ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಮಾತೊಂದಿದೆ. ಅದು ಸುಲಭದ ಕೆಲಸವಲ್ಲ. ಅದಕ್ಕಾಗಿಯೇ ನಾಣ್ನುಡಿಯಾಗಿದೆ. ಪತ್ರಿಕೆಯೊಂದರ ಪ್ರಕಾಶಕ ದೇಶದ ಶಿಕ್ಷಣ ಕ್ಷೇತ್ರದ ವ್ಯಾಪಾರ ಮತ್ತು ಮಹಾ ವಂಚನೆಯ ಬೆಂಬತ್ತಿ ಬಹುಕೋಟಿ ವಂಚಿಸಿದ ಶಿಕ್ಷಣ ಸಂಸ್ಥೆಗೆ ಬಾಗಿಲು ಹಾಕಿಸಿದ ಹೋರಾಟದ ಹೆಜ್ಜೆಗಳು ಈಗಲು ಪ್ರಸ್ತುತ.
ಐಐಪಿಎಂ ನಿಮಗೆ ನೆನಪಿರಬಹುದು. ಇಂಡಿಯನ್ ಇನ್ಸಿಟ್ಯೂಟ್ ಆಫ್ ಪ್ಲಾನಿಂಗ್ ಆಂಡ್ ಮ್ಯಾನೇಜ್ಮೆಂಟ್ – ಆರಿಂದಮ್ ಚೌಧರಿ ಎಂಬಾತನ ಶಿಕ್ಷಣ ವ್ಯಾಪಾರ. ಟೈಮ್ಸ್ ಆಫ್ ಇಂಡಿಯಾದಂತಹ ಆಂಗ್ಲ ಪತ್ರಿಕೆಗಳಲ್ಲಿ ಪುಟಗಟ್ಟಲೆ ಜಾಹಿರಾತುಗಳು ಪ್ರಕಟ ಆಗುತ್ತಿದ್ದವು. ಕಾಲೇಜಿನ ಕಟ್ಟಡ, ಅಲ್ಲಿನ ಸೌಲಭ್ಯ, ಐಐಪಿಎಂ ನೀಡುತ್ತಿದ್ದ ಜಾಹಿರಾತಿಗೆ ಮರುಳಾಗಿ ವಿದ್ಯಾರ್ಥಿಗಳು ಸೇರ್ಪಡೆ ಆಗುತ್ತಿದ್ದರು. ವಾಸ್ತವದಲ್ಲಿ ಅದೊಂದು ನಕಲಿ ವಿದ್ಯಾಸಂಸ್ಥೆ ಆಗಿತ್ತು. ಯೂನಿರ್ವಸಿಟಿ ಗ್ರಾಂಟ್ ಕಮೀಷನ್- (UGC) ಸಹಿತ ಯಾವುದೇ ಶೈಕ್ಷಣಿಕ ಪ್ರಾಧಿಕಾರಗಳಿಗೆ ಐಐಪಿಎಂ ಯಾವುದೇ ಅನುಮತಿಗಾಗಿ ಅರ್ಜಿ ಹಾಕಿಯೇ ಇರಲಿಲ್ಲ. ತನ್ನ ಸಂಸ್ಥೆಗೆ ಯುಜಿಸಿ ಅನುಮತಿ ಬೇಕಾಗಿಲ್ಲ ಎನ್ನುತ್ತಿದ್ದ ಆರಿಂದಮ್ ಚೌಧರಿ. ಅದು ಹಣದ ದೌಲತ್ತು.
ಈಗ ಮತ್ತೆ ಐಐಪಿಎಂ ಸುದ್ದಿಯಲ್ಲಿದೆ. ಐಐಪಿಎಂ ಮತ್ತು ತನ್ನ ಸಂಬಂಧಗಳ ಬಗ್ಗೆ ವಿವರ ನೀಡುವಂತೆ ಬಾಲಿವುಡ್ ಚಿತ್ರನಟ ಶಾರೂಖ್ ಖಾನ್ ಅವರಿಗೆ ಕಲ್ಕತ್ತಾ ಹೈಕೋರ್ಟ್ ಸೂಚನೆ ನೀಡಿದೆ. ನವರಾತ್ರಿ ರಜೆ ಮುಗಿದ ಎರಡು ವಾರದಲ್ಲಿ ಉತ್ತರ ನೀಡುವಂತೆ ಸೂಚಿಸಿದೆ.
ಶಾರೂಖ್ ಐಐಪಿಎಂ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿದ್ದು ಇದರಿಂದ ಪ್ರೇರಿತರಾಗಿ ನಾವು ವಿದ್ಯಾಸಂಸ್ಥೆಗೆ ಸೇರಿದ್ದೆವು ಎಂದು ಇಬ್ಬರು ವಿದ್ಯಾರ್ಥಿಗಳು ದೂರು ನೀಡಿದ್ದರು. ಇಂತಹ ನಕಲಿ ಕಾಲೇಜಿನ ಜಾಹಿರಾತು ಪ್ರಚಾರದಲ್ಲಿ ಭಾಗವಹಿಸಿರುವ ಶಾರೂಖ್ ಖಾನ್ ಐಐಪಿಎಂ ಸಂಸ್ಥೆಯೊಂದಿಗೆ ವ್ಯವಹಾರಿಕೆ ಪಾತ್ರದ ಬಗ್ಗೆ ಸಿಬಿಐ ಯಾಕೆ ತನಿಖೆ ನಡೆಸಬಾರದು ಎಂದು ಕೂಡ ಅಭಿಪ್ರಾಯ ಕೋರಿ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೊಟೀಸ್ ನೀಡಿದೆ.
2000ರಲ್ಲಿ ಬಣ್ಣ ಬಣ್ಣದ ಐಐಪಿಎಂ ಜಾಹಿರಾತುಗಳು ಭರ್ಜರಿಯಾಗಿ ಪ್ರಕಟ ಆಗುತ್ತಿದ್ದವು. ಅದಾಗಲೇ, ಆಂಗ್ಲ ಸಾಪ್ತಾಹಿಕಗಳು ದೇಶದ ಶಿಕ್ಷಣ ಸಂಸ್ಥೆಗಳ ಮೌಲ್ಯಂಕಣದ ಹೆಸರಿನಲ್ಲಿ ಜಾಹಿರಾತು ಎತ್ತಲು ಆರಂಭಿಸಿದ್ದವು. ಸಹಜವಾಗಿ ಜಾಹಿರಾತಿಗಾಗಿ ಹೆಚ್ಚು ಖರ್ಚು ಮಾಡುತ್ತಿದ್ದ ಐಐಪಿಎಂ ಅಂಕ ಪಟ್ಟಿಯಲ್ಲಿ ಮೇಲೆ ಇರುತ್ತಿತ್ತು. ಉಚಿತ ಲ್ಯಾಪ್ ಟಾಪ್ ನೀಡುತ್ತೇವೆ, ಉಚಿತ ಪ್ರವಾಸ ನೀಡುತ್ತೇವೆ ಎಂಬುದು ಐಐಪಿಎಂ ಜಾಹಿರಾತಿನ ಪ್ರಮುಖ ಆಕರ್ಷಣೆ. ತನ್ನ ತಂದೆ ಹುಟ್ಟು ಹಾಕಿದ ಶಿಕ್ಷಣ ಸಂಸ್ಥೆಯನ್ನು ಅರಿಂದಮ್ ಚೌಧರಿ ಹಣ ಮುದ್ರಣ ಮಾಡುವ ಕೇಂದ್ರವಾಗಿ ಮಾಡಿದ್ದ. ದೇಶದ ಹಲವೆಡೆ ಶಾಖೆಗಳು ಹರಡಿದ್ದವು.
