ಆಗಸ್ಟ್ 19: ಹಾಕಿ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಬುಧವಾರ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ನೆದರ್‌ಲ್ಯಾಂಡ್ಸ್‌ನ ಐತಿಹಾಸಿಕ ವೆಗ್ನರ್ ಕ್ರೀಡಾಂಗಣ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಬರೋಬ್ಬರಿ 16 ವರ್ಷಗಳ ಬಳಿಕ ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಕಣಕ್ಕಿಳಿಯುತ್ತಿರುವುದು ಪಂದ್ಯದ ಕುತೂಹಲ ಹೆಚ್ಚಿಸಿದೆ.
ಇದೇ ವೆಗ್ನರ್ ಕ್ರೀಡಾಂಗಣದಲ್ಲಿ 1973ರ ಆಗಸ್ಟ್ 31ರಂದು ನಡೆದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ 1-0 ಗೋಲಿನಿಂದ ಪಾಕಿಸ್ತಾನವನ್ನು ಮಣಿಸಿತ್ತು. ಇದೀಗ ಐದು ದಶಕಗಳ ಬಳಿಕ ಅದೇ ಮೈದಾನದಲ್ಲಿ ಉಭಯ ತಂಡಗಳು ಮತ್ತೊಮ್ಮೆ ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.

ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿಗೆ 2010ರ ನವದೆಹಲಿ ಆವೃತ್ತಿಯಲ್ಲಿ ಮುಖಾಮುಖಿಯಾಗಿದ್ದವು. ರಾಜ್‌ಪಾಲ್ ಸಿಂಗ್ ನೇತೃತ್ವದ ಭಾರತ ತಂಡ ಆ ಪಂದ್ಯದಲ್ಲಿ ಪಾಕಿಸ್ತಾನವನ್ನು 4-1 ಗೋಲುಗಳಿಂದ ಸೋಲಿಸಿತ್ತು.ಕಳೆದ ಒಂದು ದಶಕದಿಂದ ಪಾಕಿಸ್ತಾನದ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಭಾರತಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ಟೂರ್ನಿಯ ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಭಾರತಕ್ಕೆ ಗೆಲುವು ಅಥವಾ ಕನಿಷ್ಠ ಡ್ರಾ ಅಗತ್ಯವಾಗಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ 3-1 ಗೋಲುಗಳಿಂದ ವೇಲ್ಸ್ ತಂಡವನ್ನು ಸೋಲಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 2-4 ಗೋಲುಗಳಿಂದ ಸೋಲು ಅನುಭವಿಸಿತು. ಮೊದಲಾರ್ಧದಲ್ಲಿ 2-1 ಮುನ್ನಡೆ ಸಾಧಿಸಿದ್ದರೂ, ನಂತರ ರಕ್ಷಣಾತ್ಮಕ ವಿಭಾಗದಲ್ಲಿ ಮಾಡಿದ ತಪ್ಪುಗಳು ತಂಡಕ್ಕೆ ದುಬಾರಿಯಾದವು.ಹೀಗಾಗಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಮುಂದಿನ ಸುತ್ತಿನ ಸ್ಥಾನವನ್ನು ಖಚಿತಪಡಿಸಿಕೊಳ್ಳಬೇಕಿದೆ.
ಹಾಕಿ ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಒಟ್ಟು ಐದು ಬಾರಿ ಮುಖಾಮುಖಿಯಾಗಿವೆ. 1971, 1973, 1975, 1986 ಹಾಗೂ 2010ರಲ್ಲಿ ನಡೆದ ಈ ಪಂದ್ಯಗಳಲ್ಲಿ ಭಾರತ ಮೂರು ಬಾರಿ ಗೆಲುವು ಸಾಧಿಸಿದ್ದರೆ, ಪಾಕಿಸ್ತಾನ ಎರಡು ಪಂದ್ಯಗಳಲ್ಲಿ ಜಯ ಗಳಿಸಿದೆ.
ಈ ಐದು ಪಂದ್ಯಗಳಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಒಟ್ಟು 10 ಗೋಲುಗಳನ್ನು ದಾಖಲಿಸಿದೆ. 2010ರ ಪಂದ್ಯದಲ್ಲಿ ಪೆನಾಲ್ಟಿ ಕಾರ್ನರ್‌ಗಳ ಮೂಲಕ ಎರಡು ಗೋಲು ಗಳಿಸಿದ್ದ ಸಂದೀಪ್ ಸಿಂಗ್, ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರಾಗಿದ್ದಾರೆ.ಹೀಗಾಗಿ 16 ವರ್ಷಗಳ ಬಳಿಕ ನಡೆಯುತ್ತಿರುವ ಈ ಸಾಂಪ್ರದಾಯಿಕ ಪೈಪೋಟಿ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಮುನ್ನಡೆಯುತ್ತದೆಯೇ ಎಂಬುದು ಕ್ರೀಡಾಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.






