ನವದೆಹಲಿ : ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮತದಾರರ ಗುರುತಿನ ಚೀಟಿ (Voter ID) ಅತ್ಯಂತ ಮಹತ್ವದ ದಾಖಲೆಯಾಗಿದೆ. ಇದು ಕೇವಲ ಚುನಾವಣೆಯಲ್ಲಿ ಮತ ಚಲಾಯಿಸಲು ಮಾತ್ರವಲ್ಲದೆ, ವಿವಿಧ ಸರ್ಕಾರಿ ಹಾಗೂ ಖಾಸಗಿ ಸೇವೆಗಳಿಗೆ ಪ್ರಮುಖ ಗುರುತಿನ ಪುರಾವೆಯಾಗಿಯೂ ಬಳಕೆಯಾಗುತ್ತದೆ. ಒಂದು ವೇಳೆ ನಿಮ್ಮ ಮೂಲ ಮತದಾರರ ಗುರುತಿನ ಚೀಟಿ ಕಳೆದುಹೋಗಿದ್ದರೆ ಅಥವಾ ಹಾಳಾಗಿದ್ದರೆ ಆತಂಕಪಡುವ ಅಗತ್ಯವಿಲ್ಲ. ಕಚೇರಿಗಳಿಗೆ ಅಲೆದಾಡದೆ ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕವೇ ಡಿಜಿಟಲ್ ಇ-ಎಪಿಕ್ (e-EPIC) ಕಾರ್ಡ್ ಅನ್ನು ಅತ್ಯಂತ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.
ವೆಬ್ಸೈಟ್ ಪ್ರವೇಶ ಮತ್ತು ಲಾಗಿನ್ ಪ್ರಕ್ರಿಯೆ
ಡಿಜಿಟಲ್ ವೋಟರ್ ಐಡಿ ಪಡೆಯಲು ಮೊದಲು ಭಾರತೀಯ ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್ voters.eci.gov.in ಗೆ ಭೇಟಿ ನೀಡಬೇಕು. ಮುಖಪುಟದಲ್ಲಿ ಕಾಣಿಸುವ ‘e-EPIC Download’ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಈಗಾಗಲೇ ಖಾತೆ ಹೊಂದಿದ್ದರೆ ಮೊಬೈಲ್ ಸಂಖ್ಯೆ ಹಾಗೂ ಪಾಸ್ವರ್ಡ್ ಬಳಸಿ ಲಾಗಿನ್ ಆಗಬಹುದು, ಇಲ್ಲವಾದರೆ ಹೊಸ ಬಳಕೆದಾರರಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ನಂತರ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ ‘Request OTP’ ಮೇಲೆ ಒತ್ತಿ, ಮೊಬೈಲ್ಗೆ ಬರುವ ಒಟಿಪಿಯನ್ನು ನಮೂದಿಸಿ ಪರಿಶೀಲನೆ ಪೂರ್ಣಗೊಳಿಸಬೇಕು.
ವಿವರಗಳ ನಮೂದು ಮತ್ತು ಡೌನ್ಲೋಡ್ ವಿಧಾನ
ಲಾಗಿನ್ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆಯನ್ನು (EPIC Number) ನಮೂದಿಸಬೇಕು. ಜತೆಗೆ ನಿಮ್ಮ ರಾಜ್ಯ, ಜನ್ಮ ದಿನಾಂಕ ಹಾಗೂ ಕ್ಷೇತ್ರದ ವಿವರಗಳನ್ನು ಭರ್ತಿ ಮಾಡಿ ‘Search’ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರದೆಯ ಮೇಲೆ ನಿಮ್ಮ ಹೆಸರು, ಪೋಷಕರ ಹೆಸರು ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ ಸೇರಿದಂತೆ ಸಂಪೂರ್ಣ ವಿವರಗಳು ಕಾಣಿಸುತ್ತವೆ. ಅಲ್ಲಿ ಲಭ್ಯವಾಗುವ ‘Download’ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಅಧಿಕೃತ ಡಿಜಿಟಲ್ ಮತದಾರರ ಗುರುತಿನ ಚೀಟಿ ಪಿಡಿಎಫ್ (PDF) ರೂಪದಲ್ಲಿ ಮೊಬೈಲ್ನಲ್ಲಿ ಉಳಿಯುತ್ತದೆ.
ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಕಡ್ಡಾಯ
ಡಿಜಿಟಲ್ ವೋಟರ್ ಐಡಿ ಡೌನ್ಲೋಡ್ ಮಾಡಿಕೊಳ್ಳಲು ಚುನಾವಣಾ ಆಯೋಗದ ದಾಖಲೆಗಳಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಅತ್ಯಗತ್ಯ. ಪರದೆಯ ಮೇಲೆ ಮೊಬೈಲ್ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳು ಕಂಡರೆ ಮಾತ್ರ ಸಂಖ್ಯೆ ಲಿಂಕ್ ಆಗಿದೆ ಎಂದರ್ಥ. ಒಂದು ವೇಳೆ ಮೊಬೈಲ್ ಸಂಖ್ಯೆ ನೋಂದಣಿಯಾಗಿರದಿದ್ದರೆ, ‘ಫಾರ್ಮ್ 8’ ಸಲ್ಲಿಸುವ ಮೂಲಕ ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿಕೊಳ್ಳಬಹುದು. ಯಾವುದೇ ಗೊಂದಲಗಳಿದ್ದಲ್ಲಿ ಪೋರ್ಟಲ್ನಲ್ಲಿ ನೀಡಲಾಗಿರುವ ಬಿಎಲ್ಒ (BLO) ಅಥವಾ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಸ್ಟಿಂಗ್ ಆಪರೇಷನ್ ಕೇಸ್ : ಕುಮಾರಸ್ವಾಮಿ-ಪ್ರಿಯಾಂಕ್ ಖರ್ಗೆ ನಡುವೆ ನಿಲ್ಲದ ವಾಕ್ಸಮರ!






