ಕರೋನಾವೈರಸ್ ಪೀಡೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಚೀನಾಗೆ ಎಷ್ಟು ಬೇಗ ಈ ಪಿಡುಗಿನಿಂದ ಮುಕ್ತವಾಗುತ್ತೇನೋ ಎಂಬ ಚಿಂತನೆ ಹೆಚ್ಚಾಗಿರುವ ನಡುವೆಯೇ, ಬೀಜಿಂಗ್ನ ದೊರೆಗಳಿಗೆ ಇರುಸು ಮುರುಸು ನೀಡಬಲ್ಲ ವಿಚಾರವೊಂದು ಹಾಗೇ ಸದ್ದು ಮಾಡುತ್ತಿದೆ.
ಚೀನಾದ ಅಧಿಕೃತ ಅಂಕಿಅಂಶಗಳು ತಿಳಿಸಿರುವಂತೆ 500 ಸಾವುಗಳ ಬದಲಾಗಿ 24,589 ಮಂದಿ ಮೃತಪಟ್ಟಿದ್ದಾರೆ ಎಂದು ಚೀನೀ ಬಹುರಾಷ್ಟ್ರೀಯ ಸಂಸ್ಥೆ ಟೆನ್ಸೆಂಟ್ ಇತ್ತೀಚೆಗೆ ಬಹಿರಂಗಪಡಿಸಿದೆ.
ತಾಯ್ವಾನ್ ನ್ಯೂಸ್ ಪ್ರಕಾರ, “ಟೆನ್ಸೆಂಟ್….. ವೈರಾಣು ಪೀಡಿತರು ಹಾಗೂ ಸಾವುಗಳ ಸಂಖ್ಯೆ ಎಷ್ಟೆಂಬ ಸಂಭವನೀಯ ಸಂಖ್ಯೆಗಳನ್ನು ಬಿಡುಗಡೆ ಮಾಡಿದ್ದು, ಇವು ಅಧಿಕೃತ ಬಿಡುಗಡೆಗಿಂತ ಹಲವು ಪಟ್ಟು ಹೆಚ್ಚಿದೆ.”
ತನ್ನ ’Epidemic Situation Tracker,” ಹೆಸರಿನ ಜಾಲಪುಟದಲ್ಲಿ, ಚೀನಾದಲ್ಲಿ ನೋವೆಲ್ ಕರೋನಾ ವೈರಸ್ (2019-nCoV) ಪೀಡಿತರ ಸಂಖ್ಯೆಯು 154,023ರಲ್ಲಿ ಇದ್ದು – ಇದು ಫೆಬ್ರವರಿ 1ರಂದು ಚೀನಾ ನೀಡಿದ ಅಧಿಕೃತ ಅಂಕಿಗಳಿಗಿಂತ ಹತ್ತು ಪಟ್ಟು ಹೆಚ್ಚಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಸಂಕಿನ ಶಂಕಿತರ ಸಂಖ್ಯೆಯು ಅಧಿಕೃತ ಸಂಖ್ಯೆಯ ನಾಲ್ಕು ಪಟ್ಟಿದೆ ಎಂದು ತಿಳಿದುಬಂದಿದೆ.
“ವಾಸಿಯಾದ ಪ್ರಕರಣಗಳು ಕೇವಲ 269ರಷ್ಟಿದ್ದು, ಅಧಿಕೃತ ಸಂಖ್ಯೆಯಾದ 300ಕ್ಕಿಂತ ಸಾಕಷ್ಟು ಕಡಿಮೆ ಇದೆ. ಇದಕ್ಕಿಂತ ದೊಡ್ಡದಾಗಿ, ಸಾವಿನ ಸಂಖ್ಯೆಯನ್ನು 24,589 ಎಂದು ಅಂದಾಜಿಸಲಾಗಿದೆ,” ಎನ್ನಲಾಗಿದೆ.
