ಭಾರತದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ, ಆರ್ಥಿಕ ಹಿಂಜರಿತ, ಕ್ಷೀಣಿಸಿದ ಉದ್ಯೋಗಸೃಷ್ಟಿ ಹೀಗೆ ಹತ್ತು ಹಲವಾರು ವಿಚಾರಗಳಲ್ಲಿ ಕಳೆದ ಐದಾರು ವರ್ಷಗಳಲ್ಲಿ ತೀವ್ರ ಹಿನ್ನಡೆ ಉಂಟಾಗುತ್ತಿದೆ. ಇದಿಷ್ಟೇ ಅಲ್ಲ. ಭಾರತದ ಪಾಲಿಗೆ ಅಪಖ್ಯಾತಿಯನ್ನು ತರುವಂತಹ ಹಿನ್ನಡೆಯೂ ಕಳೆದ ಒಂದು ವರ್ಷದಲ್ಲಿ ನಡೆದಿದೆ. ಅದೆಂದರೆ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತ ಹಿನ್ನಡೆ ಸಾಧಿಸಿದೆ. ಅದೂ ಕೂಡ 10 ರ್ಯಾಂಕ್ ನಷ್ಟು ಹಿನ್ನಡೆ ಪಡೆದಿದೆ.
2018 ರಲ್ಲಿ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತ 41 ನೇ ರ್ಯಾಂಕ್ ನಲ್ಲಿತ್ತು. ಆದರೆ, 2019 ರಲ್ಲಿ 51 ನೇ ರ್ಯಾಂಕಿಗೆ ಇಳಿದಿದೆ. ಇಷ್ಟೇ ಅಲ್ಲ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಬಿಜೆಪಿ ಅಧಿಕಾರಕ್ಕೆ ಬಂದ ವರ್ಷ ಅಂದರೆ 2014 ರಲ್ಲಿ ಭಾರತದ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ 27 ನೇ ರ್ಯಾಂಕ್ ಗಳಿಸಿ ಉತ್ತಮ ಸ್ಥಾನದಲ್ಲಿತ್ತು. ಆದರೆ, ಕಳೆದ ಆರು ವರ್ಷಗಳಿಂದ ಈ ರ್ಯಾಂಕ್ ಪಟ್ಟಿಯಲ್ಲಿ ಕುಸಿಯುತ್ತಾ ಬಂದಿರುವ ಭಾರತ ಈಗ 51 ಸ್ಥಾನಕ್ಕೆ ಬಂದು ನಿಲ್ಲುವ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳುತ್ತಿದೆ.
ದಿ ಎಕನಾಮಿಸ್ಟ್ ಇಂಟಲಿಜೆನ್ಸ್ ಯೂನಿಟ್ 2006 ರಿಂದ ಪ್ರತಿವರ್ಷ ಈ ಸೂಚ್ಯಂಕವನ್ನು ಸಿದ್ಧಪಡಿಸುತ್ತಾ ಬಂದಿದೆ. ಬಹುತೇಕ ಎಲ್ಲಾ ದೇಶಗಳಲ್ಲಿರುವ ಪ್ರಜಾಸತ್ತಾತ್ಮಕ ವಾತಾವರಣದ ಬಗ್ಗೆ ಸಮೀಕ್ಷೆಯನ್ನು ನಡೆಸುತ್ತದೆ. 2019 ರಲ್ಲಿ ದೇಶದಲ್ಲಿ ಪ್ರಜಾಸತ್ತಾತ್ಮಕವಾದ ವಾತಾವರಣದ ಬಗ್ಗೆ 70 ಪ್ರಶ್ನೆಗಳನ್ನು ಸಮೀಕ್ಷೆಯಲ್ಲಿ ಕೇಳಲಾಗಿತ್ತು. ಈ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಬಹುತೇಕ ಮಂದಿ ದೇಶದಲ್ಲಿನ ಪ್ರಜಾಸತ್ತಾತ್ಮಕ ವ್ಯವಸ್ಥೆ ಬಗ್ಗೆ ತೀವ್ರ ಆತಂಕ ಸೃಷ್ಟಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.