ದೇಶ ವಿದೇಶಗಳಲ್ಲಿ ಉದ್ಯೋಗ ದೊರೆಯುತ್ತದೆ ಎಂದು ವಿದ್ಯಾರ್ಥಿಗಳು ದುಬಾರಿ ಫೀಸ್ ಪಾವತಿಸಿ ಐಐಪಿಎಂ ಸೇರ್ಪಡೆ ಆಗುತ್ತಿದ್ದರು. ನೂರಕ್ಕೆ ನೂರು ಪ್ಲೇಸ್ಮೆಂಟ್ ಆಗುತ್ತದೆ ಎಂದೂ ಸಂಸ್ಥೆ ಹೇಳಿಕೊಳ್ಳುತ್ತಿತ್ತು. ಹಾಗೇನು ಅಲ್ಲಿ ಕಲಿತ ಅರ್ಧಾಂಶ ಮಂದಿಗೂ ಉದ್ಯೋಗ ದೊರೆಯುತ್ತಿರಲಿಲ್ಲ.
ಆಗಲೇ ಡಿಜಿಟಲ್ ಮಾಧ್ಯಮಗಳಲ್ಲಿ ಐಐಪಿಎಂ ವಂಚನೆ ಸುದ್ದಿ ಬರತೊಡಗಿದ್ದವು. ಆದರೆ, ಐಐಪಿಎಂ 2003ರಲ್ಲಿ ವಿನೋದ್ ಮೆಹ್ತಾ ಸಂಪಾದಕತ್ವದ ಔಟ್ ಲುಕ್ ಪತ್ರಿಕೆ ನೀಡಿರುವ ಶ್ರೇಯಾಂಕವನ್ನು ತನ್ನ ಜಾಹಿರಾತಿನಲ್ಲಿ ವ್ಯಾಪಕವಾಗಿ ಬಳಸುತಿತ್ತು. ವಿದ್ಯಾರ್ಥಿಗಳ ಹೆತ್ತವರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಔಟ್ ಲುಕ್ ತನ್ನ ಶ್ರೇಯಾಂಕ ಪಟ್ಟಿಯಿಂದ ಐಐಪಿಎಂ ಕಾಲೇಜನ್ನು ಕಿತ್ತು ಹಾಕಿತ್ತು. 2005ರ ನಂತರ ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನದಿಂದ ಐಐಪಿಎಂ ಸಂಸ್ಥೆಯನ್ನು ಹೊರಗಿಟ್ಟಿತು. ಯುಜಿಸಿ ಅಧ್ಯಕ್ಷರು ಕೂಡ ಐಐಪಿಎಂ ಜಾಹಿರಾತುಗಳು ಜನರನ್ನು ಮೋಸ ಮಾಡುವಂತಿದೆ ಎಂದು ಹೇಳಿಕೆ ನೀಡಿದ್ದರು.
2008ರಲ್ಲಿ ಐಐಪಿಎಂ ವಿರುದ್ಧ ದೂರುಗಳು ಹೆಚ್ಚಾದ ಪರಿಣಾಮ ಔಟ್ ಲುಕ್ ಪತ್ರಿಕೆಯ ಪ್ರಕಾಶಕರಾಗಿದ್ದ ಮಹೇಶ್ವರ್ ಪೆರಿ ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದು ಬೆಕ್ಕಿಗೆ ಗಂಟೆ ಕಟ್ಟುವುದಾಗಿ ಘೋಷಿಸುತ್ತಾರೆ. ಇಂತಹ ಶಿಕ್ಷಣ ಸಂಸ್ಥೆಗಳ ವಿರುದ್ದ ದೂರುಗಳಿದ್ದರೆ ತನ್ನ ಗಮನಕ್ಕೆ ತರಬೇಕೆಂದು ಐಐಪಿಎಂ ಉಲ್ಲೇಖಿಸಿಯೇ ಆಹ್ವಾನ ನೀಡುತ್ತಾರೆ. ಸಹಜವಾಗಿ ಐಐಪಿಎಂ ಪೆರಿ ವಿರುದ್ಧ ಪ್ರಕರಣ ದಾಖಲಿಸುತ್ತದೆ.
2011ರಲ್ಲಿ ಅರಿಂದಮ್ ಚೌಧರಿ ಕುರಿತಾದ ಪುಸ್ತಕದ ಆಯ್ದ ಭಾಗವನ್ನು ಪ್ರಕಟಿಸಿದ ಕಾರವನ್ ಪತ್ರಿಕೆ, ಗೂಗಲ್, ಪುಸ್ತಕ ಪ್ರಕಾಶಕರಾದ ಪೆಂಗ್ವಿನ್ ಮತ್ತಿತರ ಹಲವು ಮಾಧ್ಯಮ ಸಂಸ್ಥೆಗಳ ವಿರುದ್ಧ ಮಾನಹಾನಿ ಕೇಸು ದಾಖಲಿಸಿದ್ದಲ್ಲದೆ, ಸುದ್ದಿ ಪ್ರಕಟಿಸಿದ ವೆಬ್ ಸೈಟುಗಳ ಯು ಆರ್ ಎಲ್ ಬ್ಲಾಕ್ ಮಾಡಿಸುವ ಮೂಲಕ ವಿವಾದ ಕೇಂದ್ರ ಬಿಂದುವಾದರು ಅರಿಂದಮ್ ಚೌಧುರಿ.
ಈ ವಿಚಾರದಲ್ಲಿ ಸಿಎನ್ ಎನ್ ಐಬಿಎನ್ ಟಿವಿ ಚಾನಲಿನಲ್ಲಿ 2013 ಫೆಬ್ರುವರಿಯಲ್ಲಿ ನಡೆದ ಚರ್ಚೆಯಲ್ಲಿ ಇತರರೊಂದಿಗೆ ಅರಿಂದಮ್ ಚೌಧರಿ ಮತ್ತು ಮಹೇಶ್ವರ್ ಪೆರಿ ಕೂಡ ಭಾಗವಹಿಸುತ್ತಾರೆ. ಐಐಪಿಎಂ ಹಾಕಿರುವ ಕಾನೂನು ಸಮರದ ಬಗ್ಗೆ ಮಾತನಾಡಿದ ಪೆರಿ ಅವರು ಇದೊಂದು ನನ್ನ ಜೀವಮಾನದ ಕೆಲಸ, ಕೊನೆಯ ವರೆಗೆ ಹೋರಾಟ ನಡೆಸುತ್ತೇನೆ ಎಂದು ಚರ್ಚೆಯಲ್ಲಿ ಘೋಷಿಸುತ್ತಾರೆ.
ಆ ವೇಳೆಗಾಗಲೇ ಸಂಪೂರ್ಣ ಶಿಕ್ಷಣಕ್ಕಾಗಿ ಮೀಸಲಿರಿಸಿದ ಕೆರಿಯರ್ 360 ಎಂಬ ವೆಬ್ ಸೈಟ್ ಮತ್ತು ಪತ್ರಿಕೆಯನ್ನು ಆರಂಭಿಸುತ್ತಾರೆ ಮಹೇಶ್ವರ್ ಪೆರಿ. ಮೂಲತಃ ಆಂಧ್ರಪ್ರದೇಶ ಮಧ್ಯಮ ಕುಟುಂಬದಿಂದ ಬಂದಿರುವ ಪೆರಿ ಅವರು ರಹೇಜ ಗ್ರೂಪ್ ಆರಂಭಿಸಿದ ಔಟ್ ಲುಕ್ ಪತ್ರಿಕಾ ಸಮೂಹದ ಹಣಕಾಸು ವಹಿವಾಟು ನೋಡಿಕೊಳ್ಳುತ್ತಿದ್ದರು. ಅನಂತರ ಚಿಕ್ಕ ವಯಸ್ಸಿನಲ್ಲೇ ಯಶಸ್ವಿ ಪ್ರಕಾಶಕರಾಗುತ್ತಾರೆ. ಒಬ್ಬ ಪತ್ರಕರ್ತನಿಗಿಂತ ಹೆಚ್ಚಿನದಾದ ವೃತ್ತಿನಿಷ್ಠೆ ಅವರಲ್ಲಿದ್ದಿರಬೇಕು. ಆಗ ಯುವ ಜನ ಸಮೂಹವನ್ನು ವಂಚಿಸುತ್ತಿದ್ದ ಐಐಪಿಎಂ ವಿರುದ್ಧ ಎಲ್ಲ ರೀತಿಯ ಹೋರಾಟ ನಡೆಸಿದರು.
ಆರು ವರ್ಷಗಳ ಕಾಲ ನಿರಂತರ ನಡೆದ ಕಾನೂನು ಮತ್ತು ಮಾಧ್ಯಮ ಹೋರಾಟ ಅತ್ಯಂತ ಕಠಿಣದ್ದಾಗಿತ್ತು. ಅದಾಗಲೇ, ಚೌಧರಿ ಅಂದಾಜು 550 ಕೋಟಿ ರೂಪಾಯಿಯ ಸಾಮ್ರಾಜ್ಯ ಕಟ್ಟಿದ್ದ. ಸಂಡೇ ಇಂಡಿಯನ್ ಎಂಬ ಹೆಸಿರನಲ್ಲಿ ಬಹುಭಾಷಾ ಪತ್ರಿಕೆಗಳನ್ನು ಆರಂಭಿಸಿದ್ದ. ಅವುಗಳ ಮೂಲಕ ಮಾನಹಾನಿ ಲೇಖನಗಳನ್ನು ಪ್ರಕಟಿಸಿ ಪ್ರತಿಸ್ಪರ್ಧಿಯನ್ನು ಕಂಗೆಡಿಸುವ ಯತ್ನ ಅತ್ಯಂತ ಕೆಟ್ಟದಾಗಿ ನಡೆದಿತ್ತು. ಅಸ್ಸಾಮ್ ರಾಜ್ಯದ ಯಾವುದೊ ಒಂದು ಮೂಲೆ ಸೇರಿದಂತೆ ದೇಶದ ಹಲವೆಡೆ ಹಲವು ಕೋರ್ಟುಗಳಿಗೆ ಮಹೇಶ್ವರ್ ಪೆರಿ ಓಡಾಟ ಮಾಡಬೇಕಾಯಿತು. ಹಲವು ಕೋಟಿ ಕೈ ಬಿಟ್ಟಿತ್ತು.
2015 ಜುಲೈ ತಿಂಗಳಲ್ಲಿ ಐಐಪಿಎಂ ಕೋರ್ಸುಗಳನ್ನು ನಿಲ್ಲಿಸಿರುವುದಾಗಿ ಘೋಷಿಸಿತು. ಇದೇ ವರ್ಷ ಪೆರಿ ವಿರುದ್ಧ ಎಲ್ಲ ಪ್ರಕರಣಗಳನ್ನು ವಾಪಾಸ್ ಪಡೆಯಿತು. ಈ ಮಧ್ಯೆ, ಯುಜಿಸಿ ಐಐಪಿಎಂ ವಿರುದ್ಧ ಸಾರ್ವಜನಿಕ ಪ್ರಕಟಣೆ ನೀಡಿತ್ತು. ಹೈಕೋರ್ಟ್ ಕೂಡ ಐಐಪಿಎಂ ವಿರುದ್ಧ ತೀರ್ಪು ನೀಡಿತ್ತು. ಅಲ್ಲಿಗೆ ಶಿಕ್ಷಣ ಮತ್ತು ಉದ್ಯೋಗದ ಹೆಸರಿನಲ್ಲಿ ಜನರನ್ನು ದೋಚುತ್ತಿದ್ದ ಸಂಸ್ಥೆ ಇತಿಹಾಸ ಸೇರಿತ್ತು. ಆದರೆ, ಇಂತಹ ಸಂಸ್ಥೆಗೆ ಕ್ರೆಡಿಬಿಲಿಟಿ ತಂದು ಕೊಟ್ಟಂತಹ ಸೆಲೆಬ್ರಿಟಿ ಶಾರೂಖ್ ನ್ಯಾಯಾಲಯಕ್ಕೆ ಉತ್ತರಿಸಬೇಕಾಗಿದೆ.