ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಂ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಒಂದಿಲ್ಲೊಂದು ಮುಸ್ಲಿಂ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಲೇ ಇದೆ. ಇದರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿವಾದಗಳನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದೆ.
ದೇಶದ ಹಲವಾರು ವಿಶ್ವವಿದ್ಯಾಲಯಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಾ ಬಂದಿರುವ ಬಿಜೆಪಿ ಪರೋಕ್ಷವಾಗಿ ಕೆಲವು ಶಿಕ್ಷಣ ಸಂಸ್ಥೆಗಳ ಮೇಲೂ ತನ್ನ ಪ್ರಭಾವವನ್ನು ಬೀರಿ ಮುಸ್ಲಿಂ ವಿರೋಧಿ ನೀತಿಗಳನ್ನು ಜಾರಿಗೆ ತರುವತ್ತ ಗಮನ ಹರಿಸುತ್ತಿದೆ.
ದೇಶದ ವಿವಿಧ ನಗರಗಳಲ್ಲಿನ ಕಾಲೇಜುಗಳು 2014 ರವರೆಗೆ ಸುಸೂತ್ರವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಿದ್ದವು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಒಂದೊಂದು ಕಾಲೇಜಿನಲ್ಲಿ ಒಂದೊಂದು ರೀತಿಯ ವಿವಾದಗಳು ಸೃಷ್ಟಿಯಾಗತೊಡಗಿದವು.
ಅದು ಮಂಗಳೂರಿನ ಕಾಲೇಜೊಂದರಲ್ಲಿ ಸ್ಕಾರ್ಫ್ ವಿವಾದವಿರಲಿ, ಇನ್ನಿತರೆ ಕಾಲೇಜುಗಳಲ್ಲಿ ಇಂತಹದ್ದೇ ಕೆಲವು ಸಣ್ಣ ಪುಟ್ಟ ವಿಚಾರಗಳಲ್ಲಿ ವಿವಾದಗಳು ಎದುರಾಗತೊಡಗಿದವು. ಇದೀಗ ಇಂತಹ ವಿವಾದಕ್ಕೆ ಬಿಹಾರದ ರಾಜಧಾನಿ ಪಾಟ್ನಾದ ಕಾಲೇಜೊಂದು ಸಾಕ್ಷಿಯಾಗಿದೆ.
ಇಲ್ಲಿನ ಜೆಡಿ ಮಹಿಳಾ ಕಾಲೇಜಿನಲ್ಲಿ ಬುರ್ಖಾವನ್ನು ನಿಷೇಧಿಸಿ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಇದು ತೀವ್ರ ವಿವಾದಕ್ಕೆ ಗುರಿಯಾಗಿದೆ. ಇದುವರೆಗೆ ಇಲ್ಲದ ನಿಷೇಧ ಈಗೇಕೆ ಎಂಬ ಪ್ರಶ್ನೆ ಎದುರಾಗಿರುವುದರ ಜತೆಗೆ ಉದ್ದೇಶಪೂರ್ವಕವಾಗಿಯೇ ಕಾಲೇಜಿನ ಆಡಳಿತ ಮಂಡಳಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತೊಂದರೆ ಕೊಡಲು ಬುರ್ಖಾವನ್ನು ನಿಷೇಧಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ನಮ್ಮದು ಬಹುಸಂಸ್ಕೃತಿಯ, ಜಾತ್ಯತೀತ ದೇಶ. ಇಲ್ಲಿರುವ ಪ್ರತಿಯೊಂದು ಧರ್ಮ, ಜಾತಿಯವರು ತಮ್ಮ ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ಉಡುಪುಗಳನ್ನು ಧರಿಸಬಹುದು, ತಮ್ಮ ಆಹಾರ ಪದ್ಧತಿಯಂತೆ ಆಹಾರವನ್ನು ಸೇವಿಸಬಹುದು, ತಮ್ಮ ಪದ್ಧತಿಯಂತೆ ಧಾರ್ಮಿಕ ಆಚರಣೆಗಳನ್ನು ಮಾಡಿಕೊಳ್ಳಲು ಸರ್ವಸ್ವತಂತ್ರರಾಗಿದ್ದಾರೆ. ಇದನ್ನು ಯಾರೂ ಕೂಡ ಪ್ರಶ್ನಿಸುವಂತಿಲ್ಲ.
