ಬೆಂಗಳೂರು : ಪೌರಾಡಳಿತ ಸಚಿವ ಹೆಚ್.ಸಿ.ಬಾಲಕೃಷ್ಣ (H.C. Balakrishna) ತಾವರೆಕೆರೆ ಬಳಿಯ ಕುರುಬರಹಳ್ಳಿಯಲ್ಲಿ 36 ಎಕರೆ ಜಮೀನನ್ನು ಕಬಳಿಸಿದ್ದಾರೆ. ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿ ವಿಚಾರಣೆಗೆ ಅನುಮತಿ ನೀಡುವಂತೆ ಮನವಿ ಮಾಡುತ್ತೇವೆ ಎಂದು ಮಾಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ (A. Manjunath) ಹೇಳಿದರು.
ಜೆಡಿಎಸ್ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಂಜುನಾಥ್ ಅವರು, ಈ ಬಗ್ಗೆ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದರಲ್ಲವೇ ಬಡವರಿಗೆ ಹಂಚಿಕೆ ಆಗಬೇಕಿದ್ದ ಸರಕಾರಿ ಭೂಮಿಯನ್ನು ರಾಜಕೀಯ ಪ್ರಭಾವ ಬಳಸಿ ಬಾಲಕೃಷ್ಣ ಅವರು ತಮ್ಮ ಪತ್ನಿ ರಮಾ ಬಾಲಕೃಷ್ಣ ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಕೇವಲ 15 ದಿನಗಳ ಹಿಂದೆ ಆ ಭೂಮಿಯನ್ನು ಇನ್ನೊಬ್ಬರ ಹೆಸರಿಗೆ ಮಾಡಿದ್ದಾರೆ. ಇಂತಹ ನಾಚಿಕೆ ಇಲ್ಲದ ವ್ಯಕ್ತಿ ಕುಮಾರಸ್ವಾಮಿ ಅವರ ಬಗ್ಗೆ ನಾಲಿಗೆಯನ್ನು ಹರಿಯಬಿಡುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಬಿಎಂಪಿಯಿಂದ 18 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ಯಾರಿಗೂ ಗ್ರಾಂಟ್ ಮಾಡಲು ಬರುವುದಿಲ್ಲ ಎಂದು ಬಿಬಿಎಂಪಿ ರೈತರಿಗೆ ಕಾರಣ ಕೊಡುತ್ತದೆ. ಆದರೆ, ಬಾಲಕೃಷ್ಣ ಅವರಿಗೆ ಆ ಭೂಮಿ ಹೇಗೆ ಸಿಗುತ್ತದೆ? ಅವರ ಪತ್ನಿಯ ಹೆಸರಿಗೆ ಹೇಗೆ ಬರುತ್ತದೆ? ಕುಮಾರಸ್ವಾಮಿ ಗೆಣಸು ಕೆತ್ತುತಾ ಇದ್ದರಾ ಎಂದು ಕೇಳುತ್ತಿಯಲ್ಲಪ್ಪಾ ಬಾಲಕೃಷ್ಣ.. ಇಲ್ಲಿ ನೀನು ಕೆತ್ತಿರುವುದು ಏನು? ಸ್ವಲ್ಪ ಹೇಳಪ್ಪ ಬಾಲಕೃಷ್ಣ ಎಂದು ಮಂಜುನಾಥ್ ಅವರು ತಿರುಗೇಟು ಕೊಟ್ಟರು.