2014 ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದ ಸಂದರ್ಭದಲ್ಲಿ ನಾಗರಿಕರಲ್ಲಿ ಸಾಕಷ್ಟು ನಿರೀಕ್ಷೆಗಳಿದ್ದವು. ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ಸರ್ಕಾರದ ಕಾರ್ಯಚಟುವಟಿಕೆಗಳು ಮತ್ತು ನಿರ್ವಹಣೆಗಳು, ರಾಜಕೀಯ ಸಂಸ್ಕೃತಿ ಹಾಗೂ ನಾಗರಿಕರಿಗೆ ಇರುವ ಸ್ವಾತಂತ್ರ್ಯದ ಬಗ್ಗೆ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿದ್ದವು. ಈ ನಿರೀಕ್ಷೆಗಳೊಂದಿಗೇ ದೇಶದ ನಾಗರಿಕರು ಹೊಸ ಸರ್ಕಾರ ಇಡಲಾರಂಭಿಸಿದ ಪ್ರತಿಯೊಂದು ಹೆಜ್ಜೆಯನ್ನೂ ತುಂಬಾ ಎಚ್ಚರಿಕೆಯಿಂದ ನೋಡುತ್ತಿದ್ದರು. ಅಧಿಕಾರಕ್ಕೆ ಬಂದ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಸರ್ಕಾರ ಮತ್ತು ನಾಗರಿಕರ ನಡುವಿನ ಸಂಬಂಧ ಉತ್ತಮವಾಗಿಯೇ ಇತ್ತು. ಆದರೆ, 2015 ರಲ್ಲಿ ಸ್ವಲ್ಪ ಮಟ್ಟಿಗೆ ನಾಗರಿಕರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗಿತ್ತು ಎಂಬುದನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡವರು ಆತಂಕಗೊಂಡಿದ್ದರು.
ದಿನದಿಂದ ದಿನಕ್ಕೆ ದೇಶದ ರಾಜಕೀಯ ಸಂಸ್ಕೃತಿಯಲ್ಲಿ ತೀವ್ರ ರೀತಿಯ ಬದಲಾವಣೆ ಆಗತೊಡಗಿ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ನಡುವಿನ ಅಂತರ ಹೆಚ್ಚಾಗತೊಡಗಿತು. ಇದರಿಂದಾಗಿ ಸಾರ್ವಜನಿಕರು ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಕಡಿಮೆ ಮಾಡಲಾರಂಭಿಸಿದರು. ಇದರ ಪರಿಣಾಮ ದೇಶದ ಅಂಕ ಈ ಎರಡೂ ವಿಭಾಗಗಳಲ್ಲಿ ಕಡಿಮೆಯಾಗತೊಡಗಿ, ರ್ಯಾಂಕ್ ನಲ್ಲಿಯೂ ಹಿಂದೆ ಬಿದ್ದಿತು.
ಆದರೆ, ಇದಾದ ಮರುವರ್ಷ ಅಂದರೆ 2016 ರಲ್ಲಿ ಆಡಳಿತಾರೂಢ ಬಿಜೆಪಿ ಕೆಲವು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಜಯಗಳಿಸಿದ್ದರಿಂದ ರಾಜಕೀಯ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸ್ಥಿರತೆಯನ್ನು ಹೊಂದಿದ ಪರಿಣಾಮ ರ್ಯಾಂಕ್ ಅನ್ನು ಉತ್ತಮಪಡಿಸಿಕೊಂಡಿತ್ತು.
ಇನ್ನು 2017 ಭಾರತದ ಪಾಲಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರಾಳ ವರ್ಷವೆಂದೇ ಹೇಳಬಹುದು. ಈ ವರ್ಷ ಬಿಜೆಪಿ ಸರ್ಕಾರ ಘೋಷಣೆ ಮಾಡಿ ಜಾರಿಗೆ ತಂದ ಕೆಲವು ನೀತಿಗಳ ವಿರುದ್ಧ ದೇಶದೆಲ್ಲೆಡೆ ಟೀಕೆಗಳು, ವಿರೋಧಗಳು ವ್ಯಕ್ತವಾದವು. ಆದರೆ, ಈ ವಿರೋಧ ಮತ್ತು ಪ್ರತಿಭಟನೆಗಳನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರ ಬಲಪ್ರಯೋಗ ಮಾಡಿತು. ಹಲವು ರಾಜ್ಯಗಳಲ್ಲಿ ಗೋಸಂರಕ್ಷಣೆ ನೆಪದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆದವು ಮತ್ತು ಕೆಲವರನ್ನು ಹತ್ಯೆಯನ್ನೂ ಮಾಡಲಾಯಿತು. ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದವರ ದನಿಯನ್ನು ಅಡಗಿಸುವ ಪ್ರಯತ್ನಗಳು ಎಲ್ಲೆಡೆ ನಡೆದವು. ಈ ಎಲ್ಲಾ ಘಟನಾವಳಿಗಳಿಂದ ದೇಶದಲ್ಲಿ ಪ್ರಜಾಸತ್ತಾತ್ಮಕ ವಾತಾವರಣಕ್ಕೆ ಭಾರೀ ಪೆಟ್ಟು ಬಿದ್ದಿತು. ಇದರ ಪರಿಣಾಮ ಭಾರತ ಜಾಗತಿಕ ಪ್ರಜಾಸತ್ತಾತ್ಮಕ ಸೂಚ್ಯಂಕದಲ್ಲಿ 10 ರ್ಯಾಂಕಿನಷ್ಟು ಕೆಳಗಿಳಿಯಿತು.
