ಬೆಂಗಳೂರು: ರಾಜ್ಯದ ಜನರ ಆರೋಗ್ಯ (Health) ಸುಧಾರಣೆಯ ಹಿತದೃಷ್ಟಿಯಿಂದ ಆಹಾರದಲ್ಲಿ ಉಪ್ಪಿನ (Salt) ಅತಿಯಾದ ಬಳಕೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಾರ್ವಜನಿಕರಲ್ಲಿ ಉಪ್ಪಿನ ಮಿತಿಮೀರಿದ ಸೇವನೆಯಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಉದ್ದೇಶದಿಂದ ಆರೋಗ್ಯ ಇಲಾಖೆಯು ಇಂದು ಸಂಜೆಯೇ ಅಧಿಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಸಿದೆ.

ಈ ನೂತನ ನಿಯಮಾವಳಿಗಳು ಕೇವಲ ಸಾರ್ವಜನಿಕರಿಗೆ ಮಾತ್ರವಲ್ಲದೆ ಶಾಲೆಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಆಹಾರ ಪ್ಯಾಕೆಟ್ ತಯಾರಕ ಸಂಸ್ಥೆಗಳಿಗೂ ಕಡ್ಡಾಯವಾಗಿ ಅನ್ವಯವಾಗಲಿವೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡದ ಪ್ರಕಾರ ಒಬ್ಬ ವ್ಯಕ್ತಿಯು ದಿನಕ್ಕೆ ಗರಿಷ್ಠ 5 ಗ್ರಾಂಗಿಂತ ಕಡಿಮೆ ಉಪ್ಪನ್ನು ಮಾತ್ರ ಸೇವಿಸಬೇಕು ಎಂದು ಎಚ್ಚರಿಕೆ ನೀಡಿರುವ ಆರೋಗ್ಯ ಇಲಾಖೆ, ದೈನಂದಿನ ಜೀವನದಲ್ಲಿ ಉಪ್ಪು ನಿಯಂತ್ರಣಕ್ಕೆ ಹಲವು ಸರಳ ಸೂತ್ರಗಳನ್ನು ಸೂಚಿಸಿದೆ. ಮನೆಯಲ್ಲಿ ಅಡುಗೆ ಮಾಡುವಾಗ, ಉಪ್ಪಿನಕಾಯಿ, ಚಟ್ನಿ ಹಾಗೂ ಸ್ನ್ಯಾಕ್ಸ್ ತಯಾರಿಸುವ ಸಂದರ್ಭದಲ್ಲಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಲು ಸಲಹೆ ನೀಡಲಾಗಿದೆ. ರುಚಿ ನೋಡದೆಯೇ ಊಟದ ಮೇಜಿನ ಮೇಲೆ ಹೆಚ್ಚುವರಿ ಉಪ್ಪು ಉದುರಿಸಿಕೊಳ್ಳುವ ಹವ್ಯಾಸಕ್ಕೆ ಪೂರ್ಣ ವಿರಾಮ ಹಾಕಬೇಕು ಎಂದು ಸೂಚಿಸಲಾಗಿದೆ.

ಜೊತೆಗೆ ಸಂಸ್ಕರಿಸಿದ, ಇನ್‌ಸ್ಟಂಟ್ ಹಾಗೂ ಪ್ಯಾಕ್ ಮಾಡಿದ ಆಹಾರಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಅನಿವಾರ್ಯವಾಗಿ ಖರೀದಿಸುವ ಸಂದರ್ಭಗಳಲ್ಲಿ ಆಹಾರ ಪೊಟ್ಟಣದ ಮೇಲಿರುವ ಲೇಬಲ್‌ನಲ್ಲಿ ಸೋಡಿಯಂ ಪ್ರಮಾಣವನ್ನು ಕಡ್ಡಾಯವಾಗಿ ಗಮನಿಸಬೇಕು. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕಡಿಮೆ ಉಪ್ಪಿನ ಆಹಾರ ನೀಡಿ ಉತ್ತಮ ಆಹಾರ ಪದ್ಧತಿ ಬೆಳೆಸಬೇಕು. ಇನ್ನು ಅಧಿಕ ರಕ್ತದೊತ್ತಡ ಹಾಗೂ ಕಿಡ್ನಿ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ವೈದ್ಯರ ಸೂಕ್ತ ಸಲಹೆ ಪಡೆದು ‘ಕಡಿಮೆ ಸೋಡಿಯಂ’ (Low-sodium) ಉಪ್ಪನ್ನು ಬಳಸುವುದು ಒಳಿತು ಎಂದು ಸರ್ಕಾರ ತಿಳಿಸಿದೆ.






