• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, August 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -ಭಾಗ 2

ಸಾಮುದಾಯಿಕ ಪ್ರಜ್ಞೆ ಬೇರೂರಿದಂತೆಲ್ಲಾ ಸಾಮಾಜಿಕ ಅರಿವು ಸಂಕುಚಿತವಾಗುತ್ತಾ ಹೋಗುತ್ತದೆ

ಪ್ರತಿಧ್ವನಿ by ಪ್ರತಿಧ್ವನಿ
August 19, 2026
in Top Story, ಅಂಕಣ, ವಿಶೇಷ
0
ವಿಕಾಸದ ಹಾದಿಯ ಬಹುಮುಖಿ ಮಾಲಿನ್ಯಗಳು -ಭಾಗ 2
Share on WhatsAppShare on FacebookShare on Telegram

ಯಾವುದೇ ಸಮಾಜಗಳಲ್ಲಾದರೂ ಮನ್ವಂತರದ ಪ್ರಕ್ರಿಯೆಗಳು ಕಾಣಿಸಿಕೊಳ್ಳುವುದು ಸಾಂಸ್ಕೃತಿಕ ಚೌಕಟ್ಟುಗಳಲ್ಲಿ. ಸಾಮಾಜಿಕ ಬದಲಾವಣೆ ಅಥವಾ ಸುಧಾರಣೆ ಎಂಬ ಕಲ್ಪನೆಯೂ ಸಹ ನಿರ್ದಿಷ್ಟ ಸಮಾಜಗಳಲ್ಲಿರುವ ವೈವಿಧ್ಯಮಯ ಸಂಸ್ಕೃತಿಗಳ ಮೂಲಕವೇ ಅನಾವರಣಗೊಳ್ಳುತ್ತವೆ. ಭಾರತದ ಸಂದರ್ಭದಲ್ಲಿ ʼ ಸಮಾಜ ಸುಧಾರಣೆ ʼಯ ವಿಭಿನ್ನ ಆಯಾಮಗಳು ವಿಭಿನ್ನ ಸಂಸ್ಕೃತಿಗಳ ನೆಲೆಯಲ್ಲೇ ಕಾಣುವುದಾದರೂ, ಈ ಸಂಸ್ಕೃತಿಗಳು ಹುಟ್ಟಿಕೊಳ್ಳುವುದು ಹಾಗೂ ಗೋಚರಿಸುವುದು ನಿರ್ದಿಷ್ಟ ಜಾತಿ, ಪಂಗಡ, ಉಪಪಂಗಡ ಹಾಗೂ ಪಂಥೀಯ ನೆಲೆಗಳಲ್ಲೇ ಆಗಿರುತ್ತದೆ.

ADVERTISEMENT

ಒಂದೆಡೆ ಇದು ಭಾರತದ ವೈಶಿಷ್ಟ್ಯವಾದರೆ ಮತ್ತೊಂದೆಡೆ ಇಡೀ ಸಮಾಜವನ್ನು ಒಂದು ಆವರಣದಲ್ಲಿಟ್ಟು ನೋಡಲು ತೊಡಕಾಗಿಯೂ ಕಾಣುತ್ತದೆ. ಆದಾಗ್ಯೂ 19-20ನೆಯ ಶತಮಾನದ ಅನೇಕ ಸಮಾಜ ಸುಧಾರಕರು ʼ ಭಾರತೀಯ ಸಂಸ್ಕೃತಿಯನ್ನು ʼ ನಿರ್ವಚಿಸುವ ಪ್ರಯತ್ನಗಳನ್ನು ಮಾಡಿರುವುದು ಗಮನಾರ್ಹ.

B. Y. Vijayendra : ವಿಜಯ್ ನೀವು ಕ್ರಿಶ್ಚಿಯನ್ ಮುಖ್ಯಮಂತ್ರಿನಾ? #byvijayendra #prathidhwani #vijay

21ನೆಯ ಶತಮಾನದ ಆರಂಭದಿಂದಲೂ ಭಾರತದ ಸಾಮಾಜಿಕ ಸಂಕಥನಗಳಲ್ಲಿ (Social Discourseş), ಸಾಹಿತ್ಯಗಳಲ್ಲಿ ಹಾಗೂ ರಾಜಕೀಯ ಸಂವಾದಗಳಲ್ಲೂ ಸಹ ಪ್ರಧಾನವಾಗಿ ಧ್ವನಿಸುತ್ತಿರುವುದು ʼ ಮಾನವೀಯ ಮೌಲ್ಯಗಳು ʼ ಎಂಬ ಉದಾತ್ತ ಕಲ್ಪನೆ. ಇದಕ್ಕೆ ಕಾರಣ ಭಾರತೀಯ ಸಮಾಜ ಕಳೆದುಕೊಂಡಿರುವುದು ಇದನ್ನೇ. ಶೈಕ್ಷಣಿಕ ವಲಯದಲ್ಲೂ ಸಹ ಪಠ್ಯಕ್ರಮಗಳಲ್ಲಿ ಮಾನವೀಯ ಮೌಲ್ಯಗಳನ್ನು ಬಲಪಡಿಸಬೇಕು ಎಂಬ ಕೂಗು ಕೇಳಿಬರುತ್ತಲೇ ಇದೆ. ಕಳೆದ ಶತಮಾನದಲ್ಲಿ ಈ ಕೂಗು ಇರಲಿಲ್ಲವೇ ? ಖಂಡಿತವಾಗಿಯೂ ಇತ್ತು ಆದರೆ ನಿರ್ಣಾಯಕ ಧ್ವನಿಯಾಗಿ (Decisive Voice) ಇರಲಿಲ್ಲ. ಏಕೆಂದರೆ ಸಮಾಜ ಮೌಲಿಕವಾಗಿ ಎಷ್ಟೇ ಕುಸಿಯುತ್ತಿದ್ದರೂ, ಅವನತಿಯ ಸ್ಥಿತಿ ತಲುಪಿರಲಿಲ್ಲ. ದೂರದಲ್ಲೆಲ್ಲೋ ಒಂದು ಬೆಳಕಿಂಡಿ ಇದೆ ಎಂಬ ಭಾವನೆ ದಟ್ಟವಾಗಿತ್ತು.