ಆದರೆ, ಇತ್ತೀಚಿನ ವರ್ಷಗಳಲ್ಲಿ ಇಂತಹ ಸಂಪ್ರದಾಯಗಳಿಗೆ ಒಂದಿಲ್ಲಾ ಒಂದು ಕಾರಣವನ್ನು ನೀಡಿ ಅಡ್ಡಿಪಡಿಸಲಾಗುತ್ತಿದೆ. ಇಲ್ಲಿ ಪಾಟ್ನಾದ ಜೆಡಿ ಮಹಿಳಾ ಕಾಲೇಜು ಸಮವಸ್ತ್ರ ನೀತಿಯನ್ನು ಜಾರಿಗೆ ತಂದಿದ್ದು, ಮುಸ್ಲಿಂ ಯುವತಿಯರು ಬುರ್ಖಾ ಧರಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾಲೇಜಿನ ಆಡಳಿತ ಮಂಡಳಿ ಕಳೆದ ಏಳು ವರ್ಷಗಳಿಂದಲೂ ಸಮವಸ್ತ್ರ ಕಡ್ಡಾಯ ಮಾಡಲಾಗಿದೆ. ಇದರಲ್ಲಿ ಹೊಸದೇನಿಲ್ಲ ಎಂದು ಹೇಳಿದೆ. ಈ ಸಮವಸ್ತ್ರ ನೀತಿ ಪ್ರಕಾರ ವಿದ್ಯಾರ್ಥಿನಿಯರು ಸಲ್ವಾರ್ ಕಮೀಜ್ ಮತ್ತು ದುಪ್ಪಟಾ ಧರಿಸಬೇಕು.
ಆದರೆ, ಈ ವಿಚಾರದಲ್ಲಿ ಆಡಳಿತ ಮಂಡಳಿಯ ಬಗ್ಗೆ ಹಲವಾರು ಅನುಮಾನಗಳು ಉಂಟಾಗುತ್ತವೆ. ಏಕೆಂದರೆ, ಕಳೆದ ಏಳು ವರ್ಷಗಳಿಂದಲೂ ಸಮವಸ್ತ್ರವನ್ನು ಕಡ್ಡಾಯ ಮಾಡಲಾಗಿದೆ ಎಂದಾದರೆ ಈ ಅವಧಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬುರ್ಖಾ ಧರಿಸಲು ಅವಕಾಶ ಮಾಡಿಕೊಟ್ಟಿದ್ದಾದರೂ ಏಕೆ? ನೀತಿ ಜಾರಿಯಲ್ಲಿದ್ದರೂ ಈಗ ಇದ್ದಕ್ಕಿದ್ದಂತೆಯೇ ಬುರ್ಖಾ ನಿಷೇಧಿಸಿ ಮತ್ತೊಂದು ಆದೇಶ ಹೊರಡಿಸುವ ಅಗತ್ಯವಾದರೂ ಏನಿತ್ತು?
ಮುಸ್ಲಿಂ ಯುವತಿಯರು ಬುರ್ಖಾ ಧರಿಸಿಕೊಂಡು ಬರುತ್ತಿದ್ದರೂ ಏಳು ವರ್ಷದಿಂದಲೂ ಅದನ್ನು ತಡೆಯಲಾಗದ ಆಡಳಿತ ಮಂಡಳಿಗೆ ನೀತಿಯ ಬಗ್ಗೆ ಜ್ಞಾನೋದಯವಾಗಿರುವುದಾದರೂ ಏಕೆ? ಈ ಆದೇಶದ ಹಿಂದೆ ಯಾವುದಾದರೂ ಬಲಪಂಥೀಯ ವರ್ಗದ ಕೈವಾಡ ಇದೆಯೇ? ಎಂಬ ಗುಮಾನಿ ಇದೆ.
ಶನಿವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ನಿಗದಿಪಡಿಸಿರುವ ಸಮವಸ್ತ್ರವನ್ನು ಧರಿಸಿ ಬರಬೇಕು. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ 250 ರೂಪಾಯಿ ದಂಡ ವಿಧಿಸಲಾಗುವುದು ಎಂದು ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.
ಇದರ ವಿರುದ್ಧ ವಿದ್ಯಾರ್ಥಿನಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಇವರಿಗೆ ಬೆಂಬಲವಾಗಿ ಆರ್ ಜೆಡಿ ಪಕ್ಷ ನಿಂತಿದ್ದು, ಕಾಲೇಜು ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದೆ.
ನಾವಿರುವುದು ಭಾರತದ ಪಾಟ್ನಾದಲ್ಲಿಯೇ ಹೊರತು ಅಫ್ಘಾನಿಸ್ಥಾನದಲ್ಲಿ ಅಲ್ಲ. ಕಾಲೇಜು ಆಡಳಿತ ಮಂಡಳಿ ಬುರ್ಖಾ ನಿಷೇಧ ಮಾಡಿರುವುದು ತಾಲಿಬಾನ್ ಸಂಸ್ಕೃತಿಯನ್ನು ತೋರಿಸುತ್ತದೆ. ಕೂಡಲೇ ಈ ನಿಷೇಧ ಆದೇಶವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದೆ.