ಶಾಸಕರ ಅನರ್ಹತೆ ಕುರಿತಂತೆ ಬುಧವಾರವಷ್ಟೇ ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳಲಿದೆ. ಆದರೆ, 17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ ಡಿಸೆಂಬರ್ 5ರಂದು ಚುನಾವಣೆ ನಡೆಯಲಿರುವ 15 ಕ್ಷೇತ್ರಗಳಿಗೆ ಸೋಮವಾರದಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿಯ ಕಣವಾಗಲಿರುವ ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಕಸರತ್ತು ಆರಂಭವಾಗಲಿದ್ದು, ಭಿನ್ನಮತ, ಪಕ್ಷಾಂತರದ ಹಾವಳಿ ಜೋರಾಗುವ ಲಕ್ಷಣ ಕಾಣಿಸುತ್ತಿದ್ದು, ಗೆಲ್ಲಲು ಪಣ ತೊಟ್ಟಿರುವ ಎರಡೂ ಪಕ್ಷಗಳಲ್ಲಿ ಆತಂಕ ಹೆಚ್ಚಿಸಿದೆ.
15 ಕ್ಷೇತ್ರಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಅಲ್ಪಮತದ ಸರ್ಕಾರವನ್ನು ಭದ್ರಗೊಳಿಸಲು ಬಿಜೆಪಿ ಯತ್ನಿಸಿದರೆ, ಹೆಚ್ಚು ಸ್ಥಾನಗಳನ್ನು ಗೆದ್ದು ಹೇಗಾದರೂ ಬಿಜೆಪಿ ಸರ್ಕಾರವನ್ನು ಉರುಳಿಸಬೇಕು ಎಂದು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ, ಅಭ್ಯರ್ಥಿ ಆಕಾಂಕ್ಷಿಗಳ ಪೈಪೋಟಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸುತ್ತಿದೆ. ಇಲ್ಲಿ ಬಿಜೆಪಿಗಿಂತಲೂ ಆತಂಕ ಇರುವುದು ಕಾಂಗ್ರೆಸ್ಸಿಗೆ. ಈ ಕಾರಣಕ್ಕಾಗಿಯೇ ಚುನಾವಣಾ ಸಿದ್ಧತೆಯಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಒಂದು ಹೆಜ್ಜೆ ಮುಂದೆ ಇದೆ. ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ ಎನ್ನುತ್ತಿರುವ ಜೆಡಿಎಸ್ ಸಿದ್ಧತೆ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಿದೆ.
ಬೆಂಗಳೂರು ನಗರ ಜಿಲ್ಲೆಯ ಕೆ. ಆರ್. ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ, ಗೋಕಾಕ್, ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಹಿರೇಕೆರೂರು, ಬಳ್ಳಾರಿ ಜಿಲ್ಲೆಯ ವಿಜಯನಗರ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಮತ್ತು ಮೈಸೂರು ಜಿಲ್ಲೆಯ ಹುಣಸೂರು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಬಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿವೆ.
ಬುಧವಾರ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಅನರ್ಹ ಶಾಸಕರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದರೆ ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಬರುವ ಅಭ್ಯರ್ಥಿಗಳಿಗೆ ಬಿಜೆಪಿ ಮಣೆ ಹಾಕುತ್ತದೆ. ಮೂರು ಕ್ಷೇತ್ರಗಳನ್ನು ಹೊರತುಪಡಿಸಿ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೊಸ ಅಭ್ಯರ್ಥಿಗಳನ್ನು ಹುಡುಕಬೇಕಾಗಿದೆ. ಜೆಡಿಎಸ್ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ. ಈ ಪೈಕಿ ಕಾಂಗ್ರೆಸ್ ಎಂಟು ಕ್ಷೇತ್ರಗಳಿಗೆ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿದರೆ, ಉಳಿದ ಏಳು ಕ್ಷೇತ್ರಗಳಿಗೆ ಇನ್ನಷ್ಟೇ ಅಂತಿಮಗೊಳಿಸಬೇಕಾಗಿದೆ. ಜೆಡಿಎಸ್ ಎರಡು ಸುತ್ತಿನ ಮಾತುಕತೆ ನಡೆಸಿದೆಯಾದರೂ ಅಭ್ಯರ್ಥಿಗಳ ಹೆಸರು ಪ್ರಕಟಿಸಿಲ್ಲ. ಬಿಜೆಪಿ ಮಾತ್ರ ಅನರ್ಹರಿಗೆ ಸ್ಪರ್ಧಿಸಲು ಅವಕಾಶ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ಸುಪ್ರೀಂ ಕೋರ್ಟ್ ತೀರ್ಪಿಗಾಗಿ ಕಾಯುತ್ತಿದೆ.