ನಿಜವಾದ ಅಂಕಿಅಂಶಗಳ ಕುರಿತಂತೆ ನೆಟ್ಟಿಗರಲ್ಲಿ ಸಾಕಷ್ಟು ಗೊಂದಲಗಳು ಮೂಡುತ್ತಿವೆ. ಆದರೆ, ಜಾಗತಿಕ ಮಟ್ಟದಲ್ಲಿ ಸೂಪರ್ ಪವರ್ ರೇಸ್ನಲ್ಲಿರುವ ಚೀನಾ ಇಂಥ ವಿಚಾರಗಳ ಕರಾಳ ಸತ್ಯಗಳನ್ನು ಹೊರಹಾಕದೇ ಇರುವ ಸಾಧ್ಯತೆಗಳೂ ಇರಲಿವೆ. “ವುಹಾನ್ನಲ್ಲಿರುವ ಬಹಳಷ್ಟು ಮೂಲಗಳು ತಿಳಿಸುವಂತೆ, ಸಾಕಷ್ಟು ಮಂದಿ ಕರೋನಾವೈರಸ್ ಪೀಡಿತರಿಗೆ ಇನ್ನೂ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದು, ಆಸ್ಪತ್ರೆಗಳ ಹೊರಗೆ ಸಾಯುತ್ತಿದ್ದಾರೆ,” ಎಂದು ಟೆನ್ಸೆಂಟ್ ತಿಳಿಸಿದೆ.
ಟೆನ್ಸೆಂಟ್ ವರದಿಯೇ ಸತ್ಯವಾಗಿದ್ದಲ್ಲಿ, ಕರೋನಾವೈರಸ್ ಪೀಡಿತರ ಪೈಕಿ ಮೃತಪಟ್ಟವರ ಸಂಖ್ಯೆಯು 16%ನಷ್ಟು ಇರಲಿದೆ. ಈ ಹಿಂದೆ ಬಾಧಿಸಿದ್ದ ಸಾರ್ಸ್ ವೈರಾಣುಗಳಿಗೆ ತುತ್ತಾಗಿದ್ದವರ ಪೈಕಿ 9.6% ನಷ್ಟು ಜನರು ಮೃತಪಟ್ಟಿದ್ದರು.
ಇದೇ ಮಾತನ್ನು ಪುನರುಚ್ಛರಿಸಿರುವ ’ವಾಲ್ ಸ್ಟ್ರೀಟ್ ಜರ್ನಲ್’ ಚೀನಾದಿಂದ ಹೊರಬರುತ್ತಿರುವ ಕರೋನಾವೈರಸ್ ಅಂಕಿಅಂಶಗಳು ಅನುಮಾನಾಸ್ಪದವಾಗಿವೆ ಎಂದಿದೆ.
ಬೀಜಿಂಗ್ನಲ್ಲಿರುವ ಕಾಯ್ಜಿಂಗ್ ಎಂಬ ಸ್ವತಂತ್ರ ಮ್ಯಾಗಝಿನ್ ಒಂದು ಈ ಕುರಿತು ಅಂಕಣ ಹೊರತಂದಿದ್ದು, ಚೀನಾದ ಕಮ್ಯೂನಿಸ್ಟ್ ಪಾರ್ಟಿ ಕರೋನಾವೈರಸ್ ಬಗ್ಗೆ ಉದ್ದೇಶಪೂರಿತವಾಗಿ ಅಂಡರ್ರಿಪೋರ್ಟಿಂಗ್ ಮಾಡುತ್ತಿದೆ ಎಂದು ಆಪಾದನೆ ಮಾಡಿದೆ ಚೀನಾದ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ವ್ಯವಹಾರಗಳ ಕುರಿತು ವರದಿಗಳು ಹಾಗೂ ಕಾಮೆಂಟರಿಗಳನ್ನು ಬರೆಯುವ ಕಾಯ್ಜಿಂಗ್, ನಿಜವಾದ ಅಂಕಿಅಂಶಗಳನ್ನು ವುಹಾನ್ನಲ್ಲಿರುವ ಅಧಿಕಾರಿಗಳು ಹೇಗೆ ಮುಚ್ಚಿಡಲು ಯತ್ನಿಸಿದ್ದಾರೆ ಎಂದು ವರದಿ ಮಾಡಿದೆ.
ಗುರುವಾರದ ವೇಳೆಗೆ, ಚೀನಾದಲ್ಲಿ ಕರೋನಾವೈರಸ್ಗೆ ಬಲಿಯಾದವರ ಅಧಿಕೃತ ಸಂಖ್ಯೆ 563 ಆಗಿದ್ದು, 28,018 ಖಾತರಿಯಾದ ಪ್ರಕರಣಗಳು ’ವರದಿಯಾಗಿವೆ’.