ಜೀವ ಮೌಲ್ಯದ ಹುಡುಕಾಟ

ಪ್ರಗತಿಯ ಹಾದಿಯಲ್ಲಿ ಎಲ್ಲ ಮಗ್ಗುಲುಗಳಲ್ಲೂ ಉನ್ನತಿ ಸಾಧಿಸಬೇಕಿದ್ದ ಭಾರತ ನವ ಶತಮಾನದ ಹೊಸ್ತಿಲಲ್ಲೇ ಎಡವಿತ್ತು. ಮೌಲಿಕವಾಗಿರಬೇಕಾದ ವಿದ್ಯಮಾನಗಳು ಮೌಲ್ಯೀಕರಣಕ್ಕೊಳಗಾಗಿ (Valuation) ಸಾಮಾಜಿಕ ನೆಲೆಯಲ್ಲಿ ಸಾಪೇಕ್ಷ ವಿದ್ಯಮಾನವಾಗಿ (Relative Phenomenon) ಪರಿಣಮಿಸಿತ್ತು. ಈ ಬೆಳವಣಿಗೆಗೆ ಕಾರಣವನ್ನೂ ನಮ್ಮ ಸಮಾಜದ ಅಂತರ್ನಿಷ್ಠ ಲಕ್ಷಣಗಳಲ್ಲೇ (Inherent Features) ಗುರುತಿಸಬಹುದು. ಹೇಗೆಂದರೆ, ಭಾರತದಲ್ಲಿ ಧರ್ಮದ ಕಲ್ಪನೆ ವಿಶಾಲ ಹಂದರದಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಒಳಗೊಂಡರೂ, ಸಂಸ್ಕೃತಿಯ ಕಲ್ಪನೆಗಳು ಜಾತಿ-ಉಪಜಾತಿ-ಮತ-ಪಂಗಡ-ಉಪಪಂಗಡ-ಪಂಥ-ಸಮುದಾಯ (ಎಲ್ಲವನ್ನೂ ಒಟ್ಟಾಗಿಸಿ ʼಗುಂಪುʼ ಎಂದು ಕರೆಯಬಹುದು) ಇವುಗಳ ನಡುವೆಯೇ ನಿಷ್ಕರ್ಷೆಗೊಳಗಾಗುತ್ತವೆ. ಭಾರತದ ಜನಪದೀಯ-ನೆಲಮೂಲ ಸಂಸ್ಕೃತಿಯನ್ನೂ ಹೀಗೆಯೇ ವಿಂಗಡಿಸಿ-ವಿಭಜಿಸಿ ನೋಡಲಾಗುತ್ತಿದೆ.

Session B Nagendra on BJP : ವಿಧಾನ ಪರಿಷತ್‌ನಲ್ಲಿ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಆಗ್ರಹ..! #pratidhvani

ಈ ವಿಭಿನ್ನ ಗುಂಪುಗಳಲ್ಲಿ ಉತ್ಪತ್ತಿಯಾಗುವ ʼ ಮಾನವೀಯ ಮೌಲ್ಯ ʼಗಳು ಮೇಲ್ನೋಟಕ್ಕೆ ಇಡೀ ಮಾನವ ಜನಾಂಗವನ್ನು ಪ್ರತಿನಿಧಿಸುವಂತೆ ಕಂಡರೂ ಆಂತರಿಕವಾಗಿ ಆಯಾ ಗುಂಪುಗಳ ತಾತ್ವಿಕ-ಸೈದ್ದಾಂತಿಕ ನಿಲುವುಗಳ ಚೌಕಟ್ಟಿನಲ್ಲೇ ನಿರ್ವಚಿಸಲ್ಪಡುತ್ತವೆ. ಹಾಗಾಗಿ ʼಮಾನವೀಯʼ (Humane) ಪದದ ಔದಾತ್ಯವೇ ಸಾಪೇಕ್ಷವಾಗಿಬಿಡುತ್ತದೆ. 21ನೆಯ ಶತಮಾನದ ಆರಂಭದಲ್ಲೇ ಇದು ಸಾರ್ವಜನಿಕವಾಗಿ ಪ್ರಕಟವಾಗಿದ್ದು 2002ರ ಗೋದ್ರಾ ಮತ್ತು ಗುಜರಾತ್ ಹತ್ಯಾಕಾಂಡಗಳಲ್ಲಿ. ಎರಡೂ ಘಟನೆಗಳಲ್ಲಿ ಕಳೆದುಹೋದ ಅಮೂಲ್ಯ ಜೀವಗಳನ್ನು ನಮ್ಮ ಸಮಾಜ ʼ ಮಾನವ ʼ ಎಂಬ ವಿಶಾಲ ಅಂಗಳದಲ್ಲಿಟ್ಟು ನೋಡಲೇ ಇಲ್ಲ. ಗೋದ್ರಾದಲ್ಲಿ ಸುಟ್ಟು ಕರಕಲಾದವರು ʼ ಹಿಂದೂಗಳಾಗಿ ʼ ಕಂಡರೆ, ಗುಜರಾತ್ ನರಮೇಧದಲ್ಲಿ ಬಲಿಯಾದವರು ʼ ಮುಸ್ಲಿಂ ಅಥವಾ ಅಲ್ಪಸಂಖ್ಯಾತರಾಗಿʼ ಕಂಡರು. ಬಲಿಯಾದ ಜೀವಗಳು , ಅವರನ್ನು ಕಳೆದುಕೊಂಡ ತಾಯಂದಿರ ಸಂಕಟಗಳು ಇಂದಿಗೂ ನಮಗೆ ತಿಳಿದುಬಂದಿಲ್ಲ.

ಈ ವಿದ್ಯಮಾನವೇನೂ ಹೊಸತಲ್ಲ, ದೇಶದ ವಿಭಜನೆಯ ಸಂದರ್ಭದಲ್ಲೂ ಇದೇ ಕಣ್ಣೋಟವೇ ಇತ್ತು. ನೆಲ್ಲಿ ಹತ್ಯಾಕಾಂಡ, ಸಿಖ್ ದಂಗೆಗಳಲ್ಲೂ , ಕಾಶ್ಮೀರದ ಭಯೋತ್ಪಾದಕರ ದಾಳಿಗಳಲ್ಲೂ ಇದನ್ನೇ ಕಂಡಿದ್ದೆವು. ಆದರೆ ರಾಜಕೀಯ-ಸಾರ್ವಜನಿಕ ಸಂಕಥನಗಳಲ್ಲಿ ಇಂತಹ ಎದೆಬಿರಿಯುವ ಘಟನೆಗಳನ್ನು ʼ ಪಶ್ಚಾತ್ತಾಪ ʼದ ಮನೋಭಾವದ ಚೌಕಟ್ಟಿನಲ್ಲಿ ನೋಡಲಾಗುತ್ತಿತ್ತು. ಸಿಖ್ ಹತ್ಯಾಕಾಂಡದ ಬಗ್ಗೆ ತಡವಾಗಿಯಾದರೂ ಪಶ್ಚಾತ್ತಾಪದ ನುಡಿಗಳು ಕೇಳಿಬಂದವು. ಆದರೆ ನವ ಶತಮಾನದಲ್ಲಿ ನಾವು ಈ ಮನೋಭಾವವನ್ನೇ ಕಳೆದುಕೊಂಡಿದ್ದೇವೆ. ಗುಜರಾತ್, ಮುಝಫರ್ನಗರ, ರೈತ ಮುಷ್ಕರ, ಸಿಎಎ ಸಂದರ್ಭದ ದೆಹಲಿ ಘಟನೆಗಳು ಮತ್ತು ಇತ್ತೀಚಿನ ಜಂತರ್ ಮಂತರ್ವರೆಗೂ ಸಂಭವಿಸಿದ ಸಾವು ನೋವುಗಳಿಗೆ ಯಾವ ಮೂಲೆಯಿಂದಲೂ ಪಶ್ಚಾತ್ತಾಪದ ನುಡಿಗಳು ವ್ಯಕ್ತವಾಗಿಲ್ಲ. ನೊಂದ ಜೀವಗಳಿಗೆ ಸ್ಪಂದಿಸುವ ಸಂವೇದನೆಯನ್ನೂ ಕಾಣಲಾಗುವುದಿಲ್ಲ.

Session BJP vs Congress : ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌, ಬಿಜೆಪಿ ನಾಯಕರ ವಾಕ್ಸಮರ..! #pratidhvani

ಹೊಸ ಮಾರ್ಗದ ವಕ್ರದೃಷ್ಟಿ

ಈ ಅಸೂಕ್ಷ್ಮತೆ ಮತ್ತು ಅಸಂವೇದನೆಗೆ ಕಾರಣ ಭಾರತೀಯ ಸಮಾಜ ಕ್ರಮಿಸುತ್ತಿರುವ ಮಾರ್ಗ. ಈ ಮಾರ್ಗದಲ್ಲಿ ʼ ಸಮಾಜ ಸುಧಾರಣೆ ʼ ಎನ್ನುವುದು ಎಷ್ಟು ಸಂಕುಚಿತವಾಗುವುದೋ ಅಷ್ಟೇ ಪ್ರಮಾಣದಲ್ಲಿ ʼ ಮಾನವೀಯ ಮೌಲ್ಯ ʼಎಂಬ ಔದಾತ್ಯವೂ ಕಿರಿದಾಗುತ್ತಾ ಹೋಗುತ್ತದೆ. ಹಾಗಾಗಿಯೇ ಜೀವಕಂಟಕ ಬುಲ್ಡೋಜರ್ ನೀತಿ, ಜೀವಹರಣದ ಎನ್ಕೌಂಟರ್ ಸಂಸ್ಕೃತಿ ಎಲ್ಲವೂ ಸಮಾಜದ ಒಂದು ವರ್ಗಕ್ಕೆ ಅಪ್ಯಾಯಮಾನವಾಗಿ ಕಾಣುತ್ತದೆ. ಈ ಸಾಮಾಜಿಕ ಸಂವಾದಗಳಲ್ಲಿ ಹತ್ಯೆಗೀಡಾದವರು-ಘಾಸಿಗೊಳಗಾದವರು ಆ ನೋವಿಗೆ ಅರ್ಹರಾಗಿಬಿಡುತ್ತಾರೆ. ಮತ್ತೊಂದು ಬದಿಯಲ್ಲಿ ಜೀವಹಂತಕರು-ದೌರ್ಜನ್ಯ ಎಸಗುವವರು ಮಾನ್ಯತೆ ಪಡೆದುಬಿಡುತ್ತಾರೆ. ಎರಡೂ ಬದಿಗಳಲ್ಲಿ ʼ ಮಾನವೀಯ ಮೌಲ್ಯ ʼ ಭೌತಿಕ ಮೌಲ್ಯೀಕರಣಕ್ಕೆ ಒಳಗಾಗುವುದೇ ಹೊರತು, ಬೌದ್ಧಿಕ ನೆಲೆಯಲ್ಲಿ ನಿಷ್ಕರ್ಷೆಯಾಗುವುದಿಲ್ಲ.

ಈ ದೃಷ್ಟಿಯಿಂದ ನೋಡಿದಾಗ ʼ ಮಾನವೀಯ ಮೌಲ್ಯ ʼ ವನ್ನು ʼ ಜೀವ ಮೌಲ್ಯ ʼ ಎಂದು ಮರುನಿರ್ವಚನೆಗೆ ಒಳಪಡಿಸುವುದು ಅಗತ್ಯವಾಗಿದೆ. ಅಲ್ಲಿ ನಮಗೆ ಭೌತಿಕ ಮಾನವರ ಜಾಗದಲ್ಲಿ ಅಮೂರ್ತ ಜೀವ ಕಾಣುತ್ತದೆ. ಭಾರತೀಯ ಸಮಾಜ ನೈತಿಕವಾಗಿ ಎಷ್ಟು ಅಧಃಪತನದತ್ತ ಸಾಗುತ್ತಿದೆ ಎನ್ನಲು ಇತ್ತೀಚಿನ ʼ ಶುದ್ಧೀಕರಣ ʼ ಪ್ರಸಂಗವೇ ಸಾಕ್ಷಿ. ಜೀವಮೌಲ್ಯವನ್ನು ಅರಿತಿರುವ ಯಾವುದೇ ವ್ಯಕ್ತಿಯು ಒಪ್ಪಲಾಗದ ʼ ಅಸ್ಪೃಶ್ಯತೆ ʼ ಎಂಬ ಜಾತಿ ಪ್ರಣೀತ ಆಚರಣೆ ಸಾಂವಿಧಾನಿಕವಾಗಿ ನಿಷಿದ್ಧವಾಗಿದ್ದರೂ 80ನೆಯ ಸ್ವಾತಂತ್ರ್ಯೊತ್ಸವದ ಸಂದರ್ಭದಲ್ಲೂ ಜೀವಂತವಾಗಿರುವುದನ್ನು ಈ ಪ್ರಕರಣ ತೋರುತ್ತದೆ. ಈ ಜೀವವಿರೋಧಿ ಆಚರಣೆಯನ್ನು ಕಾಣಲು ಇತಿಹಾಸದೊಳಗೆ ಇಣುಕಬೇಕಿಲ್ಲ, ಪೇಶ್ವೆಗಳ ಸಾಮ್ರಾಜ್ಯದತ್ತ ನೋಡಬೇಕಿಲ್ಲ, ಸ್ವತಂತ್ರ-ಗಣತಂತ್ರ ಭಾರತದ ರಾಜ್ಯವೇ ಇದಕ್ಕೆ ಸಾಕ್ಷಿಯಾಗಿದೆ.

ಉತ್ತರಖಂಡದ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆಯನ್ನು ಶುದ್ಧೀಕರಣಗೊಳಿಸುವ ಮೂಲಕ, ಮೇಲ್ಜಾತಿ ಸಮಾಜದ ವೈದಿಕಶಾಹಿ ಪರಂಪರೆಗೆ ಮರುಜೀವ ಕಲ್ಪಿಸಲಾಗಿದೆ. ಶಾಸನಾತ್ಮಕವಾಗಿ ನಿಷಿದ್ಧವಾದ ಅಸ್ಪೃಶ್ಯತೆ ವಾಸ್ತವವಾಗಿ ಇಂದಿಗೂ ಜಾರಿಯಲ್ಲಿದೆ ಎಂದು ಜಗತ್ತಿಗೇ ಸಾರಿದ್ದೇವೆ. ಶಿಕ್ಷೆಗೊಳಗಾಗಿರುವ ಅತ್ಯಾಚಾರಿಗಳನ್ನು, ಹಂತಕರನ್ನು ಸಂಸ್ಕಾರವಂತರೆಂದು ಕರೆದು ಸನ್ಮಾನಿಸುವ ಸಮಾಜದಲ್ಲಿ ಅಸ್ಪೃಶ್ಯತೆಯಂತಹ ಅಮಾನುಷ ಮನೋವೃತ್ತಿ ಜೀವಂತವಾಗಿರುವುದು ಅಚ್ಚರಿಯೇನಲ್ಲ. ದುರಂತ ಎಂದರೆ ಈ ಘಟನೆಗಳು ರಾಜಕೀಯ ವಲಯದಲ್ಲಿ ಕಿಂಚಿತ್ತೂ ಮುಜುಗರ-ಲಜ್ಜೆ ಉಂಟುಮಾಡುವುದಿಲ್ಲ. ಈ ಕ್ರೌರ್ಯದ ವಿರುದ್ಧ ಪ್ರತಿರೋಧದ ದನಿಗಳು ಕೇಳಿಬರುತ್ತಿವೆಯೇ ಹೊರತು, ಪಶ್ಚಾತ್ತಾಪದ ನುಡಿ ಕೇಳಿಬರುತ್ತಿಲ್ಲ.

JDS Party meeting : ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ..

ಜೀವ ಪ್ರೀತಿಯ ಕೊರತೆ

ಇಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಕಾಂಗ್ರೆಸ್ ಅಧ್ಯಕ್ಷರಾಗಿ ನೋಡಬೇಕಿಲ್ಲ. ಅಥವಾ ದಲಿತ ಸಮುದಾಯಕ್ಕೆ ಸೇರಿದ ಸದಸ್ಯರಾಗಿಯೂ ಕಾಣಬೇಕಿಲ್ಲ. ಆ ಖರ್ಗೆ ಎಂಬ ಭೌತಿಕ ವ್ಯಕ್ತಿಯೊಳಗೆ ಒಂದು ʼ ಜೀವ ʼ ಇದೆಯಲ್ಲವೇ ? ಅಸ್ಪೃಶ್ಯತೆಯ ಆಚರಣೆ ಅಪಮಾನಿಸುವುದು ಈ ಅಂತರಿಕೀಕರಣಗೊಂಡ (Internalised) ಜೀವವನ್ನೇ ಅಲ್ಲವೇ ? ʼ ಮಾನವೀಯ ಮೌಲ್ಯ ʼದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಬೌದ್ಧಿಕ ವಲಯದಲ್ಲಿ ಈ ಘಟನೆ ಅನುಕಂಪ-ಸಹಾನುಭೂತಿ ಇರಲಿ, ಸಣ್ಣ ಕಂಪನವನ್ನೂ ಮೂಡಿಸುವುದಿಲ್ಲ. ಬದಲಾಗಿ ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಿ ಮರೆಯಲಾಗುತ್ತದೆ. ದುರದೃಷ್ಟಕರ ಅಂಶವೆಂದರೆ ರಾಜಕೀಯ ಅಥವಾ ಜಾತಿ ಅಸ್ಮಿತೆಯ ನೆಲೆಯಲ್ಲಷ್ಟೇ ಪ್ರತಿರೋಧ ಕೇಳಿಬರುತ್ತಿದೆ.

