ಆರು ವರ್ಷಗಳ ಹಿಂದೆ ಮೊದಲ ಬಾರಿಗೆ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರಿಗೆ ಪ್ರಪಂಚದ ಇಂಥ ರಾಷ್ಟ್ರದಲ್ಲಿ ಅದ್ದೂರಿ ಸ್ವಾಗತ ದೊರೆತಿಲ್ಲ ಎನ್ನುವಂತಿಲ್ಲ. ಅಷ್ಟರಮಟ್ಟಿಗೆ ಮೋದಿಯವರ ದೇಶ-ವಿದೇಶಿ ಭೇಟಿಯನ್ನು ಹಬ್ಬದಂತೆ ಮಾಧ್ಯಮಗಳಲ್ಲಿ ಬಿಂಬಿಸಿ, ಜನಮಾನಸದಲ್ಲಿ ಮೋದಿಯವರನ್ನು ಭಾರತ ಇಂದೆಂದೂ ಕಂಡಿರದ ಮಹಾನ್ ನಾಯಕ ಎನ್ನುವಷ್ಟರಟ್ಟಿಗೆ ಪ್ರತಿಷ್ಠಾಪಿಸಲಾಗಿದೆ. ಇದನ್ನೇ ತನ್ನ ಮತಬ್ಯಾಂಕ್ ಭದ್ರಪಡಿಸಲು ಹಾಗೂ ವಿರೋಧಿಗಳನ್ನು ಅಣಿಯಲು ಬಳಸಿದ ಬಿಜೆಪಿಯು ಮೋದಿಯಿಂದಾಗಿ ದೇಶದ ವರ್ಚಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುತ್ತಿದೆ ಎಂದು ಸಾರುವುದು ಇಂದಿಗೂ ನಿಂತಿಲ್ಲ. ವಾಸ್ತವದಲ್ಲಿ ಮೋದಿಯವರ ವಿದೇಶ ಪ್ರವಾಸದಿಂದ ಭಾರತಕ್ಕೆ ಆಗಿರುವ ಲಾಭದ ಚರ್ಚೆ ನಡೆಸಿದರೆ ಆರ್ಥಿಕವಾಗಿ ಅತ್ಯಂತ ಕಠಿಣ ಸಂದರ್ಭಕ್ಕೆ ಎದುರಾಗುತ್ತಿರುವ ಭಾರತದ ಭಯಾನಕ ಸತ್ಯ ಹೊರಬೀಳಬಹುದು. ಆದರೆ, ಮೋದಿಯವರನ್ನು ಮಹಾನ್ ನಾಯಕನನ್ನಾಗಿ ಮಾಡಲು ಹೊರಟ ಬಿಜೆಪಿಯು ತನ್ನದೇ ಪಕ್ಷದ ಸರ್ಕಾರ ಇರುವ ಅಸ್ಸಾಂಗೆ ಪ್ರಧಾನಿ ಭೇಟಿ ಸರಾಗಗೊಳಿಸಲು ಆಗದ ಸ್ಥಿತಿ ನಿರ್ಮಿಸಿಕೊಂಡಿದೆ. ಸತತ ಎರಡನೇ ಬಾರಿಗೆ ಅಸ್ಸಾಂನಲ್ಲಿ ಆಯೋಜಿತವಾಗಿರುವ ಕಾರ್ಯಕ್ರಮದಿಂದ ಮೋದಿ ಹಿಂದೆ ಸರಿಯುವಂತಾಗಿರುವುದು ಬಿಜೆಪಿ ನಾಯಕತ್ವಕ್ಕೆ ತೀವ್ರ ಇರುಸು ಮುರುಸು ಉಂಟುಮಾಡಿದ್ದು, ವಿರೋಧ ಪಕ್ಷಗಳಿಗೆ ಪ್ರಬಲ ಅಸ್ತ್ರ ದೊರೆತಿದೆ. ಇದಕ್ಕೆ ಕಾರಣ ಆರ್ ಎಸ್ ಎಸ್ -ಬಿಜೆಪಿಯ ಮಹತ್ವಾಕಾಂಕ್ಷಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ).
