ಬೆಂಗಳೂರು: ಚಾಮರಾಜನಗರದಲ್ಲಿ ಕಳ್ಳಬೇಟೆ ಶಿಬಿರಗಳಿಂದ ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಹಾನಿಮಾಡಿದವರು ಯಾರೆಂಬುದನ್ನ ಪೊಲೀಸರು ಈಗಾಗಲೇ ಗುರುತಿಸಿದ್ದಾರೆ. ಅವರೆಲ್ಲರೂ ಈ ಹಿಂದಿನ ಕೇಸ್ ಗಳಲ್ಲಿ ಇದ್ದವರು. ವರದಿಯಲ್ಲಿ ಏನಿದೆ ಆ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಒಂದು ವೇಳೆ ನಮ್ಮ ಅಧಿಕಾರಿಗಳದ್ದೇ ತಪ್ಪಿದ್ದರೆ, ಖಂಡಿತವಾಗಿಯೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿರುವ ಅವರು, ಸದ್ಯ ಈ ಬಗ್ಗೆ ಸೋಮವಾರ, ಮಂಗಳವಾರ ಸದನದಲ್ಲಿ ಮಾತಾಡುವೆ ಎಂದಿದ್ದಾರೆ.

ಸರ್ಕಾರವೇ ಮೂವರನ್ನು ಕೊಲೆ ಮಾಡಿಸಿದೆ ಎಂಬ ಬಿಜೆಪಿ ಆರೋಪಕ್ಕೆ ಸಚಿವರು ಪ್ರತಿಕ್ರಿಯಿಸಿದ್ದು ಹೀಗೆ. ಈ ಹಿಂದೆ ಯಡಿಯೂರಪ್ಪ ಸಿಎಂ ಆದಾಗ, ಬನ್ನೇರುಘಟ್ಟದಲ್ಲಿ ಶ್ರೀಗಂಧ ಕದಿಯೋಕೆ ಹೋಗಿದ್ದ ವೇಳೆ ಶೂಟೌಟ್ ಆಗಿ, ಒಬ್ಬನಿಗೆ ಗಾಯ ಆಗಿತ್ತು. ಬೊಮ್ಮಾಯಿ ಸಿಎಂ ಆಗಿದ್ದಾಗಲೂ ಬನ್ನೇರುಘಟ್ಟದಲ್ಲೇ ಶೂಟೌಟ್ ಆಗಿತ್ತು ಆಗ ಒಬ್ಬ ಸತ್ತು ಹೋಗಿದ್ದ. ಬೊಮ್ಮಾಯಿ, ಯಡಿಯೂರಪ್ಪ ಕಾಲದಲ್ಲೇ ನಾಲ್ಕು ಶೂಟೌಟ್ ಆಗಿ, ಮೂರು ಜನ ಸಾವನ್ನಪ್ಪಿದ್ದರು. 2011 ರಿಂದ 2026ವರೆಗೆ 300 ಕ್ಕೂ ಹೆಚ್ಚು ಪ್ರಕರಣಗಳು ಚಾಮರಾಜನಗರ ವಿಭಾಗದಲ್ಲೇ ನಡೆದಿವೆ. ಅದರಲ್ಲೂ ಸುಮಾರು 66 ಸಲ ಗುಂಡಿನ ಚಕಮಕಿ ನಡೆದಿದೆ. ಅರಣ್ಯ ಪ್ರದೇಶಗಳಲ್ಲಿ ಈ ರೀತಿ ಆಗುತ್ತಿರುತ್ತೆ. ಇವೆಲ್ಲವನ್ನೂ ಆರೋಪ, ಪ್ರತ್ಯಾರೋಪಗಳನ್ನು ರಾಜಕಾರಣಕ್ಕೆ ತರಬಾರದು. ನಮ್ಮ ಅಧಿಕಾರಿಗಳ ತಪ್ಪು ಸಾಬೀತು ಆದಲ್ಲ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಅರಣ್ಯ ಪರಿಸರ ಉಳಿಯಬೇಕು, ವನ್ಯಜೀವಿ ರಕ್ಷಣೆಯಾಗಬೇಕು. ಸಾರ್ವಜನಿಕರಿಗೆ ಇಲಾಖೆಯಿಂದ ಸಮಸ್ಯೆ ಆಗಬಾರದು. ಆರೋಪ, ಪ್ರತ್ಯಾರೋಪಗಳಿಂದ ಇಲಾಖೆ ಸಿಬ್ಬಂದಿ ನೃತಿಕ ಸ್ಥೈರ್ಯ ಕುಗ್ಗಿಸಲು ಮುಂದಾಗಬಾರದು. ಇನ್ನು, ಅರಣ್ಯ ಪ್ರದೇಶಗಳ ಸುತ್ತ ಮುತ್ತಲಿರುವ ಒಂದಷ್ಟು ಹಳ್ಳಿಗಳಲ್ಲಿ ಜನರು ನಾಡಬಂದೂಕು ಇಟ್ಟುಕೊಂಡಿದ್ದಾರೆ. ಅವುಗಳಿಗೆ ಲೈಸೆನ್ಸ್ ಇಲ್ಲ. ಅ ಬಗ್ಗೆ ಗೃಹ ಸಚಿವರ ಜೊತೆ ಚರ್ಚಿಸುವೆ. ಲೈಸೆನ್ಸ್ ಇಲ್ಲದೆ ಬಂದೂಕು ಇಟ್ಟುಕೊಂಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಹೇಳುತ್ತೇನೆ. ಅವರು ಯಾವುದೇ ಕ್ರಮ ಬೇಕಾದರೂ ಜರುಗಿಸಲಿ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.






