ಕರ್ನಾಟಕ ರಾಜ್ಯದ ಅತ್ಯಂತ ಹಳೆಯ ನೀರಾವರಿ ಯೋಜನೆಗಳಲ್ಲಿ ಒಂದಾದ ವಾರಾಹಿ ಯೋಜನೆಯ ಪೂರ್ಣಗೊಂಡ ಮೊದಲ ಹಂತ ಕಾಮಗಾರಿಯನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 2015 ಮೇ 4ರಂದು ಉದ್ಘಾಟಿಸಿದ್ದರು. 2009 ಮಾರ್ಚ್ ತಿಂಗಳಲ್ಲಿ 9.43 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಆರಂಭಗೊಂಡ ಯೋಜನೆಗೆ ಈಗ 40 ವರ್ಷ. ಇದುವರೆಗೆ ಖರ್ಚಾದ ಹಣ ಆರು ನೂರು ಕೋಟಿ ರೂಪಾಯಿಗೂ ಹೆಚ್ಚು. ಇದು ನಮ್ಮ ಬೃಹತ್ ನೀರಾವರಿ ಯೋಜನೆಯ ಪರಿಸ್ಥಿತಿ.
ರೈತರಿಗೆ ಅನುಕೂಲವಾಗಲೆಂದು 1979 ಮಾರ್ಚ್ 23ರಂದು ರಾಜ್ಯ ಸರ್ಕಾರ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿತು. ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಅವರು 1980 ಡಿಸೆಂಬರ್ 30ರಂದು ಶಂಕುಸ್ಥಾಪನೆಯನ್ನು ಕೂಡ ನೆರವೇರಿಸಿದ್ದರು. ರೈತರಿಗೆ ಅನುಕೂಲ ಆಗಬೇಕಾಗಿದ್ದ ಯೋಜನೆ ಗುತ್ತಿಗೆದಾರನಿಗೆ ಮತ್ತು ಅಧಿಕಾರಿಗಳಿಗೆ ಮಾತ್ರ ಪ್ರಯೋಜನ ಮಾಡಿತ್ತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಬೃಹತ್ ನೀರಾವರಿ ಯೋಜನೆಯಾದ ವಾರಾಹಿಯಿಂದಾಗಿ ಭಾಗ್ಯದ ಬಾಗಿಲು ತೆರೆಯಲಿದೆ ಎಂಬ ಆಶಾ ಭಾವನೆಯಲ್ಲಿದ್ದರು ಕರಾವಳಿಯ ಜನತೆ. ಅದೇ ಉತ್ಸಾಹದಲ್ಲಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯೂ ಆರಂಭ ಆಗಿತ್ತು. ಅದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆ. ವಾರಾಹಿ ನೀರಾವರಿ ಯೋಜನೆ ವಿಳಂಬವಾದ ಪರಿಣಾಮ ಸಕ್ಕರೆ ಕಾರ್ಖಾನೆ ಕೂಡ ಬಾಗಿಲು ಹಾಕಿತು. ರೈತರಿಗೆ ಕಬ್ಬು ಪೂರೈಕೆ ಮಾಡಿದ್ದಕ್ಕೆ ಹಣವೂ ದಕ್ಕಲಿಲ್ಲ. ಈಗ ಕರಾವಳಿಯ ಸಕ್ಕರೆಯಲ್ಲಿ ಸಿಹಿಯ ಅಂಶವೇ ಇಲ್ಲ ಎನ್ನುತ್ತಿದ್ದಾರೆ ರೈತರು. ಹೌದು ಶೇಕಡ 9ಕ್ಕಿಂತ ಕಡಿಮೆ ಸಕ್ಕರೆ ಅಂಶ ಇದೆ. ಸಕ್ಕರೆ ಕಾರ್ಖಾನೆಗೆ ಅರೆಯಲು ಶೇಕಡ 15ರಿಂದ 18 ಸಕ್ಕರೆ ಅಂಶವಿರುವ ಕಬ್ಬು ಬೇಕು ಎನ್ನುತ್ತಾರೆ ವಿಜ್ಞಾನಿಗಳು.
