ಬದಲಾವಣೆ ಜಗದ ನಿಯಮ ಎಂಬ ಮಾತಿದ್ದರೂ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅನ್ವಯವಾಗುವುದಿಲ್ಲ ಎಂಬ ಮಾತಿತ್ತು. ರಾಜಕೀಯ ವ್ಯವಸ್ಥೆಯೂ ಕಾರ್ಪೋರೇಟ್ ಶೈಲಿಗೆ ಬದಲಾವಣೆಯಾಗುತ್ತಿದ್ದರೂ ಕಾಂಗ್ರೆಸ್ ಮಾತ್ರ ತನ್ನ ಹಳೇ ಶೈಲಿಯಲ್ಲೇ ಮುಂದುವರಿಯುತ್ತಿತ್ತು. ರಾಷ್ಟ್ರಮಟ್ಟದಲ್ಲೇ ಆಗಲಿ, ರಾಜ್ಯ ಮಟ್ಟದಲ್ಲೇ ಆಗಲಿ, ಏನೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿದ್ದರೂ ತನ್ನ ಮಾತೇ ವೇದವಾಕ್ಯ ಎಂಬಂತೆ ಕಾಂಗ್ರೆಸ್ ಹೈಕಮಾಂಡ್ ವರ್ತಿಸುತ್ತಿತ್ತು. ಇದರ ಪರಿಣಾಮವೇ ಕೇಂದ್ರ ಮಾತ್ರವಲ್ಲ, ರಾಜ್ಯಗಳಲ್ಲೂ ಬದಲಾವಣೆಗೆ ಒಗ್ಗಿಕೊಳ್ಳದೆ ಆನೆ ನಡೆದಿದ್ದೇ ದಾರಿ ಎನ್ನುತ್ತಿದ್ದ ಕೈ ಹೈಕಮಾಂಡ್ ತನ್ನ ನೆಲೆ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಪರಿಸ್ಥಿತಿ ಉದ್ಭವವಾಗಿತ್ತು.
ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಇದೀಗ ಕಾಂಗ್ರೆಸ್ ಹೈಕಮಾಂಡ್ ಬದಲಾಗುತ್ತಿದೆ. ತನ್ನ ಮಾತನನ್ನು ಪಾಲಿಸುವುದಷ್ಟೇ ರಾಜ್ಯ ಘಟಕಗಳ ಕರ್ತವ್ಯ. ರಾಜ್ಯಕ್ಕೆ ಸಂಬಂಧಿಸಿದಂತೆ ತಾನು ಏನೇ ನಿರ್ಧಾರ ಕೈಗೊಂಡರೂ ಅದನ್ನು ಕಣ್ಣಿಗೊತ್ತಿಕೊಂಡು ಪಾಲಿಸಬೇಕು ಎಂಬಂತಿದ್ದ ಪಕ್ಷದ ವರಿಷ್ಠರು ಈಗ ರಾಜ್ಯದ ವಿಚಾರಗಳ ಬಗ್ಗೆ ಸ್ಥಳೀಯರ ಅಭಿಪ್ರಾಯ ಪಡೆಯದೇ ಇದ್ದಲ್ಲಿ ಮುಂದೆಯೂ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮೇಲೇಳಲು ಸಾಧ್ಯವಿಲ್ಲ ಎಂಬ ಯೋಚನೆ ಮಾಡಿದಂತಿದೆ. ಇದಕ್ಕೆ ಉದಾಹರಣೆ ಕೆಪಿಸಿಸಿ ಅಧ್ಯಕ್ಷರ ನೇಮಕ.
ಈ ಹಿಂದೆಲ್ಲಾ ಕೆಪಿಸಿಸಿ ಅಧ್ಯಕ್ಷರ ನೇಮಕ ಎಂದರೆ, ರಾಜ್ಯದಿಂದ ಒಂದು ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿತ್ತು. ನಂತರ ತಮಗೆ ಯಾರು ಬೇಕೋ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ ಮಾಡಲಾಗುತ್ತಿತ್ತು. ಇದು ಕೇವಲ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮಾತ್ರವಲ್ಲ, ಶಾಸಕಾಂಗ ಪಕ್ಷದ ನಾಯಕ, ಪ್ರತಿಪಕ್ಷ ನಾಯಕ, ರಾಜ್ಯ ಘಟಕದ ಪದಾಧಿಕಾರಿಗಳು ಎಲ್ಲಕ್ಕೂ ಅನ್ವಯವಾಗುತ್ತಿತ್ತು. ಇದಕ್ಕೆ ಈ ಹಿಂದೆ ನಡೆದ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಕಾರ್ಯಾಧ್ಯಕ್ಷ ಸ್ಥಾನ, ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಗಳ ನೇಮಕಗಳೇ ಸಾಕ್ಷಿ.
ಆದರೆ, ಇದಕ್ಕೆ ತಿಲಾಂಜಲಿ ನೀಡಿ ಹೊಸ ಸಂಪ್ರದಾಯಕ್ಕೆ ಕಾಂಗ್ರೆಸ್ ವರಿಷ್ಠರು ನಾಂದಿ ಹಾಡಿದ್ದಾರೆ. ಪ್ರಸ್ತುತ ದಿನೇಶ್ ಗುಂಡೂರಾವ್ ರಾಜೀನಾಮೆಯಿಂದ ತೆರವಾಗಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡುವ ವಿಚಾರದಲ್ಲಿ ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸೇರಿದಂತೆ ಪ್ರಮುಖ ಮುಖಂಡರನ್ನು ದೆಹಲಿಗೆ ಆಹ್ವಾನಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕ ಈ ಎರಡೂ ಹುದ್ದೆಗಳಿಗೆ ಪರ್ಯಾಯ ನಾಯಕರನ್ನು ಆಯ್ಕೆ ಮಾಡುವ ಬಗ್ಗೆ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸಲು ತನ್ನ ಪ್ರತಿನಿಧಿಗಳನ್ನು ಎಐಸಿಸಿ ಕಳುಹಿಸಿಕೊಟ್ಟಿತ್ತು. ಅದರಂತೆ ರಾಜ್ಯಕ್ಕೆ ಆಗಮಿಸಿದ್ದ ಮಧುಸೂಧನ್ ಮಿಸ್ತ್ರಿ ಮತ್ತು ಭಕ್ತ ಚರಣದಾಸ್ ಅವರು ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ವರದಿಯನ್ನೂ ಸಲ್ಲಿಸಿದ್ದಾರೆ. ಈ ಪೈಕಿ ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬೇಕು ಎಂದು ವರದಿಯಲ್ಲಿ ತಿಳಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಸೂಕ್ತ ಎಂದು ಹೇಳಿದ್ದರೂ ಅವರೊಂದಿಗೆ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್ ಅವರ ಹೆಸರಿನ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಈ ಪೈಕಿ ಯಾರಾಗಬೇಕು ಅಥವಾ ಇವರನ್ನು ಹೊರತುಪಡಿಸಿ ಬೇರೆಯವರು ಈ ಸ್ಥಾನಕ್ಕೆ ಸೂಕ್ತವೇ ಎಂಬ ಬಗ್ಗೆ ರಾಜ್ಯದ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಲು ಎಐಸಿಸಿ ನಿರ್ಧರಿಸಿದೆ.
ವಿಶ್ವಾಸಕ್ಕೆ ತೆಗೆದುಕೊಳ್ಳುವುದರ ಜತೆಗೆ ಬಾಯಿ ಮುಚ್ಚಿಸುವ ತಂತ್ರ
ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಅವರಿಗೆ ಪರ್ಯಾಯ ಇಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಹೀಗಿರುವಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಳ್ಳುವವರು ಕೂಡ ಸಮರ್ಥರಾಗಿರುವುದರ ಜತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತರಾಗಿರಬೇಕು. ಅಷ್ಟೇ ಅಲ್ಲ, ಇತರೆ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಪಿಸಿಸಿ ಅಧ್ಯಕ್ಷರನ್ನು ನೇಮಿಸಿದರೆ ಮುಂದಿನ ದಿನಗಳಲ್ಲಿ ಆಕಾಂಕ್ಷಿಗಳು ಅಸಮಾಧಾನ ಹೊರಹಾಕುವಂತಿಲ್ಲ. ಅಸಹಾಕಾರ ಧೋರಣೆ ತೋರುವಂತಿಲ್ಲ ಎಂಬ ಸಂದೇಶವನ್ನು ವರಿಷ್ಠರು ಈ ಮೂಲಕ ರಾಜ್ಯ ನಾಯಕರಿಗೆ ಕಳುಹಿಸಿಕೊಟ್ಟಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಲ್ಲದೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಬಿ.ಕೆ.ಹರಿಪ್ರಸಾದ್ ಅವರನ್ನು ಎಐಸಿಸಿ ನಾಯಕರು ಮಾತುಕತೆಗಾಗಿ ದೆಹಲಿಗೆ ಆಹ್ವಾನಿಸಿದ್ದಾರೆ. ಇವರೆಲ್ಲರೂ ಜನವರಿ ಮೊದಲ ವಾರದಲ್ಲಿ ದೆಹಲಿಗೆ ತೆರಳಿ ವರಿಷ್ಠರ ಮುಂದೆ ತಮ್ಮ ಅಭಿಪ್ರಾಯ ತಿಳಿಸಲಿದ್ದಾರೆ. ಬಳಿಕ ಯಾರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂಬುದನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ತಂಡ ತೀರ್ಮಾನಿಸಲಿದೆ.
ರಾಜ್ಯದಲ್ಲಿ ಜೆಡಿಎಸ್ ಜತೆಗಿನ ಮೈತ್ರಿ ಸರ್ಕಾರದ ನಂತರ ನಡೆದ ಲೋಕಸಭೆ ಚುನಾವಣೆ ಮತ್ತು ಇತ್ತೀಚೆಗೆ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಗ್ಗೆ ಮತ್ತು ಅದಕ್ಕೆ ಕಾರಣಗಳ ಕುರಿತು ಈಗಾಗಲೇ ವರಿಷ್ಠರು ವರದಿ ತರಿಸಿಕೊಂಡಿದ್ದಾರೆ. ರಾಜ್ಯ ನಾಯಕರು ಮತ್ತು ಎಐಸಿಸಿ ನಾಯಕರ ನಡುವಿನ ಭಿನ್ನಾಭಿಪ್ರಾಯ, ರಾಜ್ಯ ಘಟಕದಲ್ಲಿ ಮೂಲ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರು ಎಂಬ ಎರಡು ಬಣಗಳಿರುವುದು, ಚುನಾವಣೆ ನೇತೃತ್ವ ವಹಿಸಿದವರ ಬಗ್ಗೆ ಇತರರಲ್ಲಿರುವ ಅಸಮಾಧಾನವನ್ನು ಬಗೆಹರಿಸುವಲ್ಲಿ ಕೆಪಿಸಿಸಿ ಅಧ್ಯಕ್ಷರು ವಿಫಲವಾಗಿದ್ದು ಸೋಲಿಗೆ ಕಾರಣ ಎಂದು ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.
ಹೀಗಾಗಿ ಮತ್ತೆ ಅಂತಹ ಸಮಸ್ಯೆ ಎದುರಾಗಬಾರದು. ರಾಜ್ಯದಲ್ಲಿ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಾರದು. ಹೀಗಾಗಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಯಾರ ಪರ ಹೆಚ್ಚು ಮಂದಿಯ ಒಲವಿದೆ? ಯಾರಿಗೆ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಸಾಮರ್ಥ್ಯವಿದೆ? ಯಾರನ್ನು ಆಯ್ಕೆ ಮಾಡಿದರೆ ಅಸಮಾಧಾನ ಕಡಿಮೆಯಾಗಬಹುದು? ಎಂಬಿತ್ಯಾದಿ ಅಂಶಗಳನ್ನು ಪರಿಗಣಿಸಿ ಕೆಪಿಸಿಸಿ ಅಧ್ಯಕ್ಷರನ್ನು ನೇಮಿಸಲು ಹೈಕಮಾಂಡ್ ಮುಂದಾಗಿದೆ. ನೇಮಕಕ್ಕೆ ಮೊದಲೇ ಅಭಿಪ್ರಾಯ ಸಂಗ್ರಹಿಸಿದರೆ ಮುಂದೆ ಸಮಸ್ಯೆ ಉದ್ಭವವಾದಾಗ ಅದಕ್ಕೆ ರಾಜ್ಯ ನಾಯಕರನ್ನೇ ಹೊಣೆ ಮಾಡಬಹುದು. ಯಾರು, ಯಾರ ವಿರುದ್ಧವೂ ಹೈಕಮಾಂಡ್ ಗೆ ದೂರು ಸಲ್ಲಿಸಲು ಸಾಧ್ಯವಿಲ್ಲ. ಇದರಿಂದ ಏನೇ ತಪ್ಪಾದರೂ ಅದಕ್ಕೆ ರಾಜ್ಯ ಘಟಕ ಮತ್ತು ನಾಯಕರೇ ಹೊಣೆಯಾಗುತ್ತಾರೆ ಹೊರತು ಹೈಕಮಾಂಡ್ ಗೆ ಸಂಬಂಧ ಇರುವುದಿಲ್ಲ. ಒಟ್ಟಿನಲ್ಲಿ ರಾಜ್ಯ ನಾಯಕರ ಮೇಲೆಯೇ ಭವಿಷ್ಯದಲ್ಲಿ ಸೋಲು, ಗೆಲುವಿನ ಜವಾಬ್ದಾರಿ ಹಾಕುವುದು ಹೈಕಮಾಂಡ್ ಉದ್ದೇಶವಾಗಿದೆ.
ಪ್ರತಿಪಕ್ಷ ನಾಯಕನ ಬಗ್ಗೆಯೂ ಚರ್ಚೆ
ಇದುವರೆಗೆ ರಾಜ್ಯದಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿದ್ದವರೇ ಪ್ರತಿಪಕ್ಷ ನಾಯಕರಾಗಿಯೂ ಕೆಲಸ ಮಾಡುವುದು ಸಂಪ್ರದಾಯ. ಪ್ರಸ್ತುತ ಸಿದ್ದರಾಮಯ್ಯ ಅವರು ಈ ಎರಡೂ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಈಗ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಈ ಮಧ್ಯೆ ಸಿದ್ದರಾಮಯ್ಯ ಅವರಿಗೆ ಈ ಎರಡೂ ಹುದ್ದೆಗಳು ಬೇಡ. ಯಾವುದಾದರೂ ಒಂದು ಹುದ್ದೆ ಬೇರೆಯವರಿಗೆ ಕೊಡಿ. ಇದರಿಂದ ನಾಯಕತ್ವ ಇಬ್ಬರಿಗೆ ಸಿಕ್ಕಿದಂತಾಗುತ್ತದೆ. ಅಸಮಾಧಾನವೂ ತಣಿಯುತ್ತದೆ ಎಂಬ ವಾದ ಪಕ್ಷದ ಒಂದು ವಲಯದಿಂದ ಕೇಳಿಬರುತ್ತಿದೆ. ಹೀಗಾಗಿ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮತ್ತು ಪ್ರತಿಪಕ್ಷ ನಾಯಕ ಸ್ಥಾನವನ್ನು ಇದುವರೆಗಿನ ಸಂಪ್ರದಾಯದಂತೆ ಒಬ್ಬರಿಗೇ ನೀಡುವುದೇ ಅಥವಾ ಎರಡೂ ಹುದ್ದೆಗಳನ್ನು ಪ್ರತ್ಯೇಕಿಸಿ ಇಬ್ಬರಿಗೆ ನೀಡುವುದೇ ಎಂಬ ಬಗ್ಗೆಯೂ ರಾಜ್ಯ ನಾಯಕರಿಂದ ಮಾಹಿತಿ ಸಂಗ್ರಹಿಸಲಿರುವ ಕಾಂಗ್ರೆಸ್ ವರಿಷ್ಠರು ಆ ಬಗ್ಗೆಯೂ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.