ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾಗೌಡ ನ್ಯಾಯಾಲಯದ ವಿಚಾರಣೆಗೆ ಗೈರು ಆಗಿದ್ದಾರೆ. ಕಾರಣ ಅವರ ಅನಾರೋಗ್ಯ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಬೇಕಿದ್ದ ವಿಚಾರಣೆಗೆ ಅವರು ಹಾಜರಾಗಿಲ್ಲ. ಪವಿತ್ರಾಗೌಡ ಅವರಿಗೆ ಜ್ವರ ಬಂದಿದ್ದು, ರಕ್ತದೊತ್ತಡ (ಬಿಪಿ) ಕೂಡ ಕಡಿಮೆಯಾಗಿದೆ ಎಂದು ಮಹಿಳಾ ಬ್ಯಾರಕ್ ಅಧಿಕಾರಿಗಳು ನ್ಯಾಯಾಧೀಶರಿಗೆ ಮಾಹಿತಿ ನೀಡಿದ್ದಾರೆ.

ಪವಿತ್ರಾಗೌಡ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡ ನ್ಯಾಯಾಧೀಶರ ಪೀಠ ಕಳಕಳಿ ವ್ಯಕ್ತಪಡಿಸಿದೆ. ಜೈಲಿನ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗಿದೆ ಎಂದು ಜೈಲು ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದಾರೆ. ಇದೇ ವೇಳೆ ಪವಿತ್ರಾಗೌಡ ಪರ ವಕೀಲರು ಸೂಕ್ತ ವೈದ್ಯಕೀಯ ಸೌಲಭ್ಯ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಚಿಕಿತ್ಸೆಯನ್ನು ತಕ್ಷಣವೇ ಒದಗಿಸುವಂತೆ ಜೈಲು ಅಧೀಕ್ಷಕರಿಗೆ ಸೂಚಿಸಿದ್ದಾರೆ. ಪವಿತ್ರಾಗೌಡ ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಹುಷಾರಾದ ಮೇಲಷ್ಟೇ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಬೇಕು ಎಂದು ನ್ಯಾಯಾಧೀಶರು ಜೈಲು ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಿದ್ದಾರೆ.






