ಲೋಕಸಭೆಯಲ್ಲಿ ಅಂಗೀಕಾರವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ದೇಶಾದ್ಯಂತ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದು ಮುಸ್ಲಿಂ ಸಮುದಾಯವನ್ನು ಗುರಿಯಾಗಿರಿಸಿಕೊಂಡು ಮಾಡುತ್ತಿರುವ ತಿದ್ದುಪಡಿ ಎಂದು ಒಂದು ವರ್ಗ ಹೇಳುತ್ತಿದ್ದರೆ, ವಲಸಿಗರು ಹೆಚ್ಚಿರುವ ಈಶಾನ್ಯ ರಾಜ್ಯಗಳ ಮೂಲನಿವಾಸಿಗಳು ಒಂದು ವೇಳೆ ಪೌರತ್ವ ನೀಡಿದ್ದೇ ಆದಲ್ಲಿ ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆ ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮತ್ತೊಂದೆಡೆ, ಆಡಳಿತಾರೂಢ ಬಿಜೆಪಿ ಮತ್ತು ಅದರ ಅಂಗಪಕ್ಷಗಳು ಹಾಗೂ ಆ ಪಕ್ಷಗಳ ಬೆಂಬಲಕ್ಕೆ ನಿಂತಿರುವ ಸಂಘಟನೆಗಳು ಪೌರತ್ವ ನೀಡುವುದು ಒಳಿತು. ಇಲ್ಲಿ ಯಾವೊಬ್ಬ ಮುಸ್ಲಿಂರನ್ನೂ ಗುರಿಯಾಗಿರಿಸಿಕೊಂಡು ಮಸೂದೆಗೆ ತಿದ್ದುಪಡಿ ತರುತ್ತಿಲ್ಲ. ಮುಸ್ಲಿಂರ ವಿಚಾರವನ್ನು ಮಸೂದೆಯಲ್ಲಿ ಎಲ್ಲಿಯೂ ಕೂಡ ಪ್ರಸ್ತಾಪವನ್ನೇ ಮಾಡಿಲ್ಲ. ಇದೊಂದು ಜಾತ್ಯತೀತ ನಿಲುವಾಗಿದ್ದು, ರಾಜಕೀಯ ನಿರ್ಧಾರಗಳಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿಕೊಳ್ಳುತ್ತಿವೆ.
ಹಾಗಾದರೆ, ಈ ಪೌರತ್ವ ಏನು? ಇದರ ಬಗ್ಗೆ ಏಕಿಷ್ಟು ಪರ-ವಿರೋಧಗಳು ವ್ಯಕ್ತವಾಗುತ್ತಿವೆ? ಇದರಿಂದ ಯಾರಿಗೇನು ಲಾಭ? ಎಂದು ನೋಡುವುದಾದರೆ:- ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದಶಕಗಳ ಹಿಂದೆ ಭಾರತಕ್ಕೆ ಬಂದು ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಹಿಂದೂ, ಕ್ರಿಶ್ಚಿಯನ್ನರು, ಸಿಖ್ಖರು, ಜೈನರು, ಬೌದ್ಧರು ಮತ್ತು ಪಾರ್ಸಿಗಳಿಗೆ ಪೌರತ್ವವನ್ನು ಕಲ್ಪಿಸಿಕೊಟ್ಟು ಅವರಿಗೆ ಭಾರತೀಯ ನಾಗರಿಕರಿಗೆ ಲಭ್ಯವಿರುವ ಸೌಲತ್ತುಗಳನ್ನು ನೀಡುವುದಾಗಿದೆ.
ಕೇಂದ್ರ ಸರ್ಕಾರ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಈ ಸಮುದಾಯಗಳ ವಲಸಿಗರಿಗೆ ಪೌರತ್ವ ನೀಡುವ ಅವಕಾಶವನ್ನು ಪಡೆದುಕೊಳ್ಳಲೆಂದು ತಿದ್ದುಪಡಿ ಮಸೂದೆಯನ್ನು ಮಂಡಿಸಿದೆ. ಆದರೆ, ಮುಸ್ಲಿಂ ಸೇರಿದಂತೆ ಇನ್ನಿತರೆ ಸಮುದಾಯಗಳಿಗೆ ಸೇರಿದ ವಲಸಿಗರೂ ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಅವರಿಗೂ ಈ ಅವಕಾಶವನ್ನು ಕಲ್ಪಿಸಿಕೊಡಬೇಕಿತ್ತು ಎಂಬ ವಾದ ಹಲವರಿಂದ ಕೇಳಿ ಬರುತ್ತಿದೆ.
ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಿಂದ ವಲಸೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಪಾರ್ಸಿ, ಜೈನರು ಮತ್ತು ಕ್ರಿಶ್ಚಿಯನ್ನರಲ್ಲಿ ಬಹುತೇಕ ಮಂದಿ ದೆಹಲಿ, ರಾಜಸ್ಥಾನ ಮತ್ತು ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಇವರಿಗೆ ಪೌರತ್ವ ಇಲ್ಲದೇ ಸರ್ಕಾರದ ಯಾವುದೇ ಸೌಲಭ್ಯಗಳು ದೊರೆಯದ ಕಾರಣ ಬದುಕು ಸಂಕಷ್ಟಕ್ಕೆ ದೂಡಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ತಮಗೊಂದು ಶಾಶ್ವತವಾದ ಭಾರತೀಯ ಪೌರತ್ವವನ್ನು ನೀಡಬೇಕೆಂದು ದಶಕಗಳಿಂದ ಈ ಸಮುದಾಯಗಳಿಗೆ ಸೇರಿದ ಜನರು ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸುತ್ತಲೇ ಬಂದಿದ್ದರು.
ಆದರೆ, ಇವರಿಗೆ ಪೌರತ್ವ ನೀಡುವ ವಿಚಾರದಲ್ಲಿ ಸರ್ಕಾರಗಳು ಗೊಂದಲಕ್ಕೆ ಬಿದ್ದಿದ್ದವು. ಇದೀಗ ರಾಜಕೀಯ ಸೇರಿದಂತೆ ನಾನಾ ಕಾರಣಗಳಿಂದ ಬಿಜೆಪಿ ಸರ್ಕಾರ ಪೌರತ್ವ ನೀಡಲು ಮುಂದಾಗಿದ್ದು, ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ. ಅದರನ್ವಯ ಮುಸ್ಲಿಮೇತರ ಸಮುದಾಯಕ್ಕೆ ಸೇರಿದ ಅಕ್ರಮ ವಲಸಿಗರು ಭಾರತದಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದರೆ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗುತ್ತದೆ.
ಅಂದರೆ, ಈ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿ ರಾಷ್ಟ್ರಪತಿಗಳು ಅಂಕಿತ ಹಾಕಿದ ನಂತರ ಹೊಸ ಕಾಯ್ದೆಯಾಗಿ ರೂಪುಗೊಂಡ ನಂತರ ಈ ಸಮುದಾಯಗಳ ಕುಟುಂಬಗಳಿಗೆ ಭಾರತೀಯ ಪೌರತ್ವ ಸಿಗಲಿದೆ. ಭಾರತದಲ್ಲಿ ಕನಿಷ್ಠ ಆರು ವರ್ಷಗಳ ಕಾಲ ನೆಲೆಸಿರುವುದಕ್ಕೆ ದಾಖಲೆಗಳನ್ನು ಹೊಂದಿದ್ದವರು ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
2014 ರ ಡಿಸೆಂಬರ್ 31 ಕ್ಕೂ ಮುನ್ನ ಭಾರತಕ್ಕೆ ಬಂದು ನೆಲೆಸಿರುವ ಮುಸ್ಲಿಮೇತರರು ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲಿ ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ಸಾಕಷ್ಟು ಕೆಲಸ ಮಾಡುತ್ತಿದೆ ಎಂದೇ ಹೇಳಬಹುದು. ಸರ್ಕಾರದ ವಿವಿಧ ಸಚಿವರೇ ಕಾಲಕಾಲಕ್ಕೆ ನೀಡಿರುವ ಹೇಳಿಕೆಗಳನ್ನು ಗಮನಿಸುವುದಾದರೆ ದೇಶದಲ್ಲಿ ವಾಸ ಮಾಡುತ್ತಿರುವ ಅಕ್ರಮ ವಲಸಿಗರಲ್ಲಿ ಬಹುಪಾಲು ಮುಸ್ಲಿಂರೇ ಇದ್ದಾರಂತೆ. ಇವರಲ್ಲಿ ಪ್ರಮುಖವಾಗಿ ಬಾಂಗ್ಲಾದೇಶದಿಂದ ಬಂದಿರುವ ವಲಸಿಗರ ಸಂಖ್ಯೆ 2 ಕೋಟಿ ತಲುಪಲಿದ್ದು, ಶೇ.60 ಕ್ಕೂ ಹೆಚ್ಚು ಮಂದಿ ಪಶ್ಚಿಮ ಬಂಗಾಳದಲ್ಲಿ ನೆಲೆಸಿದ್ದಾರೆ.
ಈ ಕಾರಣದಿಂದಲೇ ಮುಸ್ಲಿಂ ಸಮುದಾಯವನ್ನು ಹೊರಗಿಟ್ಟು ಐದಾರು ಸಮುದಾಯ ಅಥವಾ ಧರ್ಮದವರಿಗೆ ಸೀಮಿತವಾಗಿ ಪೌರತ್ವ ನೀಡುವ ಅವಕಾಶವನ್ನು ಕಲ್ಪಿಸುವ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂಬುದು ಮಾತ್ರ ಸ್ಪಷ್ಟವಾಗಿದೆ.
ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ ಈ ನಿಲುವಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಭಾರತದಿಂದ ಹೊರಹೋಗಬೇಕೆಂಬ ಅನಿವಾರ್ಯಕ್ಕೆ ಸಿಲುಕಿರುವ ವಂಚಿತರಿಗೆ (ಮುಸ್ಲಿಮೇತರ) ಅನುಕೂಲವಾಗಲೆಂದೇ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದು ಅವರನ್ನು ದೇಶದಲ್ಲಿ ಉಳಿಸಿಕೊಳ್ಳುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ ಮಾಡುವ ಮೂಲಕ ಕೇಂದ್ರ ಸರ್ಕಾರದ ನಿಲುವನ್ನು ಬಲವಾಗಿ ವಿರೋಧಿಸುತ್ತಿದ್ದಾರೆ.
ಈ ತಿದ್ದುಪಡಿ ಕಾಯ್ದೆಯು ಜಾತ್ಯತೀತತೆ ಮತ್ತು ಸಮಾನತೆಯ ಹಕ್ಕನ್ನು ಕಸಿದುಕೊಳ್ಳುತ್ತದೆ. ಇದರಿಂದ ಮುಸ್ಲಿಂ ಸೇರಿದಂತೆ ಪಟ್ಟಿಯಲ್ಲಿ ಪ್ರಸ್ತಾಪಿಸದ ಇತರೆ ಧರ್ಮದವರಿಗೆ ಧಕ್ಕೆ ಉಂಟಾಗುತ್ತದೆ.
ಲೋಕಸಭೆಯಲ್ಲಿ ಈ ಮಸೂದೆಗೆ 311 ಸದಸ್ಯರು ಪರವಾಗಿ ಮತ ಚಲಾಯಿಸಿದರೆ, 80 ಮಂದಿ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. ಈ ಮೂಲಕ ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತ್ತಿದ್ದು, ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಬೇಕಿದೆ.
ಒಟ್ಟಾರೆ ಕೇಂದ್ರ ಸರ್ಕಾರ ಮತ್ತೊಮ್ಮೆ ಮುಸ್ಲಿಮೇತರ ಧರ್ಮಗಳನ್ನು ತನ್ನತ್ತ ಸೆಳೆದುಕೊಳ್ಳುವ ಈ ಪ್ರಯತ್ನದಲ್ಲಿ ಮುನ್ನಡಿ ಇಟ್ಟಿದೆ. ಇದೊಂದು ಸೀಮಿತ ಸಮುದಾಯಗಳನ್ನು ತುಷ್ಠೀಕರಿಸುವ ಕ್ರಮವಾಗಿದ್ದು, ಮುಸ್ಲಿಂರು ಸೇರಿದಂತೆ ಮತ್ತಿತರೆ ಅಲ್ಪಸಂಖ್ಯಾತ ಧರ್ಮದವರನ್ನು ಗುರಿಯಾಗಿಸಿಕೊಂಡು ಮಾಡುತ್ತಿರುವ ತಿದ್ದುಪಡಿಯಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹಾಗಾದರೆ, ಕೇಂದ್ರ ಸರ್ಕಾರ ಅಕ್ರಮ ಮುಸ್ಲಿಂ ವಲಸಿಗರನ್ನು ಗಡೀಪಾರು ಮಾಡುತ್ತದೆಯೇ? ಅಥವಾ ಅವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುತ್ತದೆಯೇ? ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.
ಐದಾರು ಧರ್ಮಗಳ ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವವನ್ನು ಕಲ್ಪಿಸಿಕೊಡುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ಹಿಂದಿನ ಕಾರ್ಯತಂತ್ರ ಈ ತಿದ್ದುಪಡಿ ಮಸೂದೆಯೊಂದಿಗೆ ಬಯಲಾದಂತಾಗಿದೆ.