ನವದೆಹಲಿ: ಹಬ್ಬದ ಸೀಸನ್ ಆರಂಭವಾಗುತ್ತಿರುವ ಬೆನ್ನಲ್ಲೇ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆ ಮತ್ತೆ ಏರಿಕೆಯಾಗಿದ್ದು, ವ್ಯಾಪಾರಿಗಳಿಗೆ ಶಾಕ್ ನೀಡಿದೆ. ಅಕ್ಟೋಬರ್ (October 1)1, ಗುರುವಾರದಿಂದಲೇ ಜಾರಿಗೆ ಬರುವಂತೆ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ದೆಹಲಿಯಲ್ಲಿ 62.50 ರೂಪಾಯಿ ಹೆಚ್ಚಿಸಲಾಗಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಸಿಲಿಂಡರ್ ದರ 2,810 ರೂಪಾಯಿಗೆ ತಲುಪಿದೆ.

ಕಳೆದ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ 9.50 ರೂಪಾಯಿ ಏರಿಕೆ ಮಾಡಲಾಗಿದ್ದು, ಆಗ ದರ 2,747.50 ರೂಪಾಯಿ ಇತ್ತು. ಇದೀಗ ಸತತ ಎರಡನೇ ತಿಂಗಳೂ ದರ ಏರಿಕೆಯಾಗಿದೆ. ಇನ್ನು ಬಿಹಾರದ ಪಾಟ್ನಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 71.50 ರೂಪಾಯಿ ಹೆಚ್ಚಳವಾಗಿದೆ.
ಹಬ್ಬದ ದಿನಗಳಲ್ಲಿ ಹೋಟೆಲ್, ರೆಸ್ಟೋರೆಂಟ್ ಮತ್ತು ಇತರೆ ಆಹಾರ ವ್ಯಾಪಾರ ಸಂಸ್ಥೆಗಳಲ್ಲಿ ಸಿಲಿಂಡರ್ ಬೇಡಿಕೆ ಹೆಚ್ಚಿರುತ್ತದೆ. ಆದರೆ ದಿಢೀರ್ ಬೆಲೆ ಹೆಚ್ಚಳದಿಂದಾಗಿ ಇಂತಹ ವಾಣಿಜ್ಯ ಸಂಸ್ಥೆಗಳ ನಿರ್ವಹಣಾ ವೆಚ್ಚ ಇನ್ನಷ್ಟು ಅಧಿಕವಾಗುವ ಸಾಧ್ಯತೆಯಿದೆ.

ವಾಣಿಜ್ಯ ಸಿಲಿಂಡರ್ ದರ ಏರಿಕೆಯಾಗಿದ್ದರೂ, ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ಸದ್ಯಕ್ಕೆ ಸಾಮಾನ್ಯ ಕುಟುಂಬಗಳಿಗೆ ಕೊಂಚ ನಿರಾಳತೆ ತಂದಿದೆ. ನೂತನ ಪರಿಷ್ಕೃತ ದರಗಳು ಗುರುವಾರದಿಂದಲೇ ದೇಶದ ಪ್ರಮುಖ ನಗರಗಳಲ್ಲಿ ಜಾರಿಗೆ ಬಂದಿವೆ.
ನಾಳೆ ಭೂಮಾಪಕರ ಹುದ್ದೆಗಳ ನೇಮಕಾತಿ ಪರೀಕ್ಷೆ: ನಿಷೇಧಾಜ್ಞೆ ಜಾರಿ | Exam