ಸಾಮಾಜಿಕ ಧ್ವನಿಯಾಗಿ ತಮ್ಮ ರಾಜಕೀಯ ಅಸ್ತಿತ್ವವನ್ನು ಬದಿಗಿಟ್ಟು ಬಿಜೆಪಿಯಲ್ಲಿರುವ ದಲಿತ ಸಂಸದರು ಮೌನವಾಗಿರುವುದನ್ನು ಗಮನಿಸಿದಾಗ ಅಧಿಕಾರ ರಾಜಕಾರಣ ಅಥವಾ ರಾಜಕೀಯ ಪ್ರಜ್ಞೆ ಹೇಗೆ ʼ ದಲಿತ ಪ್ರಜ್ಞೆ ʼಯನ್ನೂ ಮಸುಕಾಗಿಸಿಬಿಡುತ್ತದೆ ಎಂದು ಅರ್ಥವಾಗುತ್ತದೆ. ಇದೇ ಪ್ರವೃತ್ತಿಯನ್ನು ವರ್ಗಪ್ರಜ್ಞೆಯ ನೆಲೆಯಲ್ಲೂ ಗುರುತಿಸಬಹುದು. ಆರ್ಥಿಕವಾಗಿ ಮೇಲ್ದರ್ಜೆಗೆ ಚಲಿಸುವ ಗುಂಪುಗಳಲ್ಲೂ ʼ ವರ್ಗ ಪ್ರಜ್ಞೆ ʼ (Class Consciousness) ಸಾಮುದಾಯಿಕ ನೆಲೆಯಿಂದ ಭೌತಿಕ ಬದುಕಿನ ಸಾಮಾಜಿಕ ನೆಲೆಗೆ ಚಲಿಸುತ್ತಾ ರೂಪಾಂತರ ಹೊಂದುತ್ತದೆ. ಅಲ್ಲಿ ವರ್ಗ ಪ್ರಜ್ಞೆ ʼ ವರ್ಗ ಹಿತಾಸಕ್ತಿʼ ಯ (Class Interest) ಬಾಹುಗಳಲ್ಲಿ ಸಿಲುಕಿ ತನ್ನ ಅಂತಃಸತ್ವವನ್ನೇ ಕಳೆದುಕೊಳ್ಳುತ್ತದೆ. ಇಂತಹ ಸಮಾಜಗಳು ನಿರ್ಲಿಪ್ತತೆಯ ಸೋಗಿನಲ್ಲಿ ನಿರ್ದಯಿಯಾಗಿಯೂ, ನಿಷ್ಕ್ರಿಯವಾಗಿಯೂ ಪರಿವರ್ತನೆ ಹೊಂದುತ್ತವೆ.

siddaramaiah H. D. Kumaraswamy meet : JDS ಮೀಟಿಂಗ್ ಗೆ ಸಿದ್ದರಾಮಯ್ಯ ಹಿಂದೆ ಬಂದ ಕುಮಾರಸ್ವಾಮಿ..#pratidhvani

ನವ ಶತಮಾನದ ಭಾರತೀಯ ಸಮಾಜ ಈ ಮನ್ವಂತರವನ್ನು ಎದುರಿಸುತ್ತಿದೆ. ತತ್ಪರಿಣಾಮವಾಗಿ ʼ ಮಾನವ ಜೀವ ʼ ಸಾಪೇಕ್ಷವಾಗಿ ಮೌಲ್ಯೀಕರಣಕ್ಕೊಳಗಾಗುತ್ತದೆ. ಜಾತಿ ಶ್ರೇಣಿಯ ಚೌಕಟ್ಟಿನಲ್ಲಿ ಅಪಮೌಲ್ಯೀಕರಣಕ್ಕೂ ಒಳಗಾಗುತ್ತದೆ. ಹಾಗಾಗಿ ಉತ್ತರಖಂಡದ ಶುದ್ಧೀಕರಣ ಪ್ರಕ್ರಿಯೆ ʼಜೀವ ವಿರೋಧಿʼ ಎನಿಸುವುದೇ ಇಲ್ಲ. ಈ ಪ್ರಕ್ರಿಯೆಗೆ ಗುರಿಯಾದ ಮಲ್ಲಿಕಾರ್ಜುನ ಖರ್ಗೆ ರಾಜಕೀಯ ನಾಯಕರಾಗಿ ಕಾಣುತ್ತಾರೆಯೇ ಹೊರತು, ಒಬ್ಬ ವ್ಯಕ್ತಿಯಾಗಿ ಅಥವಾ ಒಂದು ಜೀವವಾಗಿ ಕಾಣುವುದಿಲ್ಲ. ಈ ಜೀವದ ನೋವಿಗೆ ಸ್ಪಂದಿಸುವುದು ಸಮಾಜದ ಆದ್ಯತೆಯಾಗುವುದಿಲ್ಲ, ಅದನ್ನು ಪ್ರತಿನಿಧಿಸುವ ಸಮುದಾಯದ ಆಯ್ಕೆಯಾಗಿಬಿಡುತ್ತದೆ. ಇದೇ ಕ್ರೂರ ಸೂತ್ರವನ್ನು ಭಾವರಿದೇವಿ, ಬಿಲ್ಕಿಸ್ಬಾನೋ, ಸೌಜನ್ಯ ಪ್ರಕರಣಗಳಲ್ಲೂ ಅನುಸರಿಸಲಾಗಿದೆ. ಹತ್ಯೆಗಳನ್ನು ಸಮರ್ಥಿಸುವ-ಸಂಭ್ರಮಿಸುವ, ಹಂತಕರನ್ನು ಗೌರವಿಸಿ ಸನ್ಮಾನಿಸುವ ವಿಕೃತ ಸಂಸ್ಕೃತಿಗೆ ನವ ಶತಮಾನದ ಭಾರತೀಯ ಸಮಾಜ ತೆರೆದುಕೊಂಡಿದೆ.

ವಿಸ್ತರಿಸುತ್ತಿರುವ ಕನಸುಗಳು

1947ರ ಕನಸುಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಅವಲೋಕನ ಮಾಡಿದರೆ ಢಾಳಾಗಿ ಕಾಣುವ ವಾಸ್ತವ ಎಂದರೆ, ಸಮಕಾಲೀನ ಭಾರತ ʼ ಸಮಾಜ ಸುಧಾರಕ ʼರನ್ನು ಸೃಷ್ಟಿಸಲು ಸಾಧ್ಯವಾಗದಿರುವುದು. ಪಾರಂಪರಿಕವಾಗಿ ಭಾರತೀಯ ಸಮಾಜ ʼ ಸುಧಾರಣೆ ʼಯ ಪ್ರಶ್ನೆ ಎದುರಾದಾಗ ಚರಿತ್ರೆಯ ಕಡೆಗೆ ವಾಲುತ್ತದೆ. ತತ್ವಶಾಸ್ತ್ರದ ನೆಲೆಯಲ್ಲಿ ಸುಧಾರಕರನ್ನು ಹುಡುಕಾಡುತ್ತದೆ. ವಾಸ್ತವ ಸನ್ನಿವೇಶಗಳಲ್ಲಿ ಸಾಹಿತ್ಯಕ ಕೃತಿಗಳಲ್ಲಿ, ರಾಜಕೀಯ ವ್ಯಕ್ತಿಗಳಲ್ಲಿ, ಸಾಂಸ್ಕೃತಿಕ ವಿದ್ವಾಂಸರಲ್ಲಿ ʼ ಸುಧಾರಣೆಯ ʼ ಅಭಿವ್ಯಕ್ತಿಯನ್ನು ಶೋಧಿಸುತ್ತದೆ. ಇದು ತಪ್ಪೇನಲ್ಲ. ಆದರೆ ಭಾರತದ ಬೌದ್ಧಿಕ ವಲಯ ಇಂತಹ ಸುಧಾರಕರನ್ನು ಸೃಷ್ಟಿಮಾಡದಿರುವುದು ಗಮನಿಸಬೇಕಾದ ಅಂಶ. ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅಂತಹ ಉನ್ನತ ಚಿಂತಕರನ್ನೂ ಜಾತಿ ಸಂಕೋಲೆಗಳಲ್ಲಿ ಬಂಧಿಸುವ ಸಮಾಜ ಇನ್ನೇನು ಮಾಡಲಾದೀತು ?