2018 ರಲ್ಲೂ ಇದೇ ರೀತಿಯ ಪರಿಸ್ಥಿತಿಗಳು ಮುಂದುವರಿದವು. ಒಂದು ರೀತಿಯಲ್ಲಿ 2017 ರ ವಾತಾವರಣವೇ 2018 ರಲ್ಲೂ ಮುಂದುವರಿದು ಜನಸಾಮಾನ್ಯರಲ್ಲಿ ಭೀತಿ ಆವರಿಸಿತ್ತು. ಅದರಲ್ಲಿಯೂ ಅಲ್ಪಸಂಖ್ಯಾತರು ಭಯಗೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂದಿನ ವರ್ಷದಂತೆಯೇ ಈ ವರ್ಷವೂ ಇದೇ ಪರಿಸ್ಥಿತಿ ಇದ್ದ ಹಿನ್ನೆಲೆಯಲ್ಲಿ ಸೂಚ್ಯಂಕದಲ್ಲಿ ಯಾವುದೇ ಬದಲಾವಣೆ ಕಂಡು ಬರದಿದ್ದರೂ ರ್ಯಾಂಕ್ ಪಟ್ಟಿಯಲ್ಲಿ ಭಾರತ ಒಂದು ಸ್ಥಾನ ಮೇಲಕ್ಕೆ ಜಿಗಿದಿತ್ತು.
ಇನ್ನು ಕಳೆದ ವರ್ಷ ಅಂದರೆ 2019 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಐದಾರು ವರ್ಷಗಳಲ್ಲಿ ಅತಿ ಹೆಚ್ಚು ಪ್ರತಿಭಟನೆಗಳನ್ನು ಕಂಡ ವರ್ಷ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ವಾಪಸ್ ಪಡೆದದ್ದು ಪ್ರಜಾಸತ್ತಾತ್ಮಕವಾಗಿರಲಿಲ್ಲ. ಈ ವಿಶೇಷಾಧಿಕಾರವನ್ನು ತೆಗೆದುಹಾಕುವ ಮೂಲಕ ಕೇಂದ್ರ ಸರ್ಕಾರ ಅಲ್ಲಿನ ಜನರ ಹಕ್ಕನ್ನು ಕಿತ್ತುಕೊಂಡಿತು. ಇನ್ನು ಅತಿ ಹೆಚ್ಚು ವಿವಾದಕ್ಕೆ ಗುರಿಯಾಗಿ ಪ್ರಜಾಸತ್ತಾತ್ಮಕ ವಿರೋಧಿ ಕ್ರಮವೆಂದರೆ ಧರ್ಮದ ಆಧಾರದಲ್ಲಿ ವಿದೇಶಿ ಅಕ್ರಮ ವಲಸಿಗರಿಗೆ ಪೌರತ್ವ ನೀಡುವ ಕಾನೂನನ್ನು ತರಲು ಹೊರಟಿದ್ದು. ಇದರ ವಿರುದ್ಧ ದೇಶದ ಮೂಲೆ ಮೂಲೆಗಳಲ್ಲಿ ಪ್ರತಿಭಟನೆಗಳು ನಡೆದು ಹಿಂಸಾಚಾರಗಳೂ ಸಂಭವಿಸಿದವು. ಈ ಪ್ರತಿಭಟನೆಗಳನ್ನು ದಮನ ಮಾಡಲು ಸರ್ಕಾರ ಪೊಲೀಸ್ ಪಡೆಗಳನ್ನು ಬಳಸಿ ದೌರ್ಜನ್ಯ ಎಸಗುವ ಮೂಲಕ ನಾಗರಿಕ ಹಕ್ಕುಗಳನ್ನು ಹನನ ಮಾಡುವಂತೆ ಮಾಡಿತು. ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತ ತೀವ್ರ ಹಿನ್ನಡೆ ಅನುಭವಿಸಲು ಇದೊಂದೇ ಪ್ರಮುಖ ಕಾರಣವಾಗಿತ್ತು.
ಇಂತಹ ಜನವಿರೋಧಿ ನೀತಿಗಳನ್ನು ಜಾರಿಗೆ ತರಲು ಮುಂದಾಗುವ ಮೂಲಕ ಬಿಜೆಪಿ ಸರ್ಕಾರ ದೇಶದಲ್ಲಿ ನಾಗರಿಕರ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಇದರಿಂದಾಗಿ ದೇಶದ ನಾಗರಿಕ ಹಕ್ಕುಗಳಿಗೆ ಗರಿಷ್ಠ ಮಟ್ಟದ ಅಪಾಯ ಎದುರಾಗಿದೆ ಎಂಬ ಆತಂಕವನ್ನು ಬಹುತೇಕ ಜನರು ವ್ಯಕ್ತಪಡಿಸಿದ್ದಾರೆ.
ಇನ್ನು 2019 ರ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತ 41 ನೇ ರ್ಯಾಂಕ್ ನಿಂದ 51 ರ್ಯಾಂಕಿಗೆ ಕುಸಿದಿದ್ದರೆ, ನಾರ್ವೆ ಮೊದಲ ಸ್ಥಾನದಲ್ಲಿದೆ ಮತ್ತು ಉತ್ತರ ಕೊರಿಯಾ ಕೊನೆಯ ಸ್ಥಾನದಲ್ಲಿದೆ.