ಕುಮಾರಸ್ವಾಮಿ ಅವರನ್ನು 3ಬಿ ಎಂದು ಹೇಳುತ್ತಿಯಲ್ಲ? ಆದರೆ ಇಲ್ಲಿ ನೀನು ಮಾಡಿರುವುದು ಏನು? ನೀನು ದಾಖಲೆಗಳನ್ನು ಕೆತ್ತುತಾ ಇದ್ಯಾ? ಬಡವನೊಬ್ನ ಹತ್ತು ಗುಂಟೆ ಗ್ರ್ಯಾಂಟ್ ಮಾಡಿಸಿಕೊಳ್ಳಲು ಅರ್ಜಿ ಹಾಕಿದರೆ ಕಾರಣ ಕೊಡುತ್ತೀರಿ? ಲೂಟಿ ಮಾಡುವವರಿಗೆ ಹೇಗೆ ಜಮೀನು ಮಾಡಿಕೊಡುತ್ತೀರಿ? ಎಂದು ಮಾಜಿ ಶಾಸಕರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಸಚಿವ ಬಾಲಕೃಷ್ಣ ಭೂ ಅಕ್ರಮ ಸಂಬಂಧ ಮಹತ್ವದ ದಾಖಲಾತಿ ಬಿಡುಗಡೆ ಮಾಡಿದ ಅವರು; ತಾವರೆಕೆರೆಯ ಕುರುಬಹಳ್ಳಿ ಬಳಿ 36 ಎಕರೆ ಜಮೀನು ಕಬಳಿಸಿದ್ದಾರೆ. ಸರ್ವೆ 158ರಲ್ಲಿರುವ ಭೂಮಿ ಅದು. ಅವರ ಹೆಂಡತಿ ಹೆಸರಿಗೆ 10 ಎಕರೆ ಮಾಡಿಸಿದ್ದಾರೆ. ಉಳಿದ 26 ಎಕರೆಯನ್ನು ಅವರ ಜತೆ ಇರುವ ವ್ಯಕ್ತಿ ನಟರಾಜ ನಾಯ್ಡು ಎನ್ನುವವರ ಹೆಸರಿಗೆ ಮಾಡಿಸಿದ್ದಾರೆ. ಇದು ಸರ್ಕಾರಿ ಜಮೀನು. ಸುಳ್ಳು ದಾಖಲಾತಿ ಸೃಷ್ಟಿ ಮಾಡಿ ಕರಾಮತ್ತು ನಡೆಸಿದ್ದಾರೆ. ಉಳುಮೆ ಚೀಟಿಯಿಂದ ಹಿಡಿದು ಎಲ್ಲಾ ದಾಖಲಾತಿ ಸೃಷ್ಟಿ ಮಾಡಿದ್ದಾರೆ. ಸಚಿವ ಬಾಲಕೃಷ್ಣ 1950ರಿಂದ ಈ ಜಮೀನಿನಲ್ಲಿ ಉಳುಮೆ ಮಾಡಿದ ಜನರು ಇದ್ದರು. ನಾನೇ ಇಲ್ಲಿಗೆ ಆ ಜನರನ್ನು ಕರೆದುಕೊಂಡು ಬಂದಿದ್ದೇನೆ.ಎಂದು ಅವರು ಹೇಳಿದರು.
ಈ ಬೃಹತ್ ಅಕ್ರಮದಲ್ಲಿ ಅಂದು ವಿಶೇಷ ಜಿಲ್ಲಾಧಿಕಾರಿ ಆಗಿದ್ದ ವಾಸಂತಿ ಅಮರ್ ಎನ್ನುವ ಐಎಎಸ್ ಅಧಿಕಾರಿ ಇವರೊಂದಿಗೆ ಶಾಮೀಲಾಗಿದ್ದಾರೆ. ₹500ರಿಂದ ₹600 ಕೋಟಿ ಬೆಲೆ ಬಾಳುವ ಆಸ್ತಿ ಇದು. ದೇವರಾಜ ಎನ್ನುವವನ ಹೆಸರಿನಲ್ಲಿ GPA ಆಗಿದೆ ಈಗ. ಡಿಕೆಶಿ ಮತ್ತು ಡಿ.ಕೆ. ಸುರೇಶ್ ಇಬ್ಬರಿಗೂ ಈ ವ್ಯಕ್ತಿ ಆಪ್ತನಿದ್ದಾನೆ. ಹಿರಿಯ ಅಧಿಕಾರಿ ರಾಜೇಂದ್ರ ಕಟಾರಿಯಾ ಅವರ ಬಳಿ ಕೇಸ್ ಇದೆ. ಮುಖ್ಯಮಂತ್ರಿಗಳೇ ಈ ಜಮೀನು ಮುಟ್ಟುಗೋಲು ಹಾಕಿಕೊಳ್ಳಿ. ಇದನ್ನೇ ಕುಮಾರಸ್ವಾಮಿ ಅವರು ಹೇಳುತ್ತಿರುವುದು. ಈ ಹಗಲು ದರೋಡೆ ನಿಲ್ಲಿಸಿ ಎಂದು ಅವರು ಅವರು ಹೇಳುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಅವರೇ ರಿಯಲ್ ಎಸ್ಟೇಟ್ ಮಾಡಿದರೆ ನಾವು ಏನ್ ಮಾಡೋಣ? ಎಂದು ಅವರು ಪ್ರಶ್ನಿಸಿದರು.

