ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರನ್ನು ಹುದ್ದೆಯಿಂದ ತೆಗೆದುಹಾಕಿ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ‘ಇಂಡಿಯಾ’ ಮೈತ್ರಿಕೂಟದ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಇವಿಎಂ ಹಾಗೂ ಮತದಾರರ ಪಟ್ಟಿ ತಿರುಚುವ ಮೂಲಕ ಜನರ ಧ್ವನಿಯನ್ನು ಕಸಿಯಲಾಗಿದೆ ಎಂದು ಆಪಾದಿಸಿದರು.
ಮತ ಕಳ್ಳತನ ಸಾಮಾನ್ಯ ಅಪರಾಧವಲ್ಲ, ಅದು ದೇಶದ್ರೋಹ: ರಾಹುಲ್ ಗಾಂಧಿ
ರ್ಯಾಲಿಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ, ಈ ಮತ ಕಳ್ಳತನವು ಸಾಮಾನ್ಯ ಕಳ್ಳತನವಲ್ಲ, ಬದಲಾಗಿ ಭಾರತದ ಪ್ರತಿಯೊಬ್ಬ ನಾಗರಿಕನ ಧ್ವನಿಯನ್ನೇ ಅಪಹರಿಸಿದ ದೇಶದ್ರೋಹ ಎಂದು ಕರೆದರು. ಜ್ಞಾನೇಶ್ ಕುಮಾರ್ ಅವರ ಬೆಂಬಲವಿಲ್ಲದಿದ್ದರೆ ನರೇಂದ್ರ ಮೋದಿ ಪ್ರಧಾನಿಯಾಗುತ್ತಿರಲಿಲ್ಲ ಮತ್ತು ಅಮಿತ್ ಶಾ ಗೃಹ ಸಚಿವರಾಗುತ್ತಿರಲಿಲ್ಲ ಎಂದು ಅವರು ವಾದಿಸಿದರು. 2024ರ ಚುನಾವಣೆಯ ನಂತರ ಶೇಕಡಾ 15ರಷ್ಟು ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದ ಅವರು, ಎನ್ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಕೇವಲ ಶೇಕಡಾ 3ರಷ್ಟು ಮತಗಳ ಅಂತರವಿತ್ತು ಎಂದು ನೆನಪಿಸಿದರು. ಈ ಲೆಕ್ಕಾಚಾರಗಳು ಚುನಾವಣಾ ಆಯೋಗದ ಅಂಕಿ-ಅಂಶಗಳಲ್ಲೇ ಸಾಬೀತಾಗುತ್ತಿದ್ದು, ಹಿಂದಿನ ಸಾರ್ವತ್ರಿಕ ಚುನಾವಣೆ ಕಾನೂನುಬಾಹಿರವಾಗಿತ್ತು ಎಂದು ಪ್ರತಿಪಾದಿಸಿದರು.
ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ ಎಂದ ಪ್ರತಿಪಕ್ಷ ನಾಯಕ
ಶಿಕ್ಷಣ ಕ್ಷೇತ್ರದಿಂದ ಹಿಡಿದು ತನಿಖಾ ಸಂಸ್ಥೆಗಳವರೆಗೆ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಆರೆಸ್ಸೆಸ್ ನಿಯಂತ್ರಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಇದರಿಂದಾಗಿಯೇ ರೈತರು, ಕಾರ್ಮಿಕರು ಮತ್ತು ಯುವಕರು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು. ಶಿವನ ಮೆರವಣಿಗೆಗೆ ಎಲ್ಲರಿಗೂ ಪ್ರವೇಶವಿರುವಂತೆ, ಎಲ್ಲರನ್ನೂ ಒಳಗೊಳ್ಳುವ ಭಾರತವನ್ನು ತಾವು ಬಯಸುವುದಾಗಿ ಅವರು ತಿಳಿಸಿದರು. ಯಾವುದೇ ವ್ಯಕ್ತಿಯ ಬಳಿ ಎಷ್ಟೇ ಹಣವಿದ್ದರೂ ಅವರು ಸಂವಿಧಾನಕ್ಕಿಂತ ದೊಡ್ಡವರಲ್ಲ ಎಂದು ಹೇಳಿದ ಅವರು, ಹಣದ ಬಲದಿಂದ ವ್ಯವಸ್ಥೆಯನ್ನು ಹತ್ತಿಕ್ಕಲು ಬಿಡುವುದಿಲ್ಲ ಎಂದರು.
ಚುನಾಯಿತ ಸರ್ಕಾರಗಳಲ್ಲ, ಮತ ಕಳ್ಳತನದ ಸರ್ಕಾರಗಳು: ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕೇಂದ್ರ ಸರ್ಕಾರ ಸೇರಿದಂತೆ ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರಗಳು ಜನಾದೇಶದಿಂದ ಅಧಿಕಾರಕ್ಕೆ ಬಂದಿಲ್ಲ, ಬದಲಿಗೆ ಮತ ಕಳ್ಳತನದಿಂದ ಆಡಳಿತ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜನತೆ ಇವರನ್ನು ಆಯ್ಕೆ ಮಾಡಿಲ್ಲ, ಇವರೇ ತಮ್ಮನ್ನು ತಾವು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ ಖರ್ಗೆ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದರು.

