ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಅಖಿಲ ಭಾರತ ಕಾಂಗ್ರೆಸ್ ಸಮಿತಿ (All India Congress Committee – AICC) ಮಾದರಿಯಲ್ಲಿಯೇ ಕೆಪಿಸಿಸಿ ಪದಾಧಿಕಾರಿಗಳ (KPCC Office Bearers) ನೇಮಕಾತಿಗೆ ಹೊಸ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ (B.K. Hariprasad) ತಿಳಿಸಿದ್ದಾರೆ.

ಗುರುವಾರ ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (Karnataka Pradesh Congress Committee – KPCC) ಕಚೇರಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ (Press Conference) ಮಾತನಾಡಿದ ಕೆಪಿಸಿಸಿ ಅವರು, ಎಐಸಿಸಿ ಮಾದರಿಯಲ್ಲಿಯೇ ಕೆಪಿಸಿಸಿ ಕಾರ್ಯದರ್ಶಿಗಳ ನೇಮಕಾತಿಗೂ ಬಹಿರಂಗವಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯದಾದ್ಯಂತ ಒಟ್ಟು 920 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಬೆಂಗಳೂರಿನಿಂದಲೇ 308 ಅರ್ಜಿಗಳು ಬಂದಿರುವುದು ಕಾರ್ಯಕರ್ತರ ಉತ್ಸಾಹವನ್ನು ತೋರಿಸುತ್ತದೆ. ಯಾವುದೇ ಗುಂಪುಗಾರಿಕೆ ಅಥವಾ ವ್ಯಕ್ತಿಗತ ಇಷ್ಟಾನಿಷ್ಟಗಳಿಗೆ ಮಣೆ ಹಾಕದೆ, ಅರ್ಹತೆ ಆಧಾರದ ಮೇಲೆ ಆಯ್ಕೆ ಮಾಡಲು ಹಿರಿಯ ನಾಯಕರ ಸಮಿತಿಯನ್ನು ರಚಿಸಲಾಗಿತ್ತು. ಡಾ. ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಬಿ.ಎಲ್. ಶಂಕರ್, ಎಚ್.ಕೆ. ಪಾಟೀಲ್, ಈ. ತುಕಾರಾಂ, ನಜೀರ್ ಅಹಮದ್ ಹಾಗೂ ರಾಣಿ ಸತೀಶ್ ಒಳಗೊಂಡ ಸಮಿತಿಯು ಸಂದರ್ಶನ ಪ್ರಕ್ರಿಯೆಯನ್ನು ನಡೆಸಿದೆ.
ಕಾರ್ಯದರ್ಶಿಗಳಿಗೆ ಕ್ಷೇತ್ರವಾರು ಜವಾಬ್ದಾರಿ
ಈ ಕಠಿಣ ಸಂದರ್ಶನ ಪ್ರಕ್ರಿಯೆಯ ಮೂಲಕ ಒಟ್ಟು 112 ಕೆಪಿಸಿಸಿ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿದೆ. ಇವರ ಜೊತೆಗೆ 112 ಕೋಆರ್ಡಿನೇಟರ್‌ಗಳನ್ನೂ ನೇಮಕ ಮಾಡಲಾಗುತ್ತಿದೆ. ಆಯ್ಕೆಯಾದ ಪ್ರತಿಯೊಬ್ಬ ಕಾರ್ಯದರ್ಶಿಗೂ ತಲಾ ಎರಡು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ನೀಡಲಾಗುವುದು. ಇವರು ತಮಗೆ ವಹಿಸಿರುವ ಕ್ಷೇತ್ರಗಳಲ್ಲಿ ಮುಂದಿನ ಒಂದೂವರೆ ವರ್ಷಗಳ ಕಾಲ 2029ರ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ತಳಮಟ್ಟದಲ್ಲಿ ಸಂಘಟನಾ ಕಾರ್ಯ ಮಾಡಲಿದ್ದಾರೆ. ಈ ಹುದ್ದೆಗಳಿಗೆ ಕನಿಷ್ಠ ಐದು ವರ್ಷಗಳ ಕಾಲ ಪಕ್ಷದ ಸದಸ್ಯತ್ವ ಹೊಂದಿರುವವರನ್ನು ಮಾತ್ರ ಪರಿಗಣಿಸಲಾಗಿದ್ದು, ನೇಮಕಾತಿಯಲ್ಲಿ ಒಬಿಸಿ, ಎಸ್‌ಸಿ, ಎಸ್‌ಟಿ ಹಾಗೂ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಕಚೇರಿಯಲ್ಲಿ ಕುಳಿತು ಆಯ್ಕೆ ಮಾಡುವ ಬದಲು, ಜನರ ನಡುವೆ ಇರುವವರನ್ನು ಗುರುತಿಸುವ ಉದ್ದೇಶದಿಂದ ಈ ಹೊಸ ವ್ಯವಸ್ಥೆ ತರಲಾಗಿದೆ ಎಂದು ಹರಿಪ್ರಸಾದ್ ವಿವರಿಸಿದರು.

ಕಲಬುರಗಿ ವಿಭಾಗದ ಆಯ್ಕೆ ಹಾಗೂ ಬ್ಲಾಕ್ ಅಧ್ಯಕ್ಷರ ನೇಮಕ
ಸಂಘಟನಾ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ಕಲಬುರಗಿ ವಿಭಾಗದ ಸಂದರ್ಶನವನ್ನು ಶೀಘ್ರದಲ್ಲೇ ನಡೆಸಲಾಗುವುದು. ಈ ವಿಭಾಗದ ವ್ಯಾಪ್ತಿಗೆ ಬರುವ ಬೀದರ್, ರಾಯಚೂರು, ಕಲಬುರಗಿ, ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ವಿಜಯನಗರ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಿಂದ ಒಟ್ಟು 111 ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ವೀಕ್ಷಕರು ಈಗಾಗಲೇ ಬ್ಲಾಕ್ ಮಟ್ಟಕ್ಕೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕಿದ್ದ ಈ ಪ್ರಕ್ರಿಯೆಯನ್ನು ನವೆಂಬರ್ ವರೆಗೆ ವಿಸ್ತರಿಸಲಾಗಿದ್ದು, ಶೀಘ್ರದಲ್ಲೇ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು.
ನಿಗಮ ಮಂಡಳಿ ನೇಮಕ ಮತ್ತು ಕಾರ್ಯಕರ್ತರ ಶ್ರಮ
ನಿಗಮ ಮಂಡಳಿಗಳ ನೇಮಕಾತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸದ್ಯ ಮೊದಲನೇ ಪಟ್ಟಿ ಬಿಡುಗಡೆಯಾಗಿದ್ದು, ಎರಡನೇ ಪಟ್ಟಿ ಬಂದ ಬಳಿಕ ಇದು ಸಂಪೂರ್ಣವಾಗಲಿದೆ ಎಂದರು. ನೇಮಕಾತಿಯಲ್ಲಿ ಬೆಂಗಳೂರಿನ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದೇವರುಗಳಿದ್ದಂತೆ, ಅವರ ಕಠಿಣ ಶ್ರಮದಿಂದಲೇ ಪಕ್ಷ ಅಧಿಕಾರಕ್ಕೆ ಬಂದಿದೆ. ಮುಂದಿನ ಪಟ್ಟಿಯಲ್ಲಿ ಎಲ್ಲರಿಗೂ ಅವಕಾಶ ಸಿಗಲಿದೆ ಎಂದು ಭರವಸೆ ನೀಡಿದರು. ಕಾರ್ಯಾಧ್ಯಕ್ಷರ ಬದಲಾವಣೆ ಕುರಿತು ಸೂಕ್ತ ಸಂದರ್ಭ ಬಂದಾಗ ಮಾತನಾಡುವುದಾಗಿ ಅವರು ತಿಳಿಸಿದರು.

ಬಿಜೆಪಿ ಟೀಕೆಗೆ ತಿರುಗೇಟು ಮತ್ತು ಸರ್ಕಾರದ ನಿಲುವುಗಳು
ಸೋನಿಯಾ ಗಾಂಧಿಯವರ ಪುಸ್ತಕದ ಬಗ್ಗೆ ಬಿಜೆಪಿಯವರ ಟೀಕೆಗೆ ಕಟುವಾಗಿ ಪ್ರತಿಕ್ರಿಯಿಸಿದ ಹರಿಪ್ರಸಾದ್, ಬಿಜೆಪಿಯವರು ಮುಸ್ಸಲೋನಿ ಲೆನ್ಸ್ ಹಾಕಿಕೊಂಡು ನೋಡುತ್ತಿದ್ದಾರೆ. 56 ಇಂಚಿನ ಎದೆಯವರ ಪುಸ್ತಕವನ್ನು ಓದಲು 56 ಜನರೂ ಇರಲಿಲ್ಲ ಎಂದು ವ್ಯಂಗ್ಯವಾಡಿದರು. ಇದೇ 17ರಂದು ಮಧ್ಯಾಹ್ನ 12 ಗಂಟೆಗೆ ಪುಸ್ತಕ ಅನಾವರಣಗೊಳ್ಳಲಿದೆ. ಇನ್ನು, ಅಲ್ಪಸಂಖ್ಯಾತ ಮತ್ತು ದಲಿತ ಸಂಘಟನೆಗಳ ಬೇಡಿಕೆಯಂತೆ, ನಾವು ಕೊಟ್ಟ ಮಾತಿಗೆ ಬದ್ಧರಾಗಿದ್ದು, ಮತಾಂತರ ನಿಷೇಧ ಕಾಯ್ದೆಯನ್ನು 2022ರಲ್ಲಿ ಇದ್ದ ಸ್ವರೂಪಕ್ಕೇ ಮರಳಿ ತರಲಾಗುವುದು. ಬಿಜೆಪಿ ಪಕ್ಷದಂತೆ ನಾವು ಸುಳ್ಳು ಹೇಳುವುದಿಲ್ಲ, ಕೋಮುವಾದ ಮಾಡುವುದಿಲ್ಲ. ನಮ್ಮದು ಎಲ್ಲರನ್ನೂ ಒಳಗೊಳ್ಳುವ ಪಕ್ಷ ಎಂದು ಅವರು ಸ್ಪಷ್ಟಪಡಿಸಿದರು. ಹಿರಿಯೂರು ಉಪಚುನಾವಣೆಗೆ ಪಕ್ಷ ಸಿದ್ಧವಿದ್ದು, ಚುನಾವಣಾ ಆಯೋಗ ನಿರ್ಧಾರ ಪ್ರಕಟಿಸಬೇಕಿದೆ ಎಂದರು.
ಆಂತರಿಕ ಭಿನ್ನಮತಗಳ ಕುರಿತು ಸ್ಪಷ್ಟನೆ
ಪಕ್ಷದ ಮುಖಂಡರಾದ ಕೆ.ಎನ್. ರಾಜಣ್ಣ ಮತ್ತು ರಾಜೇಂದ್ರ ಅವರ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ಬಹಿರಂಗವಾಗಿ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಪಕ್ಷದಿಂದ ಹೊರಹೋಗಿ ಎಂದು ಯಾರೂ ಹೇಳುವುದಿಲ್ಲ, ಅವರನ್ನು ನಾವು ಉಳಿಸಿಕೊಳ್ಳುತ್ತೇವೆ. ಪಕ್ಷದ ಆಂತರಿಕ ವಿಚಾರಗಳನ್ನು ನಾನು ಮತ್ತು ಮುಖ್ಯಮಂತ್ರಿಗಳು ಮಾತ್ರ ಚರ್ಚಿಸುತ್ತೇವೆ, ಇದರಲ್ಲಿ ಮೂರನೆಯವರ ಪ್ರವೇಶವಿಲ್ಲ ಎಂದು ಖಡಕ್ ಆಗಿ ಹೇಳಿದರು.
ಈ ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ನಾರಾಯಣಸ್ವಾಮಿ, ಮಾಜಿ ಸಚಿವೆ ರಾಣಿ ಸತೀಶ್, ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು, ಹಾಗೂ ಮಾಜಿ ಮೇಯರ್ ರಾಮಚಂದ್ರಪ್ಪ ಉಪಸ್ಥಿತರಿದ್ದರು.