ಕಾಂಗ್ರೆಸ್, ಬಿಜೆಪಿಗೆ ಗೊಂದಲದ ಗೂಡಾಗಿರುವ ಕ್ಷೇತ್ರಗಳು
ಬೆಂಗಳೂರು ನಗರ ಜಿಲ್ಲೆಯಲ್ಲಿ ಬಿಜೆಪಿಗೆ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ, ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ, ಗೋಕಾಕ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಿಜೆಪಿ ಪಾಲಿಗೆ ಮಗ್ಗುಲ ಮುಳ್ಳಾಗುತ್ತಿದೆ. ಇಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಗಳು ಟಿಕೆಟ್ ಗಾಗಿ ತೀವ್ರ ಪ್ರಯತ್ನ ನಡೆಸುತ್ತಿದ್ದು, ಪಕ್ಷದ ಟಿಕೆಟ್ ಸಿಗದೇ ಇದ್ದಲ್ಲಿ ಕಾಂಗ್ರೆಸ್ ಸೇರಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಈ ಪೈಕಿ ಒಂದೆರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳನ್ನು ಪ್ರಕಟಿಸಿರುವುದರಿಂದ ಆಕಾಂಕ್ಷಿಗಳು ಪಕ್ಷೇತರರಾಗಿಯಾದರೂ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬೇಕು ಎಂಬ ಪ್ರಯತ್ನಕ್ಕೆ ಮುಂದಾಗುವುದು ಖಂಡಿತ.
ಕಾಂಗ್ರೆಸ್ ಪಕ್ಷದಲ್ಲೂ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲ. ಹೊಸಕೋಟೆ ಕ್ಷೇತ್ರದಿಂದ ಹೆಬ್ಟಾಳ ಶಾಸಕ ಬೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಎಂ. ಶಿವರಾಜು, ಕೆ. ಆರ್. ಪುರ ಕ್ಷೇತ್ರದಲ್ಲಿ ಎಂ. ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಎಂ. ಆಂಜಿನಪ್ಪ, ಯಲ್ಲಾಪುರ ಕ್ಷೇತ್ರದಿಂದ ಭೀಮಣ್ಣ ನಾಯ್ಕ, ಹುಣಸೂರು ಕ್ಷೇತ್ರದಿಂದ ಎಚ್. ಪಿ. ಮಂಜುನಾಥ್, ಹಿರೆಕೆರೂರು ಕ್ಷೇತ್ರದಿಂದ ಬಿ. ಎಚ್. ಬನ್ನಿಕೋಡ್, ರಾಣೆಬೆನ್ನೂರು ಕ್ಷೇತ್ರದಿಂದ ಕೆ. ಬಿ. ಕೋಳಿವಾಡ್ ಅವರಿಗೆ ಟಿಕೆಟ್ ನೀಡಲಾಗಿದೆ. ಇವುಗಳಲ್ಲಿ ಹೊಸಕೋಟೆ, ಕೆ. ಆರ್. ಪುರ, ಹುಣಸೂರು ಕ್ಷೇತ್ರದಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ.
