ಶಿವಮೊಗ್ಗದಲ್ಲಿ ಎರಡು ತಿಂಗಳ ಅವಧಿಯಲ್ಲಿ ಎರಡು ಚಿರತೆಗಳು ರೈಲಿಗೆ ಸಿಲುಕಿ ಮೃತಪಟ್ಟಿದ್ದು ಅಘಾತಕಾರಿಯಾಗಿದೆ. ತರಾತುರಿಯಲ್ಲಿ ಚಿರತೆಗಳ ಶವಪರೀಕ್ಷೆ ನಡೆಸಿ ಸುಟ್ಟು ಹಾಕಿರುವ ಅರಣ್ಯ ಇಲಾಖೆಯ ನಡೆ ಆತಂಕ ಮೂಡಿಸಿದೆ. ಮಲೆನಾಡು ಹುಲಿಗಳಿಗಿಂತ ಚಿರತೆಗಳಿಗೆ ಪ್ರಸಿದ್ಧವಾದ ಪ್ರದೇಶ, ಹಳೆ ತಲೆಮಾರಿನ ಕಥೆಗಳನ್ನ ಕೇಳುತ್ತಾ ಹೋದರೆ ಚಿರತೆಗಳ ಬಗ್ಗೆ ಒಂದಾದರೂ ಕಥೆ ಇರುತ್ತದೆ. ಮೇಯಲು ಹೋದ ದನ ಕರುಗಳ ಮೇಲೆ ಬಿದ್ದಿರುವ ಉಗುರುಗಳ ಗುರುತನ್ನೂ ಕೂಡ ಜನರು ನೆನಪು ಮಾಡಿಕೊಳ್ಳುತ್ತಾರೆ. ಪಶ್ಚಿಮ ಘಟ್ಟಗಳಲ್ಲಿನ ಅರಣ್ಯ ನಾಶ ಚಿರತೆಗಳ ಸಂತತಿಯನ್ನ ಕ್ರಮೇಣ ಕಡಿಮೆ ಮಾಡಿತ್ತು, ಇದರ ಜೊತೆ ಬೇಟೆ, ಹೊಲಗದ್ದೆಗಳ ಉರುಳಿಗೆ ಬಿದ್ದು ಸಾವಿಗೀಡಾಗುತ್ತಿದ್ದ ಚಿರತೆಗಳು ರಕ್ಷಿತಾರಣ್ಯ ಪ್ರದೇಶದಲ್ಲಿ ಮಾತ್ರ ವಾಸವಿದ್ದವು, ಆದರೆ ಈಗ ಇಂತಹ ಪ್ರದೇಶಗಳಿಗೂ ಉಳಿಗಾಲವಿಲ್ಲ.
ಶಿವಮೊಗ್ಗದಿಂದ ಸಾಗರಕ್ಕೆ ಸಾಗುವ ರೈಲು ಮಾರ್ಗ ಚಿರತೆಗಳಿಗೆ ಚಿತೆಯಾಗಿ ಪರಿಣಮಿಸಿದೆ, ಎರಡೇ ತಿಂಗಳ ಅವಧಿಯಲ್ಲಿ ಎರಡು ಚಿರತೆಗಳು ರೈಲುಗಳಿಗೆ ಮೃತಪಟ್ಟಿವೆ. ಬುಧವಾರ ಮುಂಜಾನೆ ಶಿವಮೊಗ್ಗ ತಾಲೂಕಿನ ಕೊನಗನಹಳ್ಳಿಯಲ್ಲಿ ರೈಲ್ವೇ ಟ್ರ್ಯಾಕ್ ಸಮೀಪ ದೈತ್ಯಾಕಾರದ ಚಿರತೆ ನೆಲಕ್ಕೆ ಒರಗಿತ್ತು, ಯಾರೇ ಅದನ್ನ ನೋಡಿದರೂ ಭಯಮೂಡಿಸುವಂತಹ ಕಾಯ ಆ ಚಿರತೆಯದ್ದಾಗಿತ್ತು, ಮೃತ ಚಿರತೆಯನ್ನ ಒಂದು ದಿನದ ನಂತರ ಅಲ್ಲಿನ ಜನರು ಗುರುತಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಶಂಕರ ಅರಣ್ಯ ವಿಭಾಗದ ವಲಯ ಅಧಿಕಾರಿ ಜಯೇಶ್ ಹಾಗೂ ವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ, ಅಲ್ಲೇ ಶವ ಪರೀಕ್ಷೆಯನ್ನೂ ನಡೆಸಿ ಪ್ರಾಥಮಿಕ ವರದಿಗಳ ಪ್ರಕಾರ ರೈಲು ಅಪಘಾತದಲ್ಲಿ ಚಿರತೆ ಮೃತಪಟ್ಟಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಚಿರತೆ ಸಾವು ಅರಣ್ಯ ಇಲಾಖೆಗೆ ಬಹಳ ಮುಖ್ಯವಾಗಲಿಲ್ಲ, ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳು ಯಾರಿಗೂ ಅದರ ಬಗ್ಗೆ ತನಿಖೆ ಮಾಡಬೇಕು ಎಂದು ಅನಿಸಲಿಲ್ಲ, ಪತ್ರಿಕೆಗಳಲ್ಲಿ ಶ್ರದ್ಧಾಂಜಲಿಯ ತರಹದೊಂದು ಚಿಕ್ಕ ವರದಿಯೊಂದಿಗೆ ಸಮಾಪ್ತಿಯಾಯ್ತು.
ಒಂದು ತಿಂಗಳ ಹಿಂದೆ ಇದೇ ರೈಲು ಮಾರ್ಗದಲ್ಲಿ ರಿಪ್ಪನ್ಪೇಟೆ ಸಮೀಪ ಸೂಡೂರು ಗ್ರಾಮದ ಬಳಿಯಿಂದ ಚಿರತೆ ಕಾಲು ಉಗುರುಗಳನ್ನ ಕತ್ತರಿಸಿಕೊಂಡು ಬಿದ್ದಿತ್ತು, ಶೆಟ್ಟಿಹಳ್ಳಿ ಅಭಯಾರಣ್ಯದ ಸಮೀಪವೂ ಇರುವ ಕಾರಣ ಯಾರೋ ಬೇಟೆಗಾರರು ಹೊಡೆದುರುಳಿಸಿ ಕಾಲು ಉಗುರುಗಳನ್ನ ಕಿತ್ತಿರಬಹುದೆಂಬ ಅನುಮಾನ ಮೂಡಿತು ಆದು ಬಲಗೊಳ್ಳುವ ಮೊದಲೇ ಆ ಭಾಗದ ಅರಣ್ಯ ಅಧಿಕಾರಿಗಳು ಅದರ ಶವ ಪರೀಕ್ಷೆ ಮಾಡಿ ರೈಲು ಬಡಿದು ಮೃತಪಟ್ಟಿದೆ ಎಂದು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು ಆಗಲೂ ಕೂಡ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹೋಗಲೇ ಇಲ್ಲ, ಇದುವರೆಗೆ ಆ ಚಿರತೆ ಸಾವಿಗೊಂದು ವರದಿಯನ್ನೂ ನೀಡಿಲ್ಲ. ಒಂದು ವೇಳೆ ರೈಲು ಅಪಘಾತಕ್ಕೇ ಪ್ರಾಣಿಗಳು ಮೃತಪಡುತ್ತಿವೆ ಎಂದಾದರೆ ಆ ಬಗ್ಗೆ ರೈಲ್ವೇ ಇಲಾಖೆಗೊಂದು ಮನವಿಯನ್ನ ನೀಡಿ ರೈಲಿನ ವೇಗದ ಮಿತಿಯನ್ನ ಅಭಯಾರಣ್ಯ ವ್ಯಾಪ್ತಿ ( ಹತ್ತು ಕಿಲೋಮೀಟರ್ ವರೆಗೆ ಸೇರುವ ಪ್ರದೇಶ) ಯಲ್ಲಿ ಕಡಿಮೆ ಮಾಡಿಸಬಹುದು.
ಈ ಕುರಿತು ಪರಿಸರ ಹೋರಾಟಗಾರ ಅಜಯ್ಶರ್ಮಾ ಬೇಸರ ವ್ಯಕ್ತಪಡಿಸುತ್ತಾರೆ, ೨೦೧೯ರಲ್ಲಿ ೭೩ ಚಿರತೆಗಳು ರಸ್ತೆ ಅಪಘಾತದಲ್ಲಿ, ಇಪ್ಪತ್ತಕ್ಕೂ ಅಧಿಕ ಚಿರತೆಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ, ಸಾಮಾನ್ಯವಾಗಿ ಮಲೆನಾಡಿನಲ್ಲಿ ಮುಂಜಾನೆ ಮಂಜು ಕವಿದಿರುತ್ತೆ, ಆಹಾರವಿಲ್ಲದೇ ನಿತ್ರಾಣಗೊಂಡಿರುವ ಚಿರತೆಗಳು ಮಬ್ಬು ಬೆಳಕಿನಲ್ಲಿ ಇದ್ದಕ್ಕಿದ್ದಂತೆ ಎರಗುವ ರೈಲಿನ ಶಬ್ಧಕ್ಕೆ ವಿಚಲಿತಗೊಂಡು ಆಚೀಚೆ ಹರಿದಾಡಿ ಪ್ರಾಣ ಬಿಟ್ಟಿರುವ ಸಾಧ್ಯತೆಗಳಿವೆ. ಈ ಕುರಿತು ಸಮಗ್ರವಾಗಿ ಅರಣ್ಯ ಇಲಾಖೆ ವರದಿ ನೀಡಬೇಕು, ಚಿರತೆಗಳು ಈ ಭಾಗದಲ್ಲಿ ಸಂಚರಿಸುವುದು ಜನರಿಗೂ ಆತಂಕ ಎಂದು ಬೇಸರ ವ್ಯಕ್ತಪಡಿಸುತ್ತಾರೆ.