ಒಂದು ತಿಂಗಳ ಹಿಂದೆ ಸಿಎಎ ಜಾರಿಗೊಳಿಸಿದ ಮೋದಿ ಸರ್ಕಾರದ ವಿರುದ್ಧದ ಪ್ರತಿಭಟನೆ ಮೊದಲಿಗೆ ಆರಂಭವಾಗಿದ್ದೇ ಅಸ್ಸಾಂನಲ್ಲಿ. ವಿವಿಧ ಬುಡಕಟ್ಟು ಸಮುದಾಯಗಳು, ಮುಸ್ಲಿಮರು, ಅಸ್ಸಾಮಿಗಳು, ಅಸ್ಸಾಮಿ ಮಾತನಾಡುವ ಬಂಗಾಳಿಗಳನ್ನು ಒಳಗೊಂಡಿರುವ ಈಶಾನ್ಯ ರಾಜ್ಯಗಳು ಅದರಲ್ಲೂ ಅಸ್ಸಾಂ ಅತ್ಯಂತ ವಿಭಿನ್ನವಾದ ಭೌಗೋಳಿಕ-ರಾಜಕೀಯ ವಾತಾವರಣ ಹೊಂದಿರುವ ಪ್ರದೇಶ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಈಚೆಗೆ ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಜಾರಿಗೊಳಿಸಿದ್ದರಿಂದ ನಾಲ್ಕು ಲಕ್ಷ ಮುಸ್ಲಿಮರು ಸೇರಿದಂತೆ 19 ಲಕ್ಷ ಮಂದಿ ಭಾರತೀಯ ಪೌರತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅಸ್ಸಾಂ ಉದಾಹರಣೆಯಾಗಿಟ್ಟು ಇಡೀ ದೇಶದಲ್ಲಿ ಎನ್ ಆರ್ ಸಿ ಜಾರಿಗೊಳಿಸಲಾಗುವುದು ಎಂದು ಸಾರಿ ಹೇಳಿದ್ದ ಅಮಿತ್ ಶಾ ಅವರು ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಎದ್ದಿರುವ ಕಿಚ್ಚನ್ನು ಸಮಸ್ಥಿತಿಗೆ ತರಲು ಪಡುತ್ತಿರುವ ಪಡಿಪಾಟಲು ಅಷ್ಟಿಷ್ಟಲ್ಲ. ಸಿಎಎ ವಿರುದ್ಧದ ಹೋರಾಟದಲ್ಲಿ ಐದು ಜನರು ಅಸ್ಸಾಂನಲ್ಲಿ ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಜನರ ಮೇಲೆ ಎರಗಿದ ಪೊಲೀಸರ ವಿರುದ್ಧ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಸಿಎಎ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ರೈತ ನಾಯಕ ಅಖಿಲ್ ಗೊಗೊಯ್ ಅವರನ್ಙು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ ಎ) ಬಂಧಿಸಿದೆ. ಪ್ರತಿಭಟನೆ ತಣಿಸಲು ಹೋರಾಟದ ಮುಂಚೂಣಿಯಲ್ಲಿರುವವರನ್ನು ಪೊಲೀಸರು ಬಂಧಿಸುವುದು ಸಹಜ. ಆದರೆ, ಅಖಿಲ್ ಗೊಗೊಯ್ ಅವರನ್ನು ಎನ್ ಐ ಎ ಏಕೆ ಬಂಧಿಸಿದೆ ಎಂಬುದು ಇಂದಿಗೂ ಅರ್ಥವಾಗಿಲ್ಲ. ಸರ್ಕಾರವು ಅವರ ಮೇಲೆ ಅಷ್ಟು ಗಂಭೀರವಾಗಲು ಕಾರಣ ಇಲ್ಲದಿಲ್ಲ. ಹೋರಾಟದ ಕಿಚ್ಚು ವ್ಯಾಪಕವಾಗಿದ್ದರಿಂದ ಘಾಸಿಗೊಂಡು ಒಂದು ವಾರಕ್ಕೂ ಹೆಚ್ಚು ಕಾಲ ಅಸ್ಸಾಂನಲ್ಲಿ ಇಂಟರ್ನೆಟ್ ಬಂದ್ ಮಾಡುವ ಕೆಲಸವನ್ನು ಬಿಜೆಪಿಯ ಸೊರಬಾನಂದ ಸೋನಾವಾಲಾ ಸರ್ಕಾರ ಮಾಡಿ ತೀವ್ರ ಆಕ್ರೋಶಕ್ಕೆ ತುತ್ತಾಗಿದೆ. ಹೀಗೆ ಹೋರಾಟ ಹತ್ತಿಕ್ಕಲು ಮುಂದಾದ ಸರ್ಕಾರವು ತಾನೇ ಎಣೆದ ಬಲೆಯಲ್ಲಿ ಸಿಲುಕಿಕೊಂಡಿದೆ.
ಇಷ್ಟು ಮಾತ್ರವಲ್ಲದೇ, ತ್ರಿಪುರದಲ್ಲಿ ಸರ್ಕಾರ ರಚಿಸಿರುವ ಬಿಜೆಪಿಯ ಮಿತ್ರಪಕ್ಷವಾದ ತ್ರಿಪುರ ಸ್ವದೇಶಿ ನಾಗರಿಕರ ಒಕ್ಕೂಟವು (ಐಪಿಎಫ್ ಟಿ) ಸಿಎಎ ವಿರೋಧಿಸಿ ನಿರ್ದಿಷ್ಟವಾಧಿ ಮುಷ್ಕರ ಆರಂಭಿಸಿದ್ದು, ಬುಡಕಟ್ಟು ಜನಾಂಗ ಹೆಚ್ಚಾಗಿರುವ ಪ್ರದೇಶಗಳನ್ನು ಪ್ರತ್ಯೇಕ ರಾಜ್ಯವಾಗಿ ಘೋಷಿಸುವಂತೆ ಆರಂಭಿಸಿರುವುದು ಮೋದಿ-ಶಾ ನಾಯಕತ್ವಕ್ಕೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ. ಐಪಿಎಫ್ ಟಿ ರಾಜಕೀಯ ತಂತ್ರಗಾರಿಕೆ ಭಾಗವಾಗಿ ಧರಣಿ ಆರಂಭಿಸಿದೆ ಎನ್ನಲಾಗುತ್ತಿದೆ. ಆದರೆ, ಅಧಿಕಾರದ ಬೆನ್ನಿಗೆ ಬಿದ್ದು ವಿಭಿನ್ನ ರಾಜಕೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿಯು ಅದಕ್ಕೆ ತಕ್ಕ ಬೆಲೆತೆರಬೇಕಾದ ಸ್ಥಿತಿ ನಿರ್ಮಿಸಿಕೊಂಡಿದೆ.
ಮೋದಿಯವರು ಅಸ್ಸಾಂಗೆ ಭೇಟಿ ನೀಡಲು ಮುಂದಾದರೆ ಹೋರಾಟವನ್ನು ವ್ಯಾಪಕಗೊಳಿಸಲಾಗುವುದು ಎಂದು ಅಸ್ಸಾಂನ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (ಎಐಎಸ್ ಯು) ಮತ್ತು ಎಜೆವೈಸಿಪಿಯು ಬಿಜೆಪಿ ನಾಯಕತ್ವಕ್ಕೆ ಗಂಭೀರ ಎಚ್ಚರಿಕೆ ನೀಡಿವೆ. ದಕ್ಷಿಣ ಭಾರತದ ತಮಿಳುನಾಡು, ಕೇರಳ ಹಾಗೂ ಕರ್ನಾಟಕಕ್ಕೆ ಭೇಟಿ ನೀಡುವಾಗ ಟ್ವಿಟರ್ ನಲ್ಲಿ ಗೋಬ್ಯಾಕ್ ಮೋದಿ ಅಭಿಯಾನದಿಂದ ಮುಜುಗರ ಅನುಭವಿಸುತ್ತಿದ್ದ ಬಿಜೆಪಿಯು ಅಸ್ಸಾಂಗೆ ಮೋದಿಯವರ ಭೇಟಿಯನ್ನು ಸಾಧ್ಯವಾಗಿಸಲಾಗದೇ ವಿರೋಧಿಗಳ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದು ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ವಿವರಿಸಲಾಗದ ಸಂಕಟವನ್ನು ತಂದಿಟ್ಟಿರುವುದು ಸುಳ್ಳಲ್ಲ. ಮುಂದಿನ ದಿನಗಳಲ್ಲಿ ಅಸ್ಸಾಂ ಮಾದರಿಯನ್ನು ದೇಶದ ಇತರೆ ರಾಜ್ಯಗಳು ಅನುಸರಿಸಲು ಮುಂದಾದರೆ ಹೇಗೆ? ಇಂದಿಗೂ ಸಮಕಾಲೀನ ಭಾರತದಲ್ಲಿ ವರ್ಚಸ್ವಿ ನಾಯಕನಾದ ಮೋದಿಯವರಿಗೆ ಮೂರು ಕೋಟಿ ಜನಸಂಖ್ಯೆ ಹೊಂದಿರುವ ಪುಟ್ಟ ರಾಜ್ಯ ಒಡ್ಡುತ್ತಿರುವ ಸವಾಲು ಅಸಾಮಾನ್ಯವಾದದ್ದು. ಕೇಂದ್ರ ಹಾಗೂ ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರವಿದ್ದರೂ ಹೋರಾಟವನ್ನು ಬಿಜೆಪಿ ಎದುರಿಸಲಾಗುತ್ತಿಲ್ಲ ಎಂದಾದರೆ ಸಮಸ್ಯೆಯನ್ನು ಪರಿಹರಿಸುವ ಕೆಲಸವನ್ನು ಸರ್ಕಾರ ಏಕೆ ಮಾಡುತ್ತಿಲ್ಲ?
ಡಿಸೆಂಬರ್ ಮೊದಲ ವಾರದಲ್ಲಿ ಅಸ್ಸಾಂನಲ್ಲಿ ಜಪಾನ್ ಪ್ರಧಾನಿ ಶಿಂಜೊ ಅಬೆ ಜೊತೆ ಶೃಂಗಸಭೆ ನಡೆಸಬೇಕಿದ್ದ ಮೋದಿಯವರು ಸಿಎಎ ಹೋರಾಟ ವ್ಯಾಪಕವಾದ್ದರಿಂದ ಕಾರ್ಯಕ್ರಮ ರದ್ದುಗೊಳಿಸಿದ್ದರು. ಈಗ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ “ಖೇಲೋ ಇಂಡಿಯಾ” ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಮೋದಿಯವರು ಅಸ್ಸಾಂನ ನಾಗರಿಕ ಒಕ್ಕೂಟಗಳ ಪ್ರತಿಭಟನೆ ಹತ್ತಿಕ್ಕಲಾಗದೆ ಕಾರ್ಯಕ್ರಮದಿಂದ ಹಿಂದೆ ಸರಿದ್ದಾರೆ.
ಕಳೆದ ವಾರ ಅಸ್ಸಾಂನಲ್ಲೇ ಸಿಎಎ ಬೆಂಬಲಿಸಿದ ನಾಗರಿಕರ ಸಮಾವೇಶ ಮಾಡಿ ಬಿಜೆಪಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಕರೆಸಿದ್ದ ಸ್ಥಳೀಯ ನಾಯಕತ್ವವು ಕಾರ್ಯಕ್ರಮ ಯಶಸ್ವಿಯಾಗಿದ್ದು, ಜನರು ಬಿಜೆಪಿ ಪರವಾಗಿದ್ದಾರೆ ಎಂದು ಘೋಷಿಸಿತ್ತು. ಒಂದೊಮ್ಮೆ ಬಿಜೆಪಿ ನಾಯಕರು ಹೇಳಿದಂತೆ ಜನರು ಪಕ್ಷದ ಪರವಾಗಿದ್ದರೆ ಪೂರ್ವ ನಿಗದಿತ ಕಾರ್ಯಕ್ರಮವನ್ನು ಮೋದಿ ರದ್ದುಗೊಳಿಸಿದ್ದೇಕೆ? ಇನ್ನೂ ಒಂದು ಆಸಕ್ತಿಕರ ಬೆಳವಣಿಗೆಯೆಂದರೆ ಸತತವಾಗಿ ನಡೆಯುತ್ತಿರುವ ಸಿಎಎ ವಿರೋಧಿ ಹೋರಾಟದಿಂದ ಕಂಗಾಲಾಗಿರುವ ಅಸ್ಸಾಂ ಬಿಜೆಪಿ ಚತುರ ಹಾಗೂ ಹಣಕಾಸು ಸಚಿವ ಹೇಮಂತ್ ಬಿಸ್ವಾಸ್ ಅವರಿಗೆ ರಸ್ತೆ ಮಾರ್ಗದಲ್ಲಿ ತೆರಳಲು ಪ್ರತಿಭಟನಾಕಾರರು ಅವಕಾಶ ಮಾಡಿಕೊಡದೇ ಇದ್ದುದರಿಂದ ಅವರು ಐದು ಕಿಲೋ ಮೀಟರ್ ತಲುಪಲು ವಿಮಾನ ಬಳಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಇದು ಅಲ್ಲಿನ ವಾಸ್ತವದ ಚಿತ್ರಣ. ಬಿಜೆಪಿ ಹೇಳುವಂತೆ ಎಲ್ಲವೂ ಸರಿ ಇದ್ದರೆ ರಾಜ್ಯ ಸಚಿವರು ಕೇವಲ ಐದು ಕಿಲೋ ಮೀಟರ್ ಗೆ ವಿಮಾನದಲ್ಲಿ ಪ್ರಯಾಣಿಸುವ ಅಗತ್ಯವೇನಿತ್ತು? ಮೊಂಡುತನ ಬಿಟ್ಟು ಸಿಎಎ ವಿಚಾರದಲ್ಲಿ ತನ್ನ ನಿರ್ಧಾರ ಪರಾಮರ್ಶಿಸುವ ಕೆಲಸ ಮಾಡುವುದರಿಂದ ಬಿಜೆಪಿ ಇನ್ನಷ್ಟು ಅಡ್ಡಿ-ಆತಂಕಗಳಿಂದ ಪಾರಾಗಬಹುದು. ಅಹಂ ಮುಂದು ಮಾಡಿ ತನ್ನ ತೀರ್ಮಾನಕ್ಕೆ ಜೋತುಬಿದ್ದರೆ ಕಮಲ ಪಾಳೆಯವು ಗಂಭೀರ ಬೆಲೆ ತೆರಬೇಕಾಗಬಹುದು.