ನಕಲಿ ಆಧಾರ್ ಕಾರ್ಡ್ ಬಳಸಿ ₹500 ಕೋಟಿ ಬೆಲೆಯ ಜಮೀನು ಲೂಟಿ ಹೊಡೆದಿದ್ದಾರೆ. ಕೊಡುಗೆಹಳ್ಳಿ ಸರ್ವೆ ನಂಬರ್ 86 ನೈಸ್ ನೋಟಿಫಿಕೇಶನ್ ನಲ್ಲಿ ಇದ್ದ ಜಾಗ ಬೇನಾಮಿ ಮಾಡಿಕೊಡ್ತಾರೆ. ಶ್ರೀಧರ್, ಚಂದ್ರನ್, ಪುಟ್ಟಗೌರಮ್ಮ ಹೆಸರಿಗೆ ದಾಖಲಾತಿ ಮಾಡಿದ್ದಾರೆ. ವೆಲ್ಡಿಂಗ್ ಮಾಡುವ ಚಂದ್ರನ್ ಗೆ ಜಮೀನು ದಾಖಲಾತಿ ಮಾಡಿದ್ದಾರೆ. ನಕಲಿ ಆಧಾರ್ ಬಳಿಸಿ ದಾಖಲಾತಿ ಮಾಡಿದ್ದಾರೆ. 14 ಎಕರೆ ಜಮೀನು ಅವನು ಹುಟ್ಟೋಕು ಮುನ್ನವೇ ಅವನ ಹೆಸರಿಗೆ ಮಾಡಿದ್ದಾರೆ! ಅಶೋಕ್ ಖೇಣಿ ಎಂಟ್ರಿ ಆದ ಮೇಲೆ ಈ ಜಮೀನಿನ ಮೇಲೆ ಹಾಕಿದ್ದ ಕೋರ್ಟ್ ಕೇಸ್ ಕೈ ಬಿಡ್ತಾನೆ. 40% ನನಗೆ ಕೊಡಿ ಅಂತ ಕೇಸ್ ಹಾಕಿ ಕೈಬಿಟ್ಟಿದ್ದಾನೆ. ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರ ಬೆಂಬಲ ಪಡೆಯುತ್ತಾರೆ ಎಂದ ಅವರು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದರು.
ಇವತ್ತಿನ ಮಾರುಕಟ್ಟೆ ಬೆಲೆಯಲ್ಲಿ ಸುಮಾರು 500 ರಿಂದ 600 ಕೋಟಿ ಬೆಲೆ ಬಾಳುವ ಈ ಭೂಮಿಯನ್ನು ಅನುಭೋಗದಲ್ಲಿದ್ದ ರೈತರನ್ನು ಹೈದರಿಸಿ ಬೆದರಿಸಿ ಲಪಟಾಯಿಸಿದ್ದಾರೆ. ಇಂತಹ ಅನೈತಿಕ ವ್ಯಕ್ತಿ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುತ್ತಿದ್ದಾನೆ. ಅತಿ ಶೀಘ್ರದಲ್ಲಿ ನಾವು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಈತನ ವಿರುದ್ಧ ವಿಚಾರಣೆಗೆ ಅನುಮತಿ ಕೊಡುವಂತೆ ವಿನಂತಿ ಮಾಡುತ್ತೇವೆ ಎಂದು ಮಾಜಿ ಶಾಸಕ ಮಂಜುನಾಥ್ ಹೇಳಿದರು.