‘ಚಲೋ ದೆಹಲಿ’ ಪಾದಯಾತ್ರೆಯಲ್ಲಿ ಇಂಡಿಯಾ ಒಕ್ಕೂಟದ ಒಗ್ಗಟ್ಟು
ಮುಖ್ಯ ಚುನಾವಣಾ ಆಯುಕ್ತರ ಕಾರ್ಯವೈಖರಿ ಮತ್ತು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕ್ರಮವನ್ನು ವಿರೋಧಿಸಿ ಮಿಂಟೋ ರಸ್ತೆಯಿಂದ ರಾಮಲೀಲಾ ಮೈದಾನದವರೆಗೆ ‘ಚಲೋ ದೆಹಲಿ’ ಪಾದಯಾತ್ರೆ ನಡೆಯಿತು. ಈ ಪ್ರತಿಭಟನಾ ಸಮಾವೇಶದಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಇಂಡಿಯಾ ಒಕ್ಕೂಟದ ಪ್ರಮುಖ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಕಾಂಗ್ರೆಸ್ಗೆ ಸಂಸ್ಥೆಗಳ ಮೇಲೆ ನಂಬಿಕೆಯಿಲ್ಲ: ಧರ್ಮೇಂದ್ರ ಪ್ರಧಾನ್ ತಿರುಗೇಟು
ಮತ್ತೊಂದೆಡೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್, ಕಾಂಗ್ರೆಸ್ ಪಕ್ಷಕ್ಕೆ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ವಿಶ್ವಾಸವೇ ಕಳೆದುಹೋಗಿದೆ ಎಂದು ಟೀಕಿಸಿದರು. ಹರಿಯಾಣದ ಫರಿದಾಬಾದ್ನಲ್ಲಿ ಆಯೋಜಿಸಲಾಗಿದ್ದ ‘ಲೋಕತಂತ್ರ ಬಚಾವೋ, ಅರಾಜಕತಾ ಹಟಾವೋ’ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಹರಡುತ್ತಿರುವ ಅರಾಜಕತೆಯನ್ನು ಎದುರಿಸಲು ದೇಶವ್ಯಾಪಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ರಾಜಕೀಯ ಲಾಭಕ್ಕಾಗಿ ವಿವಾದ ಸೃಷ್ಟಿ ಬೇಡ: ಗಜೇಂದ್ರ ಸಿಂಗ್ ಶೇಖಾವತ್
ಗೋವಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕಾಂಗ್ರೆಸ್ ತನ್ನ ರಾಜಕೀಯ ಅನುಕೂಲಕ್ಕಾಗಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ವಿವಾದವನ್ನಾಗಿ ಮಾಡುತ್ತಿದೆ ಎಂದು ದೂರಿದರು. ದೇಶದಲ್ಲಿ ಕಳೆದ ಎರಡು ದಶಕಗಳಲ್ಲಿ ದೊಡ್ಡ ಮಟ್ಟದ ವಲಸೆ ನಡೆದಿದ್ದು, ಸುಮಾರು 40 ಕೋಟಿ ಜನರು ವಲಸೆ ಹೋಗಿದ್ದಾರೆ ಮತ್ತು 20 ಕೋಟಿ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂಕಿ-ಅಂಶ ನೀಡಿದರು. ಎಸ್ಐಆರ್ ಪ್ರಕ್ರಿಯೆಯ ಮೂಲಕ 2.8 ಕೋಟಿ ಮೃತರ ಹೆಸರು ಸೇರಿದಂತೆ ಒಟ್ಟು 13 ಕೋಟಿ ಅನರ್ಹ ಹೆಸರುಗಳನ್ನು ತೆಗೆದುಹಾಕಲಾಗಿದ್ದು, 1.9 ಕೋಟಿ ಹೊಸ ಮತದಾರರನ್ನು ಸೇರಿಸಲಾಗಿದೆ ಎಂದು ತಿಳಿಸಿದರು. ಮತದಾರರ ಪಟ್ಟಿಯ ನಿಖರತೆಯೇ ಚುನಾವಣಾ ಪ್ರಕ್ರಿಯೆಯ ಬುನಾದಿಯಾಗಿದ್ದು, ಕಾಂಗ್ರೆಸ್ ಪಾರದರ್ಶಕತೆಯನ್ನು ವಿರೋಧಿಸುತ್ತಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಚಿವರು ಪ್ರಶ್ನಿಸಿದರು.
ಸ್ಟಿಂಗ್ ಆಪರೇಷನ್ ಕೇಸ್ಗೆ ಬಿಗ್ ಟ್ವಿಸ್ಟ್ : ಕೇಂದ್ರ ಸಚಿವರ ನಿವಾಸದಲ್ಲಿ ಮೊಬೈಲ್ ಎಕ್ಸ್ ಚೇಂಜ್!






