ್ದುಗೆ ಹಿಡಿಯುವುದು ಇಡೀ ಆಪರೇಷನ್ ಕಮಲದ ಒಟ್ಟು ತಂತ್ರಗಾರಿಕೆ. ಈ ಇಡೀ ರಾಜಕೀಯ ತಂತ್ರಗಾರಿಕೆ ಅಥವಾ ಕುತಂತ್ರವನ್ನೇ 2008ರಲ್ಲಿ ಮೊದಲ ಬಾರಿಗೆ ಆಪರೇಷನ್ ಕಮಲ ಎಂಬ ಹೈಬ್ರಿಡ್ ಹೆಸರಿನೊಂದಿಗೆ(ಇಂಗ್ಲಿಷಿನ್ ಆಪರೇಷನ್, ಕನ್ನಡದ ಕಮಲ) ರಾಜಕೀಯ ಪಂಡಿತರು ಗುರುತಿಸಿದರು. ಆ ಬಳಿಕ ಬಿಜೆಪಿ ದೇಶದ ವಿವಿಧೆಡೆ ಪ್ರಯೋಗಿಸಿದ ಇಂತಹ ರಾಜಕೀಯ ತಂತ್ರಗಳನ್ನು ಇದೇ ಹೆಸರಿನಿಂದ ಕರೆಯಲಾಗುತ್ತಿದೆ. ಇದೀಗ ಮಧ್ಯಪ್ರದೇಶದ ವಿಷಯದಲ್ಲಿಯೂ ಆಗಿರುವುದು ಇದೇ ಆಪರೇಷನ್ ಕಮಲವೇ!
ಹಾಗೆ ನೋಡಿದರೆ, ನೈತಿಕವಾಗಿಯೂ ಮತ್ತು ವ್ಯಾವಹಾರಿಕವಾಗಿಯೂ ಭ್ರಷ್ಟ ರಾಜಕಾರಣ ಅಥವಾ ರಾಜಕೀಯ ಭ್ರಷ್ಟಾಚಾರದ ಪರಮ ಸ್ವರೂಪವೆನ್ನಬಹುದಾದದ್ದು ಆಪರೇಷನ್ ಕಮಲ. ಏಕೆಂದರೆ, ಇದರಲ್ಲಿ ಒಬ್ಬ ವ್ಯಕ್ತಿಯನ್ನು ಭ್ರಷ್ಟಗೊಳಿಸಲು ಪ್ರಯೋಗವಾಗುವ ಎಲ್ಲಾ ಆಮಿಷಗಳೂ ಪ್ರಯೋಗವಾಗುತ್ತವೆ ಎಂಬುದಕ್ಕೆ ಕಳೆದ ಒಂದು ದಶಕದಲ್ಲಿ ಹಲವು ನಿದರ್ಶನಗಳು ಕಣ್ಣ ಮುಂದಿವೆ. ಒಂದು ಪಕ್ಷದ ಹೆಸರು ಮತ್ತು ಚಿಹ್ನೆಯ ಮೇಲೆ ಚುನಾವಣೆಗೆ ನಿಂತು ಮತಪಡೆದು ಗೆದ್ದು ಬಂದು ಶಾಸಕನಾಗಿ ಆ ಪಕ್ಷದ ಸರ್ಕಾರದ ಭಾಗವಾದವರಿಗೆ ಹಣ, ಸ್ಥಾನಮಾನ, ಅಧಿಕಾರ ಮುಂತಾದ ಆಮಿಷವೊಡ್ಡಿ ಮತ್ತೊಂದು ಪಕ್ಷಕ್ಕೆ ಸೆಳೆಯುವುದು, ಆತನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವುದು ಭ್ರಷ್ಟಾಚಾರವಲ್ಲದೆ ಮತ್ತೇನಾಗಲು ಸಾಧ್ಯ? ಆಪರೇಷನ್ ಕಮಲದ ಭಾಗವಾಗಿ ಹಣದ ಆಮಿಷವೊಡ್ಡಿರುವ ಬಗ್ಗೆ ಕರ್ನಾಟಕ ವಿಧಾನಸಭೆಯಲ್ಲಿಯೇ ಈ ಹಿಂದೆ ಅಧಿಕೃತವಾಗಿ ಚರ್ಚೆಯಾಗಿತ್ತು. ಸ್ವತಃ ಸ್ಪೀಕರ್ ಹೆಸರು ಕೂಡ ಬಳಕೆಯಾಗಿದ್ದ ಆಡಿಯೋ ಟೇಪುಗಳು ಸದನದಲ್ಲಿ ಚರ್ಚೆಯಾಗಿ ಅಧಿಕೃತ ಕಲಾಪ ಕಡತದ ಭಾಗವಾಗಿವೆ. ಇನ್ನು ಅಧಿಕಾರ ಮತ್ತು ಸ್ಥಾನಮಾನದ ಆಮಿಷದ ವಿಷಯದಲ್ಲಿ ಕೂಡ ಕರ್ನಾಟಕದಲ್ಲೇ ಮೊದಲ ಬಾರಿ ಆಪರೇಷನ್ ಕಮಲ ಪ್ರಯೋಗವಾದಂದಿನಿಂದ ಈವರೆಗೆ ಹಲವು ನಿದರ್ಶನಗಳಿಗೆ. ತಾವು ಹಿಂದೆ ಗೆದ್ದುಬಂದಿದ್ದ ಪಕ್ಷ ಮತ್ತು ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಲು ತಮಗೆ ಸ್ಥಾನಮಾನ, ಅಧಿಕಾರ ಸಿಗದೇ ಇರುವುದೇ ಕಾರಣ. ಮತ್ತು ಮುಂದೆ ಸೇರಲಿರುವ ಪಕ್ಷದಲ್ಲಿ ಅಂತಹ ಅವಕಾಶ ಸಿಗುವ ಭರವಸೆ ಸಿಕ್ಕಿದೆ. ಹಾಗಾಗಿಯೇ ರಾಜೀನಾಮೆ ಕೊಟ್ಟಿದ್ದೇವೆ ಎಂದು ಹಲವು ಶಾಸಕರು ಮಾಧ್ಯಮಗಳ ಮುಂದೆ ಹೇಳಿಕೊಂಡು ಸಾಕಷ್ಟು ಉದಾಹರಣೆಗಳಿವೆ ಮತ್ತು ಒಮ್ಮೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾಗಿ, ಆಯಕಟ್ಟಿನ ಸ್ಥಾನಮಾನ, ಅಧಿಕಾರ ಅನುಭವಿಸಿದ ಸಾಕ್ಷ್ಯಗಳೂ ಇವೆ.
ಇನ್ನು ನೈತಿಕವಾಗಿ ಈ ನಡೆಯನ್ನು ನೋಡುವುದಾದರೆ; ಒಬ್ಬ ಶಾಸಕ ಒಂದು ಪಕ್ಷದ ಚಿಹ್ನೆ, ಹೆಸರು ಮತ್ತು ಪ್ರಣಾಳಿಕೆಯ ಮೇಲೆ ಮತದಾರರ ವಿಶ್ವಾಸ ಗಳಿಸಿ ಗೆದ್ದಬಂದಿದ್ದಾನೆ ಎಂದರೆ; ಅದರರ್ಥ ಆ ವಿಧಾನಸಭಾ ಅವಧಿಯವರೆಗೆ(ಸಾಮಾನ್ಯವಾಗಿ ಐದು ವರ್ಷ) ಆತ ತಮ್ಮನ್ನು ಸರ್ಕಾರದ ಮಟ್ಟದಲ್ಲಿ ಪ್ರತಿನಿಧಿಸಬೇಕು ಎಂದೇ. ಆದರೆ, ಹೀಗೆ ಆಯ್ಕೆಯಾದ ಶಾಸಕ, ತನ್ನ ವೈಯಕ್ತಿಕ ಅಧಿಕಾರ, ಹಣದ ಲಾಲಸೆಗಾಗಿ ಗೆದ್ದು ಬಂದ ಮೂರು ತಿಂಗಳಿಗೋ, ಆರು ತಿಂಗಳಿಗೋ ರಾಜೀನಾಮೆ ನೀಡಿ, ಮತ್ತೊಂದು ಪಕ್ಷವನ್ನು ಸೇರಿ ಅದರ ಚಿಹ್ನೆ, ನಾಮಬಲದ ಮೇಲೆ ಮತ್ತೆ ಮತದಾರರ ಮುಂದೆ ಹೋಗುವುದು ರಾಜಕೀಯ ನೈತಿಕತೆಯ ದಿವಾಳಿತನವಲ್ಲದೇ ಬೇರಲ್ಲ. ಕಾಯ್ದೆ- ಕಾನೂನುಗಳ ವಿಷಯದಲ್ಲಿ ರಂಗೋಲಿ ಕೆಳಗೆ ನುಸುಳುವ ತಂತ್ರಗಾರಿಕೆ ಇದಾದರೂ, ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಕ್ಕೆ, ರಾಜಕಾರಣದ ಘನತೆಗೆ ತದ್ವಿರುದ್ಧ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
2008ರಲ್ಲಿ ಕರ್ನಾಟಕದಲ್ಲಿ ಹಾಲಿ ಸಿಎಂ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಅಧಿಕಾರಕ್ಕೇರಲು ಬೇಕಿದ್ದ ಸರಳ ಬಹುಮತ ಗಳಿಸಲು ಮೂರು ಸ್ಥಾನಗಳ ಕೊರತೆ ಇತ್ತು. ಗಣಿಗಾರಿಕೆ ರಾಜ್ಯದ ವ್ಯವಹಾರ ವಲಯವನ್ನು ಮೀರಿ ರಾಜ್ಯದ ಮತ್ತು ಆ ಮೂಲಕ ಕೆಲಮಟ್ಟಿಗೆ ರಾಷ್ಟ್ರಮಟ್ಟದ ರಾಜಕಾರಣವನ್ನೂ ನಿಯಂತ್ರಿಸುವಷ್ಟು ಕೊಬ್ಬಿನಿಂತಿದ್ದ ಆ ಹೊತ್ತಲ್ಲಿ, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಆ ಪಕ್ಷದ ನಾಯಕ ಮತ್ತು ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ತಮ್ಮ ಹಣ ಬಲ ಮತ್ತು ತೋಳ್ಬಲದ ಮೂಲಕ ನಡೆಸಿದ ತಂತ್ರಗಾರಿಕೆಯೇ ಆಪರೇಷನ್ ಕಮಲ. ಹಾಗೆ ಗಣಿ ಹಣ ಮತ್ತು ರೆಡ್ಡಿ ಬಣದ ತೋಳ್ಬಲದ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿ, ಉಪಚುನಾವಣೆಯಲ್ಲಿ ಅವರನ್ನು ಗೆಲ್ಲಿಸಿಕೊಂಡು ಸರ್ಕಾರ ಭದ್ರಪಡಿಸಿಕೊಂಡ ಬಳಿಕ ಆ ಸರ್ಕಾರ ಎಷ್ಟು ದಿನ ಸುಭದ್ರವಾಗಿತ್ತು? ಆ ಬಳಿಕ ಭುಗಿಲೆದ್ದ ಭಿನ್ನಮತ, ಶಾಸಕರ ರೆಸಾರ್ಟ್ ರಾಜಕಾರಣ, ಅಂತಿಮವಾಗಿ ಗಣಿ ಹಗರಣದಲ್ಲಿ ಸಿಲುಕಿ ಸ್ವತಃ ಸಿಎಂ ಪರಪ್ಪನ ಅಗ್ರಹಾರದ ದಾರಿ ಹಿಡಿದದ್ದು.. ಜೊತೆಗೆ ನಾಲ್ಕು ವರ್ಷದಲ್ಲಿ ಮೂರು ಮುಖ್ಯಮಂತ್ರಿಗಳನ್ನು ಕಂಡದ್ದು.. ಹೀಗೆ ಹಲವು ರಾಜಕೀಯ ಸ್ಥಿತ್ಯಂತರಗಳು ಕೂಡ ಆಪರೇಷನ್ ಕಮಲದ ಸಾಚಾತನಕ್ಕೆ ಕನ್ನಡಿಯಾಗಿವೆ.
ಇದೀಗ ಬಿಜೆಪಿಯ ಆಪರೇಷನ್ ಕಮಲ ತಂತ್ರಗಾರಿಕೆಗೆ ಕೇಂದ್ರದ ಅವರದೇ ಸರ್ಕಾರದ ಬಲವಿದೆ. ರಾಜಭವನಗಳಲ್ಲಿ ಕುಳಿತಿರುವ ಬಿಜೆಪಿಯ ಮಾಜಿ ನಾಯಕರು, ಬಿಜೆಪಿ ಹೈಕಮಾಂಡ್ ಕೃಪೆಯ ಹಿರಿಯರ ಆರ್ಶೀವಾದವೂ ಸಿಗುತ್ತದೆ. ಜೊತೆಗೆ ಅದು ಸಾಲದು ಎಂಬಂತೆ ಬಹುತೇಕ ಸಂದರ್ಭದಲ್ಲಿ ನ್ಯಾಯಾಂಗ ಕೂಡ ದೇಶದ ಆಳುವ ವ್ಯವಸ್ಥೆಯ ತಾಳಕ್ಕೆ ಅಪಸ್ವರ ಎತ್ತದ ನಮ್ರತೆಯನ್ನೇ ಹೊಂದಿದೆ(ಮಾಜಿ ಸಿಜೆಐ ರಂಜನ್ ಗೋಗಾಯಿ ರಾಜ್ಯಸಭೆ ಸದಸ್ಯರಾಗಿರುವುದೇ ತಾಜಾ ನಿದರ್ಶನ!). ಹಾಗಾಗಿ ಮಧ್ಯಪ್ರದೇಶದ ಬಳಿಕ ರಾಜಸ್ತಾನ ಮತ್ತು ಮಹಾರಾಷ್ಟ್ರಗಳಲ್ಲೂ ಆಪರೇಷನ್ ಕಮಲದ ಹಾದಿ ಸುಗಮವಾಗುವ ಸಾಧ್ಯತೆ ಹೆಚ್ಚಿದೆ.
ಈ ನಡುವೆ, ದಶಕಗಳ ಹಿಂದೆ ‘ಪಾರ್ಟಿ ವಿತ್ ಎ ಡಿಫರೆನ್ಸ್’ ಎಂದು ತನ್ನನ್ನು ತಾನೇ ಬೆನ್ನು ತಟ್ಟಿಕೊಳ್ಳುತ್ತಿದ್ದ ಬಿಜೆಪಿ, ಈಗ ಅಂತಹ ಒಳ್ಳೆತನವನ್ನೇನೂ ಪ್ರದರ್ಶನ ಮಾಡುತ್ತಿಲ್ಲ. ಆ ಪಕ್ಷ ಅಂತಹ ಹೇಳಿಕೆಗಳನ್ನು ಕೈಬಿಟ್ಟು ಸರಿಸುಮಾರು ಒಂದು ದಶಕ ಉರುಳಿದೆ. ಕಾಕತಾಳೀಯವೆಂದರೆ, ಆಪರೇಷನ್ ಕಮಲ ಜಾರಿಗೆ ಬಂದೂ ಒಂದು ದಶಕ ಉರುಳಿದೆ! ಹಾಗಾಗಿ ಪರಮ ಭ್ರಷ್ಟ ರಾಜಕಾರಣದ ದಾರಿ ಈಗ ಬಿಜೆಪಿಯ ಪಾಲಿಗೆ ಕೇವಲ ಒಂದು ರಾಜಕೀಯ ತಂತ್ರ. ಬಿಜೆಪಿಗಷ್ಟೇ ಅಲ್ಲ; ನಮ್ಮ ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳ ಪಾಲಿಗೂ ಅದು ಒಂದು ರಾಜಕೀಯ ‘ಚಾಣಾಕ್ಷ’ ನಡೆಯಾಗಿ ಮಾತ್ರ ಕಾಣುತ್ತಿದೆ. ಅಷ್ಟರಮಟ್ಟಿಗೆ ಮಾಧ್ಯಮಗಳಲ್ಲಿಯೂ ಬಿಜೆಪಿಯ ಮನಸ್ಥಿತಿ ಇದೆ. ಹಾಗಾಗಿ, ಸಹಜವಾಗಿಯೇ ಈಗ ಆಪರೇಷನ್ ಕಮಲದ ವಿಷಯದಲ್ಲಿ; ಅದೊಂದು ಪರಮ ಭ್ರಷ್ಟಾಚಾರ ಎಂಬ ಮಾತು ಕೇಳಿಬರುವುದು ವಿರಳ!