ಚಾರಿತ್ರಿಕವಾಗಿ ಕಾಣುವ ಸುಧಾರಕರೆಲ್ಲರನ್ನೂ ಹೀಗೆಯೇ ಶ್ರೇಣೀಕೃತ ಜಾತಿ ಸಂಕೋಲೆಗಳಲ್ಲಿ ಬಂಧಿಸಿಬಿಟ್ಟಿದ್ದೇವೆ. ರಾಜಕೀಯವಾಗಿ ಅಂಬೇಡ್ಕರ್ ಮುಕ್ತರಾಗಿರುವಂತೆ ಕಂಡರೂ, ಆಂತರಿಕ ಸಾಮುದಾಯಿಕ ಪ್ರಜ್ಞೆ (Internal Community Consciousness) ಇದಕ್ಕೆ ಮಾನ್ಯತೆ ನೀಡುವುದಿಲ್ಲ. ಬಹಿರಂಗವಾಗಿ ಪ್ರಕಟವಾಗದ ಆಂತರಿಕ ಸಂವಾದಗಳಲ್ಲಿ ಇದನ್ನು ಸ್ಪಷ್ಟವಾಗಿ ಕಾಣಬಹುದು. ಹಾಗಾಗಿ ಇಲ್ಲಿ ಉಗಮಿಸುವ ಸಮಾಜ ಸುಧಾರಣೆಯ ಕಲ್ಪನೆಗಳಲ್ಲಿ ʼಮಾನವೀಯ ಮೌಲ್ಯ ʼ ಎನ್ನುವುದು ಅನುಕೂಲಸಿಂಧು ಸಾಧನವಾಗಿ ಮಾತ್ರ ಕಾಣುತ್ತದೆ. ಅಥವಾ ಸಮಯಸಾಧಕ ಸೇತುವೆಯಾಗಿ ಪರಿಣಮಿಸುತ್ತದೆ. ಈ ಸಂಕೀರ್ಣತೆಗಳ ಪರಿಣಾಮವಾಗಿಯೇ ಭಾರತೀಯ ಸಮಾಜದಲ್ಲಿ ʼ ಮಹಿಳಾ ಸೂಕ್ಷ್ಮತೆ-ಸಂವೇದನೆ ʼ ಯ ಔದಾತ್ಯ ʼ ಲಿಂಗತ್ವ ಸಂವೇದನೆ ʼಯ ಒಂದು ಭಾಗವಾಗಿ ನೆಲೆಯೂರಿಲ್ಲ.

Siddaramaiah : JDS ಸಭೆಯ ಹೋಟೆಲಿಗೆ ಧಿಡೀರ್ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ...

ತತ್ಪರಿಣಾಮವಾಗಿ ಲಕ್ಷಾಂತರ ಸಂಖ್ಯೆಯ ಮಹಿಳಾ ದೌರ್ಜನ್ಯಗಳು ಸಾರ್ವಜನಿಕ-ಸಾಮಾಜಿಕ ಪ್ರಜ್ಞೆಯನ್ನು (Public Social Consciousness) ಕದಡುವುದೇ ಇಲ್ಲ. ಜಾತಿ ದೌರ್ಜನ್ಯಗಳು , ಸಾಮುದಾಯಿಕ ಗೋಡೆಗಳಿಂದಾಚೆಗೆ ಸ್ಪಂದನೆಯನ್ನೇ ಕಾಣುವುದಿಲ್ಲ. ಆದಾಗ್ಯೂ ʼ ಮಾನವೀಯ ಮೌಲ್ಯಗಳು ʼ ಹಿತವಲಯದ ಸಂಕಥನಗಳಲ್ಲಿ ಪ್ರಧಾನವಾಗಿ ಚರ್ಚೆಗೊಳಗಾಗುತ್ತವೆ. ಇದು ಈ ಶತಮಾನದ ಬೆಳವಣಿಗೆಯಲ್ಲವಾದರೂ, ಕಳೆದ 25 ವರ್ಷಗಳ ಸಾಂಸ್ಕೃತಿಕ ರಾಜಕಾರಣ ಮತ್ತು ಮತದ್ವೇಷದ ವಾತಾವರಣ ಇದನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಎಷ್ಟರಮಟ್ಟಿಗೆ ಎಂದರೆ ಪೆಲೆಟ್ ಗನ್ ಪ್ರಯೋಗದಿಂದ ಗಾಯಗೊಂಡ ಮಕ್ಕಳೂ (ವಿದ್ಯಾರ್ಥಿ ವಿದ್ಯಾರ್ಥಿನಿಯರು) ಸಹ ಸಮಾಜದ ಸಹಾನುಭೂತಿ ಗಳಿಸುವುದಿಲ್ಲ. ಸರ್ಕಾರದ ಪ್ರತಿನಿಧಿಗಳಿಂದ ಒಂದೇ ಒಂದು ಪಶ್ಚಾತ್ತಾಪದ ನುಡಿಯೂ ವ್ಯಕ್ತವಾಗುವುದಿಲ್ಲ. ಈ ಮಕ್ಕಳಿಗೆ ಗುಂಪು ಅಸ್ಮಿತೆಯನ್ನೂ ಆರೋಪಿಸಲಾಗುವುದಿಲ್ಲ. ಹಾಗಾಗಿ ಸಮಾಜದ ಕೆಲವೇ ವರ್ಗಗಳ ಅನುಕಂಪ ಗಿಟ್ಟಿಸುತ್ತಾರೆ.

ಧನದಾಹಿ ಸಮಾಜದ ಅಸೂಕ್ಷ್ಮತೆ

ಮತ್ತದೇ ಪ್ರಶ್ನೆ, ಇದಕ್ಕೆ ಯಾರು ಕಾರಣ ? ಬಹುಶಃ ಈ ಪ್ರಶ್ನೆಯೇ ಅರ್ಥಹೀನ. ನಿರ್ದಿಷ್ಟವಾಗಿ ಬೆಟ್ಟು ಮಾಡಿ ತೋರಿಸಲು ಇದು ವ್ಯಕ್ತಿನಿಷ್ಠ ವಿದ್ಯಮಾನವಲ್ಲ (Subjective Phenomenon). ನವ ಶತಮಾನದ ಭಾರತೀಯ ಸಮಾಜ ಬೆಳೆಯುತ್ತಿರುವುದೇ ಹೀಗೆ. ಈ ಸಾಮಾಜಿಕ ಮನಸ್ಥಿತಿಯನ್ನು ಕ್ರೋಢೀಕರಿಸುವ, ಕೇಂದ್ರೀಕರಿಸುವ ತನ್ಮೂಲಕ ನಿರ್ದೇಶಿಸುವ ಜವಾಬ್ದಾರಿಯನ್ನು ಸಮಾಜದ ಪ್ರಬಲ ವರ್ಗಗಳು ವಹಿಸಿಕೊಳ್ಳುತ್ತವೆ. ಜಾತಿ ಪ್ರಾಬಲ್ಯ, ಆರ್ಥಿಕ ಸಾಮರ್ಥ್ಯ ಮತ್ತು ಬೌದ್ಧಿಕ ಪ್ರಭಾವ ಇಲ್ಲಿ ನಿರ್ಣಾಯಕವಾಗುತ್ತವೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಈ ಮೂರೂ ಲಕ್ಷಣಗಳನ್ನು ಮಾರುಕಟ್ಟೆ-ಬಂಡವಾಳವೇ ನಿಯಂತ್ರಿಸುವುದರಿಂದ ಶೈಕ್ಷಣಿಕ ಕೇಂದ್ರಗಳು, ವಿಶ್ವವಿದ್ಯಾಲಯಗಳು, ಅತ್ಯುನ್ನತ ಸಂಶೋಧನಾ ಸಂಸ್ಥೆಗಳು, ವಿಜ್ಞಾನ ಸಂಸ್ಥೆಗಳು ಎಲ್ಲವೂ ಸಹ ʼ ಮಾನವೀಯ ʼ ಸಂವೇದನೆಯನ್ನು ಕಳೆದುಕೊಳ್ಳುತ್ತವೆ. ಇಲ್ಲಿ ಉತ್ಪಾದನೆಯಾಗುವ ಅವೈಚಾರಿಕತೆ ಮತ್ತು ಅವೈಜ್ಞಾನಿಕ ಆಲೋಚನಾ ಕ್ರಮಗಳೇ ಸಮಾಜದ ತಳಮಟ್ಟದವರೆಗೂ ಪ್ರವಹಿಸುತ್ತವೆ.

H. D. Kumaraswamy : ನಿಮ್ಮ ಜಾಹೀರಾತಿನಿಂದ ನಮ್ಮ ಖರ್ಚಾದ್ರೂ ಉಳಿಯುತ್ತೆ ಅದನ್ನೂ ಕೊಟ್ಬಿಡಿ..! #pratidhvani

ಹಾಗಾಗಿಯೇ ವಿಜ್ಞಾನ ಸಂಸ್ಥೆಗಳ ಪ್ರತಿನಿಧಿಗಳಿಂದ, ಸ್ವತಃ ವಿಜ್ಞಾನಿಗಳಿಂದ, ರಾಜಕೀಯ ನಾಯಕರಿಂದ ಅತಿ ಹೆಚ್ಚು ಹಾಸ್ಯಾಸ್ಪದ ಅವೈಜ್ಞಾನಿಕ ವ್ಯಾಖ್ಯಾನಗಳು ಈ ಶತಮಾನದಲ್ಲೇ ಉತ್ಪತ್ತಿಯಾಗಿವೆ. ಸಮಾನಾಂತರವಾಗಿ ಈ ವೇಳೆಗೆ ಭಾರತೀಯ ಸಮಾಜದಿಂದ ದೂರವಾಗಬೇಕಿದ್ದ ಮೌಢ್ಯಾಚರಣೆಗಳು, ಮೂಢ ನಂಬಿಕೆಗಳು ಮರಳಿ ಚಾಲನೆಗೆ ಬರುತ್ತಿವೆ. ಮನುಷ್ಯರನ್ನೇ ಮಾರುಕಟ್ಟೆ ಸರಕಿನಂತೆ ಕಾಣುವ ಬಂಡವಾಳಶಾಹಿ ವ್ಯವಸ್ಥೆ ಮಾನವೀಯತೆಯನ್ನೂ ವಿನಿಯಮ ಪದಾರ್ಥದಂತೆ ಬಳಕೆಗೆ ಒಳಪಡಿಸುತ್ತದೆ. ಇದರ ನೇರ ಪರಿಣಾಮವನ್ನು ವಿಶ್ವವಿದ್ಯಾಲಯಗಳಲ್ಲಿರುವ ಹಣಕಾಸು ಭ್ರಷ್ಟಾಚಾರ ಮತ್ತು ಇತರ ಸಂಸ್ಥೆಗಳ ರಾಜಕೀಯ ನಿಯಂತ್ರಣದಲ್ಲಿ ಸ್ಪಷ್ಟವಾಗಿ ಕಾಣಬಹುದು. ಈ ಸಂಸ್ಥೆಗಳಿಂದ ಹೊರಬರುವ ವಿದ್ಯಾರ್ಥಿ ಯುವಜನರಲ್ಲೂ ಇದೇ ಮನೋಭಾವವನ್ನು ಬಿತ್ತುವ ಮೂಲಕ, ಮಾನವೀಯ ಮೌಲ್ಯಗಳ ಅಥವಾ ಜೀವ ಮೌಲ್ಯದ ಅಪಮೌಲ್ಯೀಕರಣ ಪ್ರಕ್ರಿಯೆಯನ್ನು ಚಾಲನೆಯಲ್ಲಿರಿಸಲಾಗುತ್ತದೆ.