ವಾರಾಹಿ ಯೋಜನೆಯ ವಿಳಂಬದಿಂದ ಒಂದು ಸಕ್ಕರೆ ಕಾರ್ಖಾನೆ ಮಾತ್ರ ಮುಚ್ಚಿರುವುದಲ್ಲ. ಕರಾವಳಿಯ ಹಲವು ಮಂದಿ ರೈತರ ಜೀವನದಲ್ಲಿ ಅಸ್ಥಿರತೆಯ ಆಟವಾಡಿದೆ. ಇಂದು ಕರಾವಳಿಯ ಜನತೆ ಸರಕಾರವನ್ನು ನಂಬಿ ಯಾವ ಕೆಲಸಕ್ಕೂ ಇಳಿಯುವ ಮುನ್ನ ಎರಡು ಬಾರಿ ಯೋಚಿಸುತ್ತಾರೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ ಕುಮಾರ ಸೊರಕೆ ಯೋಜನೆಯ ಅನುಷ್ಠಾನವನ್ನು ಸ್ವಲ್ಪ ಚುರುಕುಗೊಳಿಸಿ, ಮುಖ್ಯಮಂತ್ರಿಯವರನ್ನು ಆಹ್ವಾನಿಸಿ ಉದ್ಘಾಟಿಸಿದರು ಕೂಡ ಮೊದಲ ಹಂತದ ಕಾಮಗಾರಿ ನೂರಕ್ಕೆ ನೂರು ಪೂರ್ಣ ಆಗಿಲ್ಲ. ಇನ್ನು ಎರಡನೇ ಹಂತದ ಬಲದಂಡೆ ಕಾಮಗಾರಿ ಇನ್ನೂ ಆರಂಭವಾದಂತಿಲ್ಲ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಆಗುಂಬೆ ಸಮೀಪ ಪಶ್ಚಿಮ ಘಟ್ಟದಲ್ಲಿ ಹುಟ್ಟಿ ವಾರಾಹಿ ನದಿ 88 ಕಿ.ಮೀ ಪಶ್ಚಿಮಾಭಿಮುಖವಾಗಿ ಹರಿದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಸಮೀಪ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಸಿದ್ದಾಪುರದ ಹೊರಿಯಬ್ಬೆ ಸಮೀಪ ಅಣೆಕಟ್ಟು ಕಟ್ಟಿ ಆ ನೀರನ್ನು ಕರ್ನಾಟಕ ವಿದ್ಯುತ್ ನಿಗಮದ ವಾರಾಹಿ ಭೂಗರ್ಭ ಜಲ ವಿದ್ಯುತ್ ಯೋಜನೆಗೆ ಬಳಸಲಾಗುತ್ತಿದೆ. ಇದು ರಾಜ್ಯದ ಮೊದಲ ಭೂಗರ್ಭ ಜಲವಿದ್ಯುತ್ ಯೋಜನೆ ಕೂಡ ಹೌದು.
ಹೀಗೆ ವಿದ್ಯುತ್ ಉತ್ಪಾದನೆ ಆದ ಬಳಿಕ ಹೊರ ಬರುವ ಸುಮಾರು 1100 ಕ್ಯೂಸೆಕ್ ನೀರನ್ನು ಅಣೆಕಟ್ಟೆ ಮೂಲಕ ಸಂಗ್ರಹಿಸಿ ಕುಂದಾಪುರದ 33 ಮತ್ತು ಉಡುಪಿ ತಾಲ್ಲೂಕಿನ 35 ಗ್ರಾಮಗಳ ಸುಮಾರು 15,702 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ವಾರಾಹಿಯ ಮೂಲ ಉದ್ದೇಶ ಆಗಿತ್ತು.
ಕೇಂದ್ರ ಸರಕಾರ ನೀರಾವರಿ ಯೋಜನೆಗಳಿಗೆ ಆದ್ಯತೆಯನ್ನು ನೀಡಿದ ಮೇರೆಗೆ ಯೋಜನೆಯನ್ನು 2003–04ರಲ್ಲಿ ಕರ್ನಾಟಕ ನೀರಾವರಿ ನಿಗಮಕ್ಕೆ ನೀಡಲಾಗಿತ್ತು. ಆದರೆ, ನಂತರವೂ ಯೋಜನೆ ತ್ವರಿತವಾಗಿ ಸಾಗಲೇ ಇಲ್ಲ.
2015ರಿಂದ ಎಡದಂಡೆಯಲ್ಲಿ ನೀರು ಹಾಸುವ ಕೆಲಸ ನಡೆಯುತ್ತಿದೆ. ಆದರೆ, ಯೋಜನೆಯಂತೆ ಹೊಳೆ ಶಂಕರನಾರಾಯಣದಿಂದ ಕಾವ್ರಾಡಿಯವರೆಗಿನ 44 ಕಿ.ಮೀ ಬಲದಂಡೆ ಯೋಜನೆ ಅನುಷ್ಠಾನ ಆಗಿಲ್ಲ. ಇದರ ಬದಲಾಗಿ 18 ಕಿಮೀ ಉದ್ದದ ಬಲದಂಡೆ ಕಾಲುವೆ ರಚಿಸಲು ಸರಕಾರ ಮುಂದಾಗಿದೆ. ಆದರೆ, ಬಲದಂಡೆ ಯೋಜನಾ ಪ್ರದೇಶದ ರೈತರು ಬಲದಂಡೆಗೆ ಜಮೀನು ನೀಡಿ ತಮ್ಮ ಭೂಮಿಗೂ ನೀರು ಬರುತ್ತದೆ ಎಂದು ಕಾದು ಕುಳಿತು ನಿರಾಶರಾಗಿದ್ದಾರೆ. ರೈತರ ಪಹಣಿ ಪತ್ರಗಳಲ್ಲಿ ಕರ್ನಾಟಕ ನೀರಾವರಿ ನಿಗಮ ವಾರಾಹಿ ಯೋಜನೆ ಎಂದೇ ನಮೂದಾಗಿದೆ. ಅದೇ ರೀತಿ ಬೈಂದೂರು ವ್ಯಾಪ್ತಿಗೆ ನೀರು ನೀಡುವ 74 ಕೋಟಿ ರೂಪಾಯಿ ವೆಚ್ಚದ ಸೌಕೂರು ಏತನೀರಾವರಿ ಯೋಜನೆಗೆ ಇನ್ನೂ ಚಾಲನೆ ದೊರಕಿಲ್ಲ.
ಈ ಮಧ್ಯೆ, ಉಡುಪಿ ಪ್ರದೇಶ ನಗರ ಮತ್ತು ಪಟ್ಟಣಗಳಿಗೆ 250 ಕೋಟಿ ರೂಪಾಯಿ ವೆಚ್ಚ ವಾರಾಹಿ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ವಾರಾಹಿ ಯೋಜನೆಯ ವಿಳಂಬ ಗತಿಯ ಕಾಮಗಾರಿಯಿಂದ ಯೋಜನೆಯ ನಿರೀಕ್ಷಿತ ಗುರಿ ಸಾಧನೆ ಆಗಿಲ್ಲ ಎಂದು ಸಿ ಎ ಜಿ (Comptroller and Auditor General of India) ವರದಿ ಆಕ್ಷೇಪ ವ್ಯಕ್ತಪಡಿಸಿದೆ. ಕಾಮನ್ ಕಾಲುವೆ ನಿರ್ಮಾಣ ಕಾಮಗಾರಿಯ 14 ಪ್ಯಾಕೇಜ್ ಮಾಡಿ ಗುತ್ತಿಗೆ ನೀಡಿರುವುದು 2007 ಜುಲೈ ಮತ್ತು 2012 ಜುಲೈ ಮಧ್ಯೆ. ಅದರಲ್ಲಿ ಎಂಟು ಕಾಮಗಾರಿಗಳ ಮುಕ್ತಾಯ ವೇಳೆಗೆ ಆರು ವರ್ಷಗಳ ದೀರ್ಘ ವಿಳಂಬ ಆಗಿತ್ತು ಎಂದಿರುವ ಸಿಎಜಿ ವರದಿ, ಟೆಂಡರ್ ನೀಡಿಕೆ ಸರಿಯಾಗಿ ಆಗಿಲ್ಲ ಎಂದೂ ಹೇಳಿದೆ. ಈ ಎಂಟು ಪ್ಯಾಕೇಜುಗಳ ವಿಳಂಬದಿಂದಾಗಿ ಯೋಜನಾ ಮೊತ್ತ ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಮುನ್ನವೇ 234 ಕೋಟಿಯಿಂದ 257 ಕೋಟಿ ರೂಪಾಯಿಗೆ ಏರಿಕೆ ಆಗಿತ್ತು ಎಂದು ವರದಿ ಉಲ್ಲೇಖಿಸಿತ್ತು.