ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ 36 ದಿನಗಳ ವಿದ್ಯಾರ್ಥಿ-ಯುವ ಜನರ ದಿಟ್ಟ ಹೋರಾಟ ವಿಕಸಿತ ಭಾರತದಲ್ಲಿ ಒಂದು ಮಹತ್ತರ ತಿರುವು ನೀಡುವ ಸಾಧ್ಯತೆಗಳಿವೆ. ದನಿ ಇಲ್ಲದವರಿಗೆ ದನಿಯಾಗುವ ಔದಾತ್ಯವನ್ನು ಎಂದೋ ಮರೆತುಹೋಗಿರುವ ಭಾರತದ ಪ್ರಭುತ್ವ ಮತ್ತು ಸರ್ಕಾರಗಳು ಈಗ ಈ ಯುವ ಜನಾಂಗದ ಒಕ್ಕೊರಲ ದನಿಗೆ ಬೆಚ್ಚಿಬಿದ್ದಿರುವುದು ವಾಸ್ತವ. 12 ವರ್ಷಗಳಲ್ಲಿ ಪ್ರಥಮ ಬಾರಿಗೆ ಕೇಂದ್ರ ಸರ್ಕಾರ ನೊಂದ ಜನರ ಆಗ್ರಹಗಳಿಗೆ ಕಿವಿ ತೆರೆಯುತ್ತಿದೆ, ಒತ್ತಡಕ್ಕೆ ಮಣಿದು ಬಾಯನ್ನೂ ತೆರೆಯುತ್ತಿದೆ. ಮತ್ತೊಂದೆಡೆ ಪ್ರಶ್ನಾತೀತವಾಗಿದ್ದ ಆಳ್ವಿಕೆ ಮತ್ತು ಆಡಳಿತ ವ್ಯವಸ್ಥೆ ಈಗ ಪ್ರಶ್ನೆಗಳಿಗೆ ಬಾಗಿಲು ತೆರೆದಿದೆ. ಈ ಬದಲಾವಣೆಗಳನ್ನು ಕ್ರಾಂತಿಕಾರಿ ಎಂದು ಬಣ್ಣಿಸಲಾಗದಿದ್ದರೂ, ಜನಸಾಮಾನ್ಯರ ಸಾಂವಿಧಾನಿಕ ಹಕ್ಕುಗಳಿಗೆ ಮನ್ನಣೆ ನೀಡುವ ಆಳುವವರ ಬದಲಾದ ಧೋರಣೆ ಕ್ಷಿಪ್ರ ಮನ್ವಂತರದ ಲಕ್ಷಣವಾಗಿ ಕಾಣುತ್ತದೆ.

ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಎರಡೇ ದಿನದಲ್ಲಿ ಎರಡು ಕೋಟಿಗೂ ಹೆಚ್ಚು ಬೆಂಬಲಿಗರನ್ನು ಗಳಿಸಿದ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಮತ್ತು ಅಭಿಜೀತ್ ದೀಪ್ಕೆ-ಆತನ ಸಂಗಡಿಗರು ತಳಮಟ್ಟದವರೆಗೂ ಅನ್ವಯಿಸುವ ಸಾಂವಿಧಾನಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯದ ವಿಭಿನ್ನ ಮಗ್ಗುಲುಗಳನ್ನು ಒಂದೊಂದಾಗಿ ತೆರೆದಿಡುತ್ತಿರುವುದು, ಚುನಾಯಿತ ಸರ್ಕಾರಗಳನ್ನು ಬಡಿದೆಬ್ಬಿಸಿದಂತಾಗಿದೆ. ನೀಟ್ ಪರೀಕ್ಷೆಗಳ ಪತ್ರಿಕೆಯ ಸೋರಿಕೆ, ವಿದ್ಯಾರ್ಥಿಗಳ ಆತ್ಮಹತ್ಯೆಯ ಸುತ್ತ ಉಗಮಿಸಿದ ಹೋರಾಟದ ದನಿಗಳು ಈಗ ಪ್ರಜಾತಂತ್ರ ವ್ಯವಸ್ಥೆಯ ಕೆಲವು ಮೂಲಭೂತ ಸಾಂವಿಧಾನಿಕ ನಿಯಮಗಳನ್ನೂ ಪ್ರಸ್ತಾಪಿಸುತ್ತಿದ್ದು, ದಿಕ್ಕು ತಪ್ಪುತ್ತಿರುವ ಭಾರತೀಯ ಪ್ರಜಾಪ್ರಭುತ್ವಕ್ಕೆ ಸಣ್ಣ ಮಟ್ಟದಲ್ಲಾದರೂ ತಡೆಯೊಡ್ಡಿವೆ. ಬಹುಮುಖ್ಯವಾಗಿ ದೇಶದ ಆಡಳಿತದಲ್ಲಿ ಮರೆತೇಹೋದಂತಿದ್ದ ʼ ಉತ್ತರದಾಯಿತ್ವ ́ದ (Accountability) ಪ್ರಶ್ನೆ ಈ ಯುವ ಜನಾಂಗದಿಂದ ಏಳುತ್ತಿದೆ.
ಸುಪ್ತ ಹತಾಶೆಗಳು ಹೊರಚಿಮ್ಮಿದಾಗ
ಕಾಕ್ರೋಚ್ ಪಕ್ಷ (ಸಿಜೆಪಿ) ಈ ಯುವ ದನಿಯನ್ನು ಎಲ್ಲಿಂದಲೋ ತಂದು ದೆಹಲಿಯಲ್ಲಿ ಸ್ಥಾಪಿಸಲಿಲ್ಲ. ಕಳೆದ 12 ವರ್ಷಗಳ ನವ ಉದಾರವಾದಿ ಆರ್ಥಿಕ ನೀತಿ, ಶಿಕ್ಷಣದ ವಾಣಿಜ್ಯೀಕರಣ, ಉನ್ನತ-ವೃತ್ತಿ ಶಿಕ್ಷಣದ ಕಾರ್ಪೋರೇಟೀಕರಣ ಮತ್ತು ಸತತವಾಗಿ ಕುಸಿಯುತ್ತಲೇ ಇರುವ ಉದ್ಯೋಗಾವಕಾಶಗಳು ದೇಶವ್ಯಾಪಿಯಾಗಿ ಉಂಟುಮಾಡಿದ್ದ ಹತಾಶೆ ಮತ್ತು ಆಕ್ರೋಶವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲು ಒಂದು ಭೂಮಿಕೆಯನ್ನು ಒದಗಿಸಿತ್ತು. ಇಷ್ಟು ವರ್ಷಗಳೂ ಈ ದನಿ ಏನಾಗಿತ್ತು ಎಂದು ಕೇಳುವ ಮುನ್ನ, ಈ ಅವಧಿಯಲ್ಲಿ ನಡೆದ ವಿದ್ಯಾರ್ಥಿ ಹೋರಾಟಗಳು, ಕ್ಯಾಂಪಸ್ ಸಂಘರ್ಷಗಳು, ಜೆಎನ್ಯು ಇಂದ ಮಾನಸ ಗಂಗೋತ್ರಿಯವರೆಗೆ ಧ್ವನಿಸುತ್ತಿದ್ದ ವಿದ್ಯಾರ್ಥಿಗಳ ಹಕ್ಕೊತ್ತಾಯಗಳು ಇವೆಲ್ಲವನ್ನೂ ಸಂಪರ್ಕಿಸಬೇಕಾಗುತ್ತದೆ. ಆದರೆ ಚದುರಿಹೋಗಿದ್ದ ಈ ಯುವ ದನಿಗೆ ಒಂದು ಕ್ರೋಢೀಕೃತ ಸ್ವರೂಪವನ್ನು ಕಲ್ಪಿಸಿ ಕೇಂದ್ರೀಕರಿಸಿದ್ದು ಜಂತರ್ ಮಂತರ್ ಹೋರಾಟ.

ಈ ಯುವ ದನಿಗೆ ಮಣಿದು ಕೇಂದ್ರ ಸಚಿವರೊಬ್ಬರು , ತಮ್ಮ ಸೈದ್ಧಾಂತಿಕ-ರಾಜಕೀಯ ಪ್ರಾಬಲ್ಯದ ಹೊರತಾಗಿಯೂ, ರಾಜೀನಾಮೆ ಕೊಟ್ಟಿರುವುದು, ವಿಕಸಿತ ಭಾರತದ ಪರಿಚಾರಕರಲ್ಲಿ ತಳಮಳ ಉಂಟುಮಾಡಿದೆ. ತಮ್ಮ ಹಿಂದುತ್ವ ರಾಜಕಾರಣದ ಪಗಡೆಯಾಟದಲ್ಲಿ ಯುವ ಸಮೂಹವನ್ನು ಕೆಲವೊಮ್ಮೆ ಮಾರುಕಟ್ಟೆ ಪರ , ಕೆಲವೊಮ್ಮೆ ಹಿಂದೂ ಆಧಿಪತ್ಯದ ಪರ, ಕೆಲವೊಮ್ಮೆ ದ್ವೇಷ ರಾಜಕಾರಣದ ಪರ ಆಟಕಾಯಿಗಳಾಗಿ ಬಳಸಿಕೊಳ್ಳುತ್ತಿದ್ದ ಬಲಪಂಥೀಯ ರಾಜಕಾರಣಕ್ಕೆ, ಜಂತರ್ ಮಂತರ್ ಸಣ್ಣ ಪ್ರಮಾಣದ ಪೆಟ್ಟು ಕೊಟ್ಟಿದೆ. ಈ ಪೆಟ್ಟುತಿಂದ ಕಾರಣಕ್ಕಾಗಿಯೇ ಅಭಿಜಿತ್ ದೀಪ್ಕೆ, ನೇಹಾ ಬೋರಾ ʼ ಶಾಯಿ ಮಜ್ಜನ ʼಕ್ಕೆ ಪಾತ್ರರಾಗಬೇಕಾಯಿತು. ಮನಶ್ಶಾಸ್ತ್ರೀಯ ನೆಲೆಯಲ್ಲಿ ನೋಡಿದಾಗ, ಮತ್ತೊಬ್ಬರ ಮೇಲೆ ದಾಳಿ ನಡೆಸುವ ಮನಸ್ಥಿತಿಗೆ ಕಾರಣವಾಗುವುದು ವೈಫಲ್ಯದ ಹತಾಶೆ ಮತ್ತು ಪರಾಭವದ ಆಕ್ರೋಶ. ಎರಡೂ ಘಟನೆಗಳಲ್ಲಿ ಇದನ್ನು ಗುರುತಿಸಬಹುದು.
ಯುವ ದನಿಯ ವಿನೂತನ ಮಾದರಿ
ಸಿಜೆಪಿ ಒಂದು ರಾಜಕೀಯ ಪಕ್ಷವಲ್ಲ, ಒತ್ತಡದ ಗುಂಪು ಮಾತ್ರ ಎಂದು ಅಭಿಜೀತ್ ದೀಪ್ಕೆ ಪ್ರಾಮಾಣಿಕವಾಗಿ ಹೇಳಿರುವುದನ್ನು ಸ್ವಾಗತಿಸುತ್ತಲೇ, ಈ ಹೋರಾಟಕ್ಕೆ ಯಾವುದೇ ಪೂರ್ವತಯಾರಿ, ಪೂರ್ವಭಾವಿ ನೆಲಮಟ್ಟದ ಭೂಮಿಕೆ ಇರಲಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ. ಹಂತಹಂತವಾಗಿ ಸಹಸ್ರೋಪಾದಿಯಲ್ಲಿ ಈ ಹೋರಾಟಕ್ಕೆ ಕೈಜೋಡಿಸಿದ ವಿದ್ಯಾರ್ಥಿ ಸಂಘಗಳು, ಯುವಕ ಯುವತಿಯರು ಮತ್ತು ಪೋಷಕರು ಪ್ರತಿಭಟನೆ-ಪ್ರತಿರೋಧದ ಅನುಭವ ಇದ್ದವರೂ ಆಗಿರಲಿಲ್ಲ. ಈ ಹೋರಾಟದಲ್ಲಿ ಕಂಡುಬಂದ ಪೋಸ್ಟರ್ಗಳು, ಕೂಗಲಾದ ಘೋಷಣೆಗಳು ʼ ಸಿದ್ಧಮಾದರಿಗಳಿಂದ ʼ ಆಚೆಗಿದ್ದು, ಸಾಮಾನ್ಯವಾಗಿ ಕಾಣುವ Template ಮಾದರಿಯದ್ದಾಗಿರಲಿಲ್ಲ. ಕೆಲವು ಪೋಸ್ಟರ್ಗಳನ್ನು ಅಸಭ್ಯ, ಅಶ್ಲೀಲ, ಅವಹೇಳನಕಾರಿ ಎಂದೆಲ್ಲಾ ದೂಷಿಸುತ್ತಿದ್ದರೂ, ಅಲ್ಲಿ ನೆರೆದಿದ್ದ ಪ್ರತಿಭಟನಾಕಾರರ ಸರಾಸರಿ ವಯಸ್ಸನ್ನು ಗುರುತಿಸಿದರೆ, ಇವೆಲ್ಲವೂ ಸ್ವಾಭಾವಿಕ ಎನಿಸುತ್ತದೆ.
ಬಹಳ ಮುಖ್ಯವಾಗಿ ಗುರುತಿಸಬೇಕಿರುವುದು ಈ ಹೋರಾಟದಲ್ಲಾಗಲೀ, ಘೋಷಣೆಗಳಲ್ಲಾಗಲೀ ʼ ದ್ವೇಷ ʼ ದ ಛಾಯೆಯೂ ಇರಲಿಲ್ಲ. ದ್ವೇಷ-ಅಸೂಯೆ-ಮಾತ್ಸರ್ಯಗಳಲ್ಲೇ ಮಿಂದೆದ್ದಿರುವ ದಶಕಕ್ಕೂ ಹೆಚ್ಚು ಕಾಲದ ರಾಜಕೀಯ ವಾತಾವರಣದಲ್ಲಿ ಇದು ವಿಶಿಷ್ಟ ಎನಿಸದಿರದು. ಯುವ ಜನಾಂಗದ ಒಳಗೊಳಗೇ ಬೇಯುತ್ತಿದ್ದ ಅಸಮಾಧಾನಗಳನ್ನು, ಕೃತಕ ಬುದ್ಧಿಮತ್ತೆಯನ್ನು (AI) ಬಳಸಿ ಘೋಷಣೆಗಳಾಗಿ, ಪೋಸ್ಟರ್ಗಳಾಗಿ ಬಿಂಬಿಸಿರುವುದನ್ನು ಸೂಕ್ಷ್ಮ ಮನಸ್ಸುಗಳು ಅರ್ಥಮಾಡಿಕೊಳ್ಳುತ್ತವೆ. ಇದರಲ್ಲಿ ಅಸಭ್ಯತೆಯನ್ನು ಹುಡುಕುವ ರಾಜಕೀಯ ನಾಯಕರು ತಮ್ಮವರೇ ಆದ ಜನಪ್ರತಿನಿಧಿಗಳ ʼ ಸದನ ಪರಿಭಾಷೆ ʼಯನ್ನು ಪುನರಾವಲೋಕನ ಮಾಡಿದರೆ ಮಾಡಿದ ತಪ್ಪಿನ ಅರಿವಾಗುತ್ತದೆ. ಜಂತರ್ ಮಂತರ್ನಲ್ಲಿ ನೆರೆದಿದ್ದ ಯುವ ಜನರನ್ನು ಹೊಸಕಿ ಹಾಕುವವರು, ಗುಂಡಿಟ್ಟು ಕೊಲ್ಲುವವರು, ಬುಲ್ಡೋಜರ್ ನ್ಯಾಯಕ್ಕೆ ಒಳಪಡಿಸುವವರು, ಜನರಿಂದಲೇ ಆಯ್ಕೆಯಾಗಿ ಶಾಸನ ಸಭೆಗಳಲ್ಲಿ ವಿರಾಜಮಾನರಾಗಿದ್ದಾರೆ.

ವಿಕೃತ ಸಂಸ್ಕೃತಿಯ ಅಮಾನುಷ ಭಾಷೆ
ಇವರೆಲ್ಲರನ್ನೂ ಮೀರಿಸುವ ಹಾಗೆ ಆರೆಸ್ಸೆಸ್ ಚಿಂತಕ ಟಿ.ಜಿ. ಮೋಹನ್ ದಾಸ್ ತಮ್ಮ ಯು ಟ್ಯೂಬ್ ಉಪನ್ಯಾಸದಲ್ಲಿ “ ತನ್ನ ಅಧಿಕಾರ ವ್ಯಾಪ್ತಿಗೊಳಪಟ್ಟಿದ್ದಲ್ಲಿ ಜಂತರ್ ಮಂತರ್ನಲ್ಲಿ ನಾಲ್ಕು ದಿನಗಳ ಕರ್ಫ್ಯೂ ವಿಧಿಸಿ, ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದೆ, ಕೆಲವರು ಸಾಯುತ್ತಿದ್ದರು, ಕೆಲವರು ಶಾಶ್ವತ ಊನ ಅನುಭವಿಸುತ್ತಿದ್ದರು ” ಎಂದು ಹೇಳಿರುವುದು ಈಗ ದೇಶವ್ಯಾಪಿ ಸುದ್ದಿಯಾಗಿದೆ. ಈ ಮಹಾಶಯರು ಅಷ್ಟಕ್ಕೇ ನಿಲ್ಲಿಸದೆ “ ಅಲ್ಲಿ ಅತ್ಯಾಚಾರಗಳು ನಡೆಯಬಹುದಿತ್ತು, ಸಾಮೂಹಿಕ ಅತ್ಯಾಚಾರ ಸಂಭವಿಸಬಹುದಿತ್ತು, ಎಡಪಂಥೀಯ ಸೆಕ್ಯುಲರ್ ಪ್ರಜಾಸತ್ತಾತ್ಮಕ ಹಾಗೂ ಶ್ರಮಜೀವಿ ವರ್ಗಕ್ಕೆ ಸೇರಿದ ಈ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದರೆ ಯಾರೂ ದೂರು ಸಲ್ಲಿಸುವುದಿಲ್ಲ, ಇಂತಹವರು ಅತ್ಯಾಚಾರವನ್ನು ಇಷ್ಟಪಡುತ್ತಾರೆ,,,,,,” ಎಂದು ಹೇಳಿರುವುದು ವರದಿಯಾಗಿದೆ. (ದ ಹಿಂದೂ , 29 ಜುಲೈ 2026) ಈ ಹೇಳಿಕೆಗಳ ವಿರುದ್ಧ ಮಹಿಳಾ ಸಂಘಟನೆಗಳು ಆಕ್ಷೇಪ/ದೂರು ಸಲ್ಲಿಸಿದ್ದೂ ಆಗಿದೆ.
“ನಾನು ಆ ಅರ್ಥದಲ್ಲಿ ಹೇಳಲಿಲ್ಲ,,,,,”ಎಂಬ ಸಾಮಾನ್ಯ ರಾಜಕೀಯ ಕುಂಟುನೆಪ ಇಲ್ಲಿಯೂ ಸಹ ಯಶಸ್ವಿಯಾಗಬಹುದು. ಇಂತಹ ಅಮಾನವೀಯ ಹೇಳಿಕೆಗಳನ್ನು ನೀಡಿದ ವ್ಯಕ್ತಿಗಿಂತಲೂ ಇಂಥವರನ್ನು ಪ್ರಭಾವಿಸುವ ರಾಜಕೀಯ ಸಂಸ್ಕೃತಿಯನ್ನು ಗಮನಿಸಬೇಕಿದೆ. ಚುನಾಯಿತ ಸಂಸದರೇ, ʼ ವಿದ್ಯಾರ್ಥಿಗಳನ್ನು ಹೊಸಕಿ ಹಾಕಬೇಕಿತ್ತು ʼ ಎಂದು ಹೇಳುವಾಗ, ಈ ಹೇಳಿಕೆಗಳು ಭಿನ್ನವಾಗೇನೂ ಕಾಣುವುದಿಲ್ಲ. ವ್ಯತ್ಯಾಸ ಇರುವುದು ಕ್ರೌರ್ಯ ಮತ್ತು ಹಿಂಸೆಯ ಪ್ರಮಾಣದಲ್ಲಿ (Degree of Cruelty &Violence) ಮಾತ್ರ. ಇಂತಹ ಹೇಳಿಕೆಗಳ ಹಿಂದೆ ಶಿಕ್ಷೆಯ ಭೀತಿ ಇರುವುದಿಲ್ಲ. ದಂಡನೆಯ ಆತಂಕ ಇರುವುದಿಲ್ಲ. ಏಕೆಂದರೆ ಸಮಕಾಲೀನ ಭಾರತದ ದ್ವೇಷ ರಾಜಕಾರಣದಲ್ಲಿ ಇವೆಲ್ಲವೂ ಮೌನ ಸಮ್ಮತಿ ಪಡೆಯುವ ವರ್ತನೆಗಳಾಗಿವೆ. ಹೋರಾಟನಿರತ ಯುವ ಜನಾಂಗಕ್ಕೆ ನೆಲದ ವಾಸ್ತವವನ್ನು (Ground Reality) ಇನ್ನೂ ಸ್ಪಷ್ಟವಾಗಿ ಅರ್ಥಮಾಡಿಸಲು ಇದು ಸಹಾಯಕವಾಗುತ್ತದೆ.