ಸುಧಾರಣೆಯ ಭವಿಷ್ಯ
ಈ ವಿಷವರ್ತುಲದಿಂದ ಹೊರಬರುವುದು ಹೇಗೆ ? ಸಮಾಜ ಸುಧಾರಕರನ್ನು ಹುಟ್ಟುಹಾಕಲಾಗುವುದಿಲ್ಲ.. ಅದು ಸ್ವಾಭಾವಿಕವಾಗಿ ಸಮಾಜದ ಗರ್ಭದಿಂದಲೇ ಮೊಳೆಯಬೇಕಾದ ಒಂದು ಔದಾತ್ಯ. ಇದಕ್ಕೆ ಪೂರಕವಾದ ಒಂದು ಸಮಾಜವನ್ನು ಕಟ್ಟುವುದು ನಮ್ಮ ಆದ್ಯತೆಯಾಗಬೇಕು. ಈ ಸಮಾಜವೇ 1947ರ ಕನಸಿನ ಭಾರತವನ್ನು ಪ್ರತಿನಿಧಿಸುತ್ತದೆ. ಈ ಕಟ್ಟುವ ಪ್ರಕ್ರಿಯೆಯಲ್ಲಿ ಜೀವ ಮೌಲ್ಯ, ಜೀವನ ಮೌಲ್ಯ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಸದಾ ಬೆಳಗುತ್ತಿರುವ ಪ್ರಣತಿಯ ಹಾಗೆ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕಿದೆ. ಈ ಬೆಳಕಿನಲ್ಲೇ ಯುವ ಜನಾಂಗ ಹೆಜ್ಜೆ ಮುಂದುವರೆಸಿದರೆ, 2047ರಲ್ಲಿ ವಿಕಾಸ ಹೊಂದಿದ ಭಾರತವನ್ನು ಕಾಣಲು ಸಾಧ್ಯ. ಈ ಹಾದಿ ನಿರ್ಮಿಸುವವರನ್ನೂ ದಿಮಾಗಿ ನಕ್ಸಲರು ಎಂದು ವರ್ಗೀಕರಿಸಿದರೂ ಹೆಚ್ಚೇನಿಲ್ಲ. ಆದರೆ ಭವಿಷ್ಯದ ತಲೆಮಾರಿಗಾಗಿ, ವರ್ತಮಾನದ ಹಿರಿಯ ಪೀಳಿಗೆ ಮಾಡಲೇಬೇಕಾದ ಕೆಲಸ ಇದು. ಚರಿತ್ರೆ ನಮ್ಮನ್ನು ನೆನಪಿಟ್ಟುಕೊಳ್ಳುವುದು ಇದು ಸಾಧ್ಯವಾದರೆ ಮಾತ್ರ.

Previous Post

ಭದ್ರಾ ಜಲಾಶಯದಿಂದ ನೀರು ಹರಿಸುವ ಕುರಿತು ಶೀಘ್ರ ತೀರ್ಮಾನ: ಸಿಎಂ ಜೊತೆ ಚರ್ಚೆ-ಮಧು ಬಂಗಾರಪ್ಪ

Next Post

ವಿಶ್ವಕಪ್‌ನಲ್ಲಿ ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ: ಪಾಕ್ ವಿರುದ್ಧ ಕಣಕ್ಕಿಳಿಯಲಿದೆ ಟೀಂ ಇಂಡಿಯಾ

Related Posts

ಬೆಂಗಳೂರು ದಕ್ಷಿಣದಲ್ಲಿ ನಕಲಿ ಔಷಧಿ ಜಾಲ ಪತ್ತೆ: ₹5 ಕೋಟಿ ಮೌಲ್ಯದ ವಸ್ತು ವಶ
Top Story

ಬೆಂಗಳೂರು ದಕ್ಷಿಣದಲ್ಲಿ ನಕಲಿ ಔಷಧಿ ಜಾಲ ಪತ್ತೆ: ₹5 ಕೋಟಿ ಮೌಲ್ಯದ ವಸ್ತು ವಶ

by ಪ್ರತಿಧ್ವನಿ
August 19, 2026
0

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಫಾರ್ಮ್‌ಹೌಸ್‌ ಒಂದರಲ್ಲಿ ನಕಲಿ ಔಷಧಿಗಳನ್ನು ಮರುಪ್ಯಾಕ್‌ ಮಾಡುತ್ತಿದ್ದ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ದಾಳಿ ವೇಳೆ ಸುಮಾರು 5 ಕೋಟಿ ರೂ. ಮೌಲ್ಯದ...

Read moreDetails
ಮಧ್ಯಾಹ್ನದ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್‌ ಬಳಕೆ..!

ಮಧ್ಯಾಹ್ನದ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್‌ ಬಳಕೆ..!

August 19, 2026
ಇನ್ಮುಂದೆ ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸಿದರೆ ಭಾರಿ ದಂಡ? ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

ಇನ್ಮುಂದೆ ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸಿದರೆ ಭಾರಿ ದಂಡ? ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

August 19, 2026
ಎರಡನೇ ಮುದ್ರಣಕ್ಕೆ ಸಜ್ಜಾದ ‘ಸದನದಲ್ಲಿ ಶ್ರೀರಾಮರೆಡ್ಡಿ’ ಕೃತಿಯ ವಿಶೇಷತೆಯೇನು..?

ಎರಡನೇ ಮುದ್ರಣಕ್ಕೆ ಸಜ್ಜಾದ ‘ಸದನದಲ್ಲಿ ಶ್ರೀರಾಮರೆಡ್ಡಿ’ ಕೃತಿಯ ವಿಶೇಷತೆಯೇನು..?

August 19, 2026
ವಿಧಾನ ಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ

ವಿಧಾನ ಪರಿಷತ್ ಉಪಸಭಾಪತಿಯಾಗಿ ಉಮಾಶ್ರೀ ಅವಿರೋಧ ಆಯ್ಕೆ

August 19, 2026
Next Post
ವಿಶ್ವಕಪ್‌ನಲ್ಲಿ ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ: ಪಾಕ್ ವಿರುದ್ಧ ಕಣಕ್ಕಿಳಿಯಲಿದೆ ಟೀಂ ಇಂಡಿಯಾ

ವಿಶ್ವಕಪ್‌ನಲ್ಲಿ ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ: ಪಾಕ್ ವಿರುದ್ಧ ಕಣಕ್ಕಿಳಿಯಲಿದೆ ಟೀಂ ಇಂಡಿಯಾ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada