ಆರ್ಥಿಕ ಹಿಂಜರಿತದ ಹೊಡೆತಕ್ಕೆ ಸಿಲುಕಿ ದೇಶದ ವಾಣಿಜ್ಯೋದ್ಯಮ ನರಳುತ್ತಿದೆ. ಹಿಂದೆಲ್ಲ ಕೋಟಿಗಟ್ಟಲೇ ಲಾಭ ಗಳಿಸುತಿದ್ದ ಉದ್ಯಮಗಳು , ಕಾರ್ಪೋರೇಟ್ ಸಂಸ್ಥೆಗಳು ಇಂದು ನಷ್ಟವಾಗದಂತೆ ನೋಡಿಕೊಳ್ಳಲು ಪರದಾಡುತ್ತಿವೆ. ಧೇಶದಲ್ಲಿ ಜಿಎಸ್‌ಟಿ ಹಾಗೂ ನೋಟು ಅಮಾನ್ಯೀಕರಣದ ನಂತರ ಸಾವಿರಾರು ಕಂಪೆನಿಗಳು ಬಾಗಿಲು ಮುಚ್ಚಿವೆ. ಅರ್ಥ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬ್ಯಾಂಕಿಂಗ್ ಉದ್ಯಮದ ಮೇಲೂ ಆರ್ಥಿಕ ಹಿಂಜರಿತ ನಕಾರಾತ್ಮಕ ಪರಿಣಾಮ ಬೀರಿದೆ.
ದೇಶದ ವಿವಿಧ ರಂಗಗಳಲ್ಲಿ ವಹಿವಾಟು ಕುಸಿತ , ಜತೆಗೇ ಅತಿವೃಷ್ಟಿ , ಅನಾವೃಷ್ಟಿಯ ಕಾರಣದಿಂದ ಬ್ಯಾಂಕಿಂಗ್ ಕ್ಷೇತ್ರ ಬಸವಳಿದಿದ್ದು ಕಳೆದ ಮೂರು ವರ್ಷಗಳಿಂದ ಲಾಭ ಗಳಿಕೆಯಲ್ಲೂ ಗಣನೀಯ ಕುಸಿತ ದಾಖಲಿಸಿದೆ. ಜತೆಗೆ ಕೆಲವು ದೊಡ್ಡ ಉದ್ಯಮಿಗಳು ಸಾವಿರಾರು ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿರುವುದು, ಕೈಗಾರಿಕೆಗಳು ಸಾಲದ ಸಕಾಲಿಕ ಮರುಪಾವತಿಯಲ್ಲಿ ವಿಫಲರಾಗಿರುವುದರ ಹಿನ್ನೆಲೆಯಲ್ಲಿ ಬ್ಯಾಂಕ್ ಗಳ ಅನುತ್ಪಾದಕ ಆಸ್ತಿ ಮೌಲ್ಯ ದಿನೇ ದಿನೇ ಹೆಚ್ಚುತ್ತಿದೆ.
ಇದೀಗ ಮುದ್ರಾ ಯೋಜನೆಯಡಿಯಲ್ಲಿ ನೀಡಲಾದ ಸಾಲದ ಮರುಪಾವತಿ ಕುಸಿತ ದಾಲಿಸಿರುವ ಹಿನ್ನೆಲೆಯಲ್ಲಿ ಅನುತ್ಪಾದಕ ಅಸ್ತಿ ಮೌಲ್ಯ ಇನ್ನಷ್ಟು ಹೆಚ್ಚಳಗೊಂಡಿದೆ. ಈ ಕುರಿತು ರಿಸರ್ವ್ ಬ್ಯಾಂಕ್ ನ ಉಪ ಗವರ್ನರ್ ಬ್ಯಾಂಕುಗಳಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ಪ್ರಧಾನ ಮಂತ್ರಿ ನರೆಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಮುದ್ರಾ ಸಾಲ ಯೋಜನೆಯ ಪೂರ್ಣ ಹೆಸರು ಮೈಕ್ರೋ ಯುನಿಟ್ಸ್ ಡೆವಲಪ್‌ಮೆಂಟ್ ಅಂಡ್ ರೀಫೈನಾನ್ಸ್ ಏಜೆನ್ಸಿ ಬ್ಯಾಂಕ್ (ಮುದ್ರಾ)ನ್ನು 2015 ಏಪ್ರಿಲ್ ಮೊದಲ ವಾರದಲ್ಲೇ ಸ್ಥಾಪಿಸಲಾಯಿತು. ಈ ಬ್ಯಾಂಕ್ ಗೆ ಮೂಲ ನಿಧಿ ಬಂಡವಾಳವಾಗಿ 20,000 ಕೋಟಿ ರೂಪಾಯಿಗಳನ್ನೂ ನೀಡಲಾಯಿತು. ನೂತನವಾಗಿ ಸ್ಥಾಪಿಸಲಾದ ಈ ಮುದ್ರಾ ಬ್ಯಾಂಕ್ ಮೂರು ರೀತಿಯ ಸಾಲ ಸೌಲಭ್ಯಗಳನ್ನು ನೀಡುತಿದ್ದು ಶಿಶು ಯೋಜನೆಯನ್ವಯ 5೦ ಸಾವಿರ ರೂಪಾಯಿಗಳವರೆಗೆ, ಕಿಶೋರ ಯೋಜನೆಯನ್ವಯ 5 ಲಕ್ಷ ರೂಪಾಯಿಗಳವರೆಗೆ ಮತ್ತು ತರುಣ ಯೋಜನೆಯಲ್ಲಿ 10 ಲಕ್ಷ ರೂಪಾಯಿಗಳವರೆಗೆ ಗರಿಷ್ಟ ಸಾಲ ನೀಡಲಾಗುತ್ತಿದೆ. ಈ ಸಾಲಗಳನ್ನು ಸಣ್ಣ ಉದ್ದಿಮೆದಾರರಿಗೆ , ಕಲಾವಿದರಿಗೆ , ಪೆಟ್ಟಿಗೆ ಅಂಗಡಿಯವರಿಗೆ ಮತ್ತು ಅಂಗಡಿ ಮಾಲೀಕರಿಗೆ ನೀಡುವ ಮೂಲಕ ಅವರನ್ನು ಆರ್ಥಿಕವಾಗಿ ಸಧೃಢಗೊಳಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿತ್ತು. ಯೋಜನೆಯ ಉದ್ದೇಶ ಒಳ್ಳೆಯದೇ ಫಲಾನುಭವಿಗಳಿಗೆ ವಿತರಿಸಿದ ಸಾಲ ಮರುಪಾವತಿ ಆಗದೇ ಬ್ಯಾಂಕುಗಳಿಗೆ ಇನ್ನಷ್ಟು ಸಂಕಷ್ಟ ಆಗಿದೆ.
ಮೂಲಗಳ ಪ್ರಕಾರ ಪ್ರಸ್ತುತ ಹಣಕಾಸು ವರ್ಷದಲ್ಲಿ ದೇಶದಲ್ಲಿ ಒಟ್ಟು 2.9 ಕೋಟಿ ಫಲಾನುಭವಿಗಳಿಗೆ ಒಟ್ಟು 1.44 ಲಕ್ಷ ಕೋಟಿ ರೂಪಾಯಿ ಸಾಲವನ್ನು ವಿತರಿಸಲಾಗಿದೆ. ಹಿಂದಿನ ವರ್ಷಗಳಲ್ಲಿ ಒಟ್ಟು ವಿತರಿಸಲಾದ ಸಾಲದ ಮೊತ್ತ ಮೂರು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು. ಹೀಗೆ ವಿತರಿಸಲಾದ ಸಾಲಗಳಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣ 2017-18 ರಲ್ಲಿ ಶೇಕಡಾ 2.52 ರಷ್ಟಿದ್ದರೆ 2018-19 ರಲ್ಲಿ ಇದು ಶೇಕಡಾ 2.68 ಕ್ಕೆ ಏರಿಕೆಯಾಗಿದೆ. ಕಳೆದ ಮಾರ್ಚ್ 31 ಕ್ಕೆ ಒಟ್ಟು 3.63 ಮಿಲಿಯನ್ ಸಾಲದ ಖಾತೆಗಳು ಸುಸ್ತಿಯಾಗಿವೆ. ಇದೇ ಕಾರಣಕ್ಕಾಗಿ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಹಾಗೂ ಹಾಲಿ ಉಪ ಗವರ್ನರ್ ಎಂ ಕೆ ಜೈನ್ ಅವರು ಬ್ಯಾಂಕುಗಳಿಗೆ ಎಚ್ಚರಿಕೆಯನ್ನೂ ನೀಡಿದ್ದು ಸಾಲವನ್ನು ನೀಡುವಾಗ ಫಲಾನುಭವಿಗಳ ಮರುಪಾವತಿ ಸಾಮರ್ಥ್ಯ ವನ್ನು ನೋಡಿಕೊಂಡೇ ಸಾಲ ನೀಡುವಂತೆ ಸೂಚನೆ ನೀಡಿದ್ದಾರೆ.
ಅಂದ ಹಾಗೆ ಈ ಮುದ್ರಾ ಯೋಜನೆಯಲ್ಲಿ ವಿತರಿಸಲಾಗಿರುವ ಸಾಲದಲ್ಲಿ ಪ್ರಧಾನ ಮಂತ್ರಿಯವರ ತವರು ರಾಜ್ಯ ಗುಜರಾತ್ ನಲ್ಲೇ ಅನುತ್ಪಾದಕ ಆಸ್ತಿ ಪ್ರಮಾಣ(ಕೆಟ್ಟ ಸಾಲ) ಶೇಕಡಾ 34 ರಷ್ಟು ಏರಿಕೆ ದಾಖಲಿಸಿದೆ !ಕಳೆದ ಡಿಸೆಂಬರ್ 2018 ರ ಅಂತ್ಯಕ್ಕೆ ಕೆಟ್ಟ ಸಾಲಗಳ ಮೊತ್ತ 131.45 ಕೋಟಿ ರೂಪಾಯಿಗಳಾಗಿದ್ದರೆ ಮಾರ್ಚ್ 2019 ಕ್ಕೆ ಈ ಸಾಲದ ಮೊತ್ತ 516.32 ಕೋಟಿ ರೂಪಾಯಿಗಳಿಗೆ ಏರಿಕೆ ದಾಖಲಿಸಿದೆ.
ಬ್ಯಾಂಕುಗಳಲ್ಲಿ ಮುದ್ರಾ ಯೋಜನೆಯಡಿಯಲ್ಲಿ ಈತನಕ ಒಟ್ಟು 19 ಕೋಟಿ ಜನರಿಗೆ ಸಾಲ ಸೌಲಭ್ಯವನ್ನು ನೀಡಲಾಗಿದೆ ಇದರ ಜತೆಗೇ ಸಾವಿರಾರು ವಂಚನೆ ಪ್ರಕರಣಗಳೂ ಪತ್ತೆಯಾಗಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರದ ಮೂಲಕವೇ ಕಳೆದ ಜುಲೈ ತಿಳಿಸಿದ್ದಾರೆ. ಅವರು ನೀಡಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಒಟ್ಟು 2313 ಪ್ರಕರಣಗಳಲ್ಲಿ ನಕಲಿ ದಾಖಲಾತಿ ನೀಡಿ ಮುದ್ರಾ ಸಾಲ ಪಡೆದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ವಂಚನೆ ಪ್ರಕರಣಗಳಲ್ಲಿ ತಮಿಳುನಾಡು ಮುಂದಿದ್ದು ಇಲ್ಲಿ 344, ಹರ್ಯಾಣ ರಾಜ್ಯದಲ್ಲಿ 275 ಹಾಗೂ ಆಂಧ್ರ ಪ್ರದೇಶದಲ್ಲಿ 241 ವಂಚನೆ ಪ್ರಕರಣಗಳು ಪತ್ತೆ ಆಗಿವೆ. ಈ ವಂಚನೆ ಪ್ರಕರಣಗಳಲ್ಲಿ ಕರ್ತವ್ಯ ಲೋಪ ಎಸಗಿರುವ 103 ಬ್ಯಾಂಕ್ ನೌಕರರಲ್ಲಿ 68 ಜನರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಹಿಂಜರಿತದ ಕಾರಣದಿಂದಾಗಿ ದೇಶದ ಸಾರ್ವಜನಿಕ ರಂಗದ ಬ್ಯಾಂಕುಗಳಲ್ಲಿ ಕೆಟ್ಟ ಸಾಲಗಳ ಮೊತ್ತ ವರ್ಷದಿಂದ ವರ್ಷಕ್ಕೆ ಏರಿಕೆಯನ್ನೇ ದಾಖಲಿಸುತ್ತಿದೆ. ಆದರೆ ಸರ್ಕಾರ ಮಾತ್ರ ಅನುತ್ಪಾದಕ ಆಸ್ತಿ ಮೌಲ್ಯ ಇಳಿಕೆಯಾಗಿದೆ ಎಂದು ಹೇಳುತ್ತಿದೆ. ರಾಜ್ಯಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ನೀಡಿರುವ ಉತ್ತರದಲ್ಲಿ 2018 ರ ಮಾರ್ಚ್ ಅಂತ್ಯಕ್ಕೆ ದೇಶದ ಬ್ಯಾಂಕ್ ಗಳಲ್ಲಿ ಒಟ್ಟು 8.96 ಲಕ್ಷ ಕೋಟಿ ಕೆಟ್ಟ ಸಾಲಗಳಿದ್ದರೆ 2019 ರ ಮಾರ್ಚ್ ನಲ್ಲಿ ಇದು 8.05 ಲಕ್ಷ ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ.
ಈ ಸಾಲ ಇಳಿಕೆಗೆ ಮುಖ್ಯ ಕಾರಣ ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಉದ್ಯಮಿಗಳ ಸಾವಿರಾರು ಕೋಟಿ ರೂಪಾಯಿಗಳ ಸಾಲವನ್ನು ಬ್ಯಾಂಕುಗಳು ತಮ್ಮ ವಾರ್ಷಿಕ ಲೆಕ್ಕ ಪತ್ರಗಳಿಂದ ಹೊರಗಿಡುತ್ತಿರುವುದೇ ಆಗಿದೆ. ಈಗಾಗಲೇ ಬ್ಯಾಂಕುಗಳ ವಿಲೀನೀಕರಣದ ಮೂಲಕ ಸರ್ಕಾರ ಬ್ಯಾಂಕುಗಳಿಗೆ ಬಂಡವಾಳ ನೀಡಲು ಮುಂದಾಗಿದ್ದು ಈ ಕ್ರಮವೇ ಬ್ಯಾಂಕುಗಳ ಆರ್ಥಿಕ ಸ್ಥಿತಿಯನ್ನು ಬಹಿರಂಗಪಡಿಸುತ್ತಿದೆ.