ವಸ್ತುಸ್ಥಿತಿಯ ನೆಲೆಯಲ್ಲಿ
ಈ ಯುವ ಜನಾಂಗದ ಲಕ್ಷಣಗಳು, ಅಭಿವ್ಯಕ್ತಿಯ ಮಾದರಿ ಮತ್ತು ವಿಧಾನ ಇವೆಲ್ಲವೂ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿವೆ. ಆದರೆ ವಾಸ್ತವದಲ್ಲಿ ಚರ್ಚೆ ಮಾಡಬೇಕಿರುವುದು ಈ ಯುವ ದನಿಯ ಹಿಂದೆ ಸುಪ್ತವಾಗಿದ್ದ ಹತಾಶೆಯ ವಸ್ತುನಿಷ್ಠ ಕಾರಣಗಳು (Objective Reasons). ಭಾರತದ ಯುವ ಜನಾಂಗ ಸಿಡಿದೇಳಲು ಹಲವು ಕಾರಣಗಳಿವೆ. ಇವರಿಗೆ ಭವಿಷ್ಯದ ಜೀವನ ನಿರ್ವಹಣೆಗೆ ಪೂರಕವಾದ ಉದ್ಯೋಗಾವಕಾಶಗಳನ್ನೇ ಕಲ್ಪಿಸದ ಶಿಕ್ಷಣ ಮಾದರಿ ಮತ್ತು ಈ ಶೈಕ್ಷಣಿಕ ವ್ಯವಸ್ಥೆಯ ಕಾರ್ಪೋರೇಟೀಕರಣ ವಿದ್ಯಾರ್ಥಿಗಳನ್ನಷ್ಟೇ ಅಲ್ಲದೆ ಪೋಷಕರನ್ನೂ ಹತಾಶೆಯ ಅಂಚಿಗೆ ದೂಡಿದೆ. ಒಂದು ವೇಳೆ ಉದ್ಯೋಗ ದೊರೆತರೂ ಅತಿಕಡಿಮೆ ವೇತನ ಜೀವನ ನಿರ್ವಹಣೆಯನ್ನೇ ದುರ್ಭರಗೊಳಿಸುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಗಳಲ್ಲೇ ಉನ್ನತ ಶಿಕ್ಷಣ ಎನ್ನುವುದು ದುಡಿಯುವ ಜನರ ಆದಾಯ, ಸಂಪನ್ಮೂಲಗಳನ್ನು ಹೀರಿ ಬರಿದು ಮಾಡುವ ಮಾರುಕಟ್ಟೆಯಾಗಿದೆ.

ಆರು ದಶಕಗಳಿಗೆ ಮುನ್ನ ಕೊಥಾರಿ ಆಯೋಗವು ದೇಶದ ಜಿಡಿಪಿಯ ಶೇಕಡಾ 6ರಷ್ಟನ್ನು ಶಿಕ್ಷಣಕ್ಕಾಗಿ ನಿಯೋಜಿಸಬೇಕು ಎಂದು ಶಿಫಾರಸು ಮಾಡಿತ್ತು. 2020ರ ಹೊಸ ಶಿಕ್ಷಣ ನೀತಿಯಲ್ಲಿ ಇದು ಉಲ್ಲೇಖವಾದರೂ, ಈವರೆಗಿನ ಯಾವ ಸರ್ಕಾರಗಳೂ ಜಾರಿಗೊಳಿಸಿಲ್ಲ. ಈ ವರ್ಷದ ಬಜೆಟ್ನಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳು ಜಿಡಿಪಿಯ ಶೇಕಡಾ 2.7ರಷ್ಟನ್ನು ಶಿಕ್ಷಣಕ್ಕಾಗಿ ಒದಗಿಸಿವೆ. ಶಿಕ್ಷಣದಲ್ಲಿ ಸಾರ್ವಜನಿಕ ವೆಚ್ಚವನ್ನು (Public Expenditure) ಕಡಿಮೆ ಮಾಡಿ ಖಾಸಗಿ ವಲಯಕ್ಕೆ ಒಪ್ಪಿಸುವುದು ನವ ಉದಾರವಾದದ ಮೂಲ ಮಂತ್ರವಾಗಿದೆ. ತತ್ಪರಿಣಾಮವಾಗಿ ಮಕ್ಕಳ ವ್ಯಾಸಂಗ ಪೋಷಕರ ಪಾಲಿಗೆ ಬಹುದೊಡ್ಡ ಬಾಧ್ಯತೆಯಾಗಿದ್ದು, ದುಬಾರಿಯೂ ಆಗಿದೆ. 1990-91 ರಿಂದ 2017-18ರ ಅವಧಿಯಲ್ಲಿ ಶಿಕ್ಷಣಕ್ಕಾಗಿ ಕೌಟುಂಬಿಕ ವೆಚ್ಚದ ಪ್ರಮಾಣ ದುಪ್ಪಟ್ಟಾಗಿರುವುದು ಅಂಕಿಅಂಶಗಳಿಂದ ಸಾಬೀತಾಗುತ್ತದೆ.
ಶಿಕ್ಷಣ ಮಾರುಕಟ್ಟೆ ಮತ್ತು ಜಾಗತೀಕರಣ
ಉನ್ನತ ಶಿಕ್ಷಣದ ವೆಚ್ಚ ದುಬಾರಿಯಾಗುತ್ತಿರುವುದು, ಕೆಳ ಮಧ್ಯಮ ವರ್ಗಗಳಿಗೂ ಎಟುಕದಂತಾಗಿರುವುದು ವಾಸ್ತವವಾಗಿದ್ದು, ಈಗ ನಡೆಯುತ್ತಿರುವ ವಿದ್ಯಾರ್ಥಿ ಹೋರಾಟದ ಮೂಲ ಕಾರಣ ಇಲ್ಲೇ ಅಡಗಿದೆ. 1990ರ ಜಾಗತೀಕರಣದ ನಂತರ ಉದ್ಯೋಗ ಪಡೆಯಲು ಕಾಲೇಜು ಪದವಿ ಅತ್ಯವಶ್ಯ ಎಂಬ ಮನೋಭಾವ ಎಲ್ಲ ಸ್ತರಗಳ ಸಮಾಜದಲ್ಲೂ ಬೇರೂರಿದ್ದು, ಪೋಷಕರು ತಮ್ಮ ಮಕ್ಕಳ ಕಾಲೇಜು ವ್ಯಾಸಂಗಕ್ಕಾಗಿ ಎಲ್ಲ ಮಾರ್ಗಗಳನ್ನೂ ಹುಡುಕುವುದು ವಾಡಿಕೆಯಾಗಿದೆ. ಕಳೆದ ಮೂರೂವರೆ ದಶಕಗಳಲ್ಲಿ ಕಾಲೇಜು ಪದವೀಧರ ಸಂಖ್ಯೆ ಶೇಕಡಾ 100ರಷ್ಟು ಹೆಚ್ಚಾಗಿದೆ. ಈ ಸನ್ನಿವೇಶದಲ್ಲಿ ಖಾಸಗೀಕರಣವೂ ಹೆಚ್ಚಾಗಿದ್ದರಿಂದ ಪೋಷಕರಿಗೆ ವಿದ್ಯಾಭ್ಯಾಸದ ಶುಲ್ಕ, ಖಾಸಗಿ ಟ್ಯೂಷನ್ ಮತ್ತಿತರ ವೆಚ್ಚಗಳನ್ನು ಭರಿಸುವುದು ದುಬಾರಿಯಾಗತೊಡಗಿತ್ತು. ಒಂದು ಅಂದಾಜಿನ ಪ್ರಕಾರ ದೇಶದ ಒಟ್ಟು ಕಾಲೇಜು ವಿದ್ಯಾರ್ಥಿಗಳ ಪೈಕಿ ಮೂರನೆ ಒಂದರಷ್ಟು ಆರ್ಥಿಕವಾಗಿ ಕೆಳಸ್ತರದ ಕುಟುಂಬಗಳಿಂದಲೇ ಬಂದವರಾಗಿದ್ದಾರೆ. ಉತ್ತಮ ವೇತನ ಗಳಿಸುವ ಉದ್ಯೋಗಗಳಿಗೆ ಪ್ರವೇಶ ನೀಡುವಂತಹ ಪಠ್ಯಕ್ರಮಗಳ ವ್ಯಾಸಂಗಕ್ಕೆ ಬಹುತೇಕ ಬಡಕುಟುಂಬಗಳು ಉತ್ತೇಜನ ನೀಡಲಾಗುವುದಿಲ್ಲ ಎನ್ನುವುದೂ ವಾಸ್ತವ.
ಶಿಕ್ಷಣದ ಖಾಸಗೀಕರಣ ಮತ್ತು 2000ದ ನಂತರ ಕಾರ್ಪೋರೇಟೀಕರಣದ ಪರಿಣಾಮವಾಗಿ ಉನ್ನತ ಶಿಕ್ಷಣ ಬಂಡವಾಳ ಹೂಡಿಕೆಯ ಪ್ರಶಸ್ತ ಮಾರುಕಟ್ಟೆಯಾಗಿ ಪರಿಣಮಿಸಿತ್ತು. ಹಾಗಾಗಿಯೇ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯೂ ನಿರಂತರವಾಗಿ ಬೆಳೆಯುತ್ತಲೇ ಇವೆ. 1980ಕ್ಕೂ ಮುನ್ನ ಅರ್ಧಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಸಾರ್ವಜನಿಕ ವಲಯದಲ್ಲಿದ್ದವು, ಈಗ ಖಾಸಗಿ ವಲಯ ಶೇಕಡಾ 80ರಷ್ಟು ಆಕ್ರಮಿಸಿದೆ. ಪ್ರಸ್ತುತ ದೇಶಾದ್ಯಂತ 65,534 ಉನ್ನತ ಶಿಕ್ಷಣ ಸಂಸ್ಥೆಗಳಿವೆ (Higher Education Institutes). ಖಾಸಗಿ ವಲಯದ ಈ ಬೆಳವಣಿಗೆಗೆ ವ್ಯತಿರಿಕ್ತವಾಗಿ ಗುಣಮಟ್ಟದ ಬೋಧನೆ ಸತತವಾಗಿ ಕುಸಿಯುತ್ತಲೇ ಇದೆ. ಇತ್ತೀಚಿನ ಸರ್ಕಾರಿ ಸಮೀಕ್ಷೆಯ ಅನುಸಾರ ಕಾಲೇಜು ಪದವೀಧರರ ಪೈಕಿ ಶೇಕಡಾ 55ರಷ್ಟು ಮಾತ್ರ ಉದ್ಯೋಗಕ್ಕೆ ಅರ್ಹರಾಗಿರುತ್ತಾರೆ. 2019ರ ಸಮೀಕ್ಷೆಯಲ್ಲಿ ಸೂಚಿಸುವಂತೆ ಶೇಕಡಾ 80ರಷ್ಟು ಇಂಜಿನಿಯರಿಂಗ್ ಪದವೀಧರರು ʼ ಜ್ಞಾನ ಆರ್ಥಿಕತೆಯ (Knowledge Economy) ಯಾವುದೇ ಉದ್ಯೋಗಕ್ಕೆ ಅರ್ಹರಾಗುವುದಿಲ್ಲ. 2024ರ ಟೀಮ್ ಲೀಸ್ ಸಮೀಕ್ಷೆ ಹೇಳುವಂತೆ 15 ಲಕ್ಷ ಇಂಜಿನಿಯರಿಂಗ್ ಪದವೀಧರರ ಪೈಕಿ ಶೇಕಡಾ 10ರಷ್ಟು ಮಾತ್ರ ಉದ್ಯೋಗ ಗಳಿಸಲು ಸಾಧ್ಯವಾಗಿದೆ. ಈ ಮಕ್ಕಳ ಪೋಷಕರು ಪ್ರತಿವರ್ಷ ಸರಾಸರಿ 70 ಸಾವಿರ ರೂಗಳನ್ನು ಖರ್ಚು ಮಾಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯ ಕರಾಳ ಚಿತ್ರಣವನ್ನು ಊಹಿಸಬಹುದು.

ಮರೀಚಿಕೆಯಾಗಿರುವ ಉದ್ಯೋಗಗಳು
ಮೂಲ ಸಮಸ್ಯೆ ಇರುವುದು ಕುಶಲ ಶ್ರಮಿಕರ ಸರಬರಾಜಿನಲ್ಲಿ ಅಲ್ಲ, ಇದಕ್ಕೆ ಪೂರಕವಾದ ಬೇಡಿಕೆ ಇಲ್ಲದಿರುವುದು ಮತ್ತು ಉದ್ಯೋಗಾವಕಾಶಗಳುಉ ಇಲ್ಲದಿರುವುದು. ಹಾಗಾಗಿ ನಿರುದ್ಯೋಗ ಸಮಸ್ಯೆ ಉಲ್ಬಣಿಸುತ್ತಿದ್ದು ಆಂತರಿಕವಾಗಿ ಪದವೀಧರರ ಉದ್ಯೋಗಾವಕಾಶಗಳು ಇನ್ನೂ ಕುಸಿಯುತ್ತಿವೆ. ಕಳೆದ 20 ವರ್ಷಗಳಲ್ಲಿ ಭಾರತದ ಕಾಲೇಜುಗಳು ಹತ್ತು ಕೋಟಿ ಪದವೀಧರರನ್ನು ಸೃಷ್ಟಿಸಿವೆ. ಅವರ ಪೈಕಿ 5.6 ಕೋಟಿ ಜನರು ಉದ್ಯೋಗ ಪಡೆದಿದ್ದಾರೆ, ಕೇವಲ 3.4 ಕೋಟಿ ಯುವಜನರು ಸಂಬಳ ಪಡೆಯುವ ಉದ್ಯೋಗ ಗಳಿಸಿದ್ದಾರೆ. ಉಳಿದ 2.2 ಕೋಟಿ ಪದವೀಧರರು ಸ್ವ-ಉದ್ಯೋಗ ಅಥವಾ ಸಾಂದರ್ಭಿಕ ಉದ್ಯೋಗಗಳನ್ನು (Casual Labour) ಅವಲಂಬಿಸುವಂತಾಗಿದೆ. ತಾವು ವ್ಯಾಸಂಗ ಮಾಡಿದ ಪದವಿಗೆ ತಕ್ಕಂತಹ ಉದ್ಯೋಗ ಪಡೆಯುವವರು ಹನ್ನೆರಡು ಆಕಾಂಕ್ಷಿಗಳಲ್ಲಿ ಒಬ್ಬರು ಮಾತ್ರ ಕಾಣುತ್ತಾರೆ.
ಅನ್ವಯಿಕ ಆರ್ಥಿಕ ಸಂಶೋಧನಾ ರಾಷ್ಟ್ರೀಯ ಮಂಡಳಿ (National Council for Applied Economic Research) 2022ರ ಸಮೀಕ್ಷೆಯಲ್ಲಿ ಗುರುತಿಸಿರುವಂತೆ ಅಹಾರ ವಿತರಣೆ ಪ್ಲಾಟ್ಫಾರಂಗಳ ಉದ್ಯೋಗಿಗಳ ಪೈಕಿ ಮೂರನೆ ಒಂದರಷ್ಟು ಪದವೀಧರರಿದ್ದಾರೆ. ಲಭ್ಯವಿರುವ ಕೆಲವೇ ವೇತನ ಸಹಿತ ನೌಕರಿಗಳಿಗಾಗಿ ಅನೇಕ ಪದವೀಧರರು ಸ್ಪರ್ಧಿಸುತ್ತಿರುವುದರಿಂದ ಉದ್ಯೋಗದಾತರು ಮೇಲುಗೈ ಸಾಧಿಸಿದ್ದಾರೆ. 2011ರಿಂದೀಚೆಗೆ ಪದವೀಧರರ ಮಾಸಿಕ ವೇತನದ ಬೆಳವಣಿಗೆ ಸ್ಥಗಿತಗೊಂಡಿದೆ. ಪುರುಷ ಪದವೀಧರರ ಸಂದರ್ಭದಲ್ಲಲಿ ನೈಜ ವೇತನಗಳು (ಹಣದುಬ್ಬರವನ್ನು ಹೊರತುಪಡಿಸಿದ ವೇತನ ಪ್ರಮಾಣ) ಸತತವಾಗಿ ಕುಸಿಯುತ್ತಲೇ ಇದೆ. ಮಹತ್ವದ ಅಂಶ ಎಂದರೆ 2017ರ ನಂತರದಲ್ಲಿ ಯುವಜನರು ಶಾಲಾ ಕಾಲೇಜುಗಳನ್ನು ಅರ್ಧದಲ್ಲೇ ತೊರೆಯುವುದು ಹೆಚ್ಚಾಗಿದೆ. 2017ರಲ್ಲಿ ವಿದ್ಯಾಭ್ಯಾಸದಲ್ಲಿ ಶೇಕಡಾ 38ರಷ್ಟಿದ್ದ ಯುವ ಜನರ ಸಂಖ್ಯೆ 2024ರ ವೇಳೆಗೆ ಸೇಕಡಾ 34ಕ್ಕೆ ಕುಸಿದಿದೆ.
ಸಮಾನಾಂತರವಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಯುವ ಜನರ ಹೆಚ್ಚಾಗಿದೆ. ಸಮೀಕ್ಷೆಯಲ್ಲಿ ಸಂಪರ್ಕಿಸಲಾದ 15-24 ವಯೋಮಾನದ ಯುವಜನರು ತಾವು ಶಿಕ್ಷಣವನ್ನು ಮುಂದುವರೆಸದೆ ಇರಲು ಕಾರಣ, ಕೌಟುಂಬಿಕ ಆದಾಯಕ್ಕೆ ಸಹಾಯ ಮಾಡುವುದೇ ಆಗಿದೆ. ಸರ್ಕಾರದ ಅಧಿಕೃತ ಸಮೀಕ್ಷೆಗಳಲ್ಲಿ ಯಾವುದೇ ಆರ್ಥಿಕ ಚಟುವಟಿಕೆಯಲ್ಲಿ ನಿರತರಾಗಿರುವವರನ್ನು ಉದ್ಯೋಗಿ ಎಂದು ಪರಿಗಣಿಸುವುದರಿಂದ, ಈ ಯುವ ಸಮೂಹದ ದುಡಿಮೆ ಜೀವನೋಪಾಯಕ್ಕೆ ಸಮರ್ಪಕವಾಗಿದೆಯೇ ಎಂಬ ಅಂಶ ಗಣನೆಗೇ ಬರುವುದಿಲ್ಲ. ಅಂದರೆ ಜನಸಾಮಾನ್ಯರ ಜೀವನಮಟ್ಟ, ಆರ್ಥಿಕ ಸ್ಥಿತಿಗತಿಗಳು ಕುಸಿಯುತ್ತಿದ್ದರೂ ಉದ್ಯೋಗ ಹೆಚ್ಚಾಗುತ್ತಿದೆ ಎಂದು ಬಿಂಬಿಸುವ ಸೂಚ್ಯಂಕಗಳು ಪ್ರಕಟವಾಗುತ್ತಿರುತ್ತವೆ. ಆರ್ಥಿಕ ದುಸ್ಥಿತಿಯನ್ನು ಎದುರಿಸುವ ಕುಟುಂಬಗಳು ಅತಿ ಹೆಚ್ಚು ಸದಸ್ಯರನ್ನು ದುಡಿಮೆಯಲ್ಲಿ ತೊಡಗಿಸುತ್ತವೆ. ಹಾಗಾಗಿಯೇ ವ್ಯವಸಾಯ ಕ್ಷೇತ್ರದಲ್ಲಿ ಕೂಲಿ ಇಲ್ಲದೆ ದುಡಿಯುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದು ಸರ್ಕಾರದ ಅಂಕಿಅಂಶಗಳಲ್ಲಿ ದುಡಿಮೆಯ ವಲಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ ಎಂದು ತೋರಿಸಲು ಸಹಾಯಕವಾಗಿದೆ.

ಜಾಗತೀಕರಣ-ನವ ಉದಾರವಾದ
ಭಾರತ ಆರ್ಥಿಕವಾಗಿ ಪ್ರಗತಿಯ ಹಾದಿಯಲ್ಲಿದೆ ಎಂದು ಸರ್ಕಾರ ಹೇಳುತ್ತಲೇ ಇದ್ದರೂ, ಉದ್ಯೋಗದ ಬಿಕ್ಕಟ್ಟು ಏಕೆ ಉಲ್ಬಣಿಸುತ್ತಿದೆ ? ಸ್ವಾತಂತ್ರ್ಯದ ಆರಂಭದ ದಿನಗಳಲ್ಲಿ ಭಾರತದ ಆರ್ಥಿಕ ನೀತಿಗಳು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಹೆಚ್ಚಿನ ಆದ್ಯತೆ ನೀಡಿದ್ದರಿಂದ ಉತ್ಪಾದನಾ ವಲಯದ (Manufacturing Sector) ಕಡೆಗೆ ಹೆಚ್ಚಿನ ಕಾರ್ಮಿಕರು ಧಾವಿಸಲಿಲ್ಲ. 1991ರವರೆಗೂ ಈ ವಲಯದ ಉದ್ಯೋಗಿಗಳ ಸಂಖ್ಯೆ ಶೇಕಡಾ 40ರಷ್ಟಿತ್ತು. ಶಿಕ್ಷಣ ಮತ್ತು ತರಬೇತಿ ಪಡೆದ ಯುವ ಜನರನ್ನು ಆಕರ್ಷಿಸಲು ಅಗತ್ಯವಾದ ಸಾರ್ವಜನಿಕ ಹೂಡಿಕೆಯ (Public Investment) ಪ್ರಗತಿಯೂ ನಿಧಾನಗತಿಯಲ್ಲಿ ಸಾಗಿತ್ತು. ನವ ಶತಮಾನದಲ್ಲಿ ಆರ್ಥಿಕ ಪ್ರಗತಿ ಚುರುಕಾದಂತೆಲ್ಲಾ ಮೇಲ್ಪದರದ ಶೇಕಡಾ 5 ರಿಂದ 10ರಷ್ಟು ಜನರಿಗೆ ಬೇಡಿಕೆ ಹೆಚ್ಚಾಗತೊಡಗಿತ್ತು. ಈ ವರ್ಗದ ಸಮಾಜಗಳು ಬಳಸುತ್ತಿದ್ದ ಪದಾರ್ಥಗಳು ಮತ್ತು ಸೇವೆಗಳು ಸಾಮಾನ್ಯವಾಗಿ ಬಂಡವಾಳ ತೀವ್ರತೆಯ ತಂತ್ರಜ್ಞಾನವನ್ನಾಧರಿಸಿದ, ಅತಿ ಹೆಚ್ಚಿನ ಆಮದು ಅವಶ್ಯಕತೆ ಇದ್ದ, ಕಡಿಮೆ ದುಡಿಮೆಗಾರರನ್ನು ಹೊಂದಿದ್ದ ಕ್ಷೇತ್ರಗಳಿಂದ ಪೂರೈಕೆಯಾಗುತ್ತಿತ್ತು.
ಇದೇ ಅವಧಿಯಲ್ಲೇ ಸಾರ್ವಜನಿಕ ವಲಯದ (Public Sector) ಉದ್ಯೋಗಿಗಳು ಹೆಚ್ಚಿನ ಭದ್ರತೆ ಮತ್ತು ವೇತನವನ್ನು ಪಡೆಯುತ್ತಿದ್ದರೂ ಉದ್ಯೋಗ ಕ್ಷೇತ್ರದಲ್ಲಿ ಇವರ ಪಾಲು ಹಂತಹಂತವಾಗಿ ಕುಸಿಯುತ್ತಾ ಹೋಯಿತು. 1993-94ರಲ್ಲಿ ಒಟ್ಟು ಉದ್ಯೋಗದಲ್ಲಿ ಶೇಕಡಾ 5.2ರಷ್ಟಿದ್ದ ಉದ್ಯೋಗಿಗಳ ಸಂಖ್ಯೆ 2011-12ರ ವೇಳೆಗೆ ಶೇಕಡಾ 3.7ಕ್ಕೆ ಕುಸಿದಿತ್ತು. ಇದೇ ಅವಧಿಯಲ್ಲಿ ಯವ ಪದವೀಧರರಲ್ಲಿ ನಿರುದ್ಯೋಗ ಪ್ರಮಾಣ ಶೇಕಡಾ 40ರಷ್ಟಾಗಿತ್ತು. ಇದೇ ಅವಧಿಯಲ್ಲಿ ಕೃಷಿ ಬಿಕ್ಕಟ್ಟು ಉಲ್ಬಣಿಸಿದ್ದರಿಂದ ಕೃಷಿಯನ್ನೇ ಅವಲಂಬಿಸಿದ್ದ ಕುಟುಂಬಗಳಿಗೆ ಸಾಂದರ್ಭಿಕ ದುಡಿಮೆ (Casual labour), ಕಡಿಮೆ ಕೂಲಿಯ ಸೇವಾ ನೌಕರಿ, ಭದ್ರತಾ ಸಿಬ್ಬಂದಿಯ ನೌಕರಿ, ಸಣ್ಣ ಪ್ರಮಾಣದ ಸ್ವ-ಉದ್ಯೋಗಗಳು ಇವೆಲ್ಲವೂ ಅನಿವಾರ್ಯವಾಗತೊಡಗಿತ್ತು. ಈ ಅಭಿವೃದ್ಧಿಯ ಮಾದರಿ, ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತದಲ್ಲಿ, ಕಳೆದ 25 ವರ್ಷಗಳಿಂದ ಮುಂದುವರೆದಿದೆ.

ಡಿಜಿಟಲ್ ಯುಗದಲ್ಲಿ ಜಾಗತಿಕ ಆರ್ಥಿಕತೆಯಲ್ಲಾಗುತ್ತಿರುವ ಪಲ್ಲಟಗಳ ಪರಿಣಾಮವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ (IT Sector) ಉನ್ನತ ವೇತನದ ಉದ್ಯೋಗಗಳು ಕುಸಿಯತೊಡಗಿವೆ. ಕೃತಕ ಬುದ್ಧಿಮತ್ತೆ (AI) ಮತ್ತಷ್ಟು ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುವ ಆತಂಕವೂ ಇದೆ. ಈ ಹಿನ್ನೆಲೆಯಲ್ಲಿ ನಿರುದ್ಯೋಗದ ಸಮಸ್ಯೆ ಉಲ್ಬಣಿಸುವುದೇ ಅಲ್ಲದೆ, ವಿದ್ಯಾವಂತ ಜನಸಂಖ್ಯೆಯೂ ಸಹ ಜೀವನ ನಿರ್ವಹಣೆಯ ಸಂಕಟಗಳನ್ನು ಎದುರಿಸಬೇಕಾಗಬಹುದು. ಪದವಿ ಪಡೆದವರು ಮತ್ತು ಇನ್ನಿತರರೂ ಸಹ ಪರ್ಯಾಯ ಉದ್ಯೋಗಾವಕಾಶಗಳಿಗಾಗಿ ಪರದಾಡುವ ಸ್ಥಿತಿ ಎದುರಾಗಬಹುದು. ಇಲ್ಲಿ ಸೃಷ್ಟಿಯಾಗುವ ಬೃಹತ್ ಸಂಖ್ಯೆಯ ನಿರುದ್ಯೋಗಿ ಯುವಸಮೂಹ , ಈಗಾಗಲೇ ಅನೌಪಚಾರಿಕ ವಲಯದಲ್ಲಿರುವ ಅಥವಾ ತಾತ್ಕಾಲಿಕ ಉದ್ಯೋಗಗಳಲ್ಲಿರುವ ದುಡಿಯುವ ವರ್ಗಗಳೊಡನೆ ಯಾವ ರೀತಿಯ ಸಂಬಂಧಗಳನ್ನು ಬೆಳೆಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಡಿಜಿಟಲ್ ಯುಗದ ಮಾರುಕಟ್ಟೆ ಪ್ರಭಾವ
ಡಿಜಿಟಲ್ ಯುಗ ತಳಮಟ್ಟದ ಸಮಾಜದಲ್ಲಿ ಸೃಷ್ಟಿಸಿರುವ ಅಸಮಾನತೆಗಳು ದಿನೇದಿನೇ ಹೆಚ್ಚಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ, ಒಟ್ಟು ಜನಸಂಖ್ಯೆಯ ಶೇಕಡಾ 40ರಷ್ಟಿರುವ ಮಿಲೆನಿಯಲ್ ಮತ್ತು ಜೆನ್ ಝೀ ಸಮೂಹ ತಮ್ಮ ಅನಿಶ್ಚಿತ ಭವಿಷ್ಯದ ಬಗ್ಗೆ ಆತಂಕ ಹೊಂದಿರುವುದು ಸಹಜ. ಈ ಆತಂಕಗಳನ್ನು ಪರಿಹರಿಸಲು ಅಥವಾ ಯುವ ಸಮೂಹದ ಹತಾಶೆಗೆ ಸ್ಪಂದಿಸಲು ಮುಂದಾಗದ ಯಾವುದೇ ಸರ್ಕಾರವಾದರೂ ಇಡೀ ಯುವ ಜನಾಂಗದ ಆಕ್ರೋಶವನ್ನು ಎದುರಿಸಬೇಕಾಗುತ್ತದೆ. ಜಂತರ್ ಮಂತರ್ನಲ್ಲಿ, ಈಗ ಜಾರ್ಖಂಡ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿ-ಯುವ ಸಮೂಹವನ್ನು ಬೆಂಬಲಿಸಿ ಹರಿದುಬರುತ್ತಿರುವ ಜನಸಾಗರದಲ್ಲಿ ಈ ಎಲ್ಲ ಆಯಾಮಗಳನ್ನೂ ಕಾಣಬಹುದು. ನಮ್ಮ ದೇಶದ ಆಂತರಿಕ ಸಮಸ್ಯೆ ಮತ್ತು ದುರ್ಭರ ಜೀವನೋಪಾಯದ ಸಮಸ್ಯೆಗಳ ವಿರುದ್ಧ ಇದೇ ನಾಡಿನ ಯುವ ಜನಾಂಗ ಪ್ರತಿರೋಧ ವ್ಯಕ್ತಪಡಿಸಲು ಇಂತಹ ಸಂದಿಗ್ಧ ಸನ್ನಿವೇಶಗಳೇ ಸಾಕು. ಹಿಂದುತ್ವ ಸಮರ್ಥಕರು ಆರೋಪಿಸುವಂತೆ ವಿದೇಶೀ ಕೈವಾಡದ ಅವಶ್ಯಕತೆಯೇ ಇರುವುದಿಲ್ಲ.

ನಾಳೆಯ ಭಯಾನಕ ಗಳಿಗೆಗಳನ್ನು ನೆನೆದು ಭಯಭೀತರಾಗಿರುವ ಬೃಹತ್ ಜನಸ್ತೋಮ, ಭವಿಷ್ಯ ಭಾರತದ ನಿರ್ಮಾಪಕರೂ ಹೌದು, ನಿರ್ಣಾಯಕ ಸಾರಥಿಗಳೂ ಹೌದು. ಆಗಸ್ಟ್ 15ರ ಭಾಷಣಗಳಲ್ಲಿ ಇದನ್ನು ಪುಂಖಾನುಪುಂಖವಾಗಿ ಪುನರುಚ್ಛರಿಸಲಾಗುತ್ತದೆ. ಆದರೆ ಈ ಮಕ್ಕಳು ತಮ್ಮ ನೋವು ಸಂಕಟಗಳನ್ನು ನಿವೇದಿಸಿಕೊಳ್ಳುವಾಗ ಲಾಠಿ, ಅಶ್ರುವಾಯು, ಪೆಲೆಟ್ ಗನ್, ಜಲಫಿರಂಗಿಗಳು ಉತ್ತರಿಸಲಾರವು. ಬಹುಶಃ ಆರೆಸ್ಸೆಸ್ ಮುಖ್ಯಸ್ಥರಿಗೆ ಈ ವಾಸ್ತವ ಅರಿವಾಗಿರುವುದರಿಂದಲೇ ಜೆನ್ ಝೀ ಸಮೂಹವನ್ನು ಅಪ್ಪಿಕೊಳ್ಳುವ ಸಾಹಸ ಮಾಡುತ್ತಿದ್ದಾರೆ. ಆದರೆ ಈ ಮಕ್ಕಳ ಭವಿಷ್ಯವನ್ನು ಹಸನಾಗಿಸಲು ಕೇವಲ ಸಾಂತ್ವನದ ಮಾತುಗಳು, ನಾಟಕೀಯ ವರ್ತನೆಗಳು ಸಾಲುವುದಿಲ್ಲ. ಭಾರತ ಅನುಸರಿಸುತ್ತಿರುವ ನವ ಉದಾರವಾದಿ, ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯ ದಿಕ್ಕನ್ನೇ ಬದಲಿಸಬೇಕಾಗುತ್ತದೆ.
ಈ ದೃಷ್ಟಿಯಿಂದ ದೇಶದ ಯುವ ಜನಾಂಗದ ಭವಿಷ್ಯಕ್ಕೆ ಅಪಾಯಕಾರಿಯಾಗಿರುವುದೇನು ? ಯಾರು ? ಯಾವ ನೀತಿಗಳು ? ಈ ಪ್ರಶ್ನೆಗೆ ಉತ್ತರ ಶೋಧಿಸಬೇಕಿದೆ.
(ಈ ಲೇಖನದಲ್ಲಿ ಬಳಸಿರುವ ಮಾಹಿತಿ ದತ್ತಾಂಶಗಳಿಗೆ ಆಧಾರ : What Links Jantar Mantar with Noida – The Research Unit for Political Economy (R.U.P.E 30/07/2026 )
(ಮುಂದಿನ ಭಾಗದಲ್ಲಿ ಉತ್ತರಗಳನ್ನು ನಿರೀಕ್ಷಿಸಿ )
-೦-೦-೦-೦-






