ಕಳೆದ ಒಂದು ತಿಂಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವಿರುದ್ಧದ ಹೋರಾಟದಿಂದ ಜಗತ್ತಿನ ಗಮನಸೆಳೆದಿದ್ದ ರಾಷ್ಟ್ರ ರಾಜಧಾನಿ ದೆಹಲಿಯು ವಿಧಾನಸಭೆ ಚುನಾವಣೆಗೆ ಅಣಿಯಾಗಿದೆ. ವಿವಾದಿತ ನೀತಿ-ನಿರೂಪಣೆಗಳಿಂದ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿರುವ, ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿಗಳ ಮೇಲಿನ ಮಾರಣಾಂತಿಕ ಹಲ್ಲೆಯಿಂದ ಕುಖ್ಯಾತಿ ಗಳಿಸಿರುವ, ಎಲ್ಲಕ್ಕಿಂತ ಮಿಗಿಲಾಗಿ ಕಳೆದ ಒಂದು ವರ್ಷದಿಂದ ಐದು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ, ದೇಶದ ಆರ್ಥಿಕತೆಯನ್ನು ತುರ್ತು ಪರಿಸ್ಥಿತಿಗೆ ದೂಡಿರುವ ಬಿಜೆಪಿಗೆ 70 ಸದಸ್ಯ ಬಲದ ವಿಧಾನಸಭಾ ಚುನಾವಣೆ ಗೆಲ್ಲುವುದು ಅತ್ಯಂತ ಮಹತ್ವದ್ದಾಗಿದೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಏಳು ತಿಂಗಳ ಹಿಂದೆ ಭರ್ಜರಿ ಬಹುಮತ ಪಡೆದು ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ಪಾಳೆಯಕ್ಕೆ 2015ರ ದೆಹಲಿ ವಿಧಾನಸಭಾ ಚುನಾವಣೆಯ ಸೋಲನ್ನು ಅರಗಿಸಿಕೊಳ್ಳಲಾಗಿಲ್ಲ. ಈ ಬಾರಿ ಗೆದ್ದು, ತನ್ನೆಲ್ಲಾ ವಿವಾದಾತ್ಮಕ ತೀರ್ಮಾನಗಳಿಗೆ ಜನರ ಬೆಂಬಲವಿದೆ ಎಂದು ಸಾರುವುದರೊಂದಿಗೆ ಅರವಿಂದ್ ಕೇಜ್ರಿವಾಲ್ ಹಾಗೂ ಕಾಂಗ್ರೆಸ್ ನಾಯಕತ್ವದ ವಿರುದ್ಧ ಸಮರ ತೀವ್ರಗೊಳಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಆದರೆ, ಮೋದಿ-ಶಾ ಜೋಡಿಯ ಗೆಲುವಿನ ಹಾದಿ ಅಷ್ಟು ಸುಲಭ ಇಲ್ಲ ಎಂಬುದು ಅಷ್ಟೇ ಸತ್ಯ.
2019ರ ಲೋಕಸಭಾ ಚುನಾವಣೆಗೂ ಮುನ್ನ ನಡೆದ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸಗಡ ವಿಧಾನಸಭಾ ಚುನಾವಣೆಗಳಲ್ಲಿ ಸಮಾಧಾನಕರ ಗೆಲುವು ಕಂಡಿರುವ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಬದಲಾದ ರಾಜಕೀಯ ಸನ್ನಿವೇಶದ ಲಾಭ ಪಡೆದು ಶಿವಸೇನೆ, ಎನ್ ಸಿಪಿಯನ್ನೊಳಗೊಂಡ ಮಹಾ ಅಗಾಡಿ ಸರ್ಕಾರದಲ್ಲಿ ಪಾಲುದಾರಿಕೆ ಪಡೆಯುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಟ್ಟಿದೆ. ಕಳೆದ ತಿಂಗಳು ಬುಡಕಟ್ಟು ಪ್ರಾಬಲ್ಯದ ಜಾರ್ಖಂಡ್ ನಲ್ಲಿ ಕಮಲ ಪಾಳೆಯದಿಂದ ಜೆಎಂಎಂ, ಕಾಂಗ್ರೆಸ್ ಹಾಗೂ ಆರ್ ಜೆ ಡಿ ನೇತೃತ್ವದ ಮೈತ್ರಿಕೂಟ ಅಧಿಕಾರ ಕಿತ್ತುಕೊಳ್ಳುವ ಮೂಲಕ ಮೋದಿ-ಶಾ ಜೋಡಿಗೆ ಮುಖಭಂಗ ಉಂಟು ಮಾಡಿದೆ. ಈಗ ತ್ರಿಕೋನ ಸ್ಪರ್ಧೆ ಇರುವ ದೆಹಲಿ ಗದ್ದುಗೆ ಹಿಡಿಯುವ ದೂರದ ಕನಸಿಗೆ ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ.
