ಬೆಂಗಳೂರು : ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಎಐಸಿಸಿ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ವೇಳೆ ತಮ್ಮ ವಿರುದ್ಧ ಪಕ್ಷದೊಳಗೇ ನಡೆದಿರುವ ರಾಜಕೀಯ ಬೆಳವಣಿಗೆಗಳು, ಸ್ಟಿಂಗ್ ಕಾರ್ಯಾಚರಣೆ (Sting Operation) ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯು ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ದೊಡ್ಡ ಮಟ್ಟದ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ತಮ್ಮ ವಿರುದ್ಧ ಪಕ್ಷದ ಆಂತರಿಕ ವಲಯದಿಂದಲೇ ವ್ಯವಸ್ಥಿತ ಷಡ್ಯಂತ್ರ ನಡೆದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಹೈಕಮಾಂಡ್ ಸೂಚನೆಗೆ ಗೌರವ ಕೊಟ್ಟು ಅಧಿಕಾರದಿಂದ ಕೆಳಗಿಳಿದಿದ್ದಲ್ಲದೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಹಾಗೂ ಮುಖ್ಯಮಂತ್ರಿ ರೇಸ್ನಲ್ಲಿಯೂ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ ಮೇಲೂ ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ಕಾಣದ ಕೈಗಳು ಕೆಲಸ ಮಾಡಿವೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಸ್ಟಿಂಗ್ ವಿಡಿಯೋ ಸೋರಿಕೆಯ ಹಿಂದಿರುವ ಅಸಲಿ ಸೂತ್ರಧಾರಿಗಳು ಯಾರು ಎಂಬುದನ್ನು ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ರಾಹುಲ್ ಗಾಂಧಿ ಅವರ ಬಳಿ ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ.
ಸ್ಟಿಂಗ್ ಕಾರ್ಯಾಚರಣೆಯ ಹಿಂದಿರುವ ಜಾಲವನ್ನು ಮಟ್ಟಹಾಕುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಇದು ಪಕ್ಷಕ್ಕೆ ಪರಿಷತ್ ಚುನಾವಣೆಯಲ್ಲೂ ಹಿನ್ನಡೆ ತಂದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ದೂರಿದ್ದಾರೆ. ಇದರ ಜೊತೆಗೆ ಮೈಸೂರು ದಸರಾ ಆಯೋಜನೆ ವೇಳೆಯೂ ತಮ್ಮ ಪುತ್ರ, ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯತೀಂದ್ರ ಉಸ್ತುವಾರಿಯಾಗಿದ್ದರೂ ದಿನಕ್ಕಿಬ್ಬರು ಸಚಿವರನ್ನು ನೇಮಿಸಿದ್ದು ಮತ್ತು ಸರ್ಕಾರಿ ಜಾಹೀರಾತುಗಳಲ್ಲಿ ಅವರ ಹೆಸರನ್ನು ಕಡೆಗಣಿಸಿ ಮುಜುಗರ ಸೃಷ್ಟಿಸಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಬೇಸರ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಲ್ಕೈದು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿದ ತಮಗೆ ಇಂತಹ ವಿದ್ಯಮಾನಗಳು ತೀವ್ರ ಮುಜುಗರ ಉಂಟುಮಾಡಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ನಿರಂತರವಾಗಿ ಬೆಂಬಲಿಗರು ಮತ್ತು ಕಾರ್ಯಕರ್ತರು ಬಂದು ತಮ್ಮ ಬಳಿ ಅಳಲು ತೋಡಿಕೊಳ್ಳುತ್ತಿದ್ದು, ಈ ಪರಿಸ್ಥಿತಿಯಲ್ಲಿ ಸಕ್ರಿಯ ರಾಜಕಾರಣದಿಂದ ಸಂಪೂರ್ಣ ದೂರ ಉಳಿಯುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬರುತ್ತಿರುವುದಾಗಿ ರಾಹುಲ್ ಗಾಂಧಿ ಅವರಿಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ : ನಂದಿನಿ ಮೊಸರಿನ ದರ ಲೀಟರ್ಗೆ 2 ರೂಪಾಯಿ ಕಡಿತ!