ನಾಳೆ ಅಂದರೆ ಶುಕ್ರವಾರ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಈ ಸ್ಥಳ ಪರಿಶೀಲನೆ ಮಾಡಲು ಹೋಗುತ್ತಿದ್ದಾರೆ. ನಾವೆಲ್ಲರೂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಹೋಗುತ್ತೇವೆ ಎಂದ ಅವರು; ಇವರೆಲ್ಲಾ ಯಾರು? ನೈಸ್ ಯೋಜನೆಗೆ ನೋಟಿಫಿಕೇಷನ್ ಆಗಿರುವ ಜಮೀನು ಪಡೆಯಲು ಹೇಗೆ ಸಾಧ್ಯ? ಇವರೆಲ್ಲರೂ ಸಿಎಂ ಸಹೋದರ ಡಿ.ಕೆ.ಸುರೇಶ್ ಅವರ ಆಪ್ತರು. ಇವರೆಲ್ಲರೂ ಯಾರು ಎಂಬ ಬಗ್ಗೆ ತನಿಖೆ ನಡೆಸಬೇಕು. ನಾನು ಮುಖ್ಯಮಂತ್ರಿಗೆ ಒತ್ತಾಯ ಮಾಡುತ್ತಿದ್ದೇನೆ ಎಂದು ಅವರು ಒತ್ತಾಯಿಸಿದರು.
ಡಿ.ಕೆ.ಸುರೇಶ್ ಅವರೊಂದಿಗೆ ದಿವ್ಯ ಪ್ರಸಾದ್, ದೇವರಾಜ್ ಎಂಬ ವ್ಯಕ್ತಿಗಳು ಇರುವ ಫೋಟೋಗಳನ್ನು ಬಿಡುಗಡೆ ಮಾಡಿದ ಮಂಜುನಾಥ್ ಅವರು; ಇವರೆಲ್ಲರೂ ನೈಸ್ ಹೆಸರಿಗೆ ನೋಟಿಫಿಕೇಷನ್ ಆಗಿರುವ ಜಮೀನು ಖರೀದಿ ಮಾಡಿರುವವರು. ಇವರಿಗೂ ಡಿಕೆಶಿ ಕುಟುಂಬ ಇರುವ ಸಂಬಂಧವೇನು ಎಂಬ ಬಗ್ಗೆ ಡಿಕೆಶಿ ಅವರೇ ಹೇಳಬೇಕಾಗುತ್ತದೆ ಎಂದು ಅಗ್ರಹಿಸಿದರು.
ಇವತ್ತು ಎರಡು ಉದಾಹರಣೆ ಕೊಟ್ಟು ಹೇಳಿದ್ದೇನೆ. ಇದು ರಿಯಲ್ ಸರಕಾರವೋ ಅಥವಾ ರಿಯಲ್ ಎಸ್ಟೇಟ್ ಸರಕಾರವೋ ಎಂಬುದನ್ನು ಮುಖ್ಯಮಂತ್ರಿಯೇ ಹೇಳಲಿ. ರಿಯಲ್ ಸರಕಾರ ಅನ್ನೋದಾದರೆ ಈ ಎರಡೂ ಆಸ್ತಿಗಳನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಲಿ. ಆಗ ನಿಮ್ಮನ್ನು ಮೆಚ್ಚುತ್ತೇವೆ. ಇನ್ನೂ ಹತ್ತಾರು ದಾಖಲೆಗಳಿವೆ, ನಾವು ಬಿಡುಗಡೆ ಮಾಡುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಚಿವ ಕೃಷ್ಣಭೈರೇಗೌಡ ವಿರುದ್ಧ ವಾಗ್ದಾಳಿ:
ಸಚಿವ ಕೃಷ್ಣಭೈರೇಗೌಡ ವಿರುದ್ಧ ವಾಗ್ದಾಳಿ ನಡೆಸಿದ ಮಂಜುನಾಥ ಅವರು; ನೀವು ಕಂದಾಯ ಸಚಿವರಾಗಿದ್ದಾಗ ಕಂದಾಯ ಇಲಾಖೆ ಅಧಿಕಾರಿಗಳು ಯಾರು ಯಾರಿಗೆ ಸಹಾಯ ಮಾಡಿದ್ದಾರೆ? ಯಾವ ಅಧಿಕಾರಿಗಳು ಹಗಲು ದರೋಡೆಗೆ ಸಹಕಾರ ನೀಡಿದ್ದಾರೆ. ನಿಮಗೆ ಗೊತ್ತಿಲ್ಲವಾ? ಕೃಷ್ಣಭೈರೇಗೌಡರೇ? ಕುಮಾರಸ್ವಾಮಿ ಎಲ್ಲೂ ಡಿಕೆಶಿ ಆಸ್ತಿ ಮಾಡಬೇಡಿ ಅಂದಿಲ್ಲ. ಸರ್ಕಾರದಲ್ಲಿ ಭಾಗಿಯಾದವರಿಗೆ ಒಂದು ಕಾನೂನು, ಜನರಿಗೆ ಒಂದು ಕಾನೂನಾ? ಬಿಎಂ ಕಾವಲ್ ಜಾಗದಲ್ಲಿ ಜಮೀನು ಖರೀದಿ ಮಾಡಿದ್ದೀವಿ ಅಂತಾರೆ. ಬಿಎಂ ಕಾವಲ್ ಜಮೀನು ಮೊದಲು ನೈಸ್ ಯೋಜನೆಗೆ ನೋಟಿಫಿಕೇಶನ್ ಆಗಿತ್ತು. ಅದು ಹೇಗೆ ಬೇರೆಯವರಿಗೆ ಸೇಲ್ ಡೀಡ್ ಆಗುತ್ತದೆ? ನಿಮಗೆ ಹೇಗೆ ಪಿ ನಂಬರ್ ನೋಂದಣಿ ಆಗಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟರು ಎಂದು ಪ್ರಶ್ನಿಸಿದರು.
ನೀವು ಕಂದಾಯ ಸಚಿವ ಆಗಿದ್ದಾಗ ಹೇಗೆ ಬಿಎಂ ಕಾವಲ್ ಜಾಗ ರಿಜಿಸ್ಟರ್ ಆಗುತ್ತದೆ? ನೀವು ಕಂದಾಯ ಮಂತ್ರಿ ಇದ್ದಾಗ ಇದಕ್ಕೆ ತಡೆ ಇತ್ತು. ನೀವು ಕಂದಾಯ ಇಲಾಖೆಯಿಂದ ಇಳಿದ ಮೇಲೆ ಇವೆಲ್ಲವೂ ಖಾತೆ ಆಗಿವೆ. ಯಾರ ಯಾರ ಹೆಸರಿಗೆ ಖಾತೆ ಆಗಿದೆ ಎಂಬ ಬಗ್ಗೆ ನನ್ನಲ್ಲಿ ಮಾಹಿತಿ ಇದೆ. ಇದನ್ನು ಕುಮಾರಸ್ವಾಮಿ ಅವರು ಕೇಳಬಾರದಾ? ಎಂದು ಅವರು ಗುಡುಗಿದರು.
ಸರಕಾರದಿಂದ ಫರ್ಮಾನು ಹೊರಡಿಸಿ, ಯಾವುದನ್ನು ಯಾರು ಏನೂ ಕೇಳಬಾರದು ಎಂದು. ಅಧಿಕಾರಿಗಳು ಶಾಮೀಲಾಗಿ ಬೇನಾಮಿಗೆ ಆಸ್ತಿ ಮಾಡಿಕೊಟ್ಟಿದ್ದಾರೆ. ಇದನ್ನು ವಾಪಸ್ ಪಡೆಯೋಕೆ ನಿಮ್ಮಿಂದ ಆಗುತ್ತಾ? ಎಂದು ಅವರು ಸವಾಲು ಹಾಕಿದರು.
ಕುಮಾರಸ್ವಾಮಿ ಮಾತಿಗೆ ಸರ್ಕಾರದ ಮಂತ್ರಿಗಳು ಮಾತಾಡಿದ್ದಾರೆ. ಅವರ ಮೇಲೆ ಮೇಲೆ ಗಧಾಪ್ರಹಾರ ಮಾಡುತ್ತಿದ್ದಾರೆ. ಸಿಎಂ ಒಲೈಕೆಗೆ ಸಚಿವರು ಮಾತಾಡಲೇಬೇಕು. ಕುಮಾರಸ್ವಾಮಿ ಅವರು ಜನರ ಮುಂದೆ ಇಟ್ಟ ನೈಸ್ ಮತ್ತು ಡಿಕೆಶಿ ಅಕ್ರಮಗಳ ಬಗ್ಗೆ ಈ ಮಹಾಶಯರು ಯಾರು ಕೂಡ ಮಾತನಾಡುತ್ತಿಲ್ಲ. ಕೇವಲ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಸಚಿವ ಬಾಲಕೃಷ್ಣ ಹಗುರವಾಗಿ ಮಾತಾಡಿದ್ದಾರೆ. ಈ ಸರಕಾರದಲ್ಲಿ ಹಗಲು ದರೋಡೆ ನಡೆಯುತ್ತಿದೆ ಎಂದು ಅವರು ಕಿಡಿಕಾರಿದರು.
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡರು ಮಾತಾಡಿದ್ದಾರೆ. ಕುಮಾರಸ್ವಾಮಿಗೆ ಬಹಳ ಕೆಲಸ ಇದೆ. ಅದು ಬಿಟ್ಟು ಸಿಎಂ ಬಗ್ಗೆ ಮಾತಾಡ್ತಾರೆ ಎಂದಿದ್ದಾರೆ. ಕೃಷ್ಣಭೈರೇಗೌಡರೇ, ಈ ಸರ್ಕಾರದಲ್ಲಿ ನೈಸ್ ಬಗ್ಗೆ ಕುಮಾರಸ್ವಾಮಿ ಮಾತಾಡಿದಾಗ ರೈತರು ಬರುತ್ತಿದ್ದಾರೆ. ರೈತರು ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು? ರೈತರ ಸಮಸ್ಯೆ ವಿಪಕ್ಷವಾಗಿ ಸರ್ಕಾರದ ಗಮನಕ್ಕೆ ತರುವುದು ತಪ್ಪಾ? ಬಿಡದಿ ಟೌನ್ ಶಿಪ್ ಜಮೀನನ್ನು ಕುಮಾರಸ್ವಾಮಿ ಯಾಕೆ ಡಿನೋಡಿಫಿಕೇಶನ್ ಮಾಡಿಲ್ಲ ಅಂತ ಕೃಷ್ಣಭೈರೇಗೌಡ ಕೇಳುತ್ತಾರೆ. ಕುಮಾರಸ್ವಾಮಿ ಅವಧಿಯಲ್ಲಿ ಬಿಡದಿ ಟೌನ್ ಶಿಪ್ ಗೆ ನೋಟಿಫಿಕೇಶನ್ ಆಗಿದ್ದರೆ ಕೃಷ್ಣಭೈರೇಗೌಡ ಅವರು ದಾಖಲಾತಿ ತೋರಿಸಿಲಿ. ದಾಖಲಾತಿ ತೋರಿಸಿದರೆ ಬಿಡದಿ ಹೋರಾಟದಿಂದ ನಾವು, ಕುಮಾರಸ್ವಾಮಿ ಹಿಂದೆ ಹೋಗುತ್ತೇವೆ ಎಂದು ಮಂಜುನಾಥ್ ಸವಾಲು ಹಾಕಿದರು.
ಪರಮೇಶ್ವರ್ ಅವರೇ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ. ನೋಟಿಫಿಕೇಶನ್ ಆಗಿಲ್ಲ ಎಂದು ಅವರು ಉತ್ತರ ಕೊಟ್ಟಿದ್ದಾರೆ. ಈ ಮಾಹಿತಿ ಸಚಿವರಿಗೆ ಇಲ್ಲದಿದ್ದರೆ ಹೇಗೆ? ಎಂದು ಅವರು ಕೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಮಾಜಿ ಶಾಸಕರು, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ, ಪಕ್ಷದ ರಾಜ್ಯ ವಕ್ತಾರರಾದ ಹೆಚ್.ಎನ್. ದೇವರಾಜು, ಪ್ರದೀಪ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಬೆಸ್ಕಾಂಗೆ ಪ್ರತಿಷ್ಠಿತ ISO/IEC ಗರಿ : ಮಾಹಿತಿ ಹಾಗೂ ಸೈಬರ್ ಭದ್ರತೆ ಬಲವರ್ಧನೆಗೆ ಮುನ್ನುಡಿ | BESCOM