ಶಿಕ್ಷಣ, ವಿದ್ಯುತ್, ಆರೋಗ್ಯದಂಥ ಮೂಲಸೌಕರ್ಯ ಸುಧಾರಿಸುವ ಮೂಲಕ ಸಾಮಾನ್ಯ ಜನರ ಬದುಕಿನಲ್ಲಿ ಭಾರಿ ಬದಲಾವಣೆ ತಂದಿರುವುದಾಗಿ ಹೇಳುತ್ತಿರುವ ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಅವರು ತಾವು ಮಾಡಿರುವ ಕೆಲಸವನ್ನು ಗುರುತಿಸಿ ಎರಡನೇ ಬಾರಿಗೆ ಆಯ್ಕೆ ಮಾಡುವಂತೆ ಜನರನ್ನು ಕೋರುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮತಗಳಿಕೆಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿವೆ. 70 ಸ್ಥಾನಗಳ ಪೈಕಿ 67 ಶಾಸಕರ ಬಲ ಹೊಂದಿರುವ ಆಪ್ ಮೂರನೇ ಸ್ಥಾನಕ್ಕೆ ಕುಸಿದಿರುವುದರಿಂದ ಆತಂಕಗೊಂಡಿದೆ.
ಭಾರತದಲ್ಲಿ ಕಳೆದ ಕೆಲವು ದಶಕಗಳಲ್ಲಿ ಮತದಾರರು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ರೀತಿ ಬದಲಾಗಿದೆ. ಜನರು ಸ್ಥಳೀಯ ಸಮಸ್ಯೆ, ನಾಯಕತ್ವ, ಸ್ಪಂದನೆಗಳಿಗೆ ಆದ್ಯತೆ ನೀಡಿ ಮತ ಚಲಾಯಿಸುತ್ತಿದ್ದಾರೆ ಎಂಬುದು ಫಲಿತಾಂಶಗಳಿಂದ ತಿಳಿಯುತ್ತದೆ. ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿದರೆ ಕೇಜ್ರಿವಾಲ್ ಪಕ್ಷವು 2015ರ ಫಲಿತಾಂಶವನ್ನು ಮರುಕಳಿಸಿದರೆ ಆಶ್ಚರ್ಯವಿಲ್ಲ ಎನ್ನುತ್ತಿವೆ ಚುನಾವಣಾ ಪೂರ್ವ ಸಮೀಕ್ಷೆಗಳು.
ಇದರ ಜೊತೆಗೆ ಮತ್ತೊಂದು ಮಹತ್ವದ ಕಾರ್ಯತಂತ್ರವನ್ನು ಕೇಜ್ರಿವಾಲ್ ರೂಪಿಸಿದ್ದಾರೆ. ಚುನಾವಣಾ ಕಾರ್ಯತಂತ್ರ ನಿಪುಣ ಜೆಡಿಯು ಉಪಾಧ್ಯಕ್ಷ ಹಾಗೂ ಬಿಜೆಪಿಯ ಕಟು ಟೀಕಾಕಾರನಾಗಿ ಬದಲಾಗಿರುವ ಪ್ರಶಾಂತ್ ಕಿಶೋರ್ ಅವರಿಗೆ ಆಪ್ ಚುನಾವಣಾ ಕಾರ್ಯತಂತ್ರದ ಹೊಣೆ ವಹಿಸಿದ್ದಾರೆ. 2014ರಲ್ಲಿ ಮೋದಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಾಗೂ ಅನಂತರ ನಡೆದ ಹಲವು ಚುನಾವಣೆಗಳಲ್ಲಿ ಬಿಜೆಪಿಯ ಗೆಲುವಿನ ತಂತ್ರ ಹೆಣೆದಿದ್ದ ಪ್ರಶಾಂತ್ ಕಿಶೋರ್ ಅವರು ಕೇಜ್ರಿವಾಲ್ ಬೆನ್ನಿಗೆ ನಿಂತಿರುವುದು ಬಿಜೆಪಿಯನ್ನು ವಿಚಲಿತವಾಗಿಸಿದೆ. 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಪ್ರಶಾಂತ್ ಅವರು ಮಮತಾ ಬ್ಯಾನರ್ಜಿಯವರ ಟಿಎಂಸಿಯನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಒತ್ತು ಕೊಂಡಿದ್ದಾರೆ. ವರ್ಷಾಂತ್ಯಕ್ಕೆ ತವರು ರಾಜ್ಯ ಬಿಹಾರ ವಿಧಾನಸಭಾ ಚುನಾವಣೆ ಇರುವುದರಿಂದ ದೆಹಲಿಯಲ್ಲಿ ಬಿಜೆಪಿ ಸೋಲಿಸುವುದು ಪ್ರಶಾಂತ್ ಗೆ ಸವಾಲಿನ ಜವಾಬ್ದಾರಿಯಾಗಿದೆ.
ಹಣ, ಅಧಿಕಾರ ಹೊಂದಿರುವ ಬಿಜೆಪಿಗೆ ಚುನಾವಣೆ ಎದುರಿಸುವುದು ಕಷ್ಟವೇನಲ್ಲ. ಆದರೆ, ದೆಹಲಿ ಚುನಾವಣೆ ನೇತೃತ್ವವಹಿಸಿ ಮತ ಸೆಳೆಯಬಲ್ಲ ಸ್ಥಳೀಯ ವರ್ಚಸ್ವಿ ಮುಖ ಬಿಜೆಪಿಗೆ ಇಲ್ಲ. ಸ್ಥಳೀಯ ನಾಯಕತ್ವದ ಕೊರತೆ ಎದುರಿಸುತ್ತಿರುವ ಬಿಜೆಪಿಗೆ ರಾಜ್ಯ ಚುನಾವಣೆಗಳು ಸಾಲು ಸಾಲು ಸವಾಲು ಒಡ್ಡಿವೆ. ಆಪ್ ಗೆ ಕೇಜ್ರಿವಾಲ್ ಅವರೇ ಆಧಾರಸ್ತಂಭ. ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ನಿಧನದಿಂದ ಕಾಂಗ್ರೆಸ್ ಗೆ ಅಜಯ್ ಮಾಕೆನ್ ಹೊರತುಪಡಿಸಿದರೆ ಮತ್ತೊಂದು ಪ್ರಭಾವಿ ಮುಖವಿಲ್ಲ. ಈ ವಿಚಾರದಲ್ಲೂ ಕೇಜ್ರಿವಾಲ್ ಸ್ಪಷ್ಟವಾಗಿ ಮುನ್ನಡೆ ಹೊಂದಿದ್ದಾರೆ.
ಇನ್ನು ಮೋದಿ ಸರ್ಕಾರ ಕೈಗೊಂಡಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸುವ ತೀರ್ಮಾನ ಹಾಗೂ ರಾಮ ಮಂದಿರ ನಿರ್ಮಿಸಲು ಸುಪ್ರೀಂಕೋರ್ಟ್ ಅನುಮತಿ ನೀಡುವ ವಿಚಾರಗಳು ಬಿಜೆಪಿಗೆ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ತಂದುಕೊಟ್ಟಿಲ್ಲ. ಅಭಿವೃದ್ಧಿ ವಿಚಾರಗಳಿಂದ ವಿಮುಖವಾಗಿ, ವಿವಾದಾತ್ಮಕ ವಿಚಾರಗಳ ಸುತ್ತ ಸುತ್ತುತ್ತಿರುವ ಬಿಜೆಪಿಗೆ ಸಿಎಎ ನಂತರದ ಬೆಳವಣಿಗೆಗಳು ಗಂಭೀರ ಸವಾಲು ತಂದೊಡ್ಡಿವೆ. ಕಳೆದ ಚುನಾವಣೆಗಳಲ್ಲಿ ಯುವ ಜನತೆಯ ಮೆಚ್ಚಿನ ನಾಯಕನಾಗಿದ್ದ ನರೇಂದ್ರ ಮೋದಿಯವರ ಇಮೇಜ್ ಗೆ ಸಾಕಷ್ಟು ಹೊಡೆತ ಬಿದ್ದಿದೆ. ವಿದ್ಯಾರ್ಥಿಗಳ ಮೇಲೆ ಪೊಲೀಸ್ ಅಟ್ಟಹಾಸ, ದೇಶದ ಆರ್ಥಿಕ ಸ್ಥಿತಿಗತಿ, ನಿರುದ್ಯೋಗ ಸಮಸ್ಯೆಗಳು ಸಹಜವಾಗಿ ಬಿಜೆಪಿಯನ್ನು ಜನಮಾನಸದಿಂದ ದೂರ ಮಾಡುತ್ತಿವೆ. ಹಾಗೆಂದು, ಇದರ ಲಾಭ ಪಡೆಯುವ ಸ್ಥಾನದಲ್ಲಿ ಕಾಂಗ್ರೆಸ್ ಇಲ್ಲ. ಇದಕ್ಕಾಗಿಯೇ ರಾಷ್ಟ್ರೀಯ ಪಕ್ಷವೊಂದು ಪ್ರಾದೇಶಿಕ ಪಕ್ಷಗಳ ನೇತೃತ್ವದ ಸರ್ಕಾರದಲ್ಲಿ ಭಾಗಿಯಾಗುವ ಸ್ಥಿತಿ ಇದೆ. ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರ ದಾಳಿಯನ್ನು ದೂರದಲ್ಲೇ ನಿಂತು ಖಂಡಿಸಿರುವ ಕೇಜ್ರಿವಾಲ್ ಎಲ್ಲಿಯೂ ಪ್ರಮುಖ ಸ್ಥಾನದಲ್ಲಿ ಕಾಣಿಸಿಕೊಂಡಿಲ್ಲ. ಇದು ಸಹ ಚುನಾವಣಾ ಕಾರ್ಯತಂತ್ರದ ಭಾಗ ಎನ್ನಲಾಗುತ್ತಿದೆ. ಸಿಎಎ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿ ಆರ್) ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ತನ್ನ ನಿಲುವನ್ನು ಬಹಿರಂಗಪಡಿಸಬೇಕು ಎಂದು ಟ್ವೀಟ್ ಮಾಡಿದ್ದ ಕೇಜ್ರಿವಾಲ್ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ದೆಹಲಿ ಚುನಾವಣೆಯನ್ನು ಕಾಂಗ್ರೆಸ್, ಬಿಜೆಪಿ ಹಾಗೂ ಆಪ್ ನಡುವಿನ ಸ್ಪರ್ಧೆಗೆ ಬದಲಾಗಿ ಬಿಜೆಪಿ-ಆಪ್ ನಡುವಿನ ಹೋರಾಟವಾಗಿಸಲು ಯತ್ನಿಸಿದ್ದರು ಎಂಬ ಮಾತು ಚಾಲ್ತಿಯಲ್ಲಿತ್ತು.
ಇನ್ನು ಬಿಜೆಪಿಯು ಅಭಿವೃದ್ಧಿ ವಿಚಾರಗಳನ್ನು ಇಟ್ಟುಕೊಂಡು ಮತಸೆಳೆಯಲಾಗದು ಎಂದು ಜೆಎನ್ ಯುನಲ್ಲಿ ಅಶಾಂತಿ ಸೃಷ್ಟಿಸಿ ರಾಷ್ಟ್ರೀಯತೆಯನ್ನು ಚುನಾವಣೆಯ ವಿಷಯವನ್ನಾಗಿಸಲು ಮುಂದಾಗಿದೆ. “ಭಾರತವನ್ನು ವಿಭಜಿಸುವ ಮಾತನಾಡುವ ತುಕಡೇ ತುಕಡೇ ಗ್ಯಾಂಗ್ ನಂಥ ಶಕ್ತಿಗಳನ್ನು ಸಂಹರಿಸಲು ದೆಹಲಿಯಲ್ಲಿ ಬಿಜೆಪಿ ಗೆಲ್ಲಿಸಿ” ಎಂದು ಗೃಹ ಸಚಿವ ಅಮಿತ್ ಶಾ ಹೇಳಿರುವುದು ಬಿಜೆಪಿಯ ಚುನಾವಣಾ ಕಾರ್ಯತಂತ್ರದ ದಿಕ್ಕು ಪರಿಚಯಿಸಿದೆ. ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಸೋಲಿನ ನಂತರವೂ ಎಚ್ಚೆತ್ತುಕೊಳ್ಳಲು ಮುಂದಾಗದ ಬಿಜೆಪಿ ಅಭಿವೃದ್ಧಿ ವಿಚಾರಗಳು ಕೈಬಿಟ್ಟಿರುವುದು ಅದನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಇನ್ನು ಕಾಂಗ್ರೆಸ್ ಗೆ ಬಿಜೆಪಿಯ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಶಕ್ತಿಯೇ ಇಲ್ಲ ಎಂಬ ಆರೋಪ ಶಾಪವಾಗಿದೆ. ಸಮಗ್ರವಾಗಿ ನೋಡಿದರೆ ಸದ್ಯಕ್ಕೆ ದೆಹಲಿ ಗೆದ್ದುಗೆ ರೇಸ್ ನಲ್ಲಿ ಕೇಜ್ರಿವಾಲ್ ಸ್ಪಷ್ಟವಾಗಿ ಮುನ್ನಡೆ ಹೊಂದಿದ್ದಾರೆ. ಫೆಬ್ರವರಿ 8ರಂದು ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ರಾಜಕೀಯದಲ್ಲಿ ಒಂದು ತಿಂಗಳ ಅವಧಿ ದೀರ್ಘವಾದದ್ದು. ಇದು ಫಲಿತಾಂಶವನ್ನೇ ತಲೆಕೆಳಕಾಗಿಸಬಹುದು.