ಉಳಿದಂತೆ ಯಶವಂತಪುರ, ಶಿವಾಜಿನಗರ, ಅಥಣಿ, ಕಾಗವಾಡ, ಗೋಕಾಕ್, ಬಳ್ಳಾರಿ ಜಿಲ್ಲೆಯ ವಿಜಯನಗರ, ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಕ್ಷೇತ್ರಗಳಲ್ಲಿ ಇನ್ನಷ್ಟೇ ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಾಗಿದೆ. ಕಾಗವಾಡದಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಗೆ ಹಾರಲು ಸಿದ್ಧವಾಗಿರುವ ಮಾಜಿ ಶಾಸಕ ರಾಜು ಕಾಗೆ ಅವರಿಗೆ ಮಣೆ ಹಾಕಲು ಕಾಂಗ್ರೆಸ್ ಸಿದ್ಧವಾಗಿದೆ. ಆದರೆ, ಸ್ಥಳೀಯ ಆಕಾಂಕ್ಷಿಗಳು ಮತ್ತು ಕಾರ್ಯಕರ್ತರು ಇದಕ್ಕೆ ಒಪ್ಪುತ್ತಿಲ್ಲ. ಅದೇ ರೀತಿ ಗೋಕಾಕ್ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ ಲಖನ್ ಜಾರಕಿಹೊಳಿಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಅಂತಿಮ ಎಂದು ಹೇಳಲಾಗುತ್ತಿದೆ. ಆದರೆ, ಅಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅಶೋಕ್ ಪೂಜಾರಿ ಕಾಂಗ್ರೆಸ್ ಟಿಕೆಟ್ ಸಿಕ್ಕಿದರೆ ಪಕ್ಷಾಂತರಕ್ಕೆ ಸಜ್ಜಾಗಿದ್ದಾರೆ. ಕ್ಷೇತ್ರದ ಅನೇಕ ಕಾಂಗ್ರೆಸ್ ಮುಖಂಡರು, ಅದರಲ್ಲೂ ಮುಖ್ಯವಾಗಿ ಮಾಜಿ ಸಚಿವ ಡಿ. ಕೆ. ಶಿವಕುಮಾರ್, ಬೆಳಗಾವಿ ಜಿಲ್ಲೆಯ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಶೋಕ್ ಪೂಜಾರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಅಥಣಿ, ವಿಜಯನಗರ, ಕೃಷ್ಣರಾಜಪೇಟೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಇಲ್ಲವಾದರೂ ಸೂಕ್ತ ಅಭ್ಯರ್ಥಿಗಳು ಸಿಗದೆ ಬಿಜೆಪಿಯವರಿಗಾಗಿ ಕಾಯಲಾಗುತ್ತಿದೆ. ಒಂದೊಮ್ಮೆ ಇಲ್ಲಿ ಬಿಜೆಪಿಯಿಂದ ಬಂದವರಿಗೆ ಟಿಕೆಟ್ ನೀಡಿದರೆ ಆಕಾಂಕ್ಷಿಗಳು ಅಸಮಾಧಾನಗೊಳ್ಳುವುದು ಖಂಡಿತ.
ಎರಡೂ ಪಕ್ಷಗಳಲ್ಲಿ ಇಂತಹ ಗೊಂದಲಗಳು ಹೆಚ್ಚಾಗಿರುವುದರಿಂದ ಟಿಕೆಟ್ ಹಂಚಿಕೆಯಲ್ಲಿ ಉಂಟಾಗುವ ಅಸಮಾಧಾನ ಫಲಿತಾಂಶದ ಮೇಲೆ ಪರಿಣಾಮ ಬೀರುವುದು ಖಂಡಿತ. ಈ ಅಂಶವೇ ಎರಡೂ ಪಕ್ಷಗಳ ನಾಯಕರ ತಲೆ ಕೆಡುವಂತೆ ಮಾಡಿದೆ. ಆದರೆ, ಬಿಜೆಪಿಯಲ್ಲಿ ಅನರ್ಹರು ಬಂದರೆ ಟಿಕೆಟ್ ಕೊಡಲೇ ಬೇಕಾಗಿರುವುದರಿಂದ ಅಸಮಾಧಾನಿತರನ್ನು ಸಮಾಧಾನ ಮಾಡುವ ಮತ್ತು ಸಮಾಧಾನಗೊಳ್ಳದವರನ್ನು ನಿಮ್ಮ ದಾರಿ ನಿಮಗೆ ಎಂದು ಬಿಟ್ಟುಬಿಡುವ ಪ್ರಕ್ರಿಯೆ ಈಗಾಗಲೇ ನಡೆದಿದೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಇನ್ನಷ್ಟೇ ಈ ಕೆಲಸ ಆರಂಭವಾಗಬೇಕಿದೆ. ನಾಮಪತ್ರ ಸಲ್ಲಿಕೆಗೆ ಇನ್ನೂ ಒಂದು ವಾರ ಕಾಲಾವಕಾಶವಿದ್ದು, ಅಷ್ಟರೊಳಗೆ ಗೊಂದಲ ಬಗೆಹರಿಸಿಕೊಂಡರೆ ಎರಡೂ ಪಕ್ಷಗಳು ನಿಟ್ಟುಸಿರು ಬಿಡಬಹುದು. ಇಲ್ಲದೇ ಇದಲ್ಲಿ ಚುನಾವಣೆ ವೇಳೆ ಸ್ಥಳೀಯವಾಗಿ ಬೀಳುವ ಒಳಪೆಟ್ಟುಗಳನ್ನು ತಿನ್ನುತ್ತಾ ಆತಂಕದಿಂದಲೇ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ.